ಮಕ್ಕಳು ಬುದ್ಧಿವಂತರಾಗಲು ಯಾವ ರೀತಿಯ ಆಹಾರ ನೀಡಬೇಕು? ಪ್ರತಿ ಪೋಷಕರು ತಿಳಿಯಲೇಬೇಕಾದ ವಿವರ ಇಲ್ಲಿದೆ
ಮಕ್ಕಳು ಚುರುಕಾಗಿರಬೇಕು, ಬುದ್ದಿವಂತರಾಗಿರಬೇಕು ಎನ್ನುವುದು ಎಲ್ಲ ಪೋಷಕರ ಆಸೆ. ಇದಕ್ಕೆ ನಾವು ಅವರ ಆಹಾರ ಕ್ರಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಮಕ್ಕಳು ಬುದ್ದಿವಂತರಾಗಲು ಅವರ ಆಹಾರದಲ್ಲಿ ಇರಲೇಬೇಕಾದ ವಸ್ತುಗಳು ಯಾವುದು ಎನ್ನುವ ಕುರಿತು ಪ್ರೊ. ಸುತ್ತೂರು ಮಾಲಿನಿ ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಏ. 17: ಮಕ್ಕಳ ದೇಹಾರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವೂ (Mental health) ಚೆನ್ನಾಗಿರಬೇಕು. ಇದಕ್ಕಾಗಿ ಅವರ ಆಹಾರದ ಬಗ್ಗೆ ಹೆಚ್ಚಿನ ನಿಗಾ ಇರಿಸಲೇಬೇಕು. ಮಕ್ಕಳು ಚುರುಕಾಗಿರಬೇಕು. ಬುದ್ಧಿವಂತರಾಗಿರಬೇಕು ಎಂದಾದರೆ ಅವರ ಆಹಾರದಲ್ಲಿ ಕೆಲವೊಂದು ವಸ್ತುಗಳನ್ನು ಬಳಕೆ ಮಾಡಲೇಬೇಕು ಎನ್ನುತ್ತಾರೆ ಪ್ರೊ. ಸುತ್ತೂರು ಮಾಲಿನಿ. ʼವಿಶ್ವವಾಣಿ ಹೆಲ್ತ್ʼ (Vishwavani Health) ಯೂಟ್ಯೂಬ್ ಚಾನೆಲ್‌ನಲ್ಲಿ (YouTube channel) ಈ ಕುರಿತು ಮಾಹಿತಿ ನೀಡಿದ ಅವರು ಮಕ್ಕಳು ಬುದ್ದಿವಂತರಾಗಲು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ವಿಸ್ತೃತವಾಗಿ ವಿವರಿಸಿದ್ದಾರೆ.
ಮಗುವಿನ ಮೆದುಳಿನ ಬೆಳವಣಿಗೆ ತಾಯಿಯ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಮಗು ತಾಯಿಯ ಗರ್ಭದಲ್ಲಿ ಹುಟ್ಟಿದ 21ನೇ ದಿನದಲ್ಲೇ ಮೆದುಳಿನ ಬೆಳವಣಿಗೆ ಆರಂಭವಾಗಿರುತ್ತದೆ. ಇದು 24 ವರ್ಷದ ವರೆಗೆ ನಡೆಯುತ್ತದೆ. 7 ವರ್ಷದವರೆಗೆ ತೀವ್ರ ಗತಿಯಲ್ಲಿ ಮೆದುಳಿನ ಬೆಳವಣಿಗೆ ಆಗುತ್ತದೆ. 7- 13 ಸ್ವಲ್ಪ ನಿಧಾನವಾಗಿರುತ್ತದೆ. ಅನಂತರ ತೀವ್ರತ ಸ್ವಲ್ಪ ಕಡಿಮೆಯಾಗುತ್ತದೆ. ಮುಂಭಾಗದ ಮೆದುಳು ಬೆಳವಣಿಗೆಯಾಗಲು ತುಂಬಾ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕಣ್ಣಿನ ದೃಷ್ಟಿ ಉಳಿಸಿಕೊಳ್ಳಲು ಸುಲಭ ವ್ಯಾಯಾಮಗಳು ಇಲ್ಲಿದೆ
ಮಗುವಿನ ಬುದ್ಧಿಶಕ್ತಿ ಚೆನ್ನಾಗಿ ಇರಬೇಕು ಎಂದಾದರೆ ನರಕೋಶ ಬೆಳವಣಿಗೆ ಉತ್ತಮವಾಗಿರಬೇಕು. ಎರಡು ನರಕೋಶಗಳ ಸಂವಹನ ಚೆನ್ನಾಗಿರಬೇಕು. ನರಕೋಶಗಳ ಜತೆಯಲ್ಲಿ ನ್ಯೂರೋ ಟ್ರಾನ್ಸ್ ಮೀಟರ್ ಕೂಡ ಮುಖ್ಯವಾಗಿ ಬೇಕಾಗಿರುತ್ತದೆ. ಇದಕ್ಕಾಗಿ ಪೂರ್ವಜರು ಕೆಲವೊಂದು ಆಹಾರವನ್ನು ಸೇವಿಸುತ್ತಿದ್ದರು. ಆದರೆ ಇವತ್ತು ನಾವು ಮಕ್ಕಳಿಗೆ ಹೆಚ್ಚಿನ ಜಂಕ್ ಫುಡ್ ನೀಡುತ್ತಿದ್ದೇವೆ. ಇದು ನೇರವಾಗಿ ಅವರ ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದರು.
ವಿಡಿಯೊ ಇಲ್ಲಿದೆ:
2010ರಿಂದ 2025ರ ನಡುವೆ ಜನಿಸಿರುವ ಮಕ್ಕಳನ್ನು ನಾವು ಆಲ್ಫಾ, ಡಿಜಿಟಲ್ ಮಕ್ಕಳು ಎನ್ನುತ್ತೇವೆ. ಇವರ ಪರಿಸರ, ಆಹಾರ ಪದ್ಧತಿ, ಕ್ರೀಡಾ ಚಟುವಟಿಕೆ ಸಂಪೂರ್ಣ ಭಿನ್ನವಾಗಿದೆ. ಪೋಷಕರು ಕೆಲಸ ಮಾಡುವವರಾದ್ದರಿಂದ ಇದು ಅವರ ಆಹಾರ ಪದ್ದತಿಯನ್ನು ಬದಲಾಯಿಸಿದೆ. ಹೊರಗಿನ ಕ್ರೀಡಾ ಚಟುವಟಿಕೆ ಸರಿಯಾಗಿ ದೊರೆಯುತ್ತಿಲ್ಲ. ಹೀಗಾಗಿ ಇದು ಮಕ್ಕಳ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ಪ್ರೊ. ಸುತ್ತೂರು ಮಾಲಿನಿ ಹೇಳಿದ್ದಾರೆ.
ಮಕ್ಕಳ ಮೆದುಳಿನ ಬೆಳವಣಿಗೆಗೆ ನರಕೋಶಗಳಿಗೆ ಶಕ್ತಿ ಕೊಡುವ ಆಹಾರವನ್ನು ನೀಡಬೇಕು. ಇದಕ್ಕಾಗಿ ಕಡ್ಡಾಯವಾಗಿ ಕೊಡಲೇ ಬೇಕಾದ ಕೆಲವೊಂದು ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ. ಹಾಲು, ಕ್ಯಾರೆಟ್, ಮೊಸರು ಮಜ್ಜಿಗೆಗಿಂತಲೂ ಹೆಚ್ಚು ಪ್ರೊಟಿನ್ ಅಂಶಗಳಿರುವ ನುಗ್ಗೆ ಸೊಪ್ಪುನ್ನು ವಾರದಲ್ಲಿ ಕನಿಷ್ಠ ಮೂರು ಬಾರಿ ಮಕ್ಕಳಿಗೆ ನೀಡಬೇಕು. ಇದನ್ನು ಪಲ್ಯ, ಚಪಾತಿ, ದೋಸೆ ಮಾಡಿಕೊಡಬಹುದು ಎಂದು ತಿಳಿಸಿದ್ದಾರೆ.
ಇನ್ನು ದಿನದಲ್ಲಿ 4ರಿಂದ 5 ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಮರುದಿನ ಬೆಳಗ್ಗೆ ಕೊಡಬೇಕು. ಇದರೊಂದಿಗೆ ಅಡುಗೆಯಲ್ಲಿ ಸಾಧ್ಯವಾದಷ್ಟು ಒಳ್ಳೆಯ ಗುಣಮಟ್ಟದ ಅರಶಿನ ಬಳಕೆ ಮಾಡಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮಕ್ಕಳಿಗೆ ನೀಡುವ ಆಹಾರದಲ್ಲಿ ತುಪ್ಪದ ಬಳಕೆ ಮಾಡಬೇಕು. ಇದರೊಂದಿಗೆ ಪಾಲಕ್ ಸೊಪ್ಪು, ವಾಲ್ನಟ್, ಮೊಸರು, ಮಜ್ಜಿಗೆ, ಉಪ್ಪಿನ ಕಾಯಿ, ದೋಸೆ, ಇಡ್ಲಿ, ಎಳ್ಳು ಇವೆಲ್ಲವನ್ನು ನೀಡಬಹುದು. ಇವುಗಳು ಮೆದುಳಿನ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಅವರು ಹೇಳಿದ್ದಾರೆ.
ಬೇಸಿಗೆಯಲ್ಲಿ ಕಿತ್ತಳೆ ರಸ ಅಥವಾ ಬಿಸಿ ಕಾಫಿ: ಯಾವುದು ಆರೋಗ್ಯಕ್ಕೆ ಉತ್ತಮ?
ಎಲ್ಲ ರೀತಿಯ ಪೋಷಕಾಂಶಗಳು ಇರುವ ಬಾಳೆಹಣ್ಣುನ್ನು ಕಡ್ಡಾಯವಾಗಿ ಮಕ್ಕಳಿಗೆ ನೀಡಲೇಬೇಕು ಎಂದ ಅವರು, ಈ ಆಹಾರಗಳು ಕೇವಲ ಮಕ್ಕಳಿಗೆ ಮಾತ್ರವಲ್ಲ ಯಾರು ಬೇಕಾದರೂ ಸೇವಿಸಬಹುದು. ಸಾಧ್ಯವಾದಷ್ಟು ಹೊರಗಿನ ಆಹಾರ ಕಡಿಮೆ ಮಾಡಿ. ಮನೆಯ ಆಹಾರ ಹೆಚ್ಚಾಗಿ ಮಕ್ಕಳಿಗೆ ಕೊಡಿ. ಈ ಎಲ್ಲಾ ಆಹಾರಗಳ ಕುರಿತು ಬಹಳಷ್ಟು ಪ್ರಯೋಗಗಳು, ಸಂಶೋಧನೆಗಳು ನಡೆದಿವೆ. ಇವೆಲ್ಲವೂ ಮೆದುಳಿನ ಆರೋಗ್ಯಕ್ಕೆ ಪೂರಕ ಎಂಬುದು ಸಾಬೀತಾಗಿವೆ. ಹೀಗಾಗಿ ಇವುಗಳನ್ನು ತಪ್ಪದೇ ಪ್ರತಿ ನಿತ್ಯ ಕೊಡಿ ಎಂದು ಪ್ರೊ. ಸುತ್ತೂರು ಮಾಲಿನಿ ಹೇಳಿದ್ದಾರೆ.