ಅತಿಯಾಗಿ ಎಳನೀರು ಸೇವಿಸುವುದು ಕೂಡ ಅಪಾಯಕಾರಿ; ಯಾಕೆ ಗೊತ್ತೆ?
Health Tips: ಬಿಸಿಲಿನ ತಾಪಕ್ಕೆ ಹೆಚ್ಚು ಹೈಡ್ರೇಟ್ ಆಗಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಅದರಲ್ಲೂ ಎಳನೀರು ದೇಹಕ್ಕೆ ಹಿತವಾಗಿದ್ದು ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿದೆ. ಜತೆಗೆ ಹಲವು ರೀತಿಯ ಆರೋಗ್ಯ ಲಾಭವನ್ನು ಇದು ನೀಡುತ್ತದೆ. ಆದರೆ ಇದನ್ನು ಮಿತಿಮೀರಿ ಸೇವಿಸಿದರೆ ಅನಾರೋಗ್ಯ ಕಾಡಬಹುದು.
ಸಾಂದರ್ಭಿಕ ಚಿತ್ರ -
ನವದೆಹಲಿ, ಮಾ. 23: ಬೇಸಗೆಯಲ್ಲಿ ನೀರಿನ ಅಂಶ ದೇಹಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ಬಿಸಿಲಿನ ತಾಪಕ್ಕೆ ಹೆಚ್ಚು ಹೈಡ್ರೇಟ್ ಆಗಿರಲು ವಿವಿಧ ರೀತಿಯ ತಂಪು ಪಾನೀಯ ಸೇವೆನೆಗೆ ಒತ್ತು ನೀಡುತ್ತೇವೆ. ಅದರಲ್ಲೂ ಬೇಸಗೆಯ ಬಿಸಿಲಿಗೆ ಎಳನೀರು (Coconut Water) ದೇಹಕ್ಕೆ ಹಿತವಾಗಿದ್ದು, ಇದು ನೈಸರ್ಗಿಕ ಎಲೆಕ್ಟ್ರೋಲೈಟ್ ಒದಗಿಸುತ್ತದೆ. ಜತೆಗೆ ಹಲವು ರೀತಿಯಿಂದಲೂ ಪ್ರಯೋಜನಕಾರಿ. ಆದರೆ ಇದನ್ನು ಮಿತಿಮೀರಿಯಾಗಿ ಸೇವಿಸಿದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಏನೆಲ್ಲ ಸಮಸ್ಯೆ ಎದುರಾಗುತ್ತವೆ ಎನ್ನುವುದನ್ನು ನೋಡೋಣ:
ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು
ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ ಎಂದು ವೈಜ್ಞಾನಿಕ ಅಧ್ಯಯನಗಳು ಹೇಳಿವೆ. ಇದು ಅತ್ಯಗತ್ಯ ಖನಿಜ. ಆದರೆ ಅಧಿಕವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಹೈಪರ್‌ಕಲೇಮಿಯಾ ಉಂಟಾಗಲಿದ್ದು ಈ ಸ್ಥಿತಿಯಲ್ಲಿ ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟ ಅಪಾಯಕಾರಿಯಾಗಿ ಹೆಚ್ಚುತ್ತದೆ .ಇದರಿಂದ ಸ್ನಾಯು ದೌರ್ಬಲ್ಯ, ಹೃದಯದ ತೊಂದರೆಗಳು ಉಂಟಾಗಬಹುದು.
ಗರ್ಭಾವಸ್ಥೆಯಲ್ಲಿ ಮಾಡುವ ಈ ತಪ್ಪಿನಿಂದ ಮಗುವಿನ ಮೇಲೆ ಏನೆಲ್ಲಾ ಪರಿಣಾಮ ಗೊತ್ತಾ?
ಜೀರ್ಣಕಾರಿ ಸಮಸ್ಯೆಗಳು ಮತ್ತು ಕರುಳಿನ ಅಸ್ವಸ್ಥತೆ
ಹೆಚ್ಚು ಎಳನೀರು ಕುಡಿಯುವುದು ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರಬಹುದು. ಇದು ಹುದುಗುವ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವುದರಿಂದ, ಅತಿಯಾದ ಸೇವನೆ ಅತಿಸಾರ, ಹೊಟ್ಟೆ ಉಬ್ಬುವುದು, ಹೊಟ್ಟೆ ಸೆಳೆತಕ್ಕೆ ಕಾರಣವಾಗಬಹುದು.
ಕಡಿಮೆ ರಕ್ತದೊತ್ತಡ ಸಮಸ್ಯೆ
ಎಳನೀರು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿದ್ದರೂ, ಹೆಚ್ಚು ಸೇವಿಸುವುದರಿಂದ ದೇಹದ ನೈಸರ್ಗಿಕ ಸಮತೋಲನಕ್ಕೆ ಅಡ್ಡಿಯಾಗಬಹುದು. ಅದರಲ್ಲೂ ಕಡಿಮೆ ರಕ್ತದೊತ್ತಡ ಇದ್ದವರು ಹೆಚ್ಚು ಸೇವಿಸಿದರೆ ಮತ್ತಷ್ಟು ಸಮಸ್ಯೆಯಾಗಬಹುದು
ಇವರು ಸೇವನೆ ಮಾಡುವುದು ಸೂಕ್ತವಲ್ಲ
ಮೂತ್ರಪಿಂಡದ ರೋಗಿಗಳು: ದುರ್ಬಲ ಮೂತ್ರಪಿಂಡ ಇರುವವರಿಂದ ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಇಂತವರಿಗೆ ಅಪಾಯಕಾರಿ.
ಮಧುಮೇಹ ಇದ್ದವರು: ನೈಸರ್ಗಿಕವಾಗಿ ಎಳನೀರು ಸಕ್ಕರೆಯನ್ನು ಹೊಂದಿರುತ್ತದೆ. ಆದರೆ ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರಿಕೆಯಾಗಬಹುದು.