ಬೆಂಗಳೂರು, ಫೆ. 4: ಗರ್ಭಾವಸ್ಥೆ (Pregnancy) ಎನ್ನುವುದು ಮಹಿಳೆಯರಿಗೆ ಒಂದು ಪರಿಪೂರ್ಣತೆಯನ್ನು ನೀಡುವಂತಹ ವಿಚಾರ. ಆದರೆ ಆಧುನಿಕ ಜೀವನ ಶೈಲಿ ಹಾಗೂ ಒತ್ತಡದ ಬದುಕು ಯುವ ಜನತೆಯನ್ನು ತಡವಾಗಿ ವಿವಾಹವಾಗುವುದಕ್ಕೆ ಪ್ರಚೋದನೆ ನೀಡುತ್ತವೆ. ಈ ಕಾರಣದಿಂದ ಇಂದು ಸಾಕಷ್ಟು ಮಹಿಳೆಯರು ಗರ್ಭಾವಸ್ಥೆಯ ಪೂರ್ವದಲ್ಲಿಯೇ ಬಿಪಿ ಮತ್ತು ಶುಗರ್‌ನಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹ ಆರೋಗ್ಯ ಸಮಸ್ಯೆ ಇದ್ದವರು ಯಾವ ಬಗೆಯ ವಿಶೇಷ ಕಾಳಜಿ ವಹಿಸಬೇಕು? ಅಂತಹವರಿಗೆ ಯಾವೆಲ್ಲ ಸಮಸ್ಯೆ ಕಾಡುತ್ತದೆ? ಮುಂದೆ ಮಗು ಮತ್ತು ತಾಯಿಯ ಆರೋಗ್ಯದಲ್ಲಿ ಯಾವ ಸಮಸ್ಯೆ ಕಾಡಬಹುದು? ಎನ್ನುವಂತಹ ಸಾಕಷ್ಟು ಪ್ರಶ್ನೆಗಳಿಗೆ ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನಲ್‌ನಲ್ಲಿ ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ರಶ್ಮಿ ಟಿ. ಎನ್. ಉತ್ತರಿಸಿದ್ದಾರೆ.
ಇತ್ತೀಚೆಗೆ ಬಿಪಿ, ಶುಗರ್ ಅನ್ನೋದು ಚಿಕ್ಕವಯಸ್ಸಿನಲ್ಲಿಯೇ ಕಾಡುವಂತ ಸಾಮಾನ್ಯ ಸಮಸ್ಯೆ. ನಮ್ಮ ಜೀವನ ಶೈಲಿ, ಒತ್ತಡಗಳು, ಆಹಾರ ಪದ್ದತಿ ಇತ್ಯಾದಿ ಇದಕ್ಕೆ ಪ್ರಮುಖ ಕಾರಣ. ಅದರಲ್ಲೂ ಗರ್ಭಿಣಿಯರಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆ ಸಾಮಾನ್ಯಾವಾಗಿದ್ದು, ಇದರ ಬಗ್ಗೆ ಈ ಮೊದಲೇ ಜಾಗೃತಿ ಮಾಡಬೇಕು ಎಂದು ಡಾ. ರಶ್ಮಿ ಸಲಹೆ ನೀಡಿದ್ದಾರೆ. ಗರ್ಭಾವಸ್ಥೆಯಲ್ಲಿ ಬಿಪಿ, ಮಧುಮೇಹ ಹೊಂದಿದ್ದರೆ, ನಿಮ್ಮ ಮಗುವಿಗೆ ಅಪಾಯ ಕಾಡುವ ಸಾಧ್ಯತೆ ಇದೆ. ಹಾಗಾಗಿ ತಾಯಿಯ ತೂಕ ಸಮತೋಲನದ ಕಾಯ್ದುಕೊಳ್ಳಬೇಕು, ಸರಿಯಾಗಿ ವ್ಯಾಯಾಮ ಮಾಡಬೇಕು ಎಂದಿದ್ದಾರೆ.
ವಿಡಿಯೊ ನೋಡಿ:
ತಜ್ಞರ ಪ್ರಕಾರ, ಗರ್ಭಾವಸ್ಥೆಯ ನಾಲ್ಕು- ಐದು ತಿಂಗಳ ತ್ರೈಮಾಸಿಕದಲ್ಲಿ ಮಹಿಳೆಗೆ ಮಧುಮೇಹ ಅಥವಾ ರಕ್ತದೊತ್ತಡ ಸಮಸ್ಯೆ ಇದ್ದರೆ ಅದು ಗರ್ಭಪಾತ, ಕಿಡ್ನಿ ಸಮಸ್ಯೆ ಮತ್ತು ಇತರ ಹಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಸಮಯದಲ್ಲಿ ರಕ್ತ ಪರೀಕ್ಷೆ, ಮಧುಮೇಹ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.
ನಮ್ಮ ಮೂಳೆಗಳು ಬಲವಾಗಿರಲು ಏನೇನು ಬೇಕು ಗೊತ್ತೇ?
ಏನೆಲ್ಲ ಸಮಸ್ಯೆ ಕಾಡಬಹುದು?
- ಬಿಪಿ ಹೆಚ್ಚಾದಾಗ ತಾಯಿಗೆ ಪಿಟ್ಸ್‌ನಂತಹ ಆರೋಗ್ಯ ಸಮಸ್ಯೆ ಕಾಡಬಹುದು
- ತಾಯಿಯ ಕಿಡ್ನಿ ವೈಫಲ್ಯ ಆಗಬಹುದು. ಹಾಗೆಯೇ ತೀವ್ರವಾದ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳಬಹುದು.
- ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕೂಡ ಇರುತ್ತದೆ. ಇದರಿಂದ ಬೆಳೆಯುತ್ತಿರುವ ಮಗುವಿನ ಮೇಲೂ ಪರಿಣಾಮ ಬೀರಬಹುದು.
- ಮಗುವಿನ ಬೆಳವಣಿಗೆಗೆ ತೊಂದರೆಯಾಗಿ ರಕ್ತ ಸಂಚಾರ ಸ್ಥಗಿತ ಆಗಬಹುದು.
ಹಾಗಾಗಿ ಗರ್ಭಿಣಿಯರು ರಕ್ತದ ಒತ್ತಡವನ್ನು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಆಗಾಗ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ. ಆತಂಕ ಮತ್ತು ಖಿನ್ನತೆಯಿಂದ ಕೆಲವರು ಗರ್ಭಾವಸ್ಥೆಯಲ್ಲಿ ಇಂತಹ ಸಮಸ್ಯೆ ಗೆ ಒಳಗಾಗುತ್ತಾರೆ. ಹಾಗಾಗಿ ಭಯ ಪಡದೆ ಆತ್ಮವಿಶ್ವಾಸದಿಂದ ಇರಬೇಕು ಹಾಗೆಯೆ ಸೇವಿಸುವ ಆರೋಗ್ಯದ ಬಗ್ಗಯೂ ಗಮನ ನೀಡಬೇಕು ಎಂದು ಡಾ. ರಶ್ಮಿ ತಿಳಿಸಿದ್ದಾರೆ.