ಬೆಂಗಳೂರು, ಏ. 19: ಮಹಿಳೆಯರನ್ನು ನಾವು ಆದಿ ಶಕ್ತಿ ಎಂದು ಕರೆಯುತ್ತೇವೆ. ಇದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ ಎನ್ನುತ್ತಾರೆ ಪ್ರೊ. ಸುತ್ತೂರು ಮಾಲಿನಿ. ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆದಿ ಶಕ್ತಿ ಎಂದರೆ ಮೊದಲ ಎನರ್ಜಿ ಎಂಬುದು ಅರ್ಥ. ಇದು ನಮಗೆ ತಾಯಿಯಿಂದಲೇ ಬಂದಿರುತ್ತದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಹೀಗಾಗಿಯೇ ಅವಳನ್ನು ಆದಿ ಶಕ್ತಿ ಎನ್ನಲಾಗುತ್ತದೆ. ಇದಕ್ಕೆ ಮುಖ್ಯವಾಗಿ ನಮ್ಮ ಮೆದುಳೇ ಕಾರಣವಾಗಿರುತ್ತದೆ ಎಂದು ತಿಳಿಸಿದರು.
ಒಬ್ಬ ಮನುಷ್ಯ ಬದುಕಿದ್ದಾನೆ, ಆತನ ದೇಹದ ಎಲ್ಲ ಕ್ರಿಯೆ ನಡೆಯುತ್ತಿದೆ ಎಂದರೆ ಅದಕ್ಕೆ ಶಕ್ತಿ ಬೇಕು. 3000ಕ್ಕೂ ಹೆಚ್ಚು ಜೀವ ರಾಸಾಯನಿಕ ಕ್ರಿಯೆ ನಿರಂತರವಾಗಿ ನಡೆಯುತ್ತಿರಬೇಕು. ಇದು ಸಾಧ್ಯವಾಗುವುದು ಮೈಟೋಕಾಂಡ್ರಿಯಾದಿಂದ. ಇದು ತಾಯಿಯಿಂದ ಮಕ್ಕಳಿಗೆ ಬಳುವಳಿಯಾಗಿ ಬಂದಿರುತ್ತದೆ. ಅದಕ್ಕಾಗಿಯೇ ಅವಳನ್ನು ಆದಿ ಶಕ್ತಿ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದರು.
ವಿಡಿಯೊ ನೋಡಿ:
ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣು ಮಿಲನವಾಗುವಾಗ ಪುರುಷನ ಮೈಟೋಕಾಂಡ್ರಿಯಾ ಅಂಡಾಣುವಿನ ಒಳಗೆ ಹೋಗುವುದಿಲ್ಲ. ಹೀಗಾಗಿ ಹುಟ್ಟುವ ಮಗು ಮಹಿಳೆಯ ಮೈಟೋಕಾಂಡ್ರಿಯಾವನ್ನು ಪಡೆದು ಜನ್ಮ ತಾಳುತ್ತದೆ. ಮಗುವಿಗೆ ಗರ್ಭಕೋಶ ಅತ್ಯಂತ ಸುರಕ್ಷಿತವಾಗಿರುತ್ತದೆ. ಇಲ್ಲಿ ಯಾವುದೇ ರೀತಿಯ ಸೂಕ್ಷ್ಮಾಣುಗಳಿಗೆ ಮಗುವಿಗೆ ತಾಗುವುದಿಲ್ಲ. ಮಗು ಗರ್ಭಕೋಶದಿಂದ ಹೊರ ಬಂದಾಗ ಮೊದಲ ಬಾರಿಗೆ ಅದು ಸೂಕ್ಷ್ಮಾಣುಗಳ ಸಂಪರ್ಕಕ್ಕೆ ಬರುತ್ತದೆ. ತಾಯಿಯ ಜತೆಯೇ ಅದು ಹೆಚ್ಚಾಗಿ ಇರುವುದರಿಂದ ತಾಯಿಯಲ್ಲಿರುವ ಸೂಕ್ಷ್ಮಾಣು ಮಗುವಿಗೆ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದರು.
ಮಕ್ಕಳು ಬುದ್ಧಿವಂತರಾಗಲು ಯಾವ ರೀತಿಯ ಆಹಾರ ನೀಡಬೇಕು?
ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಿಯ ಆಹಾರ, ಮನಸ್ಥಿತಿ, ಪರಿಸರ ಮುಖ್ಯ ಕಾರಣವಾಗುತ್ತದೆ. ಮಕ್ಕಳು ಮುಂದೆ ಏನಾಗ್ತಾರೆ ಎಂಬುದಕ್ಕೆ ಮುಖ್ಯ ಕಾರಣ ತಾಯಿಯೇ ಎನ್ನುವುದು ಅದಕ್ಕಾಗಿ. ಹೀಗಾಗಿಯೇ ಅವಳನ್ನು ಅವಳಿಗೆ ಆದಿ ಶಕ್ತಿ ಎನ್ನಲಾಗುತ್ತದೆ ಎಂದರು.
ಹೆಣ್ಣು ಮಕ್ಕಳಿಗೆ ಅನುವಂಶೀಯ ಕಾಯಿಲೆ ತುಂಬಾ ಕಡಿಮೆ. ಯಾಕೆಂದರೆ ಇದಕ್ಕೆ ಅವಳಲ್ಲಿರುವ ಎರಡು ವರ್ಣ ತಂತುಗಳು ಕಾರಣವಾಗಿರುತ್ತದೆ. ಆದರೆ ಪುರುಷರು ಒಂದೇ ವರ್ಣ ತಂತು ಹೊಂದಿರುವುದರಿಂದ ಅವರಲ್ಲಿ ಹೆಚ್ಚಾಗಿ ಅನುವಂಶೀಯ ಕಾಯಿಲೆ ಕಂಡು ಬರುತ್ತದೆ ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಮಹಿಳೆಯರಲ್ಲಿ ಕರುಣೆ, ಪ್ರೀತಿ ಹೆಚ್ಚಾಗಿರುತ್ತದೆ. ಅವರ ಸಾಮಾಜಿಕ ನೆಟ್‌ವರ್ಕ್ ತುಂಬಾ ಚೆನ್ನಾಗಿ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಎಸ್ಟ್ರೋಜನ್ ಹಾರ್ಮೋನ್. ಇದೆಲ್ಲವನ್ನೂ ನಮಗೆ ಆದಿ ಶಕ್ತಿಯ ಸ್ವರೂಪ ಹೇಳುತ್ತದೆ. ನಮ್ಮ ಹಿರಿಯರು ಮುಚ್ಚಿಟ್ಟ ಜ್ಞಾನವನ್ನು ನೀಡಿದ್ದಾರೆ. ನಾವು ಅದನ್ನು ಒಡೆದು ನೋಡುವ ಪ್ರಯತ್ನ ಮಾಡುವುದಿಲ್ಲ. ಹೀಗಾಗಿ ಇದೆಲ್ಲ ನಮಗೆ ಅರ್ಥವಾಗುವುದಿಲ್ಲ ಎಂದು ತಿಳಿಸಿದರು.
ಮಕ್ಕಳಲ್ಲಿ ಮುಂಜಾನೆ ಕಾಡುವ ಶೀತ, ತಲೆನೋವು: ನಿರ್ಲಕ್ಷ್ಯ ಬೇಡ
ನವರಾತ್ರಿಯಲ್ಲಿ ನಾವು ಪೂಜಿಸುವ ನವದುರ್ಗೆಯರು ನಮ್ಮ ಮೆದುಳಿನ ಒಂಬತ್ತು ಭಾಗದ ಪ್ರತೀಕ. ಸ್ಥಿರತೆಯನ್ನು ಪ್ರತಿಬಿಂಬಿಸುವ ಶೈಲಾ ಪುತ್ರಿ ಮೆದುಳಿನ ಹಿಂಭಾಗದಲ್ಲಿರುವ ಸ್ಟೆಮ್‌ನ ಸಂಕೇತ. ಏಕಾಗ್ರತೆ, ತರ್ಕವನ್ನು ಪ್ರತಿನಿಧಿಸುವ ಬ್ರಹ್ಮಚಾರಿಣಿ ಮುಂಭಾಗದ ಮೆದುಳಿನ ಸಂಕೇತ. ಚಂದ್ರ ಘಂಟ ಎಚ್ಚರಿಕೆ ನೀಡುವಂತದ್ದು, ಕೂಷ್ಮಾಂಡ ಪಾಸಿಟಿವ್, ನೆಗೆಟಿವಿಟಿಯನ್ನು ತೋರಿಸುವಂತದ್ದು, ಸ್ಕಂದ ಮಾತ ಪ್ರೀತಿ, ಕರುಣೆಯ ಸೂಚನೆ ಕೊಡುವಂತದ್ದು, ಕಾತ್ಯಾಯಿನಿ ನ್ಯಾಯ, ನಿಷ್ಠೆಯನ್ನು ತೋರಿಸುವಂತದ್ದು, ಕಾಳರಾತ್ರಿ ಭಯವನ್ನು ಗೆಲ್ಲುವ, ಮಹಾಗೌರಿ ದೇಹವನ್ನು ಸಮಸ್ಥಿತಿಯಲ್ಲಿ ಇಡುವ, ಸಿದ್ಧಿದಾತ್ರಿಯು ಎಲ್ಲವನ್ನೂ ಒಟ್ಟು ಸೇರಿಸಿ ಅದ್ಭುತವಾಗಿ ನಿರ್ವಹಣೆ ಮಾಡುವುದನ್ನು ಪ್ರತಿಬಿಂಬಿಸುತ್ತದೆ. ಮೆದುಳಿನ ಸಂಪೂರ್ಣ ಜಾಗೃತಿಯನ್ನು ನಾವು ಮಾಡಿಕೊಂಡರೆ ನಾವು ಆದಿ ಶಕ್ತಿಯಾಗಬಹುದು ಎಂಬುದನ್ನು ನವದುರ್ಗೆಯರ ಮೂಲಕ ನಮಗೆ ಹಿರಿಯರು ತಿಳಿಸಿದ್ದಾರೆ ಎನ್ನುತ್ತಾರೆ ಪ್ರೊ. ಸುತ್ತೂರು ಮಾಲಿನಿ.