ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಅವಸರದಲ್ಲಿ ಊಟ ಮಾಡುತ್ತೀರಾ? ಇದನ್ನು ತಪ್ಪದೆ ಓದಿ!

ತೀರಾ ಅವಸರದಲ್ಲಿ ತಿನ್ನುವುದು, ಗಬಗಬ ಮುಕ್ಕುವುದು, ಅಗಿಯದೇ ನುಂಗುವುದು ಇತ್ಯಾದಿಗಳೆಲ್ಲ ಆರೋಗ್ಯಕ್ಕೆ ಸಮಸ್ಯೆಯನ್ನು ತರಬಲ್ಲವು ಎನ್ನುತ್ತದೆ ವೈದ್ಯವಿಜ್ಞಾನ. ತಿನ್ನುವುದಕ್ಕೂ ನಿಗದಿತ ವೇಗ ಎಂಬುದಿದೆಯೇ? ಹಾಗಾದರೆ ಎಷ್ಟು ನಿಮಿಷಗಳಲ್ಲಿ ಊಟ ಮುಗಿಸಬೇಕು? ಸರಿಯಾಗಿ ತಿನ್ನುವ ಕ್ರಮ ಹೇಗೆ?

ಅವಸರದಲ್ಲಿ ತಿನ್ನುವ ಮೊದಲು ಈ ಬಗ್ಗೆ ಜಾಗೃತರಾಗಿರಿ!..

Profile Pushpa Kumari Apr 23, 2025 6:30 AM

ನವದೆಹಲಿ: ಜೀವ ಇರುವವರೆಲ್ಲರೂ ಊಟ ಮಾಡುವವರೇ. ಆದರೆ ಹೇಗೆ ಎಂಬುದೀಗ ಪ್ರಶ್ನೆ. ʻಊಟ ತನ್ನಿಚ್ಛೆʼ ಎಂಬ ಗಾದೆಯೇ ಇರುವಾಗ ಹೇಗಾದರೇನು ಎಂದು ಕೇಳಬಹುದು. ಏನು ತಿನ್ನುತ್ತೀರಿ ಎನ್ನುವಷ್ಟೇ ಮಹತ್ವದ್ದು ಹೇಗೆ ತಿನ್ನುತ್ತೀರಿ ಎನ್ನುವುದು. ಅಂದರೆ, ತೀರಾ ಅವಸರದಲ್ಲಿ ತಿನ್ನುವುದು, ಗಬಗಬ ಮುಕ್ಕುವುದು, ಅಗಿಯದೇ ನುಂಗುವುದು ಇತ್ಯಾದಿಗಳೆಲ್ಲ ಆರೋಗ್ಯಕ್ಕೆ (Health Tips)ಸಮಸ್ಯೆಯನ್ನು ತರಬಲ್ಲವು ಎನ್ನುತ್ತದೆ ವೈದ್ಯವಿಜ್ಞಾನ. ತಿನ್ನುವುದಕ್ಕೂ ನಿಗದಿತ ವೇಗ ಎಂಬುದಿದೆಯೇ? ಹಾಗಾದರೆ ಎಷ್ಟು ನಿಮಿಷಗಳಲ್ಲಿ ಊಟ ಮುಗಿಸಬೇಕು? ಸರಿಯಾಗಿ ತಿನ್ನುವ ಕ್ರಮ ಹೇಗೆ?

ಎಷ್ಟಾದರೆ ಬೇಗ?: ಬೆಳಗಿನ ತಿಂಡಿಯನ್ನು ಆರೆಂಟು ನಿಮಿಷಗಳಲ್ಲಿ ಹೊಟ್ಟೆಗಿಳಿಸಿ ಓಡುವವರು ಲೋಕದೆಲ್ಲೆಡೆ ಕಾಣುತ್ತಾರೆ. ಬೆಳಗ್ಗೆ ಸಮಯ ಇರುವುದಿಲ್ಲ ಎಂಬ ಕಾರಣ ನೀಡಬಹುದು. ಹಾಗೆಂದು ಮಧ್ಯಾಹ್ನ ಮತ್ತು ರಾತ್ರಿಯೂ ಅದಕ್ಕಿಂತ ಹೊರ ತಾಗಿ ಇರುವುದಿಲ್ಲ. ಹಾಗಾದರೆ ತಿನ್ನುವ ಸಮಯ ಸಾಮಾನ್ಯವಾಗಿ ಎಷ್ಟಿರಬೇಕು? ತಜ್ಞರ ಪ್ರಕಾರ, ೨೦ ನಿಮಿಷಗಳಲ್ಲಿ ಊಟ-ತಿಂಡಿ ಮುಗಿಸುತ್ತೀರಿ ಎಂದರೆ ಅದು ಸರಿಯಾಗಿದೆ. ೧೫ ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ನಿಮ್ಮ ಊಟ ಮುಗಿಯುತ್ತದೆ ಎಂದಾದರೆ, ಕಡಿಮೆ ಸಮಯದಲ್ಲಿ ಅಥವಾ ಅವಸರದಲ್ಲಿ ಮುಗಿಸಿದಂತೆ. ನೀವು ಊಟ ಮಾಡುವಾಗ ಬೇಕಾಗುವ ಸಮಯ ಎಷ್ಟು?

ಏಕೆ ಹೀಗೆ?: ಹೊಟ್ಟೆ ತುಂಬಿದೆ, ತಿಂದಿದ್ದು ಸಾಕು ಎಂಬುದು ಮೆದುಳು ಮತ್ತು ಹೊಟ್ಟೆಯ ನಡುವೆ ರವಾನೆಯಾಗುವುದಕ್ಕೆ ಹಲವಾರು ಚೋದಕಗಳು ಕೆಲಸ ಮಾಡಬೇಕು. ಸಂಕೇತ ರವಾನೆಯಾಗಿ ಊಟ ನಿಲ್ಲಿಸುವದಕ್ಕೆ ಬೇಕಾಗುವ ಅಂದಾಜು ಸಮಯ ೨೦ ನಿಮಿಷಗಳು. ಹಾಗಾಗಿ ಅದಕ್ಕೂ ಮೊದಲೇ ಗಬಗಬ ತಿನ್ನುವುದರಿಂದ ದೇಹ ನೀಡುವಂಥ ಹಲವು ಬಗೆಯ ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಇದರ ಪರಿಣಾಮವಾಗಿ ಜೀರ್ಣಕ್ರಿಯೆ ಮತ್ತು ಚಯಾಪಚಯ ಏರು ಪೇರಾಗುತ್ತದೆ ಎಂಬುದು ವಿಷಯದ ತಿರುಳು. ಏನು ಹಾಗೆಂದರೆ?

ಅವಸರದಲ್ಲಿ ತಿನ್ನುವವರು, ಆಹಾರದ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯನ್ನೂ ನುಂಗುತ್ತಾರೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವು ಮುಂತಾದ ಜೀರ್ಣಾಂಗದ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ಸರಿಯಾಗಿ ಅಗಿಯದೆ ನುಂಗಿದ ಆಹಾರದಲ್ಲಿ ದೊಡ್ಡ ಕಣಗಳು ಇದ್ದಂತೆಯೇ ಜಠರ ಸೇರುತ್ತವೆ. ಆಹಾರದ ಪಚನ ಪ್ರಾರಂಭವಾಗುವುದು ಹೊಟ್ಟೆ ಯಲ್ಲಲ್ಲ, ಬಾಯಲ್ಲಿ. ಲಾಲಾ ರಸದಲ್ಲಿರುವ ಕಿಣ್ವಗಳು ಈ ಕೆಲಸವನ್ನು ಪ್ರಾರಂಭಿಸುತ್ತವೆ. ಅವಸರದಲ್ಲಿ ಮುಕ್ಕುವುದರಿಂದ ಜೊಲ್ಲುರಸದೊಂದಿಗೆ ಆಹಾರ ಸರಿಯಾಗಿ ಬೆರೆಯುವ ಮುನ್ನವೇ ಜಠರಕ್ಕೆ ದೂಡಿಯಾಗಿರುತ್ತದೆ. ಅದರಲ್ಲೂ ಸರಿಯಾಗಿ ಅರೆಯದ ತುಣುಕುಗಳು ಅನ್ನನಾಳದಲ್ಲೂ ಸಿಲುಕಬಹುದು, ಜೀರ್ಣ ಮಾಡಲು ಜಠರಕ್ಕೂ ಕಷ್ಟ ಕೊಡಬಹುದು. ನಿಧಾನಕ್ಕೆ ಸರಿಯಾಗಿ ಜಗಿದು ತಿನ್ನುವವರ ತೂಕವು, ಅವಸರದಲ್ಲಿ ಮುಕ್ಕುವವರ ತೂಕಕ್ಕಿಂತ ಕಡಿಮೆ ಇರುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಹೇಳುತ್ತವೆ.

ಇದನ್ನು ಓದಿ: Healthy Food: ಹಸಿ ತರಕಾರಿ ಅಥವಾ ಬೇಯಿಸಿದ ತರಕಾರಿ! ಯಾವುದು ಆರೋಗ್ಯಕ್ಕೆ ಉತ್ತಮ?

ಏನು ಮಾಡಬೇಕು?: ತಿಂಡಿ-ಊಟ ಮಾಡುವ ಸಮಯದಲ್ಲಿ ಗಮನವನ್ನು ಅದಕ್ಕೇ ಮೀಸಲಾಗಿರಿಸಿ. ಟಿವಿ ನೋಡುತ್ತಾ ಉಣ್ಣುವುದು, ಮೊಬೈಲ್‌ ಗೀರುತ್ತಾ ತಿನ್ನುವುದು, ಇನ್ನೇನೋ ಪುಸ್ತಕ ಕೈಯಲ್ಲಿ ಹಿಡಿದಿರುವುದು- ಇವೆಲ್ಲವೂ ಆಹಾರ ಸೇವನೆಯ ಕಾಲದಲ್ಲಿ ಗಮನವನ್ನು ಬದಲಿಸುತ್ತವೆ. ನೋಡುತ್ತಿರುವ ಕಾರ್ಯಕ್ರಮ ಮುಗಿಯುವವರೆಗೆ ಅಥವಾ ಜಾಹೀರಾತು ಬರುವವರೆಗೆ ತಿನ್ನುತ್ತಲೇ ಇರುವುದು ಮುಂತಾದವು ಒಂದೋ ತೀರಾ ಬೇಗ ತಿನ್ನುವಂತೆ ಅಥವಾ ತೀರಾ ತಡವಾಗಿ ತಿನ್ನುವಂತೆ ಪ್ರೇರೇಪಿಸುತ್ತವೆ.

ಇದರ ಬದಲಿಗೆ, ತಿನ್ನುತ್ತಿರುವ ಆಹಾರ ರುಚಿ, ಘಮ, ಬಣ್ಣ ಮುಂತಾದ ಗುಣಗಳ ಬಗ್ಗೆ ಗಮನ ನೀಡುತ್ತಾ ತಿನ್ನುವವರು ಕಡಿಮೆ ಆಹಾರ ಸೇವಿಸುತ್ತಾರೆ ಮತ್ತು ಅದಷ್ಟಕ್ಕೇ ತೃಪ್ತಿ ಹೊಂದುತ್ತಾರೆ. ಇದರಿಂದ ಅನಗತ್ಯ ತಿನ್ನುವುದು ಕಡಿಮೆ ಯಾಗು ತ್ತದೆ. ನಿಧಾನವಾಗಿ ಆಸ್ವಾದಿಸುತ್ತಾ ತಿನ್ನುವುದರಿಂದ ಆಹಾರ ಚೆನ್ನಾಗಿ ಪಚನವಾಗುತ್ತದೆ. ಹೊಟ್ಟೆಯುಬ್ಬರ ಮತ್ತು ಚಯಾ ಪಚಯದಂಥ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ. ಇದಕ್ಕಾಗಿ ಸಂಸ್ಕರಿಸಿದ, ಬ್ರೆಡ್‌, ಪಾಸ್ತಾ, ನೂಡಲ್ಸ್‌ನಂಥ ಅತಿ ಮೃದುವಾದ ಆಹಾರಗಳಿಂದ ದೂರವಿರಿ. ಹಸಿಯಾದ, ಒರಟಾದ ಮತ್ತು ಗಟ್ಟಿಯಾದ ಆಹಾರಗಳನ್ನು ತಿನ್ನಿ, ಚೆನ್ನಾಗಿ ಅಗಿದು ತಿನ್ನಿ, ನಿಧಾನವಾಗಿ ಆಸ್ವಾದಿಸಿಕೊಂಡು ತಿನ್ನಿ.