ನವದೆಹಲಿ: ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ಪ್ರೊಟೀನ್ ಭರಾಟೆ. ದೇಹ ಬೆಳೆಸುವವರು ಮಾತ್ರವಲ್ಲ, ತೂಕ ಇಳಿಸುವವರು, ಆರೋಗ್ಯಗಳಿಸುವವರು, ಅವರು-ಇವರು-ಎಲ್ಲರೂ ತಮ್ಮ ಆಹಾರದಲ್ಲಿ ಪ್ರೊಟೀನ್ ಹೆಚ್ಚಿಸಿಕೊಳ್ಳುವುದು (Protein Food) ಹೇಗೆ ಎನ್ನುವ ಬಗ್ಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇವಿಷ್ಟರ ನಡುವೆ ಒಂದು ಪ್ರಶ್ನೆ- ಮಹಿಳೆಯರಿಗೆ ಅಧಿಕ ಪ್ರಮಾಣದ ಪ್ರೊಟೀನ್ ಏಕೆ ಬೇಕು? ಅವರಿಗೇನು ರಟ್ಟೆ ಬೆಳೆಸುವ, ಸಿಕ್ಸ್ ಪ್ಯಾಕ್ಸ್ ಗಳಿಸುವ ಅಗತ್ಯವಿಲ್ಲವಲ್ಲ? ಅಷ್ಟಕ್ಕೂ ಹಾಗೆಲ್ಲ ಉಬ್ಬಿದ ಮಾಂಸಪೇಶಿಗಳು ಮಹಿಳೆಯರ ಆದ್ಯತೆಯೇ ಅಲ್ಲದಿರುವಾಗ ಪ್ರೊಟೀನ್ ಪೂರಕಗಳು (ವೇ ಪ್ರೊಟೀನ್) ಏಕೆ ಬೇಕು?
ವಿಷಯವೇನೆಂದರೆ, ಪ್ರೊಟೀನ್ ಎಂಬುದು ಲಿಂಗ ಸಂಬಂಧಿ ಸತ್ವವಲ್ಲ. ಅಂದರೆ, ದೇಹದ ರಿಪೇರಿ, ಬೆಳವಣಿಗೆ, ರೋಗ ನಿರೋಧಕತೆ, ಹಾರ್ಮೋನುಗಳ ಸಮತೋಲನ ಮುಂತಾದ ಬಹಳಷ್ಟು ಕೆಲಸಗಳಿಗೆ ಪ್ರೊಟೀನ್ ಬೇಕು- ಎಲ್ಲರಿಗೂ. ಹಾಗಾಗಿ ಮಹಿಳೆಯರಿಗೂ ಅವರವರ ಅಗತ್ಯಕ್ಕೆ ತಕ್ಕಷ್ಟು ಪ್ರೊಟೀನ್ ದೊರೆಯದಿದ್ದರೆ ಅನಾರೋಗ್ಯ ನಿಶ್ಚಿತ. ತಲಾ ಒಂದು ಕೆ.ಜಿ ದೇಹ ತೂಕಕ್ಕೆ ಒಂದು ಗ್ರಾಂ ಪ್ರೊಟೀನ್ ಎಲ್ಲರಿಗೂ ಅಗತ್ಯ. ಉದಾ, 60 ಕೆ.ಜಿ. ತೂಕ ಇರುವವರಿಗೆ ಅಂದಾಜು 60 ಗ್ರಾಂ ಪ್ರೊಟೀನ್ ದಿನವೊಂದಕ್ಕೆ ಬೇಕಾಗುತ್ತದೆ. ಆದರೆ ಇದಿಷ್ಟು ಪ್ರಮಾಣದಲ್ಲಿ ಮಹಿಳೆಯರಿಗೆ ಪ್ರೊಟೀನ್ ದೊರೆಯುತ್ತದೆಯೇ? ಮನೆಕೆಲಸ, ಕಚೇರಿ ಕೆಲಸ, ಯಾವುದೋ ಮೀಟಿಂಗು, ಟ್ರೈನಿಂಗುಗಳ ನಡುವೆ ತಮ್ಮ ಕಾಳಜಿಯನ್ನು ಅವರೆಷ್ಟು ಮಾಡಬಲ್ಲರು?
ವೇ ಪ್ರೊಟೀನ್ ಏಕೆ?: ಇಂಥವರಿಗೆ ನೆರವಾಗುವಂಥವು ವೇ ಪ್ರೊಟೀನ್ ಅಥವಾ ಪ್ರೊಟೀನ್ ಪೂರಕಗಳು. ಅಂದಹಾಗೆ, ಪ್ರೊಟೀನ್ ಪೂರಕಗಳು ಹಲವಾರು ಸ್ವರೂಪಗಳಲ್ಲಿ ದೊರೆಯುತ್ತವೆ. ಅವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಆಪ್ತವಾಗುವುದು ಯಾವುದೇ ಅನಗತ್ಯ ಸಂಸ್ಕರಣೆಗೆ ಒಳಪಡದ ಶುದ್ಧ ವೇ ಪ್ರೊಟೀನ್ಗಳು. ಬದುಕಿನ ಎಲ್ಲ ಒದ್ದಾಟಗಳ ನಡುವೆ ತಮಗಾಗಿ ಸಮಯ ತೆಗೆಯುವುದಕ್ಕೆ ಹರಸಾಹಸ ಪಡುವ ಮಹಿಳೆಯರಿಗೆ, ಬೆಳಗಿನ ತಿಂಡಿಗೆ ಎರಡು ಮೊಟ್ಟೆ, ಮಧ್ಯಾಹ್ನ ಊಟಕ್ಕೆ ಇಷ್ಟು ಗ್ರಾಂ ಪನೀರ್ ಎಂದೆಲ್ಲ ದಿನವೂ ಲೆಕ್ಕ ಇಡುವುದಕ್ಕೆ ಸಾಧ್ಯವೇ? ಸಿಕ್ಕಿದ್ದನ್ನು ತಿಂದು ಓಡುವುದೇ ಬದುಕಾಗಿಬಿಡುತ್ತದೆ. ವಯಸ್ಸು 40 ದಾಟುತ್ತಿದ್ದಂತೆ ಅನಾರೋಗ್ಯಗಳು ಸದ್ದಿಲ್ಲದೆ ಮುತ್ತಿಕೊಂಡಿರುತ್ತವೆ.
ಏನು ಪ್ರೊಟೀನ್ ಇದು?: ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಅಮೈನೋ ಆಮ್ಲಗಳನ್ನು ಹೊಂದಿರುವಂಥ ಪರಿಪೂರ್ಣ ಪ್ರೊಟೀನ್ ಇದು. ಸಾಮಾನ್ಯವಾಗಿ ಡೇರಿ ಉತ್ಪನ್ನಗಳ ಸಾಲಿಗೆ ಇವುಗಳನ್ನು ಸೇರಿಸಬಹುದಾದರೂ, ಪೂರ್ಣ ಸಸ್ಯಜನ್ಯ ವೇ ಪ್ರೊಟೀನ್ಗಳು ಸಹ ಲಭ್ಯ ಇವೆ. ಯಾರಿಗೆಲ್ಲ ಡೇರಿ ಉತ್ಪನ್ನಗಳ ಅಲರ್ಜಿ ಇದೆಯೋ ಅವರು ಸಸ್ಯಜನ್ಯ ವೇ ಪ್ರೊಟೀನ್ ಬಳಸಬಹುದು. ಒಂದು ಸ್ಕೂಪ್ನಲ್ಲಿ ಎಷ್ಟು ಗ್ರಾಂ ಪ್ರೊಟೀನ್ ದೊರೆಯುತ್ತದೆ ಎನ್ನುವ ಮಾಹಿತಿಯನ್ನು ಆಯಾ ತಯಾರಕ ಕಂಪನಿಗಳೇ ಪ್ಯಾಕ್ ಮೇಲೆ ನಮೂದಿಸಿರುತ್ತಾರೆ. ಅದನ್ನು ನೋಡಿ, ನಮ್ಮ ಅಗತ್ಯಕ್ಕೆ ಸರಿಯಾಗಿ ನಾವೇ ನಿರ್ಧರಿಸಿಕೊಳ್ಳಬಹುದು.
Health Tips: ಹಬ್ಬದ ಖಾದ್ಯಗಳ ನೋಡಿ ಸೋಲದಿರಲಿ ಮನಸ್ಸು; ಜೋಪಾನವಾಗಿರಲಿ ಆರೋಗ್ಯ
ಆಹಾರದಿಂದ ಬೇಡವೇ?: ಬೇಕು! ಆಹಾರದಿಂದ ನಮ್ಮ ದೇಹಕ್ಕೆ ದೊರೆಯುವ ಪ್ರೊಟೀನ್ ಎಲ್ಲ ಲೆಕ್ಕದಲ್ಲೂ ಸೂಕ್ತವಾದದ್ದು. ಹಾಗೆ ದೊರೆಯುವುದೇ ಸರಿಯಾದದ್ದು. ಆದರೆ ಅದರಿಂದಲೇ ನಮ್ಮ ಪ್ರೊಟೀನ್ ಅಗತ್ಯಗಳ ಪೂರೈಕೆ ಆಗದಿದ್ದಾಗ ಮಾತ್ರವೇ ನಾವು ಬಳಸಬಹುದಾದ ಪೂರಕ ವ್ಯವಸ್ಥೆಯಿದು. ಆಹಾರದಲ್ಲೇ ಸಾಕಷ್ಟು ಪ್ರೊಟೀನ್ ಖಚಿತವಾಗಿ ದೊರೆಯುತ್ತದೆ ಎಂದಾದರೆ ಇಂಥ ಪೂರಕಗಳನ್ನು ಬಳಸುವ ಅಗತ್ಯವಿಲ್ಲ.
ದೇಹ ಬೆಳೆಯುವುದಿಲ್ಲವೇ?: ಹೀಗೆ ಪೂರಕಗಳನ್ನು ಸೇವಿಸಿ, ಮಹಿಳೆಯರೂ ಬೃಹತ್ ದೇಹ, ದೊಡ್ಡ ರಟ್ಟೆಯನ್ನು ಹೊತ್ತು ಓಡಾಡಬೇಕೆ? ಇಲ್ಲ, ಹೀಗಾಗುವುದಿಲ್ಲ. ದೇಹಕ್ಕೆ ಬೇಕಾದ ಮಾಂಸಖಂಡಗಳನ್ನು ಬೆಳೆಸುವಲ್ಲಿ ನಾವು ತಿನ್ನುವ ಆಹಾರದಷ್ಟೇ ಪಾಲು, ದೇಹದಲ್ಲಿ ಉತ್ಪಾದನೆ ಆಗುವ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನಿನದ್ದು. ಇದು ಮುಖ್ಯವಾಗಿ ಪುರುಷರ ದೇಹದಲ್ಲಿ ಉತ್ಪಾದನೆಯಾಗುವ ಹಾರ್ಮೋನು. ಮಹಿಳೆಯರ ದೇಹದಲ್ಲಿ ಇದಿರುವುದು ಅತಿ ಕನಿಷ್ಠ ಪ್ರಮಾಣದಲ್ಲಿ. ಹಾಗಾಗಿ ವೇ ಪ್ರೊಟೀನ್ ಕುಡಿದಿದ್ದರಿಂದ ರಟ್ಟೆ ಬೆಳೆಯುತ್ತದೆಂಬ ಚಿಂತೆಯನ್ನು ಮಹಿಳೆಯರು ಮಾಡಬೇಕಿಲ್ಲ.