Health Tips: ಖಾಲಿ ಹೊಟ್ಟೆಗೆ ನೆನೆಸಿದ ಮೆಂತೆಕಾಳು ನೀರು ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲ ಪ್ರಯೋಜನ
ಮೆಂತೆಕಾಳು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸೇರಿದಂತೆ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ಮೆಂತೆಯಲ್ಲಿ ಖನಿಜಾಂಶಗಳು ಮತ್ತು ನಾರಿನಾಂಶವು ಇರುವ ಕಾರಣದಿಂದಾಗಿ ಇದನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

fenugreek

ಬೆಂಗಳೂರು: ಪ್ರತಿಯೊಂದು ಭಾರತೀಯ ಅಡುಗೆ ಮನೆಯಲ್ಲಿ ಬಳಸ್ಪಡುವ ಮೆಂತ್ಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತೆ ಕಾಳು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸೇರಿದಂತೆ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ಮೆಂತೆಯಲ್ಲಿ ಖನಿಜಾಂಶಗಳು ಮತ್ತು ನಾರಿನಾಂಶವು ಇರುವ ಕಾರಣದಿಂದ ಇದನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ದೇಹದ ತೂಕ ಇಳಿಕೆ, ಚರ್ಮದ ಆರೋಗ್ಯ, ಹೃದಯದ ಆರೋಗ್ಯ ಸೇರಿದಂತೆ ಹಲವು ರೀತಿಯ ಪ್ರಯೋಜನಗಳು ಇದರ ಸೇವನೆಯಿಂದ ಸಿಗುತ್ತದೆ (Health Tips). ಅದರಲ್ಲೂ ನೀರಿನಲ್ಲಿ ನೆನೆಸಿದ ಮೆಂತೆ ಬೀಜಗಳನ್ನು ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಹಲವು ರೀತಿಯ ಆರೋಗ್ಯ ಲಾಭಗಳು ಸಿಗಲಿವೆ. ಇಲ್ಲಿದೆ ಆ ಕುರಿತಾದ ವಿವರ.
ತೂಕ ನಷ್ಟ
ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡವರು ಖಾಲಿ ಹೊಟ್ಟೆಗೆ ನೆನೆಸಿದ ಮೆಂತೆ ನೀರನ್ನು ಕುಡಿಯಬೇಕು. ಈ ಬೀಜಗಳು ಹಸಿವನ್ನು ಕಡಿಮೆ ಮಾಡಿ ಅತಿಯಾಗಿ ತಿನ್ನುವುದನ್ನು ತಡೆಯುತ್ತವೆ. ಹಾಗಾಗಿ ಇದು ದೇಹದಲ್ಲಿ ಕೊಬ್ಬನ್ನು ನಿವಾರಿಸಿ ತೂಕ ಇಳಿಸಲು ಸಹಕರಿಸುತ್ತದೆ.
ಕರುಳಿನ ಆರೋಗ್ಯ
ಮೊದಲೇ ಹೇಳಿದಂತೆ ಮೆಂತೆಯು ಫೈಬರ್, ಖನಿಜ ಅಂಶವನ್ನು ಹೇರಳವಾಗಿ ಹೊಂದಿದ್ದು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಲಿದೆ. ಒಂದು ಚಮಚ ಮೆಂತೆ ಬೀಜಗಳಲ್ಲಿ 7% ಮ್ಯಾಂಗನೀಸ್ ಮತ್ತು 5% ಮೆಗ್ನೀಸಿಯಂ ಇರುತ್ತದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆ ಉತ್ತಮ. ಇದು ಜಠರ ಕರುಳಿನ ಉರಿಯೂತವನ್ನು ಶಮನಗೊಳಿಸಿ ಹೊಟ್ಟೆ ಮತ್ತು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಎದೆಯುರಿ ಮತ್ತು ಆ್ಯಸಿಡ್ ರಿಫ್ಲಕ್ಸ್‌ಗೆ ಇದು ಪ್ರಯೋಜನಕಾರಿ.
ಕೊಲೆಸ್ಟ್ರಾಲ್ ನಿಯಂತ್ರಣ
ಮೆಂತೆಯಲ್ಲಿ ಇರುವ ಸಪೋನಿನ್‌ಗಳು ಕೊಬ್ಬಿನ ಕೊಲೆಸ್ಟ್ರಾಲ್‌ನ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ಸಪೋನಿನ್‌ಗಳು ದೇಹವು ಕಡಿಮೆ ಕೊಲೆಸ್ಟ್ರಾಲ್ ಉತ್ಪಾದಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ LDL ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೋಗಲಾಡಿಸಲು ಸಹಾಯಕ.
ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ
ಮೆಂತೆಯು ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ಹೊಟ್ಟೆ ನೋವಿನ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮೆಂತೆ ನೀರಿನಲ್ಲಿರುವ ಆಲ್ಕಲಾಯ್ಡ್ ದೇಹವನ್ನು ತಂಪಾಗಿಸುವ ಜತೆಗೆ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ
ಮೆಂತೆ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ. ಇದರಲ್ಲಿ ಗ್ಯಾಲಕ್ಟೋಮನ್ನನ್ ಎನ್ನುವ ನಾರಿನಾಂಶವಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ. ಇದರಿಂದ ಮಧುಮೇಹ ತಡೆಯಲಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ.
ಕಿಡ್ನಿ ಆರೋಗ್ಯಕ್ಕೆ ಉತ್ತಮ
ಮೆಂತೆ ಕಾಳಿನ ನೀರನ್ನು ಬಿಸಿ ಮಾಡಿ ಕುಡಿದರೆ ಆರೋಗ್ಯಕ್ಕೆ ಬಹಳ ಒಳಿತು. ಇದು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕಿ ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಮತ್ತು ಕಿಡ್ನಿಯ ಕಲ್ಲಿನ ಸಮಸ್ಯೆ ನಿವಾರಣೆ ಮಾಡಲು ಸಹಕರಿಸುತ್ತದೆ.
ಇದನ್ನು ಓದಿ: Health Tips: ಬೆಳಗ್ಗೆ ಬೆಚ್ಚಗಿನ ನೀರಿಗೆ ಲಿಂಬೆ ರಸ, ದಾಲ್ಚಿನಿ ಪುಡಿ ಸೇರಿಸಿ ಕುಡಿದರೆ ಸಿಗುತ್ತೆ ಇಷ್ಟೆಲ್ಲ ಪ್ರಯೋಜನ
ಮೆಂತೆ ಕಾಳಿನ ನೀರು ತಯಾರಿಸುವ ವಿಧಾನ
2 ಚಮಚ ಮೆಂತೆ ಕಾಳುಗಳನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಬೆಳಗ್ಗೆ ಎದ್ದ ತಕ್ಷಣ ಆ ನೀರನ್ನು ಸೋಸಿ ಬಳಿಕ ಕುಡಿಯಿರಿ. ಮಾತ್ರವಲ್ಲ ಮೆಂತೆ ಕಾಳುಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಾನಾ ರೀತಿಯ ಕಾಯಿಲೆಗಳಿಂದ ನೀವು ಮುಕ್ತಿ ಪಡೆಯಬಹುದು.