ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bones Health: ನಮ್ಮ ಮೂಳೆಗಳು ಬಲವಾಗಿರಲು ಏನೇನು ಬೇಕು ಗೊತ್ತೇ?

Bones Health: ನಮ್ಮ ಕೀಲು ಹಾಗೂ ಎಲುಬುಗಳು ಸುದೃಢವಾಗಿ ಇರುವುದಕ್ಕೆ ಕೇವಲ ಕ್ಯಾಲ್ಶಿಯಂ ಇದ್ದರೆ ಸಾಲದು, ಇನ್ನೂ ಹಲವಾರು ಖನಿಜಗಳು ಮತ್ತು ಸೂಕ್ಷ್ಮ ಸತ್ವಗಳು ಅಗತ್ಯವಾಗಿ ಬೇಕು. ಇನ್ನೂ ಯಾವೆಲ್ಲ ಪೋಷಕಾಂಶಗಳು ನಮ್ಮ ಮೂಳೆಗಳ ಆರೋಗ್ಯಕ್ಕೆ ಅಗತ್ಯ?

ಮೂಳೆಗಳು ಬಲವಾಗಿರಲು ಏನು ಮಾಡಬೇಕು?

Profile Pushpa Kumari Aug 20, 2025 8:00 AM

ನವದೆಹಲಿ: ನಮ್ಮ ಮೂಳೆಗಳನ್ನು (Bones) ಸಬಲವಾಗಿ ಇರಿಸಿ ಕೊಳ್ಳುವುದಕ್ಕೆ ಕ್ಯಾಲ್ಶಿಯಂ ಬೇಕು ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಅದಕ್ಕಾಗಿ ಏನೆಲ್ಲ ಆಹಾರಗಳನ್ನು ತಿನ್ನಬಹುದು ಎಂದು ಅಂತರ್ಜಾಲವನ್ನೆಲ್ಲ ಹಲವು ಬಾರಿ ಜಾಲಾಡಿರುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದ ನ್ನೆಲ್ಲ ಓದಿಕೊಂಡು ತಲೆ ಕೆಡಿಸಿಕೊಳ್ಳುತ್ತೇವೆ. ಇವಿಷ್ಟು ಸಾಲದೆಂಬಂತೆ, ಕ್ಯಾಲ್ಶಿಯಂ ಪೂರಕ ಗಳನ್ನು ʻಗುಳುಂʼ ಮಾಡುತ್ತಾ ಮೂಳೆಗಳೆಲ್ಲ ಗಟ್ಟಿಯಾಗಿವೆಯೇ ಎಂದು ಚಿಂತಿಸುತ್ತೇವೆ. ವಿಷಯ ವೇನೆಂದರೆ, ನಮ್ಮ ಕೀಲು ಹಾಗೂ ಎಲುಬುಗಳು ಸುದೃಢವಾಗಿ ಇರುವುದಕ್ಕೆ ಕೇವಲ ಕ್ಯಾಲ್ಶಿಯಂ ಇದ್ದರೆ ಸಾಲದು, ಇನ್ನೂ ಹಲವಾರು ಖನಿಜಗಳು ಮತ್ತು ಸೂಕ್ಷ್ಮ ಸತ್ವಗಳು ಅಗತ್ಯವಾಗಿ ಬೇಕು. ಇನ್ನೂ ಯಾವೆಲ್ಲ ಪೋಷಕಾಂಶಗಳು ನಮ್ಮ ಮೂಳೆಗಳ ಆರೋಗ್ಯಕ್ಕೆ ಅಗತ್ಯ?

ವಿಟಮಿನ್‌ ಡಿ: ಹೆಚ್ಚಿನ ಕ್ಯಾಲ್ಶಿಯಂ ಪೂರಕಗಳಲ್ಲಿ ವಿಟಮಿನ್‌ ಡಿ ಸೇರಿಕೊಂಡೇ ಇರುವುದನ್ನು ಗಮನಿಸಬಹುದು. ಕಾರಣ, ತಿನ್ನುವ ಕ್ಯಾಲ್ಶಿಯಂ ಖನಿಜವನ್ನು ಮೂಳೆಗಳು ಸರಿಯಾಗಿ ಹೀರಿ ಕೊಳ್ಳಬೇಕು ಎಂದಾದರೆ ಅದಕ್ಕೆ ಡಿ ಜೀವಸತ್ವದ ಆವಶ್ಯಕತೆ ಯಿದೆ. ವಿಟಮಿನ್‌ ಡಿ ಕೊರತೆ ಯಾದರೆ ಮೂಳೆಗಳು ಟೊಳ್ಳಾಗುವುದು, ಮುರಿಯುವುದು ಇತ್ಯಾದಿಗಳು ಕಾಡಬಹುದು. ಸೂರ್ಯನ ಬೆಳಕಿ ನಲ್ಲಿ ಸಾಕಷ್ಟು ವಿಟಮಿನ್‌ ಡಿ ಲಭ್ಯವಿದೆ. ಇದಲ್ಲದೆ, ಕೊಬ್ಬಿನ ಮೀನುಗಳು, ಕೆಲವು ಬಗೆಯ ಅಣಬೆಗಳು, ಮೊಟ್ಟೆಯ ಹಳದಿ ಭಾಗಗಳಲ್ಲೂ ಅಲ್ಪ ಪ್ರಮಾಣದಲ್ಲಿ ಡಿ ಜೀವಸತ್ವ ದೊರೆಯುತ್ತದೆ.

ಮೆಗ್ನೀಶಿಯಂ: ವಿಟಮಿನ್‌ ಡಿ ಸಾಕಷ್ಟು ಪ್ರಮಾಣದಲ್ಲಿ ದೊರೆತರೂ ಇದನ್ನು ಕ್ರಿಯಾಶೀಲ ವಾಗಿಸುವುದಕ್ಕೆ ಮೆಗ್ನೀಶಿಯಂ ಖನಿಜದ ಅಗತ್ಯವಿದೆ. ವಿಟಮಿನ್‌ ಡಿ ಮತ್ತು ಕ್ಯಾಲ್ಶಿಯಂ ತಿಂದರೂ ದಕ್ಕುವುದಿಲ್ಲ ಎನ್ನುವಂತೆ ಆಗಬಾರದೆಂದರೆ, ಸಾಕಷ್ಟು ಮೆಗ್ನೀಶಿಯಂ ದೇಹಕ್ಕೆ ದೊರೆಯಬೇಕು. ಇದಕ್ಕಾಗಿ ಕಾಯಿಗಳು, ಬೀಜಗಳು, ಕಾಳುಗಳು, ಹಸಿರು ಸೊಪ್ಪು-ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉಪಯುಕ್ತ.

ವಿಟಮಿನ್‌ ಕೆ: ಈ ಪೋಷಕಾಂಶವು ಅಷ್ಟೇನೂ ಜನಪ್ರಿಯ ವಲ್ಲದ್ದು. ಹಾಗಾದರೇಕೆ ಬೇಕು? ಆಹಾರದಲ್ಲಿ ಅಧಿಕ ಕ್ಯಾಲ್ಶಿಯಂ ತಿಂದರೂ ವ್ಯರ್ಥವಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಅಂದರೆ ಅವು ಮೂಳೆಗಳಿಗೆ ದೊರೆಯದೆ, ರಕ್ತನಾಳಗಳಲ್ಲಿ ಜಮೆಯಾಗಿ ಆಪತ್ತು ತರುವ ಸಂದರ್ಭಗಳಿವೆ. ಹೀಗಾಗುವುದನ್ನು ತಡೆಯಬೇಕೆಂದರೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಕೆ, ಅದರಲ್ಲೂ ಮುಖ್ಯವಾಗಿ ವಿಟಮಿನ್‌ ಕೆ೨, ಬೇಕು. ಹುದುಗು ಬಂದ ಆಹಾರಗಳು, ಮೊಟ್ಟೆಯ ಹಳದಿ ಭಾಗ ಮತ್ತು ಚೀಸ್‌ಗಳಲ್ಲಿ ವಿಟಮಿನ್‌ ಕೆ ದೊರೆಯುತ್ತದೆ.

ಇದನ್ನು ಓದಿ:Health Tips: ಮಳೆಗಾಲದಲ್ಲಿ ಚರ್ಮದ ಸಮಸ್ಯೆ: ನಿಭಾಯಿಸುವುದು ಹೇಗೆ?

ಫಾಸ್ಫರಸ್‌: ಕ್ಯಾಲ್ಶಿಯಂ ತನ್ನಷ್ಟಕ್ಕೇ ಎಲ್ಲವೂ ಅಲ್ಲ. ಇದಕ್ಕೂ ಸಹವರ್ತಿಗಳು ಬೇಕು. ಹೈಡ್ರಾ ಕ್ಸೈಪಟೈಟ್‌ನಂಥ ಸಂಯುಕ್ತಗಳು ಕ್ಯಾಲ್ಶಿಯಂ ಜೊತೆಗೆ ಸೇರಿಕೊಂಡು ಮೂಳೆಗಳನ್ನು ಗಟ್ಟಿ ಯಾಗಿಸುತ್ತವೆ. ಈ ಕೆಲಸಕ್ಕೆ ಬೇಕಿರುವುದು ಫಾಸ್ಫರಸ್‌. ಈ ಖನಿಜವನ್ನು ಡೇರಿ ಉತ್ಪನ್ನಗಳಲ್ಲಿ, ಮೀನಿನಲ್ಲಿ ಮತ್ತು ಬೇಳೆ-ಕಾಳುಗಳ ಮುಖಾಂತರ ಪಡೆಯಬಹುದು.

ಜಿಂಕ್‌: ಸತು ಅಥವಾ ಜಿಂಕ್‌ ಬಗ್ಗೆ ಒಂದಿಷ್ಟು ಮಾಹಿತಿಯನ್ನಂತೂ ಕೇಳಿರುತ್ತೇವೆ. ಆದರೂ ಮೂಳೆ ಗಟ್ಟಿಯಾಗುವುದಕ್ಕೆ ಇದು ಹೇಗೆ ಸಹಕಾರಿ ಎಂಬುದು ತಿಳಿಯದೆ ಇರಬಹುದು. ಇದೊಂದು ರಿಪೇರಿ ಮಾಡುವ ಏಜೆಂಟ್‌ ಇದ್ದಂತೆ. ಮೂಳೆಗಳಲ್ಲಿ, ಅವುಗಳನ್ನು ಬೆಂಬಲಿಸುವ ಸ್ನಾಯುಗಳಲ್ಲಿ ಯಾವುದೇ ಏರುಪೇರಿದ್ದರೂ ಅವುಗಳನ್ನು ಸರಿಪಡಿಸಿ ಕೊಡುತ್ತದೆ. ಇದಕ್ಕಾಗಿ ಮತ್ಸ್ಯಾಹಾರ, ಕಾಯಿ-ಬೀಜಗಳು ಆಹಾರದ ಭಾಗವಾಗಿರಲಿ.

ಪೊಟಾಶಿಯಂ: ಕೆಲವು ಬಗೆಯ ಆಹಾರಗಳಿಂದ ದೇಹದಲ್ಲಿ ಆಮ್ಲದ ಅಂಶ ಹೆಚ್ಚಾಗಿ, ಮೂಳೆ ಗಳಲ್ಲಿನ ಕ್ಯಾಲ್ಶಿಯಂಗೆ ಕುತ್ತು ಬರುವ ಸಾಧ್ಯತೆಯಿದೆ. ಇಂಥ ಆಮ್ಲದ ಅಂಶವನ್ನು ತೆಗೆದುಹಾಕಿ, ಮೂಳೆಗಳನ್ನು ಕಾಪಾಡಿಕೊಳ್ಳುವುದಕ್ಕೆ ಪೊಟಾಶಿಯಂ ಬೇಕು. ಇದಕ್ಕಾಗಿ ಬಾಳೆಹಣ್ಣು, ಆಲೂಗಡ್ಡೆ, ಕಾಳುಗಳು, ಹಸಿರೆಲೆ ತರಕಾರಿಗಳನ್ನು ಆಹಾರದಲ್ಲಿ ತಪ್ಪದೆ ಸೇರಿಸಿಕೊಳ್ಳಬೇಕು.

ವಿಟಮಿನ್‌ ಸಿ: ಮೂಳೆಗಳು ಕೇವಲ ಗಟ್ಟಿಯಾಗಿದ್ದರೆ ಸಾಲದು, ಅವುಗಳಲ್ಲಿ ನಮ್ಯತೆಯೂ ಇರಬೇಕು. ಹೀಗೆ ಬಾಳೆಯಂತೆ ಬಾಗುವ ಗುಣ ಮೂಳೆಗಳಿಗೆ ಬೇಕೆಂದರೆ ಅದಕ್ಕೆ ಕೊಲಾಜಿನ್‌ ಧಾರಾಳವಾಗಿ ದೊರೆಯಬೇಕು. ಇದಕ್ಕಾಗಿ ಸತತವಾಗಿ ವಿಟಮಿನ್‌ ಸಿ ದೇಹಕ್ಕೆ ದೊರೆಯುತ್ತಿರಬೇಕು. ಸಿಟ್ರಸ್‌ ಹಣ್ಣುಗಳು, ಬೆರ್ರಿಗಳು, ನೆಲ್ಲಿಕಾಯಿ ಮತ್ತು ಋತುಮಾನದ ಹಣ್ಣು-ತರಕಾರಿಗಳೆಲ್ಲ ಕಾಲಕಾಲಕ್ಕೆ ವಿಟಮಿನ್‌ ಸಿ ಒದಗಿಸಬಲ್ಲವು.