ಆಪರೇಷನ್​ ಸಿಂಧೂರ ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಸಿಕ್ಕಾಪಟ್ಟೆ ತಿಂದ್ರಾ?: ಹೊಟ್ಟೆಭಾರ ಇಳಿಸಲು ಇಲ್ಲಿವೆ ಟಿಪ್ಸ್‌!

ಇಡೀ ದಿನ ಬಿಡದಂಥ ಜಡತ್ವ, ಒಮ್ಮೆ ಹೊಟ್ಟೆ ಸರಿಯಾದರೆ ಸಾಕು ಎನ್ನುವ ಭಾವ. ಹೌದು, ಬದುಕಿರುವುದೇ ತಿನ್ನುವುದಕ್ಕೆ ಎನ್ನುವಂಥ ಸಂದರ್ಭಗಳು ಹಲವು ಬಾರಿ ನಮ್ಮ ಜೀವನದಲ್ಲಿ ಬಂದೇ ಇರುತ್ತದೆ. ಭೂರಿ ಭೋಜನದ ನೆವದಲ್ಲಿ ಅತಿ ಹೆಚ್ಚಿನ ಕ್ಯಾಲರಿಗಳು ದೇಹ ಸೇರುವುದು, ತಿಂದ ನಂತರ ʻಛೇ! ಇಷ್ಟೊಂದು ತಿನ್ನಬಾರದಿತ್ತು!ʼ ಎನಿಸುವುದು, ಹುಳಿತೇಗು ಬರುವುದು- ಇಂಥ ಹೊಟ್ಟೆಯ ಸಂಕಟಗಳೆಲ್ಲ ಅಪರೂಪವೇನಲ್ಲ. ಇಂಥ ಸಂದರ್ಭದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ಕಾಪಾಡಿ ಕೊಳ್ಳಲು, ತಿಂದಿದ್ದು ಪೂರ್ಣವಾಗಿ ಪಚನವಾಗಲು ಏನು ಮಾಡಬಹುದು ಮತ್ತು ಏನು ಮಾಡಬಾರದು? ಇಲ್ಲಿವೆ ಸಲಹೆ.

ಹೊಟ್ಟೆಭಾರ ಇಳಿಸಲು ಇಲ್ಲಿದೆ ಟಿಪ್ಸ್

Stomach heaviness

Profile Pushpa Kumari Jun 11, 2025 6:00 AM

ಬೆಂಗಳೂರು: ಊಟ, ತಿಂಡಿ ಹೆಚ್ಚಾಗಿ ಹೊಟ್ಟೆ ಭಾರ ಆಗುವುದು ಎಲ್ಲರಿಗೂ ಆಗುವಂಥದ್ದೇ. ದಿನಾ ಹೀಗಾಗುವುದಿಲ್ಲ ಎಂದರೂ ಯಾವುದೋ ಹಬ್ಬ, ಯಾರದ್ದೋ ಪಾರ್ಟಿ ಎನ್ನುತ್ತಾ ಮೂಗಿನ ಮಟ್ಟಕ್ಕೆ ತಿಂದಿರುತ್ತೇವೆ. ತೇಗುವುದಕ್ಕೂ ಜಾಗವಿಲ್ಲದಂತೆ ಒದ್ದಾಡಿದ್ದು ಎಷ್ಟು ಬಾರಿಯೋ! ಹೊಟ್ಟೆಯೆಲ್ಲ ಉಬ್ಬರಿಸಿ, ನೋವಾಗಿ, ಅಜೀರ್ಣವಾಗಿ ಒದ್ದಾಡುವಂತಾಗುತ್ತದೆ. ಇಡೀ ದಿನ ಬಿಡದಂಥ ಜಡತ್ವ, ಒಮ್ಮೆ ಹೊಟ್ಟೆ ಸರಿಯಾದರೆ ಸಾಕು ಎನ್ನುವ ಭಾವ. ಹೌದು, ಬದುಕಿರುವುದೇ ತಿನ್ನುವುದಕ್ಕೆ ಎನ್ನುವಂಥ ಸಂದರ್ಭಗಳು ಹಲವು ಬಾರಿ ನಮ್ಮ ಜೀವನದಲ್ಲಿ ಬಂದೇ ಇರುತ್ತದೆ. ಭೂರಿ ಭೋಜನದ ನೆವದಲ್ಲಿ ಅತಿ ಹೆಚ್ಚಿನ ಕ್ಯಾಲರಿಗಳು ದೇಹ ಸೇರುವುದು, ತಿಂದ ನಂತರ ʻʼಛೇ! ಇಷ್ಟೊಂದು ತಿನ್ನಬಾರದಿತ್ತು!ʼʼ ಎನಿಸುವುದು, ಹುಳಿತೇಗು ಬರುವುದು- ಇಂಥ ಹೊಟ್ಟೆಯ ಸಂಕಟಗಳೆಲ್ಲ ಅಪರೂಪವೇನಲ್ಲ. ಇಂಥ ಸಂದರ್ಭದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ (Health Tips) ಕಾಪಾಡಿಕೊಳ್ಳಲು, ತಿಂದಿದ್ದು ಪೂರ್ಣವಾಗಿ ಪಚನವಾಗಲು ಏನು ಮಾಡಬಹುದು ಮತ್ತು ಏನು ಮಾಡಬಾರದು? ಇಲ್ಲಿವೆ ಸಲಹೆ.

ಹೀಗೆ ಮಾಡಿ: ಉಂಡು ನೂರಡಿ ಇಡಿ ಎನ್ನುತ್ತದೊಂದು ಲೋಕೋಕ್ತಿ. ಅಂದರೆ ಊಟವಾದ ಕೆಲ ಹೊತ್ತಿನ ನಂತರ ಸಣ್ಣ ದೊಂದು ವಾಕಿಂಗ್‌ ಮಾಡಿ. ಅದಕ್ಕೇನು ಒಂದು ತಾಸು ನಡೆದು ಬೆವರಬೇಕೆಂದಿಲ್ಲ; ಹದಿನೈದಿಪ್ಪತ್ತು ನಿಮಿಷಗಳ ಲಘು ನಡಿಗೆ ಸಾಕಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಮಾತ್ರವಲ್ಲ, ರಕ್ತದಲ್ಲಿನ ಸಕ್ಕರೆಯಂಶವನ್ನು ನಿಯಂತ್ರಣಕ್ಕೆ ತರುವುದಕ್ಕೂ ಈ ಕ್ರಮ ನೆರವಾಗುತ್ತದೆ.

ಮಲಗಬೇಡಿ: ಭೂರಿ ಭೋಜನದ ನಂತರ ಕನಿಷ್ಠ 30 ನಿಮಿಷಗಳ ಕಾಲ ಬೆನ್ನು ನೇರವಾಗಿಸಿಯೇ ಕುಳಿತುಕೊಳ್ಳಿ. ಗಡದ್ದು ಊಟದ ಬಳಿಕ ಕಣ್ಣೆಳೆದಂತಾಗಿ ತೂಕಡಿಸುವುದು ಸಹಜ. ಹಾಗೆಂದು ಮೈಚೆಲ್ಲಬೇಡಿ, ನೇರವಾಗಿಯೇ ಕುಳಿತುಕೊಳ್ಳಿ. ಇದರಿಂದ ಹುಳಿತೇಗಿನ ಸಮಸ್ಯೆ ಕಡಿಮೆಯಾಗುತ್ತದೆ. ಹುಳಿತೇಗು ಇಲ್ಲವೇ GERD (Gastro esophageal Reflux Disease) ಹೆಚ್ಚಾಗಿ ಕಾಡುವುದಕ್ಕೆ ಇದೂ ಒಂದು ಕಾರಣವಾಗಬಹುದು. ಹಾಗಾಗಿ ದೊಡ್ಡ ಊಟದ ನಂತರ ಬೇಗನೇ ಮಲಗಬೇಡಿ.

ದೀರ್ಘ ಉಸಿರಾಟ: ಸಿಕ್ಕಾಪಟ್ಟೆ ತಿಂದಾಗ ವಪೆ ಒತ್ತರಿಸಿದಂತಾಗಿ ಬಿಕ್ಕಳಿಕೆಯೂ ಬರಬಹುದು. ಇದಕ್ಕಾಗಿ ಇನ್ನಷ್ಟು ನೀರು ಕುಡಿಯಬೇಡಿ, ಬದಲಿಗೆ ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಡಿ. ಇದರಿಂದ ಪ್ಯಾರಾಸಿಂಪಥಿಟಿಕ್‌ ನರಗಳ ಜಾಗೃತಗೊಂಡು, ಜೀರ್ಣಕ್ರಿಯೆಯನ್ನು ಆದ್ಯತೆಯನ್ನಾಗಿಸುತ್ತವೆ. ಜತೆಗೆ ಪಚನ ಕ್ರಿಯೆಗೆ ಬೇಕಾದ ಚೋದಕಗಳು ಇನ್ನಷ್ಟು ಬಿಡುಗಡೆಯಾಗಿ, ಹೊಟ್ಟೆಯ ಸಂಕಷ್ಟ ಕ್ರಮೇಣ ನಿವಾರಣೆಯಾಗುತ್ತದೆ.

ಬೆಚ್ಚರಿನ ನೀರು: ಊಟದ ನಂತರ ಐಸ್‌ಕ್ರೀಮ್‌ ತಿನ್ನುವುದು ಯಾರಿಗೆ ಇಷ್ಟವಿಲ್ಲ? ಆದರೆ ಭರ್ಜರಿ ಊಟದ ನಂತರ ತಣ್ಣನೆಯ, ಸಕ್ಕರೆಭರಿತ ಮತ್ತು ಕೊಬ್ಬಿನ ಪದಾರ್ಥಗಳ ಸೇವನೆಯು ನೀಡುವ ಸಂತೋಷ ತಾತ್ಕಾಲಿಕ. ಕೆಲವೇ ಹೊತ್ತಿನಲ್ಲಿ ಹೊಟ್ಟೆ ಇನ್ನಷ್ಟು ಭಾರವಾಗಿ ಒದ್ದಾಡುವಂತಾಗುತ್ತದೆ. ಬದಲಿಗೆ, ಊಟದ ಹತ್ತಿಪ್ಪತ್ತು ನಿಮಿಷಗಳ ನಂತರ ಉಗುರುಬಿಸಿಯಾದ ನೀರನ್ನು ಗುಟುಕರಿಸಿ. ಇದು ಜೀರ್ಣಾಂಗಗಳನ್ನು ಚುರುಕಾಗಿಸುತ್ತದೆ.

ಇದನ್ನು ಓದಿ: Health Tips: ತರಹೇವಾರಿ ಒಣ ದ್ರಾಕ್ಷಿಯಲ್ಲಿ ಯಾವುದು ಒಳ್ಳೆಯದು ಗೊತ್ತಿದೆಯೇ?

ತಾಂಬೂಲ: ಊಟದ ನಂತರ ಸೋಂಪು ಮೆಲ್ಲುವುದು, ತಾಂಬೂಲ ಜಗಿಯುವುದು, ನೆಲ್ಲಿಕಾಯಿ ಅಡಿಕೆಯನ್ನು ಚೀಪುವುದು- ಇವೆಲ್ಲ ಪಚನಕಾರಿ ಪರಿಣಾಮವನ್ನು ಬೀರುತ್ತವೆ. ಹಾಗೆಂದೇ ಭಾರತೀಯರಲ್ಲಿ ಊಟದ ನಂತರ ಇವುಗಳನ್ನು ಮೆಲ್ಲುವ ಸಂಪ್ರದಾಯ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಇವಿಷ್ಟೇ ಅಲ್ಲ, ಶುಂಠಿ, ಪೆಪ್ಪರ್‌ಮಿಂಟ್‌, ಕ್ಯಾಮೊಮೈಲ್‌, ಪುದೀನಾ ಮುಂತಾದವುಗಳ ಚಹಾ ಸಹ ಈ ನಿಟ್ಟಿನಲ್ಲಿ ಬಹಳಷ್ಟು ಉಪಕಾರ ಮಾಡುತ್ತವೆ.

ಹೀಗೆ ಮಾಡಬೇಡಿ: ಹೊಟ್ಟೆ ಬಿರಿ ತಿಂದಾದ ಮೇಲೆ ಅದನ್ನು ಕರಗಿಸುವ ಹುಕಿ ಬಂದು, ಸಿಕ್ಕಾಪಟ್ಟೆ ವ್ಯಾಯಾಮ ಮಾಡಬೇಡಿ; ಲಘು ನಡಿಗೆ ಮಾತ್ರವೇ ಸಾಕಾಗುತ್ತದೆ. ಹೀಗೆ ಹೊಟ್ಟೆಯ ಮೇಲೆ ಒತ್ತಡ ಬಿದ್ದರೆ, ಅಜೀರ್ಣವಾಗುವುದು ನಿಶ್ಚಿತ. ಹುಳಿತೇಗು, ಎದೆಯುರಿ, ಹೊಟ್ಟೆ ತೊಳೆಸುವುದು, ಹೊಟ್ಟೆ ನೋವು ಇತ್ಯಾದಿ ಅಡ್ಡ ಪರಿಣಾಮಗಳೂ ಕಾಣಬಹುದು.

ಇವು ಬೇಡ: ಊಟವಾಗಿ ಕೈ ತೊಳೆಯುತ್ತಿದ್ದಂತೆ ಕಾಫಿ ಕುಡಿಯುವವರಿಗೆ ಬರವಿಲ್ಲ. ಆದರೆ ಊಟದ ತಕ್ಷಣ ಕಾಫಿ, ಚಹಾ, ಸಿಗರೇಟ್‌ಗಳು ಬೇಡ. ಇವೆಲ್ಲವೂ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್‌ ಆಮ್ಲದ ಅಧಿಕ ಉತ್ಪಾದನೆಗೆ ಕಾರಣವಾಗುತ್ತವೆ. ಇದೇ ಮುಂದುವರಿದರೆ ಪೆಪ್ಟಿಕ್‌ ಅಲ್ಸರ್‌ಗೆ ದಾರಿಯಾದೀತು. ಹಾಗಾಗಿ ಊಟವಾದ ತಕ್ಷಣ ಮಲಗುವುದು ಹೇಗೆ ನಿಷಿದ್ಧವೋ ಇವೆಲ್ಲವನ್ನೂ ನೀವೇ ನಿಷೇಧಿಸಿಕೊಳ್ಳಿ. ನಿಮ್ಮ ಆರೋಗ್ಯಕ್ಕೇ ಒಳ್ಳೆಯದು.