ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ghee Benefits: ತುಪ್ಪವನ್ನೇಕೆ ಸೂಪರ್‌ಫುಡ್‌ ಎನ್ನಲಾಗುತ್ತದೆ ಗೊತ್ತೇ?

Ghee Benefits: ಅಮೃತ ಸಮಾನವಾದ ತುಪ್ಪವು ರುಚಿಗೂ, ಆರೋಗ್ಯಕ್ಕೂ ಬೇಕಾದಂಥದ್ದು. ಇದರ ಪೋಷಕ ಸತ್ವಗಳು ಇಂದಿನ ದಿನಗಳಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದ್ದು, ಚಯಾಪಚಯ ವೃದ್ಧಿ ಮತ್ತು ಜೀರ್ಣಾಂಗಗಳ ಕ್ಷಮತೆಯೂ ಸೇರಿದಂತೆ ಬಹಳಷ್ಟು ಲಾಭಗಳಿಗಾಗಿ ಆಹಾರ ತಜ್ಞರು ಇದನ್ನು ಸೇವಿಸು ವಂತೆ ಸೂಚಿಸುತ್ತಿದ್ದಾರೆ. ಹಾಗಾದರೆ ಇದನ್ನು ಸೂಪರ್‌ಫುಡ್‌ ಎನಿಸಿಕೊಳ್ಳುತ್ತಿರುವುದೇಕೆ?

ತುಪ್ಪ ಯಾಕೆ ಆರೋಗ್ಯಕ್ಕೆ ಒಳಿತು?

ghee -

Profile Pushpa Kumari Oct 9, 2025 7:00 AM

ಬೆಂಗಳೂರು: ಸೂಪರ್‌ಫುಡ್‌ಗಳ ಕಾಲವಿದು. ಯಾವುದೇ ಆಹಾರ ವಸ್ತುವಿನಲ್ಲಿ ಎಷ್ಟು ಹೆಚ್ಚಿನ ಪ್ರಯೋಜನಗಳಿವೆ ಎಂಬುದರ ಆಧಾರದ ಮೇಲೆ ಈ ಸೂಪರ್‌ಫುಡ್‌ಗಳ ಹಣೆಪಟ್ಟಿಯನ್ನು ಅಂಟಿಸುವುದು ವಾಡಿಕೆ. ಸಾವಿರಾರು ವರ್ಷಗಳಿಂದ ಘೃತ ಅಥವಾ ತುಪ್ಪ ಎಂಬುದು ಭಾರತೀಯ ಅಡುಗೆ ಮನೆಯ ಬೇರ್ಪಡಿಸಲಾಗದ ಭಾಗ. ಅಮೃತ ಸಮಾನವಾದ ತುಪ್ಪವು (Ghee) ರುಚಿಗೂ, ಆರೋಗ್ಯಕ್ಕೂ ಬೇಕಾದಂಥದ್ದು. ಇದರ ಪೋಷಕಸತ್ವಗಳು ಇಂದಿನ ದಿನಗಳಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದ್ದು, ಚಯಾಪಚಯ ವೃದ್ಧಿ ಮತ್ತು ಜೀರ್ಣಾಂಗಗಳ ಕ್ಷಮತೆಯೂ ಸೇರಿದಂತೆ ಬಹಳಷ್ಟು ಲಾಭಗಳಿಗಾಗಿ ಆಹಾರ ತಜ್ಞರು ಇದನ್ನು ಸೇವಿಸುವಂತೆ ಸೂಚಿಸುತ್ತಿದ್ದಾರೆ. ಹಾಗಾದರೆ ಇದೀಗ ಸೂಪರ್‌ಫುಡ್‌ ಎನಿಸಿಕೊಳ್ಳುತ್ತಿರುವುದೇಕೆ?

ಕೊಬ್ಬು ಕರಗಿಸುತ್ತದೆ

ತುಪ್ಪ ತಿಂದರೆ ಕೊಬ್ಬು ಹೆಚ್ಚುತ್ತದೆ ಎನ್ನುವುದು ಸಾಮಾನ್ಯವಾದ ಮಾತು. ಆದರೆ ಹೆಚ್ಚು ತುಪ್ಪ ತಿಂದರೆ ದಪ್ಪ ಆಗುವುದು ಹೌದಾದರೂ, ಅಲ್ಪ ಪ್ರಮಾಣದಲ್ಲಿ ಅದನ್ನು ತಿನ್ನುವುದು ದೇಹಕ್ಕೆ ಅಗತ್ಯ. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬೆಚ್ಚನೆಯ ತುಪ್ಪವನ್ನು ಸೇವಿಸುವುದರಿಂದ ದೇಹಕ್ಕೆ ಹಲವು ರೀತಿಯ ಲಾಭಗಳಿವೆ ಎಂಬುದನ್ನು ಅಧ್ಯಯನಗಳು ಪುಷ್ಟೀಕರಿಸಿವೆ. ಹೊಟ್ಟೆ, ತೊಡೆ, ತೋಳು ಮುಂತಾದೆಡೆ ಜಮೆಯಾಗಿ, ಯಾವ ವ್ಯಾಯಾಮಕ್ಕೂ ಅಲ್ಲಾಡದೆ ನಿಲ್ಲುವ ಕೊಬ್ಬನ್ನು ಕರಗಿಸುವುದಕ್ಕೆ ಬೆಳಗ್ಗೆ ಮೊದಲಿಗೆ ದೇಹಕ್ಕೆ ಕೊಬ್ಬನ್ನೇ ನೀಡುವುದು ಪರಿಣಾಮಕಾರಿಯಾದ ಉಪಾಯ ಎನ್ನಲಾಗುತ್ತಿದೆ.

ಸತ್ವಗಳೇನು?

ಕೊಬ್ಬಿನಲ್ಲಿ ಕರಗಬಲ್ಲಂಥ‌ ಎ, ಡಿ, ಇ ಮತ್ತು ಕೆ2 ವಿಟಮಿನ್‌ಗಳು ತುಪ್ಪದಲ್ಲಿ ಇರುವುದರಿಂದ ದೇಹದ ಚಯಾಪಚಯ ಹೆಚ್ಚಿ, ಜೀರ್ಣಾಂಗಗಳ ಕ್ಷಮತೆ ವೃದ್ಧಿಸಿ, ಕಣ್ಣು, ಹೃದಯದಂಥ ಅಂಗಗಳು ಚುರುಕುಗೊಂಡು, ಚರ್ಮದ ಹೊಳಪು ಹೆಚ್ಚಿ, ರೋಗ ನಿರೋಧಕ ಶಕ್ತಿಯೂ ಸುಧಾರಿಸುತ್ತದೆ. ಜತೆಗೆ, ಬಹುಪಾಲು ಖಾದ್ಯ ತೈಲಗಳಿಗಿಂತ ಹೆಚ್ಚಿನ ಸುಡುವ ಬಿಂದು ಅಥವಾ ಸ್ಮೋಕ್‌ ಪಾಯಿಂಟ್‌ ತುಪ್ಪಕ್ಕಿದೆ. ಹಾಗಾಗಿ ಹುರಿಯುವ, ಕರಿಯುವಂಥ ಅಡುಗೆಗಳಲ್ಲೂ ತುಪ್ಪವನ್ನು ಬಳಸುವುದು ಸುರಕ್ಷಿತ. ಅಡುಗೆ ತೈಲಗಳು ಬೇಗ ಸುಟ್ಟು ಕರಕಲಾದರೆ ಅಥವಾ ಹೊಗೆ ಬಂದರೆ, ಅಂಥವು ಖಾದ್ಯಗಳಲ್ಲಿನ ಬಳಕೆಗೆ ಯೋಗ್ಯವಲ್ಲ.

ಜೀರ್ಣಕಾರಿ

ತುಪ್ಪದಲ್ಲಿರುವ ಬಟೈರಿಕ್‌ ಆಮ್ಲವು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಉರಿಯೂತವನ್ನು ಶಮನ ಮಾಡುತ್ತದೆ. ಸತ್ವಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುವುದರಿಂದ ತೊಡಗಿ, ಶಕ್ತಿ ಸಂಚಯಿಸುವ, ಉರಿಯೂತ ಕಡಿಮೆ ಮಾಡುವವರೆಗೆ ಬಹಳಷ್ಟು ರೀತಿಯಲ್ಲಿ ದೇಹಕ್ಕೆ ನೆರವಾಗಬಲ್ಲವು. ಹಾಗಾಗಿ ಬಿಸಿಯಾದ ಆಹಾರಕ್ಕೆ ಒಂದು ಚಮಚ ಶುದ್ಧ ತುಪ್ಪವನ್ನು ಬೆರೆಸಿಕೊಂಡು ಸೇವಿಸುವುದು ಎಲ್ಲ ದೃಷ್ಟಿಯಿಂದಲೂ ಹಿತಕರ. ಇದನ್ನು ಮಿತವಾಗಿ ಸೇವಿಸುವುದರಿಂದ ತೂಕವೂ ಹೆಚ್ಚುವುದಿಲ್ಲ.

ಇದನ್ನು ಓದಿ:Early Dinners For Health: ರಾತ್ರಿಯ ಊಟ ಬೇಗ ಮಾಡಿದಷ್ಟು ಆರೋಗ್ಯಕ್ಕೆ ಒಳಿತು

ಫಿಟ್‌ನೆಸ್‌ಗೂ ಸಹಕಾರಿ

ತುಪ್ಪದಲ್ಲಿರುವ ಮಧ್ಯಮ ಕೊಂಡಿಯ ಟ್ರೈಗ್ಲಿಸರೈಡ್‌ಗಳು (MCTs) ಶೀಘ್ರವಾಗಿ ಹೀರಲ್ಪಟ್ಟು ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತವೆ. ಜತೆಗೆ ನೈಸರ್ಗಿಕವಾದ ಹುಲ್ಲಿನಂಥ ಮೇವು ತಿನ್ನುವ ಹಸುಗಳ ತುಪ್ಪದಲ್ಲಿ ಲಿನೋಲೆಯಿಕ್‌ ಆಮ್ಲ ವಿಫುಲವಾಗಿರುತ್ತದೆ. ಇದು ಜೀರ್ಣ ಶಕ್ತಿಯನ್ನು ಇನ್ನಷ್ಟು ಉದ್ದೀಪಿಸಿ, ದೇಹ ತೆಳುವಾಗಿರಲು ನೆರವಾಗುತ್ತದೆ. ಹಾಗಾಗಿ ತುಪ್ಪವನ್ನು ಮಿತಿಯನ್ನು ತಿನ್ನುವುದರಿಂದ ದೇಹಕ್ಕೆ ಸುಸ್ಥಿರವಾದ ಶಕ್ತಿ ದೊರೆತು, ಜೀರ್ಣಾಂಗಗಳ ಶಕ್ತಿ ಹೆಚ್ಚುತ್ತದೆ.

ಎಷ್ಟು ಬೇಕು/ ಸಾಕು?

ಇಷ್ಟೆಲ್ಲ ಪ್ರಯೋಜನಗಳಿರುವ ಸೂಪರ್‌ಫುಡ್‌ ತುಪ್ಪವನ್ನು ಹೆಚ್ಚು ತಿಂದರೆ ಸಮಸ್ಯೆಗಳು ಬರಬಹುದು. ಹಾಗಾದರೆ ಎಷ್ಟು ತಿನ್ನಬೇಕು ಅಥವಾ ತಿಂದರೆ ಸಾಕು? ಸಾಮಾನ್ಯ ಅಂದಾಜಿಗೆ ಹೇಳುವುದಾದರೆ, ವಯಸ್ಕರಿಗೆ ದಿನಕ್ಕೆ 2-4 ಚಮಚ ತುಪ್ಪ ದಿನಕ್ಕೆ ಸಾಕಾಗುತ್ತದೆ. ಅದರಲ್ಲೂ ಬೆಳಗಿನ ಹೊತ್ತು ತುಪ್ಪವನ್ನು ತಿನ್ನುವುದು, ಅದರಲ್ಲೂ ಬೆಚ್ಚಗಿನ ತುಪ್ಪದ ಸೇವನೆ ಒಳ್ಳೆಯದು ಎನ್ನುತ್ತಾರೆ ಪೋಷಕಾಂಶ ತಜ್ಞರು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ತುಪ್ಪ ಅಗತ್ಯವಾಗಿ ಬೇಕು. ಅದೇ ಹೃದ್ರೋಗಿಗಳಿಗಾದರೆ ವೈದ್ಯರಲ್ಲಿ ಮಾತಾಡಿಯೇ ನಿರ್ಧರಿಸಬೇಕು. ಹಾಗಾಗಿ ನಮ್ಮ ವಯಸ್ಸು, ಆರೋಗ್ಯ, ತೂಕ, ಜೀವನಶೈಲಿ ಇತ್ಯಾದಿಗಳ ಮೇಲೆ, ದಿನಕ್ಕೆಷ್ಟು ತುಪ್ಪ ಬೇಕು ಮತ್ತು ಸಾಕು ಎನ್ನುವುದನ್ನು ನಿರ್ಧರಿಸುವುದು ಸೂಕ್ತ.