ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ಸೆರೆಮನೆಯಲ್ಲಿ ಕೈದಿಗಳ ಮನಸ್ಥಿತಿ ಹೇಗಿರುತ್ತದೆ?

ಜೈಲು ಶಿಕ್ಷೆಗೆ ಉರಿಯಾದ ಕೈದಿಗಳ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ? ಜೈಲಿನಲ್ಲಿ ಅವರ ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಬಹುತೇಕರ ಕುತೂಹಲ. ಕೈದಿಗಳು ಅಪರಾಧಿಗಳಾಗಿರಬಹುದು. ಆದರೆ ಅವರೂ ಸಹ ಮನುಷ್ಯರೇ. ಮನುಷ್ಯರ ಎಲ್ಲ ಭಾವನೆಗಳು ಅವರಿಗೂ ಕೂಡ ಇರುತ್ತವೆ. ಅವರು ಮಾಡಿದ ತಪ್ಪುಗಳಿಗೆ ಶಿಕ್ಷೆ ಸಿಗಲೇಬೇಕು ಆದರೆ ಅವರ ಸುಧಾರಣೆಯೂ ಕೂಡ ಜೈಲಿನಲ್ಲಿಯೇ ಆಗಬೇಕು ಎನ್ನುತ್ತಾರೆ ಮನಃಶಾಸ್ತ್ರಜ್ಞರು, ಆಪ್ತ ಸಮಾಲೋಚಕರಾದ ಭವ್ಯಾ ವಿಶ್ವನಾಥ್‌. ಈ ಕುರಿತಾದ ವಿವರ ಇಲ್ಲಿದೆ.

ಸೆರೆಮನೆಯಲ್ಲಿ ಕೈದಿಗಳ ಮನಸ್ಥಿತಿ ಹೇಗಿರುತ್ತದೆ?

-

  • ಡಿ.ಆರ್. ಭವ್ಯಾ ವಿಶ್ವನಾಥ್

ಪ್ರಶ್ನೆ: ನಾನು 29 ವರ್ಷದ ಕ್ರೈಂ ಬೀಟ್‌ನಲ್ಲಿರುವ ಪತ್ರಕರ್ತ. 5 ವರ್ಷಗಳಿಂದ ಕ್ರೈಂ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಕೋರ್ಟ್‌ ಕೇಸುಗಳು ಮತ್ತು ಜೈಲಿನ ರಿಪೋರ್ಟಿಂಗ್ ಮಾಡುತ್ತಿರುತ್ತೇನೆ. ಅಪರಾಧಿ ಮತ್ತು ಕೈದಿಗಳನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ ಇವರ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ? ಜೈಲಿನಲ್ಲಿ ಅವರ ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ. ತಿಳಿದುಕೊಳ್ಳುವ ಕೂತುಹಲವಿದೆ, ದಯವಿಟ್ಟು ತಿಳಿಸಿಕೊಡಿ.

ಉತ್ತರ: ಇದು ಬಹಳ ಒಳ್ಳೆಯ ಪ್ರಶ್ನೆ. ನಿಮ್ಮ ಕ್ರೈಂ ರಿಪೋರ್ಟಿಂಗ್‌ ಜತೆಗೆ, ಕೈದಿಗಳ ಮನಸ್ಥಿತಿಯನ್ನು ತಿಳಿದುಕೊಂಡರೆ, ನಿಮ್ಮ ಕೆಲಸದ ಗುಣಮಟ್ಟವೂ ಹೆಚ್ಚುವುದಲ್ಲದೇ, ಈ ವಿಷಯದ ಬಗ್ಗೆ ನಿಮ್ಮ ಹಾಗೂ ನಿಮ್ಮ ಬರಹಗಳನ್ನು ಓದುವ ಓದುಗರ ಅರಿವು ಕೂಡ ಹೆಚ್ಚಾಗುತ್ತದೆ. ಕೈದಿಗಳ ಮನಸ್ಥಿತಿ, ಜೈಲಿನ ವಾತಾವರಣಗಳ ಬಗ್ಗೆ ಸಾಕಷ್ಟು ಮಾಹಿತಿಯಿದ್ದರೆ, ಬಹುಶಃ ಸಮಾಜದಲ್ಲಿ ಅಪರಾಧಗಳು ಒಂದು ಮಟ್ಟಿಗೆ ಕಡಿಮೆಯಾಗಬಹುದು ಎನ್ನುವ ವಿಶ್ವಾಸದಿಂದ ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತಿದ್ದೇನೆ.

ಕೈದಿಗಳು ಅಪರಾಧಿಗಳಾಗಿರಬಹುದು. ಆದರೆ ಅವರೂ ಸಹ ಮನುಷ್ಯರೇ. ಮನುಷ್ಯರ ಎಲ್ಲ ಭಾವನೆಗಳು ಅವರಿಗೂ ಕೂಡ ಇರುತ್ತವೆ. ಅವರು ಮಾಡಿದ ತಪ್ಪುಗಳಿಗೆ ಶಿಕ್ಷೆ ಸಿಗಲೇಬೇಕು ಆದರೆ ಅವರ ಸುಧಾರಣೆಯೂ ಕೂಡ ಜೈಲಿನಲ್ಲಿಯೇ ಆಗಬೇಕು.

ಹೊರಗೆ ಸ್ವತಂತ್ರವಾಗಿ ಬದುಕಿ, ಎಲ್ಲ ಸೌಲಭ್ಯಗಳನ್ನು ಅನುಭವಿಸಿ, ಒಮ್ಮೆಲೆ ಜೈಲು ಜೀವನವನ್ನು ಒಪ್ಪಿಕೊಂಡು ಬದುಕು ಸಾಗಿಸುವುದು ಅವರಿಗೆ ಸುಲಭದ ಮಾತಲ್ಲ. ಇದು ಅವರ ಬದುಕಿನ ಅತಿ ದೊಡ್ಡ ಬದಲಾವಣೆ. ಇವರು ಜೈಲಿನ ಬದಲಾದ ವಾತಾವಾರಣಕ್ಕೆ ಆರೋಗ್ಯಕರವಾಗಿ ಹೊಂದಿಕೊಂಡು ಹೋಗುವುದಕ್ಕೆ ಸಾಕಷ್ಟು ಸಮಯ, ಮಾನಸಿಕ ಸ್ವಸ್ಥತೆ, ಕೌನ್ಸೆಲಿಂಗ್‌ನ ಅವಶ್ಯಕತೆಯಿರುತ್ತದೆ. ಇವುಗಳನ್ನು ನೀಡಿದರೆ ಮಾತ್ರ ಅವರಲ್ಲಿ ಸುಧಾರಣೆಯನ್ನು ಕಾಣಬಹುದು. ಇಲ್ಲದಿದ್ದರೆ ಜೈಲಿನಲ್ಲಿ ಕೈದಿಗಳ ಸುಧಾರಣೆಯಾಗುವ ಆಶಯವಂತಿರಲಿ, ಅಲ್ಲಿಂದಲೇ ಅಪರಾಧಗಳು ಹೆಚ್ಚಾಗುವ ಅಪಾಯ ಇದೆ.

ಸಾಮಾನ್ಯವಾಗಿ ಕೈದಿಗಳ ಮನಸ್ಥಿತಿಯು ದುಗುಡ, ಗೊಂದಲ, ದುಃಖ, ಭಯ, ಆತಂಕ, ಕೋಪ, ಖಿನ್ನತೆ, ಒಂಟಿತನ ಮತ್ತು ಮಾನಸಿಕ ಒತ್ತಡಗಳಿಂದ ಕೂಡಿರುತ್ತದೆ. ಜೈಲಿನ ಬದಲಾದ ವಾತಾವರಣದಲ್ಲಿ ಕೈದಿಗಳ ಮನಸ್ಸು ಸ್ತಿಮಿತದಲ್ಲಿ ಇರುವುದಿಲ್ಲ. ಉದ್ವೇಗ ಹಾಗೂ ಆವೇಶವನ್ನು ತಮ್ಮ ನಡತೆಯಲ್ಲಿ ವ್ಯಕ್ತಪಡಿಸುತ್ತಾರೆ. ಬಹಳಷ್ಟು ಕೈದಿಗಳಲ್ಲಿ ಮಾನಸಿಕ ಸ್ವಸ್ಥತೆ ಕುಂದುವುದು ಹೆಚ್ಚಾಗಿ ಕಂಡುಬರುತ್ತದೆ.

ಈ ಸುದ್ದಿಯನ್ನೂ ಓದಿ:

ಇದರಿಂದಾಗಿ ಖಿನ್ನತೆ ಮತ್ತು ಪಿಟಿಎಸ್‌ಡಿ (Ptsd) ಅಸ್ವಸ್ಥತೆಗಳು ಉದ್ಭವಿಸುತ್ತವೆ. ಹಿಂಸಾತ್ಮಕ ನಡವಳಿಕೆ ಮತ್ತು ಮಾದಕ ದ್ರವ್ಯಗಳ ವ್ಯಸನವನ್ನು ಬೆಳೆಸಿಕೊಳ್ಳುವ ಸಾಧ್ಯತೆಗಳನ್ನು ಕೂಡ ನಾವು ಕಾಣಬಹುದು.

ಕೈದಿಯ ಮನಸ್ಥಿತಿಯಲ್ಲಿ 5 ಹಂತಗಳಿರುತ್ತವೆ. ಈ ಹಂತಗಳು ಮತ್ತು ಇವುಗಳ ಲಕ್ಷಣಗಳು ಹೀಗಿವೆ.

  • ನಿರಾಕರಣೆ (Denial
  • ಕೋಪ (Anger)
  • ಹೊಂದಾಣಿಕೆ (ಚೌಕಾಸಿ - Bargaining)
  • ಖಿನ್ನತೆ (Depression)
  • ಸ್ವೀಕಾರ-ಒಪ್ಪಂದ (Acceptance)

ನಿರಾಕರಣೆ

ಕೈದಿಗಳು ಜೈಲನ್ನು ಪ್ರವೇಶಿಸಿದ ನಂತರ ಅವರ ಮನಸ್ಥಿತಿಯಲ್ಲಿ ಮೊದಲು ನಾವು ನಿರಾಕರಣೆಯನ್ನು ಕಾಣಬಹುದು. ಇದು ಮೊದಲ ಹಂತವಾಗಿದ್ದು, ದೈಹಿಕವಾಗಿ ಜೈಲಿನಲ್ಲಿ ಇದ್ದರೂ ಕೂಡ, ತಮ್ಮ ಪ್ರಸ್ತುತ ವಾಸ್ತವ್ಯವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗದೆ, ನಿರಾಕರಿಸುತ್ತಾರೆ. ಜೈಲಿನಲ್ಲಿ 10 ವರ್ಷಗಳ ಕಾಲ ಶಿಕ್ಷೆಯನ್ನು ಪಡೆದಿರುವ ಕೈದಿಗಳು ನಿರಾಕರಣೆಯ ಮನಸ್ಥಿತಿಯಲ್ಲಿ 1 ರಿಂದ 10 ವರ್ಷದ ತನಕ ಇರುವ ಸಾಧ್ಯತೆಯಿದೆ. ಕಡಿಮೆ ಶಿಕ್ಷೆಗೆ ಒಳಗಾದವರು, ತಮ್ಮ ಶಿಕ್ಷೆಯ ಸಂಪೂರ್ಣ ಕಾಲವಧಿಯನ್ನು ನಿರಾಕರಣೆ ಮನಸ್ಥಿಯಲ್ಲಿಯೇ ಕಳೆಯಬಹುದು. ಈ ಹಂತದಲ್ಲಿ ಕೈದಿಗಳು ಬಂಡಾಯದ ಮನಸ್ಥಿತಿಯಿಂದ ಮಂಕಾದ ಮನಸ್ಥಿತಿಗೆ ಬದಲಾಗಬಹುದು, ತಾವು ನಿಜವಾಗಿಯೂ ಜೈಲಿನಲ್ಲಿದ್ದಾರೆ ಎಂದು ನಂಬಲು ಕಷ್ಟಪಡುವ ಸ್ಥಿತಿಯಲ್ಲಿರುತ್ತಾರೆ. ತಮ್ಮ ಪರಿಸ್ಥಿತಿಗೆ ಇತರರನ್ನು ದೂಷಿಸುತ್ತಾರೆ. ತಮ್ಮಿಂದ ತೊಂದರೆಗೆ ಒಳಗಾದ ಸಂತ್ರಸ್ತರ ಬಗ್ಗೆ ಸಾಮಾನ್ಯವಾಗಿ ನಿರ್ದಯರಾಗಿರುತ್ತಾರೆ ಮತ್ತು ಪರಿಣಾಮಗಳ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿರುತ್ತಾರೆ.

ಕೋಪ

ಕೈದಿಗಳಿಗೆ ತಾವು ಇರುವ ಪರಿಸ್ಥಿತಿಯನ್ನು ಇನ್ನು ಮುಂದೆ ನಿರಾಕರಿಸಲು ಸಾಧ್ಯವಿಲ್ಲ, ಇದು ಸತ್ಯ, ನಾವು ಒಪ್ಪಿಕೊಳ್ಳಲೇಬೇಕು. ಬೇರೆ ದಾರಿಯೇ ಇಲ್ಲವೆಂದು ಅರಿವಾದಾಗ ತೀವ್ರವಾದ ನಿರಾಶೆ ಮತ್ತು ದುಃಖವನ್ನು ಅನುಭವಿಸಿ ಕೋಪಗೊಳ್ಳುತ್ತಾರೆ. ಈ ಕೋಪವು ವಿಕೋಪಕ್ಕೆ ಹೋಗಿ, ಕಾನೂನಿನ ವ್ಯವಸ್ಥೆಗೆ ಬೆದರಿಕೆ ನೀಡುವುದು, ದುರ್ಬಲ ಕೈದಿಗಳ ಮೇಲೆ ದರ್ಪ, ದೌರ್ಜನ್ಯ ಎಸೆಗುವುದನ್ನು ನಾವು ನೋಡಬಹುದು. ಕೆಲವರು ಗ್ಯಾಂಗ್‌ಗಳನ್ನು ಕಟ್ಟಿಕೊಳ್ಳಬಹುದು ಅಥವಾ ಇತರರ ಗ್ಯಾಂಗ್‌ ಸೇರಬಹುದು. ಇವರು ಸಮಾನತೆಯನ್ನು ಕೋರಬಹುದು ಆದರೆ ನ್ಯಾಯಸಮತವಾಗಿ ನಡೆದುಕೊಳ್ಳುವುದು ಕಡಿಮೆ, ನಿಯತ್ತು, ನಿಯಮ, ನಿಷ್ಟೆಗಳಿಗೆ ಪಾಲಿಸಗೆ ಅಗೌರವಿಸುತ್ತಾರೆ.

ಹೊಂದಾಣಿಕೆ (ಚೌಕಾಸಿ)

ಕೈದಿಗಳು ಈ ಹಂತದಲ್ಲಿ ಒಂದು ರೀತಿಯ ಹೊಂದಾಣಿಕೆ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಂದರೆ ತಮ್ಮ ಮನಸ್ಸಿನ ಸಮಾಧಾನ ಮತ್ತು ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶದಿಂದ ಪರಿಸ್ಥಿತಿಯ ಜೊತೆ ಒಂದು ರೀತಿಯ ಸಂಧಾನಕ್ಕೆ (ಒಪ್ಪಂದ) ಪ್ರಯತ್ನಿಸುತ್ತಿರುತ್ತಾರೆ. ದುಃಖದ ಸಂದರ್ಭಗಳನ್ನು ಬದಲಾಯಿಸುವ ಪ್ರಯತ್ನ ಇವರಾದ್ದಾಗಿದ್ದು , ಕಳೆದು ಹೋದ ಭರವಸೆಯನ್ನು ಮರಳಿ ಪಡೆಯಲು ಹೋರಾಟ ನಡೆಸಿರುತ್ತಾರೆ. “ನನ್ನನ್ನು ಪ್ರಚೋದಿಸದಿದ್ದರೆ ನಾನು ಅಪರಾಧ ಕೃತ್ಯವನ್ನು ಮಾಡುತ್ತಿರಲಿಲ್ಲ. ನನಗೆ ನನ್ನ ತಂದೆ ತಾಯಿ ಸರಿಯಾಗಿ ಪೋಷಣೆ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ” ಎಂದು ಹೀಗೆ ಹೇಳಿಕೊಂಡು ತಮ್ಮ ತಪ್ಪನ್ನು ಮಂಡಿಸಿಕೊಳ್ಳುತ್ತಾರೆ. ತನ್ನನ್ನು ತಾನು ತಿದ್ದುಕೊಳ್ಳುವುದಕ್ಕೆ ಭಗವಂತನ ಬಳಿ ಅಥವಾ ತಮ್ಮಷ್ಟಕ್ಕೆ ತಾವೇ ಆಣೆ ಮಾಡಿಕೊಳ್ಳುವುದು ಸಹ ನಡೆಯುತ್ತದೆ. ಸಹಾಯ ಮಾಡಿದವರಿಗೆ ಪ್ರತಿಯಾಗಿ ತಮ್ಮ ಮಾರ್ಗಗಳನ್ನು ಸರಿಪಡಿಸಿಕೊಳ್ಳುವುದಾಗಿ ಭರವಸೆ ನೀಡುವುದು ಇವರ ಮನಸ್ಥಿತಿಯಲ್ಲಿಯಾಗಿರುತ್ತದೆ. ತೀವ್ರ ಅಪರಾಧಿ ಪ್ರಜ್ಞೆ, ಹತಾಶೆ ಮತ್ತು ಅವಮಾನದಿಂದ ತುಂಬಿರುವ ಕೈದಿಗಳು, ತಮ್ಮನ್ನು ದೇವರು ಕ್ಷಮಿಸುತ್ತಾನೆ ಎಂದು ನಂಬಲೂ ಸಹ ಕಷ್ಟ ಪಡುತ್ತಿರುತ್ತಾರೆ. ವಾಸ್ತವವನ್ನು ಎದುರಿಸಲು ಮತ್ತು ಸ್ವೀಕರಿಸಲು ಈ ಹಂತವು ಸಹಾಯ ಮಾಡುತ್ತದೆ.

ಖಿನ್ನತೆ

ಯಾವಾಗ ತಮ್ಮ ಕೋಪ ಮತ್ತು ಹೊಂದಾಣಿಕೆ ಮನಸ್ಥಿತಿ ಪ್ರಯೋಜನವಿಲ್ಲವೆಂದು ಅರಿವಾಗುತ್ತದೆಯೋ ಆಗ ಹತಾಶೆ, ಅಸಹಾಯಕತನ ಮತ್ತು ದುಃಖ ಕೈದಿಗಳ ಮನದಲ್ಲಿ ಮನೆ ಮಾಡುತ್ತದೆ. ಇದರ ಪರಿಣಾಮವಾಗಿ ಖಿನ್ನತೆ ಆರಂಭವಾಗುತ್ತದೆ. ಖಿನ್ನತೆಯಲ್ಲಿರುವ ಕೈದಿಗಳು ಇತರ ಕೈದಿಗಳ ಬಳಿ ಬೆರೆಯುವುದಿಲ್ಲ, ಬದಲಾಗಿ ತಾವು ಏನು ಜೀವನದಲ್ಲಿ ಕಳೆದುಕೊಂಡಿರುತ್ತಾರೋ, ಅದರ ಬಗ್ಗೆ ತಮ್ಮ ಗಮನವನ್ನು ಹರಿಸುತ್ತಾರೆ. "ನನ್ನ ನೋವಿನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಾನು ಯಾವಾಗಲೂ ಮಲಗಲು ಬಯಸುತ್ತಿದ್ದೆ" ಎಂದು ಒಬ್ಬ ಕೈದಿ ಹೀಗೆ ಹೇಳಿರುವುದು ದಾಖಲಾಗಿದೆ. ಈ ಹಂತದಲ್ಲಿ, ಕೈದಿಗಳು ತಮ್ಮ ಹಿಂದಿನ ಕೃತ್ಯಗಳ ಪರಿಣಾಮಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ. ಹೊರಗೆ ತಮಗಿದ್ದ ಸ್ವಾತಂತ್ರ್ಯ ಮತ್ತು ಅದನ್ನು ಕಳೆದುಕೊಂಡ ಕೊರತೆ ಕಾಡುತ್ತದೆ. ತಮ್ಮ ಕುಟುಂಬ, ಪ್ರೀತಿಪಾತ್ರರ ಬೇರ್ಪಡುವಿಕೆಯಿಂದ ದುಃಖಿಸಲು ಪ್ರಾರಂಭಿಸುತ್ತಾರೆ. ಆತ್ಮಹತ್ಯೆಯ ಆಲೋಚನೆಗಳು ಈ ಹಂತದಲ್ಲಿ ಬರುವ ಸಾಧ್ಯತೆಯಿದೆ.

ಪರಿಸ್ಥಿತಿ ಒಪ್ಪಿಕೊಳ್ಳುವುದು

ಈ ಹಂತದಲ್ಲಿ ಕೈದಿಗಳು ತಾವು ದೀರ್ಘಾವಧಿಯ ಶಿಕ್ಷೆ ಅನುಭವಿಸುತ್ತಿದ್ದೇವೆ ಎಂದು ಒಪ್ಪಿಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಕೆಲವರನ್ನು ಭಾವನಾತ್ಮಕವಾಗಿ ಮರಗಟ್ಟಿಸಬಹುದು. ಇತರರು ನಿಜವಾದ ಆತ್ಮಾವಲೋಕನವನ್ನು ಮಾಡಲು ಆರಂಭಿಸುತ್ತಾರೆ. ತಮ್ಮ ಪರಿಸ್ಥಿತಿಗೆ ತಾವೇ ಹೊಣೆಯೆಂದು ಒಪ್ಪಿಕೊಳ್ಳುತ್ತಾರೆ. ಇವರ ವರ್ತನೆಗಳು ಸುಧಾರಣೆಗಳು ಕಂಡುಬರುತ್ತವೆ. ಅವರು ದಿನಚರಿಯನ್ನು ಪಾಲಿಸಿ, ಸಾಮಾನ್ಯವಾಗಿ ಓದು, ಶಾಲೆ ಅಥವಾ ಕೆಲಸದ ಮೂಲಕ ಸುಧಾರಿಸಲು ಪ್ರಯತ್ನಿಸುತ್ತಾರೆ. ಮನಸ್ಸು ಶಾಂತವಾಗುತ್ತದೆ. ಅನೇಕರು ಬದಲಾಗುವ ಪ್ರಾಮಾಣಿಕ ಬಯಕೆಯನ್ನು ತೋರಿಸುತ್ತಾರೆ.

ಕೈದಿಗಳ ವೈಯಕ್ತಿಕ ಮನಸ್ಥಿತಿಯೊಂದಿಗೆ, ಜೈಲಿನ ವಾತವರಣವೂ ಕೂಡ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತವೆ.

ಮಾನಸಿಕ ಅಸ್ವಸ್ಥೆತೆಗೆ ಕಾರಣವಾಗುವ ಅಂಶಗಳು ಹೀಗಿವೆ:

  • ಜೈಲಿನ ವಾತಾವರಣ: ದೌರ್ಜನ್ಯ, ದರ್ಪ, ಬೆದರಿಸುವಿಕೆ, ಗುಂಪುಗಾರಿಕೆ, ಪಕ್ಷಪಾತ ಇತ್ಯಾದಿ
  • ಜನಸಂದಣಿ: ಜೈಲಿನಲ್ಲಿ ಹೆಚ್ಚಿನ ಜನಸಂದಣಿ ಕೈದಿಗಳಲ್ಲಿ ಅಭದ್ರತೆ ಮತ್ತು ಆತಂಕವನ್ನುಂಟು ಮಾಡಿ, ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ
  • ಮಾನಸಿಕ ಚಿಕಿತ್ಸೆ: ಜೈಲಿನಲ್ಲಿ ಮಾನಸಿಕ ಚಿಕಿತ್ಸೆಗೆ ವ್ಯವಸ್ಥೆ ಇಲ್ಲದಿದ್ದರೆ ಕೈದಿಗಳ ಅಸ್ವಸ್ಥತೆಗೆ ಸಮಯಕ್ಕೆ ಸರಿಯಾಗಿ ಸೂಕ್ತ ಆಪ್ತ ಸಮಾಲೋಚನೆಯಾಗಲಿ ಅಥವಾ ಮಾಗ೯ದಶ೯ನವಾಗಲಿ ಲಭ್ಯವಾಗುವುದಿಲ್ಲ.
  • ಮೂಲ ಸೌಕರ್ಯಗಳ ಕೊರತೆ: ಸ್ವಚ್ಛ ಕೊಠಡಿ, ಶುದ್ಧ ಶೌಚಾಲಯದ ವ್ಯವಸ್ಥೆ, ಪೌಷ್ಟಿಕ ಆಹಾರದ ಕೊರತೆಗಳು ಇರುತ್ತವೆ.
  • ಮಾನಸಿಕ ಹೊಯ್ದಾಟ: ಕೈದಿಗಳ ಮಾನಸಿಕ ಸ್ಥಿತಿಯಲ್ಲಿ ಏರುಪೇರು ಕಂಡು ಬರುತ್ತದೆ. ಅವರಲ್ಲಿ ಅಪರಾಧ ಪ್ರಜ್ಞೆ, ಹಿಂದಿನ ಕ್ರಿಯೆಗಳಿಗೆ ಪಶ್ಚಾತ್ತಾಪ ಇರುತ್ತದೆ. ಈ ಅಂಶಗಳು ಅವರ ಪ್ರಸ್ತುತ ಜೈಲಿನ ಜೀವನವನ್ನು ಒಪ್ಪಿಕೊಳ್ಳಲು ನಿರಾಕರಿಸುವಂತೆ ಮಾಡಬಹುದು.

(ಲೇಖಕರು ಮನಃಶಾಸ್ತ್ರಜ್ಞರು, ಆಪ್ತ ಸಮಾಲೋಚಕರು)