ಮುದ್ರಾ ವಿಶ್ವ
ಡಾ.ಪತಂಜಲಿ ಆಚಾರ್ಯ
‘ಪ್ರಾಣ’ ಎಂದರೆ ಜೀವದ ಚೈತನ್ಯ ಅಥವಾ ಶಕ್ತಿ. ಪ್ರಾಣಮುದ್ರೆಯ ಅಭ್ಯಾಸಕ್ಕೆ ಇಂಥದೇ ಎಂಬ ನಿಗದಿತ ಸಮಯವೇನಿಲ್ಲ; ಆದರೆ ಇದನ್ನು ಏಕಾಂತದಲ್ಲಿ ನಿರ್ವಹಿಸಿದರೆ ಒಳಿತು. ಪ್ರಶಾಂತವಾಗಿರುವ ನೆಲೆಯೊಂದರಲ್ಲಿ ಕುಳಿತು ಪ್ರಾಣಮುದ್ರೆಯನ್ನು ಅಭ್ಯಾಸ ಮಾಡುವು ದರಿಂದ ಇಂದ್ರಿಯಗಳು ಚುರುಕಾಗುತ್ತವೆ. ಅಭ್ಯಾಸಕ್ರಮ: ಪದ್ಮಾಸನ, ಸುಖಾಸನದಂಥ ನಿರಾಳ ಭಂಗಿಯಲ್ಲಿ ಕುಳಿತುಕೊಳ್ಳಿ. ಅಥವಾ ಕುರ್ಚಿಯ ಮೇಲೆ ಕುಳಿತೂ ಈ ಅಭ್ಯಾಸ ಮಾಡಬಹುದು. ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ, ಇಡೀ ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದುಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಹೆಬ್ಬೆರಳಿನ ತುದಿಯನ್ನು ಉಂಗುರದ ಬೆರಳು ಮತ್ತು ಕಿರುಬೆರಳಿನ ತುದಿಗಳಿಗೆ ಜೋಡಿಸಿಟ್ಟುಕೊಳ್ಳಿ.
ಇದನ್ನೂ ಓದಿ: Dr Pathanjali Acharya Column: ಪಚನಕ್ರಿಯೆಗೆ ನೆರವಾಗುವ ಹಲಾಸನ
ಮಿಕ್ಕೆರಡು ಬೆರಳುಗಳು ನೇರವಾಗಿ ಚಾಚಿಕೊಂಡಿರಬೇಕು. ಒಮ್ಮೆ ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಂಡು ನಿಧಾನವಾಗಿ ಹೊರಗೆ ಬಿಡಿ. ಈ ಅಭ್ಯಾಸವನ್ನು ಶುರುವಿನಲ್ಲಿ 2-3 ನಿಮಿಷದವರೆಗೆ ಮಾಡಿ, ಕ್ರಮೇಣ 15 ನಿಮಿಷದ ವರೆಗೂ ವಿಸ್ತರಿಸಬಹುದು.
ಪ್ರಯೋಜನಗಳು: ಪ್ರಾಣಮುದ್ರೆಯ ಆಚರಣೆಯಿಂದ ಎದೆಯುರಿ ಸೇರಿದಂತೆ ಜೀರ್ಣಾಂಗ ವ್ಯೂಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಇಲ್ಲವಾಗುತ್ತವೆ. ಆತಂಕ, ಒತ್ತಡ, ಖಿನ್ನತೆ ಇತ್ಯಾದಿ ಸಮಸ್ಯೆಗಳು ತಹಬಂದಿಗೆ ಬರುತ್ತವೆ. ದೇಹದ ಇಂದ್ರಿಯಗಳು ಚುರುಕುಗೊಂಡು, ಉತ್ಸಾಹ-ಉಲ್ಲಾಸ ಆವರಿಸುತ್ತವೆ.