ಬೆಂಗಳೂರು: ಇವತ್ತು ಹೆಚ್ಚಿನವರು ಸೂರ್ಯನ ಬೆಳಕು ಚರ್ಮಕ್ಕೆ ಬೀಳದ ಹಾಗೆ ನೋಡಿಕೊಳ್ಳುತ್ತಾರೆ. ಇದರಿಂದ ವಿಟಮಿನ್ ಡಿ ಕೊರತೆ ಉಂಟಾಗಿ ನಾನಾ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ (University of Mysore) ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini). ʼವಿಶ್ವವಾಣಿ ಹೆಲ್ತ್ʼ (Vishwavani Health) ಯುಟ್ಯೂಬ್ ಚಾನಲ್ನಲ್ಲಿ ಕೇಶವ್ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಇವತ್ತು ಚಿಕ್ಕ ವಯಸ್ಸಿನಲ್ಲೇ ಹೆಚ್ಚು ದಣಿವು, ಸುಸ್ತು, ಒತ್ತಡ, ಬೇಗನೆ ಕೂದಲು ಉದುರುವುದು, ಎಲುಬು ದುರ್ಬಲವಾಗುವುದನ್ನು ಹೆಚ್ಚಿನವರಲ್ಲಿ ಕಾಣುತ್ತಿದ್ದೇವೆ. ಯುವ ವಯಸ್ಸು ಎಂದರೆ ಅವರು ಉತ್ಸಾಹದ ಚಿಲುಮೆಗಳಾಗಿರುಬೇಕು. ಆದರೆ ಇವತ್ತು ಅವರಲ್ಲಿ ಎನರ್ಜಿ ಕಡಿಮೆ ಇರುವುದು ಕಾಣುತ್ತಿದೆ. ಸ್ವಲ್ಪ ಬಿದ್ದರೂ ಮೂಳೆ ಮುರಿಯುತ್ತದೆ. ಇದಕ್ಕೆ ಮುಖ್ಯ ಕಾರಣ ವಿಟಮಿನ್ ಡಿ, ವಿಟಮಿನ್ ಬಿ೧೨ ಕೊರತೆ ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.
ಜಪದ ಮಹತ್ವ; ವಿಜ್ಞಾನ ಹೇಳುವುದೇನು?
ಸಾಮಾನ್ಯವಾಗಿ ತಂಪಾದ ಪ್ರದೇಶಗಳಲ್ಲಿ ವಿಟಮಿನ್ ಡಿ ಕೊರತೆ ಕಾಣುವುದು ಸರ್ವೇ ಸಾಮಾನ್ಯ. ಆದರೆ ಭಾರತದಂತಹ ಉಷ್ಣವಲಯದ ದೇಶದಲ್ಲಿ ಇದು ಅಚ್ಚರಿಯ ಮಾತು. ಇಲ್ಲಿನವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳಲು ಮುಖ್ಯ ಕಾರಣ ನಾವು ಸೂರ್ಯ ಹುಟ್ಟುವುದಕ್ಕೆ ಮೊದಲೇ ಕಚೇರಿಗೆ ಹೋಗುತ್ತೇವೆ. ಸೂರ್ಯ ಮುಳುಗಿದ ಮೇಲೆ ಮನೆಗೆ ಮರಳುತ್ತೇವೆ. ದಿನದ ಹೆಚ್ಚಿನ ಸಮಯವನ್ನು ಮನೆ, ಕಚೇರಿಯಲ್ಲೇ ಕಳೆಯುತ್ತೇವೆ ಎಂದರು.
ಇನ್ನು ದ್ವಿಚಕ್ರ ವಾಹನದಲ್ಲಿ ಸಾಗುವವರು ಸಂಪೂರ್ಣ ಮೈ ಮುಚ್ಚಿಕೊಂಡು ಹೋಗುತ್ತಾರೆ. ಕಾರಿನಲ್ಲಿ ಹೋಗುವವರಿಗೆ ಸೂರ್ಯನ ಬೆಳಕು ತಾಕುವುದಿಲ್ಲ. ಹೀಗಾಗಿ ಬಹಳ ಬೇಗನೆ ಇಂತವರಲ್ಲಿ ವಿಟಮಿನ್ ಡಿ ಕೊರತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಅವರು ಹೇಳಿದರು.
ನಮ್ಮ ಚರ್ಮದಲ್ಲಿ ಸೆವೆನ್ ಡಿ ಹೈಡ್ರೋ ಕೊಲೆಸ್ಟ್ರಾಲ್ ಎಂಬ ರಾಸಾಯನಿಕವಿದ್ದು, ಇದರ ಮೇಲೆ ಸೂರ್ಯನ ಬೆಳಕು ಬಿದ್ದಾಗ ಪ್ರಿ ವಿಟಮಿನ್ ಡಿ ಆಗುತ್ತದೆ. ಬಳಿಕ ಅದು ವಿಟಮಿನ್ ಡಿ ಆಗುತ್ತದೆ. ಇದು ದೇಹದಲ್ಲಿ ಮೂರು ಪ್ರಮುಖ ಜಿನ್ ಗಳನ್ನು ಆಕ್ಟಿವೇಟ್ ಮಾಡುತ್ತದೆ. ಇವು ಕ್ಯಾಲ್ಸಿಯಂ ಹೀರಿಕೊಳ್ಳುವ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತದೆ. ನರಗಳ ಸಂವಹನ ಪ್ರಕ್ರಿಯೆ ಉತ್ತಮವಾಗಿ ನಡೆಯಲು ಇದು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ನಾವು ಇವತ್ತು ಸೂರ್ಯನಿಗೆ ಸರಿಯಾಗಿ ದೇಹವನ್ನು ಒಡ್ಡಿಕೊಳ್ಳುವುದಿಲ್ಲ. ಇದು ವಿಟಮಿನ್ ಡಿ ಕೊರತೆಗೆ ಒಂದು ಪ್ರಮುಖ ಕಾರಣವಾದರೆ ಉಳಿದಂತೆ ವಾಯುಮಾಲಿನ್ಯ, ಸ್ಥೂಲಕಾಯ ಕೂಡ ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಇನ್ನು ಲಿವರ್ ಮತ್ತು ಕಿಡ್ನಿ ಸಮಸ್ಯೆ ಇರುವವರಲ್ಲಿ, ಕಪ್ಪು ವರ್ಣದವರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿರುತ್ತದೆ ಎಂದರು.
ಮೊಬೈಲ್ ಬಳಕೆಯಿಂದ ನಿಮ್ಮ ಕೈಗಳಿಗೂ ಸಮಸ್ಯೆ? ಹೇಗೆ ತಿಳಿದಿದೆಯೇ?
ಮಾಂಸಾಹಾರಿಗಳಿಗೆ ವಿಟಮಿನ್ ಡಿ ಕೊರತೆ ಕಡಿಮೆ. ಯಾಕೆಂದರೆ ಅವರು ಸೇವಿಸುವ ಆಹಾರದಲ್ಲಿ ಇದು ಇರುತ್ತದೆ. ಸಸ್ಯಾಹಾರಿಗಳು ಹೆಚ್ಚಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಒಂದೇ ಇದಕ್ಕೆ ಪರಿಹಾರ. ವಯಸ್ಸಾಗುತ್ತಿದ್ದಂತೆ ವಿಟಮಿನ್ ಡಿ ಕೊರತೆ ಹೆಚ್ಚಾಗುತ್ತದೆ. ಅದಕ್ಕೆ ಕೆಲವು ಸಪ್ಲಿಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಂದು ಅನುವಂಶೀಯ ಕಾಯಿಲೆ ಇದ್ದವರಲ್ಲಿ ಕೂಡ ವಿಟಮಿನ್ ಡಿ ಉಂಟಾಗುತ್ತದೆ. ಇವರು ವೈದ್ಯರ ಸಲಹೆ ಮೇರೆಗೆ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳಬಹುದು. ಆಹಾರಗಳಲ್ಲಿರುವ ವಿಟಮಿನ್ ಗಳ ಕೊರತೆಯನ್ನು ನಿವಾರಿಸಿಕೊಂಡರೆ ಆರೋಗ್ಯವಾಗಿರಬಹುದು ಎಂದು ಅವರು ಹೇಳಿದರು.