ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿರಿಧಾನ್ಯಗಳನ್ನು ಏಕೆ ತಿನ್ನಬೇಕು? ಇವು ಆರೋಗ್ಯ ರಕ್ಷಣೆಗೆ ಹೇಗೆ ಪೂರಕ? ಇಲ್ಲಿದೆ ಸಂಪೂರ್ಣ ವಿವರ

Health Tips: ಸಿರಿ ಧಾನ್ಯಗಳ ಬಗ್ಗೆ ಲೋಕದಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿರುವಾಗ ಅವುಗಳನ್ನು ತಿನ್ನುವುದು ಒಳ್ಳೆಯದು ಎನ್ನುವುದಕ್ಕಿಂತ ಬೇರೆ ಕಾರಣಗಳು ಇವೆಯೇ? ಏನು ಪ್ರಯೋಜನ ನಮಗದನ್ನು ತಿನ್ನುವುದರಿಂದ? ಏನಿದೆ ಅದರಲ್ಲಿ? ಅವುಗಳನ್ನು ತಿಂದರೆ ಮಾತ್ರ ಆರೋಗ್ಯದ ಬಗ್ಗೆ ಕಾಳಜಿ ಇದೆಯೆಂದು ಅರ್ಥವೇ?

ಸಿರಿಧಾನ್ಯಗಳ ಸೇವನೆ ಯಾಕೆ ಅಗತ್ಯ?

ಸಂಗ್ರಹ ಚಿತ್ರ -

Profile
Pushpa Kumari Jan 9, 2026 7:00 AM

ನವದೆಹಲಿ, ಡಿ. 9: ಊಟ ಅವರವರ ಇಷ್ಟಕ್ಕೆ ಸಂಬಂಧಿಸಿದ್ದು. ಅದನ್ನು ಬೇರೆಯವರು ಪ್ರಶ್ನಿಸುವಂತಿಲ್ಲ, ಕೆಲವೊಮ್ಮೆ ನೀಡುವ ಸಲಹೆಗಳೂ ಅನಗತ್ಯ ಎನಿಸಬಹುದು. ಆದರೂ ಸಿರಿ ಧಾನ್ಯಗಳ ಬಗ್ಗೆ ಲೋಕದಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿರುವಾಗ, ಅವುಗಳನ್ನು ತಿನ್ನುವುದು ಒಳ್ಳೆಯದುʼ ಎನ್ನುವುದಕ್ಕಿಂತ ಬೇರೆ ಕಾರಣಗಳು ಇವೆಯೇ? ಏನು ಪ್ರಯೋಜನ ನಮಗದನ್ನು ತಿನ್ನುವುದರಿಂದ? ಏನಿದೆ ಅದರಲ್ಲಿ? ಅವುಗಳನ್ನು ತಿಂದರೆ ಮಾತ್ರ ಆರೋಗ್ಯದ ಬಗ್ಗೆ ಕಾಳಜಿ ಇದೆಯೆಂದು ಅರ್ಥವೇ?

ಭಾರತದಲ್ಲಿ ಹಿಂದಿನಿಂದಲೂ ಪ್ರಮುಖ ಬೆಳೆಯಾಗಿ ಇದ್ದಿದ್ದು ಸಿರಿಧಾನ್ಯಗಳೇ. ಸಜ್ಜೆ, ರಾಗಿ, ನವಣೆ, ಜೋಳ, ಹಾರಕ, ಊದಲು, ಬರಗು, ಸಾಮೆ, ಕೊರ್ಲೆಯಂಥ ಕಿರುಧಾನ್ಯಗಳು ಜನಗಳ ಮುಖ್ಯ ಆಹಾರವಾಗಿದ್ದವು. ಮಳೆಯಾಧಾರಿತ ಕೃಷಿಯೇ ಪ್ರಮುಖವಾಗಿದ್ದ ನಾಡಿನಲ್ಲಿ, ಇವು ಎಂಥಾ ಬರಗಾಲವನ್ನೂ ಸಹಿಸಿ ಬೆಳೆಯುವಂಥ ಗಟ್ಟಿ ಗುಣವುಳ್ಳವು. ಹಾಗಾಗಿಯೇ ಇವುಗಳನ್ನು ತಿಂದವರೂ ನಿರೋಗಿಗಳಾಗಿ ಇರುತ್ತಿದ್ದರು. ನಂತರ ನೀರಾವರಿ ಎಲ್ಲೆಡೆ ಹರಡಿದ ಮೇಲೆ ಅಕ್ಕಿ, ಗೋದಿಯಂಥ ಧಾನ್ಯಗಳ ಕೃಷಿ ಪ್ರಾರಂಭವಾಯಿತು. ಅಲ್ಲಿಂದ ಮುಂದೆ ಈ ಸಿರಿಧಾನ್ಯಗಳು ಮೂಲೆಗುಂಪಾದವು.

ಆದರೀಗ ಅವುಗಳ ಮಹತ್ವ ಮತ್ತೆ ಜನರ ಅರಿವಿಗೆ ಬರತೊಡಗಿದೆ. ಹಾಗಾಗಿ ಹೆಚ್ಚೆಚ್ಚು ಜನ ಸಿರಿ ಧಾನ್ಯಗಳ ಕಡೆಗೆ ವಾಲುತ್ತಿದ್ದಾರೆ. ಪ್ರೊಟೀನ್‌, ಸಂಕೀರ್ಣ ಪಿಷ್ಟಗಳು, ನಾರು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವ ಈ ಧಾನ್ಯಗಳ ಸೇವನೆಯು ಆರೋಗ್ಯ ರಕ್ಷಣೆಗೆ, ತೂಕ ಇಳಿಕೆಗೆ, ಪ್ರತಿರೋಧಕತೆ ಹೆಚ್ಚಳಕ್ಕೆ ಅತ್ತ್ಯುತ್ತಮ ಮಾರ್ಗ. ಹಾಗಾದರೆ ಇನ್ನೂ ಏನೇನಿವೆ ಇದರಲ್ಲಿ?

ಸತ್ವಗಳು: ಸಂಕೀರ್ಣ ಪಿಷ್ಟ, ನಾರು, ಖನಿಜಗಳು, ಪ್ರೊಟೀನ್‌ ಮತ್ತು ಉತ್ಕರ್ಷಣ ನಿರೋಧಕಗಳು ಇವುಗಳಲ್ಲಿ ಮುಖ್ಯವಾಗಿವೆ. ಅಂದರೆ ಅಮೈನೊ ಆಮ್ಲಗಳು, ಕ್ಯಾಲ್ಶಿಯಂ, ಕಬ್ಬಿಣ, ಮೆಗ್ನೀಶಿಯಂ ನಂಥ ಖನಿಜಗಳು, ನಾನಾ ರೀತಿಯ ವಿಟಮಿನ್‌ಗಳು ಇವುಗಳಲ್ಲಿ ಸಾಂದ್ರವಾಗಿರುತ್ತವೆ. ಜೊತೆಗೆ ಯಾವುದೇ ಸಿರಿಧಾನ್ಯದಲ್ಲೂ ನಾರು ಹೇರಳವಾಗಿದೆ. ಈ ಎಲ್ಲ ಸತ್ವಗಳು ನಮ್ಮ ಸ್ವಾಸ್ಥ್ಯ ಸುಧಾರಣೆಗೆ ಬೇಕಾದಂಥವು.

ರುಚಿಕರ: ಒಂದೊಂದು ಧಾನ್ಯಕ್ಕೂ ಅದರದ್ದೇ ಆದ ಅನನ್ಯ ರುಚಿಯಿದೆ. ಹಾಗಾಗಿ ರೊಟ್ಟಿ, ಮುದ್ದೆ, ದೋಸೆ, ಇಡ್ಲಿ, ಉಪ್ಪಿಟ್ಟು, ಖಿಚಡಿ, ಭಾತ್‌ಗಳು, ಹಲ್ವಾ, ಪಾಯಸ, ಕುಕಿ, ಕೇಕ್‌ ಮುಂತಾದ ಯಾವುದನ್ನೇ ಮಾಡಿದರೂ ರುಚಿಗೆ ಮೋಸವಿಲ್ಲ. ಇದಾವುದಕ್ಕೂ ಸಮಯವಿಲ್ಲ ಎಂದರೆ, ಅನ್ನದ ಬದಲು ಇವುಗಳನ್ನು ಉಪಯೋಗಿಸಿದರೂ ಸಾಕು, ಸತ್ವಗಳು ದೇಹ ಸೇರುತ್ತವೆ.

ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಮಾಡಬೇಕಾ?; ಹಾಗಾದ್ರೆ ಇಂದಿನಿಂದಲೇ ಮಲಗುವ ಮುನ್ನ ಇಂತಹ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ಗ್ಲೂಟೆನ್‌ ಮುಕ್ತ: ಗೋದಿಯಂಥ ಗ್ಲೂಟೆನ್‌ ಅಂಶವಿರುವ ತಿನಿಸುಗಳಿಗೆ ಹಲವಾರು ಜನರಿಗೆ ತೊಂದರೆ ಕೊಡುತ್ತವೆ. ಜೀರ್ಣಾಂಗಗಳ ಸಮಸ್ಯೆ, ಸತ್ವಗಳನ್ನು ಹೀರಿಕೊಳ್ಳುವಲ್ಲಿನ ತೊಂದರೆ… ಇವೆಲ್ಲ ಗ್ಲೂಟೆನ್‌ ಅಲರ್ಜಿ ಇದ್ದವರಲ್ಲಿ ಕಾಣಬಹುದು. ಆದರೆ ಸಿರಿಧಾನ್ಯಗಳಲ್ಲಿ ಗ್ಲೂಟೆನ್‌ ಇಲ್ಲ. ಹಾಗಾಗಿ ರುಚಿಕರ, ಆರೋಗ್ಯಕರ ಆಹಾರದ ಸೇವನೆಯಿಂದ ಅವರೂ ಸುಖವಾಗಿ ಇರಬಹುದು.

ರೋಗ ದೂರ: ಮಧುಮೇಹಿಗಳಿಗೆ ಇದು ಅತ್ತ್ಯುತ್ತಮ ಆಹಾರ. ಇದರ ಸಂಕೀರ್ಣ ಪಿಷ್ಟ ಮತ್ತು ನಾರಿನಂಶ ರಕ್ತದಲ್ಲಿ ಸಕ್ಕರೆಯ ಮಟ್ಟ ತ್ವರಿತವಾಗಿ ಏರಿಕೆ ಆಗದಂತೆ ತಡೆಯುತ್ತವೆ. ಇದೇ ಅಂಶಗಳಿಂದಾಗಿ ದೀರ್ಘ ಕಾಲದವರೆಗೆ ಹಸಿವಾಗದೆ, ಶಕ್ತಿಯೂ ನಿರಂತರ ಪೂರೈಕೆಯಾಗುತ್ತಲೇ ಇರುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಸೂಕ್ತವಾದ ಆಹಾರವಿದು. ಜೊತೆಗೆ ಇದರ ಉತ್ಕರ್ಷಣ ನಿರೋಧಕಗಳು ರಕ್ತದೊತ್ತಡದಂಥ ಜೀವನಶೈಲಿಯ ಕಾಯಿಲೆಗಳನ್ನು ದೂರ ಮಾಡುತ್ತವೆ; ಹೃದಯ, ಮೆದುಳುಗಳನ್ನು ಕ್ಷೇಮವಾಗಿ ಇರಿಸುತ್ತವೆ.

ಪರಿಸರ-ಸ್ನೇಹಿ: ಬರಗಾಲಕ್ಕೂ ಬಗ್ಗುವಂಥ ಧಾನ್ಯಗಳಲ್ಲ ಇವು. ಜೊತೆಗೆ ಕೀಟದ ಕಾಟ, ರೋಗ ಬಾಧೆಗಳೂ ಕಡಿಮೆ ಇವುಗಳಿಗೆ. ಹಾಗಾಗಿ ಅಕ್ಕಿ, ಗೋದಿಯಂಥ ಧಾನ್ಯಗಳಿಗೆ ಉಪಯೋಗಿಸಿದಂತೆ ರಾಸಾಯನಿಕಗಳು, ಕೀಟನಾಶಕಗಳ ಬಳಕೆಯ ಅಗತ್ಯವೇ ಇಲ್ಲ ಈ ಧಾನ್ಯಗಳಿಗೆ. ಹಾಗಾಗಿ ನಮ್ಮ ಆರೋಗ್ಯಕ್ಕೆ ಇವು ಎಷ್ಟು ಹಿತವೋ ಪರಿಸರಕ್ಕೂ ಅಷ್ಟೇ ಹಿತ. ಜಲ, ಮಣ್ಣು ಮತ್ತು ಗಾಳಿಯ ಮಾಲಿನ್ಯವನ್ನು ಇದರಿಂದ ತಪ್ಪಿಸಬಹುದು.