Health Tips: ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿತಪ್ಪಿಯೂ ಮಖಾನ ಸೇವಿಸಬೇಡಿ
Makhana: ಮಖಾನ ಅಥವಾ ತಾವರೆ ಬೀಜ ಅತ್ಯುತ್ತಮ ಪೋಷಕಾಂಶ ಹೊಂದಿರುವ ಸೂಪರ್‌ಫುಡ್. ಈ ಬೀಜಗಳಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳ ಪ್ರಮಾಣ ಅಧಿಕವಾಗಿದೆ. ಪ್ರತಿ ದಿನ ಒಂದು ಹಿಡಿ ಮಖಾನ ಬೀಜ ಸೇವಿಸುವುದರಿಂದ ನಿಮ್ಮ ಸೌಂದರ್ಯ ಹಾಗೂ ಯೌವ್ವನ ಹಾಗೇ ಉಳಿದು ಆರೋಗ್ಯ ವೃದ್ಧಿ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಮಖಾನ ಅತ್ಯುತ್ತಮ ಪೋಷಕಾಂಶ ಹೊಂದಿರುವ ಸೂಪರ್‌ಫುಡ್. ಈ ಬೀಜಗಳಲ್ಲಿ ಆ್ಯಂಟಿ-ಆಕ್ಸಿಡೆಂಟ್ ಪ್ರಮಾಣ ಅಧಿಕವಾಗಿದೆ. ಪ್ರತಿ ದಿನ ಒಂದು ಹಿಡಿ ಮಖಾನ (Makhana) ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಸೌಂದರ್ಯ ಹಾಗೂ ಯೌವ್ವನ ಹಾಗೇ ಉಳಿದು ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮಖಾನದ ಆರೋಗ್ಯ ಗುಣದ ಬಗ್ಗೆ ಉಲ್ಲೇಖ ಮಾಡಿದ್ದರು. ಆದರೆ ಇದು ಉತ್ತಮ ಆರೋಗ್ಯ ಗುಣ ಹೊಂದಿದ್ದರೂ ಎಲ್ಲರಿಗೂ ಸೂಕ್ತವಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ. ಕೆಲವು ವ್ಯಕ್ತಿಗಳಲ್ಲಿ ದಿನನಿತ್ಯದ ಸೇವನೆಯು ಆರೋಗ್ಯವನ್ನು ರಕ್ಷಣೆ ಮಾಡುವ ಬದಲು ಜೀರ್ಣಾಂಗ ತೊಂದರೆ, ಅಲರ್ಜಿ ಅಥವಾ ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು.
ಯಾರು ಸೇವಿಸಬಾರದು
ಜೀರ್ಣಾಂಗ ಸಮಸ್ಯೆ ಇದ್ದವರು: ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ನೋವಿನಂತಹ ಸಮಸ್ಯೆ ಇದ್ದರೆ ಮಖಾನ ತಿನ್ನುವುದನ್ನು ತಪ್ಪಿಸಿ. ಮಖಾನದಲ್ಲಿ ಹೆಚ್ಚಿನ ಪ್ರಮಾಣದ ಶರ್ಕರಪಿಷ್ಟಗಳು ಇದ್ದು ಜೀರ್ಣಿಸಿಕೊಳ್ಳುವುದು ಕೆಲವರಿಗೆ ಕಷ್ಟವಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಸೇವಿಸಿದರೆ ಅಸ್ವಸ್ಥತೆ ಕಂಡುಬರುತ್ತದೆ. ವಿಶೇಷವಾಗಿ ಮಸಾಲೆ ಹಾಕಿ ಹುರಿದ ಮಖಾನವನ್ನು ತಿಂದರೆ ಕರುಳಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಜೆನ್ ಝೀಗಳು ಇಷ್ಟಪಟ್ಟು ಸೇವಿಸುವ ಸಂಸ್ಕರಿಸಿದ ಮಾಂಸಾಹಾರದಿಂದ ಕ್ಯಾನ್ಸರ್ ಅಪಾಯ ಹೆಚ್ಚು
ಕಡಿಮೆ ರಕ್ತದೊತ್ತಡ ಹೊಂದಿರುವವರು: ಮಖಾನ ಮನಸ್ಸನ್ನು ಪ್ರಶಾಂತಗೊಳಿಸಲು ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಆದರೆ ಈಗಾಗಲೇ ಕಡಿಮೆ ರಕ್ತದೊತ್ತಡ ಹೊಂದಿದ್ದರೆ ಬಿಪಿ ಮತ್ತಷ್ಟು ಕಡಿಮೆಯಾಗಿ ತಲೆಸುತ್ತು, ಆಯಾಸ ಉಂಟಾಗಬಹುದು. ಸಹಜವಾಗಿಯೇ ಕಡಿಮೆ ರಕ್ತದೊತ್ತಡ ಇರುವವರು ಇದರ ಸೇವನೆ ಮಾಡಬಾರದು.
ಅಲರ್ಜಿ ಸಮಸ್ಯೆ ಇದ್ದವರು: ಕೆಲವರಿಗೆ ಮಖಾನದಿಂದ ಅಲರ್ಜಿ ಉಂಟಾಗಬಹುದು. ಚರ್ಮದ ತುರಿಕೆ, ಕೆಂಪು ದದ್ದುಗಳು, ವಾಕರಿಕೆ ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು. ಮಖಾನವನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿಸುವ ಮೊದಲು, ದೇಹದ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿ.
ಮೂತ್ರಪಿಂಡ ಸಮಸ್ಯೆ ಇರುವವರು: ಮಖಾನದಲ್ಲಿ ಪೊಟ್ಯಾಸಿಯಮ್ ಮತ್ತು ಫಾಸ್ಫರಸ್ ಖನಿಜಾಂಶಗಳು ಇರುತ್ತದೆ. ಕಿಡ್ನಿ ಕಾಯಿಲೆ ಇರುವವರ ದೇಹಕ್ಕೆ ಈ ಖನಿಜಗಳನ್ನು ರಕ್ತದಿಂದ ಹೊರಹಾಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮೂತ್ರಪಿಂಡ ಸಮಸ್ಯೆ ಇದ್ದವರು ಗಮನ ವಹಿಸಿ.
ತೂಕ ಇಳಿಕೆಗಾಗಿ ಅತಿಯಾಗಿ ಸೇವಿಸುವವರು: ತೂಕ ಇಳಿಸಲು ಅತಿಯಾಗಿ ಮಖಾನ ತಿಂದರೆ ಹೊಟ್ಟೆ ಉಬ್ಬರ, ಮಲಬದ್ಧತೆ ಉಂಟಾಗಬಹುದು. ಮಖಾನ ಕಡಿಮೆ ಕ್ಯಾಲೊರಿ ಹೊಂದಿರುವುದರಿಂದ ತೂಕ ಇಳಿಕೆಗೆ ಒಳ್ಳೆಯದು ಅನ್ನುತ್ತಾರೆ. ಆದರೆ ಆರೋಗ್ಯಕರ ಕೊಬ್ಬಿನಂಶ ಕಡಿಮೆಯಿರುವುದರಿಂದ ಕೇವಲ ಇದನ್ನೇ ಸೇವಿಸದರೆ ಪೋಷಕಾಂಶಗಳು ಸಿಗುವುದಿಲ್ಲ.