ನವದೆಹಲಿ: ಆಡುವ ಮಕ್ಕಳ ಜೀವ ಅಂಗಳದಲ್ಲಿ ಎನ್ನುವ ಮಾತಿದೆ. ಆದರೆ ಇಂದಿನ ಮಕ್ಕಳು ಆಡುವುದೇ ಮೊಬೈಲ್ನಲ್ಲಿ. ಹೀಗಾದರೆ ಮಕ್ಕಳ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿ ಬೆಳೆಯುವುದು ಹೇಗೆ? ಗೆಳೆಯರೊಂದಿಗೆ ಮೈದಾನಕ್ಕಿಳಿದು ಆಡಿ ಉರುಳಾಡುವ ಮಕ್ಕಳ ಬಗ್ಗೆ ಹೆಚ್ಚಿನ ತಲೆಬಿಸಿ ಮಾಡಬೇಕಿಲ್ಲ. ಹಾಗಲ್ಲದೆ ಆಟವನ್ನೇ ಆಡದ ಮಕ್ಕಳೂ ಬಹುಮಂದಿ ಇರುವುದರಿಂದ ಅವರಿಗೆ ಸರಿಯಾದ ವ್ಯಾಯಾಮ ಬೇಕು ಎನ್ನುವುದು ಆರೋಗ್ಯ ಪರಿಣತರ (Health Tips) ಅಭಿಮತ. ʻಏನೀಗ, ಮಕ್ಕಳನ್ನು ಜಿಮ್ಗೆ ಕಳಿಸಿ ಭಾರ ಎತ್ತಿಸಬೇಕೇ?ʼ ಎನ್ನಬಹುದು. ಹಾಗಲ್ಲ, ಯಾವುದಾದರೂ ಒಂದೆರಡು ಕ್ರೀಡೆ, ಆಟೋಟಗಳಲ್ಲಿ ಮಕ್ಕಳನ್ನು ನಿಯಮಿತವಾಗಿ ತೊಡಗಿಸುವುದರಿಂದ ದೇಹವನ್ನು ಮೀರಿ ಆಗುವಂಥ ಅನುಕೂಲಗಳೇನು ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.
ತೊಡಕುಗಳನ್ನು ತಿಳಿಯಲು: ಮನೆಯ ವಾತಾವರಣದಲ್ಲಿ ಎಲ್ಲವೂ ಮಗುವಿಗೆ ಬೇಕಾದಂತೆಯೇ ಇರುವ ಸಾಧ್ಯತೆ ಹೆಚ್ಚು. ಆದರೆ ಮುಂದಿನ ಜೀವನಲ್ಲಿ ಎಲ್ಲವೂ ತನಗೆ ಬೇಕಾದಂತೆಯೇ ಇರುವುದಕ್ಕೆ ಸಾಧ್ಯವಿಲ್ಲ, ತೊಡಕುಗಳು ಬೇಕಾದಷ್ಟು ಇರಬಹುದು ಎಂಬುದು ಮಗುವಿನ ಅನುಭವಕ್ಕೆ ಬರಬೇಡವೇ? ಆಟಗಳಲ್ಲಿ, ತರಬೇತಿಗಳಲ್ಲಿ ಇರಬಹುದಾದ ಸವಾಲುಗಳು ಇದರ ಮೊದಲ ಮೆಟ್ಟಿಲುಗಳು. ಅಂದರೆ ಒಂದು ನಿಮಿಷದಲ್ಲಿ ಇಷ್ಟು ದೂರ ಓಡಬೇಕು, ಇಷ್ಟು ಮೆಟ್ಟಿಲು ಹತ್ತಬೇಕು- ಇಂಥವೆಲ್ಲ ಮಕ್ಕಳಿಗೆ ತಮ್ಮ ಆರಾಮ ವಲಯದಿಂದ ಹೊರಬರುವುದಕ್ಕೆ ನೆರವಾಗುತ್ತವೆ.
ಶಿಸ್ತು: ಕ್ರೀಡೆಯಲ್ಲಿ ಶಿಸ್ತಿಗೆ ಅತಿ ಹೆಚ್ಚಿನ ಗಮನ ನೀಡಲಾಗುತ್ತದೆ. ಮನೆಯಲ್ಲಿ ಒಬ್ಬಿಬ್ಬರೇ ಇದ್ದು, ಎಲ್ಲರ ಪ್ರೀತಿಯಲ್ಲಿ ಬೆಳೆಯುವಾಗ ಶಿಸ್ತು ಕಡಿಮೆಯಾಗಬಹುದು. ಆದರೆ ಬೆಳಗ್ಗೆ ಏಳುವ ಸಮಯದಿಂದ ಹಿಡಿದು, ಊಟ-ನಿದ್ದೆಯವರೆಗೆ ಎಲ್ಲದಕ್ಕೂ ಶಿಸ್ತು ಅಳವಡಿಸಿಕೊಂಡಾಗಲೇ ಕ್ರೀಡೆಯಲ್ಲಿ ಪ್ರತಿಫಲ ದೊರೆಯುವುದಕ್ಕೆ ಸಾಧ್ಯ.
ತಾಳ್ಮೆ: ಇಂದು ರೀಲ್ಸ್ ಮಾಡುತ್ತಾರೆ ನಾಳೆ ಸ್ಟಾರ್ ಆಗುವ ಈಗಿನ ಪೀಳಿಗೆಯ ನಡುವೆ, ಈಗ ಆರ್ಡರ್ ಮಾಡಿ ಇನ್ನು ಹತ್ತು ನಿಮಿಷಕ್ಕೆ ಪೀಟ್ಜಾ ತಿನ್ನುವ ಈ ಕಾಲದಲ್ಲಿ, ಯಶಸ್ಸು ಗಳಿಸಲು ಶ್ರಮ ಮತ್ತು ತಾಳ್ಮೆ ಅಗತ್ಯ ಎನ್ನುವುದನ್ನು ಮಕ್ಕಳಿಗೆ ತಿಳಿಸುವುದು ಹೇಗೆ? ಇಂದು ಕ್ರಿಕೆಟ್ ತರಬೇತಿಗೆ ಸೇರಿಕೊಂಡರೆ ನಾಳೆ ಶತಕ ಬಾರಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಮಕ್ಕಳಿಗೆ ಅನುಭವದಿಂದಲೇ ತಿಳಿಯಬೇಕು. ಹಾಗಾಗಿ ತರಬೇತಿಗಾಗಿ ವಹಿಸುವ ಶ್ರಮ ಎಷ್ಟು ಮುಖ್ಯವೋ ಅದಕ್ಕೆ ತಕ್ಕ ಫಲ ದೊರೆಯುವವರೆಗೆ ಕಾಯುವ ತಾಳ್ಮೆಯೂ ಮುಖ್ಯ ಎನ್ನುವುದನ್ನು ಕಲಿಯಲು ಮಗುವಿಗೆ ಆಟೋಟಗಳು ಸೂಕ್ತ ಮಾರ್ಗ.
ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿತಪ್ಪಿಯೂ ಮಖಾನ ಸೇವಿಸಬೇಡಿ
ಸೋಲು ಸ್ವೀಕಾರ: ಇದಂತೂ ಯಾವುದೇ ಶಾಲೆ, ಟ್ಯೂಷನ್ಗಳಲ್ಲಿ ಕಲಿಸಲಾಗದಂಥ, ಬದುಕು ಮಾತ್ರವೇ ಕಲಿಸಬಲ್ಲಂಥ ಬಹುದೊಡ್ಡ ಪಾಠ. ನಮ್ಮೆಲ್ಲಾ ಪ್ರಯತ್ನಗಳಿಗೆ ಸೂಕ್ತ ಫಲ ಸಿಕ್ಕಿಯೇ ಬಿಡಬೇಕೆಂದು ಇಲ್ಲವಲ್ಲ. ಒಂದೊಮ್ಮೆ ಸೋತರೆ, ಮರಳಿ ಯತ್ನವ ಮಾಡುವ ಮನಸ್ಥಿತಿಯೇ ಮಕ್ಕಳಲ್ಲಿ ಕಾಣೆಯಾಗುತ್ತಿದೆ. ಆದರೆ ಕ್ರೀಡೆ ಕಲಿಸುವುದೇ ಅದನ್ನು. ಈ ಸ್ಪರ್ಧೆಯಲ್ಲಿ ಸೋತರೆ, ಮುಂದೆ ಮತ್ತೆ ಸ್ಪರ್ಧಿಸು… ಗೆಲ್ಲುವವರೆಗೆ ಅದನ್ನೇ ಮಾಡು ಎಂದು! ಜೀವನದ ಒಂದು ರಂಗದಲ್ಲಿ ಕಲಿತಿದ್ದನ್ನು ಇನ್ನೊಂದು ರಂಗದಲ್ಲಿ ಅಳವಡಿಸಿಕೊಳ್ಳುವುದು ಮಕ್ಕಳಿಗೆ ಕಷ್ಟವಲ್ಲ.
ವ್ಯಾಯಾಮ, ಕ್ರೀಡೆ, ಆಟ, ತರಬೇತಿ ಎನ್ನುತ್ತಿದ್ದಂತೆ ಕೇವಲ ಬೆವರು ಹರಿಸುವುದು, ಆರೋಗ್ಯ ಹೆಚ್ಚಿಸಿಕೊಳ್ಳುವುದು ಅಥವಾ ಮೆಡಲ್ ಗಳಿಸುವುದೇ ಮುಖ್ಯವಲ್ಲ. ಕ್ರೀಡೆ ಮುಂದಿನ ಬದುಕಿನ ತದ್ರೂಪವನ್ನು ಈಗಲೇ ಸೃಷ್ಟಿಸಬಲ್ಲದು. ಕಳ್ಳದಾರಿ ಹಿಡಿಯದಂತೆ, ಸೋಲಿಗೆ ಹೆದರದಂತೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ, ಕಷ್ಟ ಸಹಿಸುವಂತೆ ಮಕ್ಕಳನ್ನು ಪ್ರೇರೇಪಿಸಬಲ್ಲದು. ಹಾಗಾಗಿ ಕ್ರೀಡೆಗಳಿಂದ ಓದಿಗೆ ಹಾನಿ ಎಂಬಂಥ ಭ್ರಮೆಗಳನ್ನು ಬಿಟ್ಟು, ಮಕ್ಕಳನ್ನು ಆಡುವುದಕ್ಕೆ ಪ್ರೋತ್ಸಾಹಿಸಿ. ಗೆಲ್ಲುವುದಕ್ಕೆ ದೈಹಿಕ ಮತ್ತು ಮಾನಸಿಕವಾಗಿ ಸಿದ್ಧಗೊಳಿಸಿ.