ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Tips: ಪೋಷಕಾಂಶ ಹೆಚ್ಚಿಸಲು ತಿನ್ನಿ ಮೊಳಕೆ ಕಾಳು

ಕಾಳುಗಳನ್ನು ಅಡುಗೆಗೆ ನೇರವಾಗಿ ಬಳಸುವುದು ಮಾತ್ರವಲ್ಲದೆ, ಅವುಗಳನ್ನು ನೆನೆಸಿ ಮೊಳಕೆ ಬರಿಸಿ- ಹಸಿಯಾಗಿ ಮತ್ತು ಬೇಯಿಸಿ- ಎರಡೂ ರೀತಿಗಳಲ್ಲಿ ಉಪಯೋಗಿಸಲಾಗುತ್ತದೆ. ಮೊಳಕೆ ಕಾಳುಗಳ ವಿಷಯಕ್ಕೆ ಬಂದರೆ ಹೆಸರು ಕಾಳು, ಹುರುಳಿ ಕಾಳು, ಕಡಲೆ ಕಾಳು, ಅಲಸಂದೆ ಕಾಳು- ಹೀಗೆ ಹಲವು ರೀತಿಯ ಕಾಳುಗಳನ್ನು ಮೊಳಕೆ ಕಟ್ಟಲಾಗುತ್ತದೆ. ಮೊಳಕೆ ಕಾಳುಗಳಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಇಂಟರ್ ನೆಟ್ ಚಿತ್ರ

ನವದೆಹಲಿ: ಭಾರತೀಯ ಅಡುಗೆಗಳಲ್ಲಿ ನಾನಾ ರೀತಿಯ ಬೇಳೆ-ಕಾಳುಗಳಿಗೆ ಪ್ರಾಶಸ್ತ್ಯವಿದೆ. ಹಾಗೆಯೇ ಬೇಳೆ-ಕಾಳುಗಳ ಬಳಕೆಯ ವಿಧಾನಗಳಲ್ಲೂ ವೈವಿಧ್ಯತೆಯಿದೆ. ಕಾಳುಗಳನ್ನು ಅಡುಗೆಗೆ ನೇರವಾಗಿ ಬಳಸುವುದು ಮಾತ್ರವಲ್ಲದೆ, ಅವುಗಳನ್ನು ನೆನೆಸಿ ಮೊಳಕೆ ಬರಿಸಿ- ಹಸಿಯಾಗಿ ಮತ್ತು ಬೇಯಿಸಿ- ಎರಡೂ ರೀತಿಗಳಲ್ಲಿ ಉಪಯೋಗಿಸಲಾಗುತ್ತದೆ. ಮೊಳಕೆ ಕಾಳುಗಳ ವಿಷಯಕ್ಕೆ ಬಂದರೆ ಹೆಸರು ಕಾಳು, ಹುರುಳಿ ಕಾಳು, ಕಡಲೆ ಕಾಳು, ಅಲಸಂದೆ ಕಾಳು- ಹೀಗೆ ಹಲವು ರೀತಿಯ ಕಾಳುಗಳನ್ನು ಮೊಳಕೆ ಕಟ್ಟಲಾಗುತ್ತದೆ. ಮೊಳಕೆ ಕಾಳುಗಳಿಂದ (Health Tips) ಆರೋಗ್ಯಕ್ಕಾಗುವ ಲಾಭದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಹೆಸರುಕಾಳು: ನೆನೆದು, ಉಬ್ಬಿ, ಮೊಳಕೆಯೊಡೆದು ಹಸಿರು-ಬಿಳಿ ಬಣ್ಣಗಳಲ್ಲಿ ಗೋಚರಿಸುವ ಹೆಸರು ಕಾಳುಗಳು ಪ್ರೊಟೀನ್‌ಗಳ ಗಣಿಯಿದ್ದಂತೆ. ಸಿ, ಇ ಮತ್ತು ಕೆ ವಿಟಮಿನ್‌ಗಳ ಆಗರವಾಗಿರುವ ಇವು, ಹಸಿಯಾಗಿ ತಿನ್ನಲೂ ಸಹ ರುಚಿಸುತ್ತವೆ. ನೂರು ಗ್ರಾಂ ಹೆಸರು ಕಾಳಿನಲ್ಲಿ ಶೇ. 28ರಷ್ಟು ಪ್ರೊಟೀನ್‌, ಶೇ. 60ರಷ್ಟು ಕಾರ್ಬೊಹೈಡ್ರೇಟ್‌ ಇದೆ. ಮಾತ್ರವಲ್ಲ, ಫೋಲೇಟ್‌ಗಳು, ಜಿಂಕ್‌, ಮೆಗ್ನೀಶಿಯಂ, ಪೊಟಾಶಿಯಂ ಇರುವ ಈ ಆಹಾರದಲ್ಲಿ ಕೊಬ್ಬಿನಂಶ ಶೂನ್ಯ.

ಕಡಲೆಕಾಳು: ಮೊಳಕೆ ಕಡಲೆ ಕಾಳಿನಲ್ಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಲಭ್ಯವಿದೆ. ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌ ಎ ಹೊಂದಿರುವ ಈ ಕಾಳುಗಳಲ್ಲಿ ಶೇ. 20ರಷ್ಟು ಸಾರಜನಕ ಮತ್ತು ಶೇ. 61ರಷ್ಟು ಶರ್ಕರ ಪಿಷ್ಟಾದಿಗಳಿವೆ. ಪ್ರತಿ ನೂರು ಗ್ರಾಂ ಕಡಲೆಯಲ್ಲಿ 49 ಮಿ. ಗ್ರಾಂ. ಕ್ಯಾಲ್ಸಿಯಂ, ೭.೨ ಮಿ.ಗ್ರಾಂ ಕಬ್ಬಿಣ ದೊರೆಯುತ್ತದೆ. ಪೊಟಾಶಿಯಂ ಮತ್ತು ಮೆಗ್ನೀಶಿಯಂ ಅಂಶಗಳೂ ದೇಹಕ್ಕೆ ದೊರೆಯುತ್ತವೆ. ಕಪ್ಪು ಕಡಲೆ ಮತ್ತು ಬಿಳಿಯ ಕಾಬೂಲು ಕಡಲೆ- ಯಾವುದಾದರೂ ರುಚಿ ಮತ್ತು ಸತ್ವಕ್ಕೆ ಮೋಸವಿಲ್ಲ.

ಹುರುಳಿಕಾಳು: ಮೊಳಕೆ ಹುರುಳಿ ಕಾಳು ಸಹ ಪ್ರೊಟೀನ್‌ ಸಮೃದ್ಧವಾಗಿರುವ ಆಹಾರ. ಇದು ಸತ್ವಯುತ ಆಹಾರ ಮಾತ್ರವಲ್ಲದೆ, ಹಲವಾರು ಔಷಧೀಯ ಗುಣಗಳನ್ನೂ ಹೊಂದಿದೆ. ನೂರ ಗ್ರಾಂ ಹುರುಳಿಯಲ್ಲಿ ೨೨ ಗ್ರಾಂ ಪ್ರೊಟೀನ್‌, ಶೇ ೫೭ ರಷ್ಟು ಪಿಷ್ಟ, ೫ ಗ್ರಾಂ ನಾರು, ೨೮೭ ಮಿಗ್ರಾಂ ಕ್ಯಾಲ್ಶಿಯಂ ಮತ್ತು ೭ ಮಿಗ್ರಾಂ ಕಬ್ಬಿಣವನ್ನು ಹೊಂದಿದೆ. ಇದಲ್ಲದೆ ಕಿರು ಪೋಷಕಾಂಶಗಳನ್ನು ಸಾಕಷ್ಟು ಹೊಂದಿರುವ ಈ ಕಾಳನ್ನು ಶೀತ, ಕೆಮ್ಮು, ಬ್ರಾಂಕೈಟಿಸ್‌ ಮತ್ತು ಉಬ್ಬಸ ಮುಂತಾದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗಿತ್ತದೆ.

Health Tips: ಬೆಲ್ಲದ ಸೇವನೆ ಸಕ್ಕರೆಗಿಂತ ನಿಜವಾಗಿಯೂ ಉತ್ತಮವೇ? ತಜ್ಞರು ಹೇಳೋದೇನು?

ಅಲಸಂದೆಕಾಳು: ಮೊಳಕೆ ಅಲಸಂದೆ ಕಾಳು ಸಹ ಪ್ರೊಟೀನ್‌ ಪ್ಯಾಕ್‌ ಇದ್ದಂತೆ. ನೂರು ಗ್ರಂ ಅಲಸಂದೆಯಲ್ಲಿ ಶೇ. ೨೫ರಷ್ಟು ಪ್ರೊಟೀನ್‌ ಮತ್ತು ಇದರ ಎರಡು ಪಟ್ಟು ಪಿಷ್ಟ ದೊರೆಯುತ್ತದೆ. ಜೊತೆಗೆ, ನಾರು, ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ರಂಜಕ, ವಿಟಮಿನ್‌ ಬಿ ಹಾಗೂ ಥಿಯಾಮಿನ್‌ ಅಂಶಗಳನ್ನು ಈ ಕಾಳುಗಳು ಹೊಂದಿವೆ.

ದ್ವಿದಳ ಧಾನ್ಯಗಳು ಯಾವುದೇ ಇರಲಿ, ಮೊಳಕೆ ಕಟ್ಟಿ ಉಪಯೋಗಿಸುವುದು ಪ್ರಯೋಜನಕಾರಿ ಎನ್ನುತ್ತಾರೆ ಆಹಾರ ತಜ್ಞರು. ಮೊಳಕೆ ಕಟ್ಟುವುದರಿಂದ ಈ ಕಾಳುಗಳಲ್ಲಿರುವ ಫೀನಾಲ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ ಗಳ ಉತ್ಕರ್ಷಣ ನಿರೋಧಕ ಚಟುವಟಿಕೆಯಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತದೆ. ಇದರಿಂದ ದೇಹಕ್ಕೆ ಹಾನಿ ಮಾಡುವ ಮುಕ್ತ ಕಣಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ಬಂಧಿಸಲು ಸಾಧ್ಯವಿದೆ.

ಕೆಲವೊಮ್ಮೆ ಮೊಳಕೆ ಕಾಳುಗಳ ಅತಿಯಾದ ಸೇವನೆಯಿಂದ ಮಲಬದ್ಧತೆ, ಅಜೀರ್ಣದಂಥ ಸಮಸ್ಯೆಗಳು ಬರಬಹುದು. ಹೊಟ್ಟೆ ಉಬ್ಬರಿಸಿದಂತಾಗಬಹುದು. ಕೆಲವೊಮ್ಮೆ ಕೆಲವು ಕಾಳುಗಳು ದೇಹಕ್ಕೆ ಒಗ್ಗದೆ ಇರಬಹುದು. ಯಾವ ಕಾಳಿನಿಂದ ಸಮಸ್ಯೆ ಉಂಟಾಗುತ್ತಿದೆ ಎಂಬ ಬಗ್ಗೆ ಗಮನ ಬೇಕಾಗುತ್ತದೆ. ಹಾಗಿಲ್ಲದಿದ್ದರೆ ಮೊಳಕೆ ಕಾಳುಗಳನ್ನು ಹಸಿಯಾಗಿ ಸೇವಿಸುವ ಬದಲು ಬೇಯಿಸಿ, ಉಳಿದೆಲ್ಲಾ ಆಹಾರ ಪದಾರ್ಥಗಳ ಜೊತೆಗೂ ಸೇವಿಸಬಹುದು.