ಬೆಂಗಳೂರು, ಡಿ. 26: ಈ ಬಾರಿ ಚಳಿಗಾಲ (Winter Tips) ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದು, ಎಲ್ಲೆಡೆ ಮೈ ನಡುಗಿಸುವ ಚಳಿಯ ಅನುಭವವಾಗುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯವಾಗಿರಲು ಬೆಚ್ಚಗಿನ ಉಡುಪು ಧರಿಸುವುದು, ಸರಿಯಾದ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ ಮಾಡುವುದು ಮುಖ್ಯ. ಆದರೆ ಚಳಿಗಾಲದ ಜಡ ಮನಸ್ಥಿತಿಗೆ ನಮಗೆ ತಿಳಿಯದಂತೆ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಇದರೊಂದಿಗೆ ಬಿಸಿ ಬಿಸಿಯಾದ, ಹೆಚ್ಚು ಕ್ಯಾಲೋರಿ ಇರುವ ಆಹಾರ ತಿನ್ನುವ ಆಸೆಯಿಂದಾಗಿ ತೂಕ ಏರುವುದು ಸಾಮಾನ್ಯ. ಹಾಗಾಗಿ ನಮ್ಮ ದೇಹವನ್ನು ಬೆಚ್ಚಗಿಡಲು ಸರಿಯಾದ ಆಹಾರ ಸೇವಿಸಿದರೆ ಸುಲಭವಾಗಿ ಫ್ಯಾಟ್ ಬರ್ನ್ ಮಾಡಬಹುದು.
ಕ್ಯಾರೆಟ್
ಚಳಿಗಾಲದ ಕ್ಯಾರೆಟ್‌ಗಳು ನೈಸರ್ಗಿಕವಾಗಿ ಸಿಹಿಯಾಗಿರುತ್ತವೆ. ಇದರಲ್ಲಿ ಫೈಬರ್ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಇದರ ಸೇವನೆಯೂ ಹೊಟ್ಟೆ ತುಂಬಿದ ಅನುಭವ ನೀಡಲಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದಿಢೀರ್ ಏರಿಸುವುದಿಲ್ಲ. ಇದರಿಂದ ಕೊಬ್ಬು ಶೇಖರಣೆಯಾಗುವುದು ಕೂಡ ಕಡಿಮೆ ಆಗುತ್ತದೆ.
ಮೆಂತೆ ಸೊಪ್ಪು
ಮೆಂತೆ ಸೊಪ್ಪನ್ನು ಭಾರತೀಯ ಚಳಿಗಾಲದ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಹಸಿವು ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮೆಂತೆ ನಾರು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾಗಿ ಚಳಿಗಾಲದಲ್ಲಿ ಇದರ ಸೇವನೆ ಉತ್ತಮ.
ಹಲ್ಲಿನ ಸೆಟ್ ಬದಲು ಡೆಂಟಲ್ ಇಂಪ್ಲ್ಯಾಂಟ್ ಮಾಡಿದರೆ ಈ ಲಾಭ ಸಿಗಲಿದೆ
ಸಾಸಿವೆ ಸೊಪ್ಪು
ಸಾಸಿವೆ ಸೊಪ್ಪಿನಲ್ಲಿ ಕ್ಯಾಲೋರಿ ಕಡಿಮೆ ಮತ್ತು ಪೋಷಕಾಂಶಗಳು ಹೆಚ್ಚು ಇರಲಿದ್ದು ಆ್ಯಂಟಿ-ಆಕ್ಸಿಡೆಂಟ್‌ಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗೆಣಸು
ಗೆಣಸಿನಲ್ಲಿರುವ ನಾರಿನಂಶವು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನು ಹುರಿದು ಅಥವಾ ಬೇಯಿಸಿ ತಿನ್ನುವುದು ಚಳಿಗಾಲದಲ್ಲಿ ಬಹಳ ಉತ್ತಮ.
ಶೇಂಗಾ, ಕಡಲೆಕಾಯಿ
ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಹೊಂದಿರುವ ಶೇಂಗಾ ಹೆಚ್ಚು ಸಮಯದವರೆಗೆ ಹಸಿವಾಗದಂತೆ ತಡೆಯುತ್ತದೆ. ಮಿತವಾಗಿ ಸೇವಿಸಿದರೆ ಇದು ದೇಹದಲ್ಲಿ ಕೊಬ್ಬು ಕರಗಿಸಲು ನೆರವಾಗುತ್ತದೆ.
ಸೀಬೆಹಣ್ಣು
ವಿಟಮಿನ್ ಸಿ ಹೆಚ್ಚಿರುವ ಸೀಬೆಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಸಂಶೋಧನೆಗಳ ಪ್ರಕಾರ, ವಿಟಮಿನ್ ಸಿ ಅಧಿಕವಾಗಿದ್ದರೆ ವ್ಯಾಯಾಮದ ಸಮಯದಲ್ಲಿ ಕೊಬ್ಬು ವೇಗವಾಗಿ ಕರಗುತ್ತದೆ.
ಮೂಲಂಗಿ
ಮೂಲಂಗಿಯಲ್ಲಿ ನೀರಿನಾಂಶ ಹೆಚ್ಚಿರುತ್ತದೆ ಮತ್ತು ಕ್ಯಾಲೋರಿ ಬಹಳಷ್ಟು ಕಡಿಮೆ ಇರುತ್ತದೆ. ಇದು ತೂಕ ಹೆಚ್ಚಾಗದಂತೆ, ಬೇಗ ಹೊಟ್ಟೆ ತುಂಬುವಂತೆ ಮಾಡುತ್ತದೆ.
ಶುಂಠಿ
ಶುಂಠಿಯು ದೇಹದ ಉಷ್ಣತೆಯನ್ನು ಹೆಚ್ಚಿಸುವ ಗುಣ ಹೊಂದಿದೆ. ಇದು ದೇಹದ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಪ್ರತಿರೋಧವನ್ನು ತಗ್ಗಿಸಲು ಸಹಾಯ ಮಾಡುತ್ತದೆ.