ಅನಿವಾಸಿ ಭಾರತೀಯರಿಗೆ ರೋಬೋಟಿಕ್ ಹಾರ್ಟ್ ಬೈಪಾಸ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ
ಅತ್ಯಂತ ಪ್ರತಿಷ್ಠಿತ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು, ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದೇ ಸಮಯದಲ್ಲಿ ರೋಬೋಟ್ ನೆರವಿನ 'ಮಿನಿಮಲಿ ಇನ್ವೇಸಿವ್ ಕರೋನರಿ ಆರ್ಟರಿ ಬೈಪಾಸ್' (ಎಂಐಡಿಸಿಎಬಿ) ಮತ್ತು 'ರೋಬೋಟಿಕ್ ರಾಡಿಕಲ್ ಪ್ರಾಸ್ಟೇಟೆಕ್ಟಮಿ' ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ ದಾಖಲೆ ಮಾಡಿದ್ದಾರೆ
-
ಒಂದೇ ಸಮಯದಲ್ಲಿ ರೋಬೋಟ್ ನೆರವಿನ ಹಾರ್ಟ್ ಬೈಪಾಸ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ಫೋರ್ಟಿಸ್ ಹಾಸ್ಪಿಟಲ್-
ಬೆಂಗಳೂರು: ಅತ್ಯಂತ ಪ್ರತಿಷ್ಠಿತ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು, ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದೇ ಸಮಯದಲ್ಲಿ ರೋಬೋಟ್ ನೆರವಿನ 'ಮಿನಿಮಲಿ ಇನ್ವೇಸಿವ್ ಕರೋನರಿ ಆರ್ಟರಿ ಬೈಪಾಸ್' (ಎಂಐಡಿಸಿಎಬಿ) ಮತ್ತು 'ರೋಬೋಟಿಕ್ ರಾಡಿಕಲ್ ಪ್ರಾಸ್ಟೇಟೆಕ್ಟಮಿ' ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ ದಾಖಲೆ ಮಾಡಿದ್ದಾರೆ. ಈ ಮೂಲಕ ಸಮಗ್ರ ಶಸ್ತ್ರಚಿಕಿತ್ಸಾ ಆರೈಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಕರೋನರಿ ಆರ್ಟರಿ ಕಾಯಿಲೆ (ಹೃದಯ ಸಂಬಂಧಿ) ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲು ತ್ತಿದ್ದ ಅಮೆರಿಕಾ ಮೂಲದ 56 ವರ್ಷದ ಅನಿವಾಸಿ ಭಾರತೀಯರೊಬ್ಬರಿಗೆ ಒಂದೇ ಸಮಯದಲ್ಲಿ ಈ ಅಸಾಮಾನ್ಯ ಬಹು- ಶಿಸ್ತೀಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
ಸಾಂಪ್ರದಾಯಿಕವಾಗಿ ಈ ಎರಡೂ ಗಂಭೀರ ಕಾಯಿಲೆಗಳಿಗೆ ಪ್ರತ್ಯೇಕವಾಗಿ ವಿಶೇಷ ಶಸ್ತ್ರಚಿಕಿತ್ಸೆ ಗಳನ್ನು ಮಾಡಬೇಕಾದ ಅಗತ್ಯವಿರುತ್ತದೆ. ಆದರೆ ಫೋರ್ಟಿಸ್ ನ ವೈದ್ಯರು ಒಂದೇ ಸಮಯದಲ್ಲಿ ಎರಡೂ ಶಸ್ತ್ರಚಿಕಿತ್ಸೆ ನಿರ್ವಹಿಸಿ ಮಹತ್ವದ ದಾಖಲೆ ಮಾಡಿದ್ದಾರೆ. ಕಿಡ್ನಿ ವಿಜ್ಞಾನ ವಿಭಾಗದ ಪ್ರಧಾನ ನಿರ್ದೇಶಕರಾದ ಡಾ. ಮೋಹನ್ ಕೇಶವಮೂರ್ತಿ ಮತ್ತು ಮೈಕ್ರೋ ಇನ್ವೇಸಿವ್ ಹಾಗೂ ರೋಬೋಟಿಕ್ ಕಾರ್ಡಿಯಾಕ್ ಸರ್ಜರಿ ವಿಭಾಗದ ನಿರ್ದೇಶಕರಾದ ಡಾ. ಸುದರ್ಶನ್ ಜಿ.ಟಿ. ಅವರ ನೇತೃತ್ವದ ತಜ್ಞರ ಸಂಯೋಜಿತ ತಂಡವು ಈ ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದೆ.
ಇದನ್ನೂ ಓದಿ:Drumstick Health Benefits: ತೂಕ ಇಳಿಸುವುದಕ್ಕೆ ನುಗ್ಗೆ ನೆರವಾಗುವುದೇ? ಯಾವ ರೀತಿ ಬಳಸಿದರೆ ಉತ್ತಮ?
ಶ್ರೀರಾಮ್ (ಹೆಸರು ಬದಲಾಯಿಸಲಾಗಿದೆ) ಎಂಬ ಈ ರೋಗಿಯ ಪ್ರಮುಖ ಕರೋನರಿ ಅಪಧಮನಿ ಗಳಲ್ಲಿ ಒಂದರಲ್ಲಿ ಗಂಭೀರವಾದ ಬ್ಲಾಕೇಜ್ ಇರುವುದು ಕಂಡುಬಂದಿತ್ತು. ಇದರಿಂದ ಅವರ ಹೃದಯಕ್ಕೆ ರಕ್ತದ ಹರಿವು ಗಣನೀಯವಾಗಿ ಕಡಿಮೆಯಾಗಿತ್ತು, ಆದರೆ ಹೃದಯದ ಪಂಪಿಂಗ್ ಕಾರ್ಯನಿರ್ವಹಣೆಯು ಸಾಮಾನ್ಯವಾಗಿತ್ತು. ಅಷ್ಟೇ ಅಲ್ಲದೆ, ಜೊತೆಗೆ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇದರಿಂದಾಗಿ ಮೂತ್ರ ವಿಸರ್ಜನೆ ಪ್ರಾರಂಭಿಸಲು ತೊಂದರೆ, ಮೂತ್ರದ ಹರಿವು ಕಡಿಮೆಯಾಗುವುದು, ಪದೇ ಪದೇ ಮೂತ್ರ ವಿಸರ್ಜನೆ ಮತ್ತು ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗದಂತಹ ಮೂತ್ರದ ಅಡಚಣೆಯ ಸಮಸ್ಯೆಗಳನ್ನು ಅವರು ಅನುಭವಿಸುತ್ತಿದ್ದರು. ಈ ಸಮಸ್ಯೆಗಳಿಗೆ ಚಿಕಿತ್ಸೆ ನೀಡದಿದ್ದರೆ, ಹೃದಯ ಸಮಸ್ಯೆಯು ಹೃದಯಾ ಘಾತ ಉಂಟು ಮಾಡುವ ಅಪಾಯವಿತ್ತು ಮತ್ತು ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡುವ ಅಪಾಯವೂ ಇತ್ತು.
ಈ ಎರಡೂ ಕಾಯಿಲೆಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಸಾಧ್ಯವಿದ್ದರೂ, ಅವುಗಳನ್ನು ಬೇರೆ ಬೇರೆ ಸಮಯದಲ್ಲಿ ನಿರ್ವಹಿಸುವುದು ರೋಗಿಯ ಆರೋಗ್ಯದ ಮೇಲೆ ಹೆಚ್ಚಿನ ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿತ್ತು. ಆದ್ದರಿಂದ, ಶಸ್ತ್ರಚಿಕಿತ್ಸೆಗೆ ಮುನ್ನ ವಿವರವಾದ ಮೌಲ್ಯ ಮಾಪನ ಮತ್ತು ಬಹು-ವಿಭಾಗೀಯ ಯೋಜನೆಯನ್ನು ರೂಪಿಸಿದ ಫೋರ್ಟಿ ಆಸ್ಪತ್ರೆಯ ವೈದ್ಯರು, ರೋಗಿಯ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಮತ್ತು ನಿಖರ ಶಸ್ತ್ರಚಿಕಿತ್ಸೆ ನಡೆಸಲು ಒಂದೇ ಹಂತದಲ್ಲಿ ರೋಬೋಟ್ ನೆರವಿನ ‘ಮಿನಿಮಲಿ ಇನ್ವೇಸಿವ್ ಕರೋನರಿ ಆರ್ಟರಿ ಬೈಪಾಸ್’ (ಎಂಐಡಿಸಿಎಬಿ) ಮತ್ತು ‘ರೋಬೋಟಿಕ್ ರಾಡಿಕಲ್ ಪ್ರಾಸ್ಟೇಟೆಕ್ಟಮಿ’ಯನ್ನು ನಡೆಸಲು ನಿರ್ಧರಿಸಿ ದರು ಮತ್ತು ಯಶಸ್ವಿಯಾಗಿ ಪೂರೈಸಿದರು.
ಹೃದಯ ಶಸ್ತ್ರಚಿಕಿತ್ಸೆಯ ಕುರಿತು ವಿವರಗಳನ್ನು ನೀಡುತ್ತಾ ಮಾತನಾಡಿದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಮೈಕ್ರೋ ಇನ್ವೇಸಿವ್ ಹಾಗೂ ರೋಬೋ ಟಿಕ್ ಕಾರ್ಡಿಯಾಕ್ ಸರ್ಜರಿ ವಿಭಾಗದ ನಿರ್ದೇಶಕರಾದ ಡಾ. ಸುದರ್ಶನ್ ಜಿ.ಟಿ. ಅವರು, “ಪ್ರಾಸ್ಟೇಟ್ ಕ್ಯಾನ್ಸರ್ ಇರುವ ರೋಗಿಗೆ ಹಾರ್ಟ್ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಅತ್ಯಂತ ಸೂಕ್ಷ್ಮ ಯೋಜನೆ ಮತ್ತು ನಿಖರತೆ ಬೇಕಾಗುತ್ತದೆ. ನಾವು ರೋಬೋಟ್ ನೆರವಿನ 'ಮಿನಿಮಲಿ ಇನ್ವೇಸಿವ್ ಕರೋನರಿ ಆರ್ಟರಿ ಬೈಪಾಸ್' (ಎಂಐಡಿಸಿಎಬಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಈ ಕ್ರಮದಲ್ಲಿ ರೋಗಿಯ ಎದೆಯನ್ನು ಸೀಳುವ ಬದಲು, ಸಣ್ಣ ಕೀ-ಹೋಲ್ ರಂಧ್ರಗಳ ಮೂಲಕ ರೋಗಿಯ ಎದೆಯ ಅಪಧಮನಿಯನ್ನು (ಎಲ್ಐಎಂಎ) ಬಳಸಿಕೊಂಡು ಹೃದಯಕ್ಕೆ ರಕ್ತದ ಹರಿವನ್ನು ಪುನಃಸ್ಥಾಪಿಸಲಾಯಿತು. ಈ ವಿಧಾನದಿಂದ ಕಡಿಮೆ ಆಘಾತ, ಸಣ್ಣ ಗಾಯಗಳು ಮತ್ತು ವೇಗವಾಗಿ ಚೇತರಿಸಿಕೊಳ್ಳುವುದು ಸಾಧ್ಯವಾಯಿತು. ಈ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯು 1.5 ಗಂಟೆಗಳ ಕಾಲ ನಡೆಯಿತು. ಒಂದೇ ಅರಿವಳಿಕೆಯ ಅಡಿಯಲ್ಲಿ ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ಸಂಯೋಜಿಸುವುದು ಅಪರೂಪವಾದರೂ, ಈ ಪ್ರಕರಣದಲ್ಲಿ ಯಶಸ್ವಿಯಾಗಿ ಬಳಸಲಾಯಿತು. ಇದು ಪದೇ ಪದೇ ಶಸ್ತ್ರಚಿಕಿತ್ಸೆ ನಡೆಸುವುದು ಮತ್ತು ಆಸ್ಪತ್ರೆಗೆ ದಾಖಲಾಗುವು ದನ್ನು ತಪ್ಪಿಸಲು, ಪದೇ ಪದೇ ಅರಿವಳಿಕೆಗೆ ಒಳಗಾಗುವುದನ್ನು ಮತ್ತು ಚೇತರಿಕೆಗೆ ದೀರ್ಘ ಕಾಲ ಬೇಕಾಗುವುದನ್ನು ತಪ್ಪಿಸಲು ಗಮನಾರ್ಹ ಸಹಾಯ ಮಾಡಿತು” ಎಂದು ಹೇಳಿದರು.
ಪ್ರಾಸ್ಟೇಟ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರ ನೀಡಿದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಮೂತ್ರಪಿಂಡ ವಿಜ್ಞಾನ ವಿಭಾಗದ ಪ್ರಧಾನ ನಿರ್ದೇಶಕರಾದ ಡಾ.ಮೋಹನ್ ಕೇಶವಮೂರ್ತಿ ಅವರು, “ನಾವು 3.5 ಗಂಟೆಗಳ ಕಾಲ ರೋಬೋಟ್ ನೆರವಿನ 'ರಾಡಿಕಲ್ ಪ್ರಾಸ್ಟೇಟೆಕ್ಟಮಿ'ಯನ್ನು ನಡೆಸಿದೆವು. ಇದರಲ್ಲಿ ಪ್ರಾಸ್ಟೇಟ್ ಮತ್ತು ಕ್ಯಾನ್ಸರ್ ಹರಡುವ ಸಾಧ್ಯತೆ ಇರುವ ಹತ್ತಿರದ ಗ್ರಂಥಿಗಳನ್ನು ತೆಗೆದುಹಾಕಲಾಯಿತು ಹಾಗೂ ಮೂತ್ರ ವಿಸರ್ಜನೆ ಹಾದಿಯನ್ನು ರಕ್ಷಿಸಲು ತಾತ್ಕಾಲಿಕ ಸ್ಟೆಂಟ್ ಗಳನ್ನು ಅಳವಡಿಸಲಾಯಿತು. ಈ ವಿಧಾನವು ಹೆಚ್ಚಿನ ನಿಖರತೆ, ಕನಿಷ್ಠ ರಕ್ತ ನಷ್ಟದ ಮೂಲಕ ಶಸ್ತ್ರ ಚಿಕಿತ್ಸೆ ಮಾಡಲು ಅನುವು ಮಾಡಿಕೊಟ್ಟಿದೆ ಮತ್ತು ವೇಗವಾಗಿ ಚೇತರಿಕೆ ಹೊಂದುವ ಮೂಲಕ ಕ್ಯಾನ್ಸರ್ ನಿಯಂತ್ರಣಕ್ಕೆ ತರಲು ನೆರವಾಗುತ್ತದೆ.
ಹೃದಯ ಶಸ್ತ್ರಚಿಕಿತ್ಸೆಯ ಜೊತೆಗೆ ಇದನ್ನು ಒಂದೇ ಹಂತದಲ್ಲಿ ಮಾಡುವುದು ಅತ್ಯಂತ ಸಂಕೀರ್ಣ ವಾಗಿತ್ತು, ಆದರೆ ಇದರಿಂದ ರೋಗಿಯು ಎರಡು ಪ್ರತ್ಯೇಕ ಪ್ರಮುಖ ಶಸ್ತ್ರಚಿಕಿತ್ಸೆಗಳ ದೈಹಿಕ ಮತ್ತು ಮಾನಸಿಕ ತೊಂದರೆಗೆ ಒಳಗಾಗುವುದು ತಪ್ಪಿದೆ. ಈ ಪ್ರಕರಣದಲ್ಲಿ, ಹೃದಯದ ಅಪಾಯವನ್ನು ನಿಯಂತ್ರಣದಲ್ಲಿಟ್ಟುಕೊಂಡು, ಹೃದಯ ಶಸ್ತ್ರಚಿಕಿತ್ಸೆ ಆದ ತಕ್ಷಣವೇ ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆ ನಡೆಸಲಾಯಿತು ಮತ್ತು ಈ ಮೂಲಕ ರೋಗವು ಉಲ್ಬಣಗೊಳ್ಳುವುದನ್ನು ತಪ್ಪಿಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ರೋಗಿಯು ಸ್ಥಿರ ಸ್ಥಿತಿಯಲ್ಲಿದ್ದು, 5 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಪ್ರಕರಣವು ಸಮಗ್ರ ಮಲ್ಟಿ-ಕಂಪಾರ್ಟ್‌ಮೆಂಟ್ ರೋಬೋಟಿಕ್ ಶಸ್ತ್ರಚಿಕಿತ್ಸೆ ಒದಗಿಸುವ ಆಸ್ಪತ್ರೆಯ ಸಾಮರ್ಥ್ಯವನ್ನು ಮತ್ತು ಸಾಧನೆಯನ್ನು ತೋರಿಸಿದೆ” ಎಂದು ಹೇಳಿದರು.
ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡ ರೋಗಿಯು, "ಅಮೆರಿಕಾದಲ್ಲಿ ಪ್ರಾಥಮಿಕ ರೋಗ ನಿರ್ಣಯ ಆಯಿತು. ನಂತರ ಈ ಸಮಸ್ಯೆಗೆ ಅತ್ಯಾಧುನಿಕ ರೋಬೋಟಿಕ್ ಮತ್ತು ಕನಿಷ್ಠ ಆಕ್ರಮಣಕಾರಿ ತಂತ್ರಜ್ಞಾನಗಳನ್ನು ಬಳಸಿ ಸಮಗ್ರ ಹಾಗೂ ಒಂದೇ ಹಂತದ ಶಸ್ತ್ರಚಿಕಿತ್ಸಾ ಪರಿಹಾರವನ್ನು ನೀಡಬಲ್ಲ ವಿಶ್ವದ ಕೆಲವೇ ಕೆಲವು ಕೇಂದ್ರಗಳಲ್ಲಿ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯೂ ಒಂದು ಎಂದು ತಿಳಿದು ನಾನು ಭಾರತಕ್ಕೆ ಬರಲು ನಿರ್ಧರಿಸಿದೆ. ಹೃದಯ ಕಾಯಿಲೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಎರಡೂ ಒಂದೇ ಬಾರಿಗೆ ಪತ್ತೆಯಾದಾಗ ನಾನು ಕಂಗಾಲಾ ಗಿದ್ದೆ.
ಎರಡೂ ಶಸ್ತ್ರಚಿಕಿತ್ಸೆಗಳನ್ನು ಒಂದೇ ಬಾರಿಗೆ ಮಾಡಬಹುದು ಎಂದು ನಾನು ಊಹಿಸಿರಲಿಲ್ಲ ಮತ್ತು ದೀರ್ಘಕಾಲ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಮಾನಸಿಕವಾಗಿ ಸಿದ್ಧನಾಗಿದ್ದೆ. ಆದರೆ ಎರಡೂ ಕಾಯಿಲೆಗಳನ್ನು ಸುರಕ್ಷಿತವಾಗಿ ಮತ್ತು ಒಟ್ಟಿಗೆ ಗುಣಪಡಿಸಬಹುದು ಎಂಬ ಆತ್ಮವಿಶ್ವಾಸ ನೀಡಿದ ಫೋರ್ಟಿಸ್ ವೈದ್ಯರಿಗೆ ನಾನು ಚಿರಋಣಿಯಾಗಿದ್ದೇನೆ. ನಾನು ಸುಗಮವಾಗಿ ಚೇತರಿಸಿಕೊಳ್ಳಲು ಅವರು ನೀಡಿದ ಕಾಳಜಿ, ಅವರು ರೂಪಿಸಿದ ಸಮರ್ಪಕ ಯೋಜನೆ ಮತ್ತು ನನಗೆ ನೀಡಿದ ಅಪೂರ್ವ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದರು.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ವಿಪಿ ಮತ್ತು ಬಿಸಿನೆಸ್ ಹೆಡ್ ಆದ ಡಾ. ಅನಂತ್ ರಾವ್ ಮಾತನಾಡಿ, "ವಿಶ್ವದ ಈ ಮೊಟ್ಟ ಮೊದಲ ಪ್ರಕರಣವು ಅತ್ಯಂತ ಸಂಕೀರ್ಣ ಸಮಸ್ಯೆ ಹೊಂದಿರುವ ರೋಗಿಗಳಿಗೆ ಬಹು-ಶಿಸ್ತೀಯ ಮತ್ತು ಕನಿಷ್ಠ ಆಕ್ರಮಣಕಾರಿ ಆರೈಕೆಯನ್ನು ನೀಡುವಲ್ಲಿ ಬನ್ನೇರು ಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು ಮುಂಚೂಣಿಯಲ್ಲಿದೆ ಎಂಬುದನ್ನು ತೋರಿಸಿ ಕೊಟ್ಟಿದೆ.
ಒಂದೇ ಹಂತದಲ್ಲಿ ಎರಡು ಪ್ರಮುಖ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ನಮ್ಮ ಶ್ರೇಷ್ಠ ವೈದ್ಯಕೀಯ ಸಾಮರ್ಥ್ಯವನ್ನು ತೋರಿಸುವುದು ಮಾತ್ರವಲ್ಲದೆ, ನಮ್ಮಲ್ಲಿರುವ ಸಹಯೋಗದ ಸಂಸ್ಕೃತಿ, ರೋಗಿಗಳ ಸುರಕ್ಷತೆ ಮತ್ತು ಸಾಕ್ಷ್ಯಾಧಾರಿತ ನಿರ್ಧಾರ ಕೈಗೊಳ್ಳುವ ಆಧುನಿಕ ಕ್ರಮಗಳನ್ನು ಪ್ರತಿಬಿಂಬಿಸುತ್ತದೆ. ಇಂತಹ ಫಲಿತಾಂಶಗಳು ಭಾರತ ಮತ್ತು ಪ್ರಪಂಚದಾದ್ಯಂತದ ಇರುವ ರೋಗಿಗಳಿಗೆ ಸಮಗ್ರ ಮತ್ತು ಅತ್ಯಾಧುನಿಕ ಚಿಕಿತ್ಸಾ ಪರಿಹಾರಗಳನ್ನು ನೀಡುವ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತವೆ" ಎಂದು ತಿಳಿಸಿದರು.