World Malaria Day 2025: ವಿಶ್ವ ಮಲೇರಿಯ ದಿನ... ಸಂಘಟಿತ ಯತ್ನವೇ ರೋಗ ತಡೆಗೆ ಪ್ರಧಾನ!
ಮಲೇರಿಯ ಸೋಂಕು ಪ್ರಸಾರ ವಾಗದಂತೆ ತಡೆಯುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸುವುದರ ಮಹತ್ವವನ್ನು ಸಾರುವ ಉದ್ದೇಶದಿಂದ, ಏಪ್ರಿಲ್ ತಿಂಗಳ ೨೫ನೇ ದಿನವನ್ನು ವಿಶ್ವ ಮಲೇರಿಯ ದಿನವೆಂದು ಗುರುತಿಸಲಾಗಿದೆ. ವೈದ್ಯ ವಿಜ್ಞಾನ ಸಾಕಷ್ಟು ಉನ್ನತಿ ಹೊಂದಿರುವ ಈ ದಿನಗಳಲ್ಲೂ, ವಾರ್ಷಿಕವಾಗಿ ಕೋಟಿಗಟ್ಟಲೆ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ, ಮಲೇರಿಯ ರೋಗದ ದುಷ್ಪರಿಣಾಮವನ್ನು ಅರ್ಥ ಮಾಡಿಕೊಳ್ಳಬೇಕು.. ಹಾಗಾಗಿ ಈ ರೋಗದ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳಬೇಕು..

World Malaria Day

ನವದೆಹಲಿ: ಯಾವುದೇ ರೋಗವನ್ನು ನಿಯಂತ್ರಣಕ್ಕೆ ತರುವಲ್ಲಿ, ಆರಂಭದಲ್ಲೇ ಪತ್ತೆ ಮಾಡುವುದು ಮತ್ತು ಚಿಕಿತ್ಸೆ ನೀಡು ವುದು ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಮಾತು ವರ್ಷಂಪ್ರತಿ ಜಾಗತಿಕವಾಗಿ ಹಲವು ಲಕ್ಷ ಜೀವ ಗಳನ್ನು ಬಲಿ ಪಡೆಯುತ್ತಿರುವ ಮಲೇರಿಯಾದಂಥ ರೋಗಕ್ಕೂ ಅನ್ವಯಿಸುತ್ತದೆ. ಮಲೇರಿಯ ಸೋಂಕು ಪ್ರಸಾರ ವಾಗದಂತೆ ತಡೆ ಯುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸುವುದರ ಮಹತ್ವವನ್ನು ಸಾರುವ ಉದ್ದೇಶದಿಂದ, ಏಪ್ರಿಲ್ ತಿಂಗಳ ೨೫ನೇ ದಿನವನ್ನು ವಿಶ್ವ ಮಲೇರಿಯ ದಿನವೆಂದು (World Malaria Day) ಗುರುತಿಸಲಾಗಿದೆ.ವೈದ್ಯ ವಿಜ್ಞಾನ ಸಾಕಷ್ಟು ಉನ್ನತಿ ಹೊಂದಿರುವ ಈ ದಿನಗಳಲ್ಲೂ, ವಾರ್ಷಿಕವಾಗಿ ಕೋಟಿಗಟ್ಟಲೆ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ, ಮಲೇರಿಯ ರೋಗದ ದುಷ್ಪರಿಣಾಮವನ್ನು ಅರ್ಥ ಮಾಡಿಕೊಳ್ಳಬೇಕು.
೨೦೨೩ರಲ್ಲಿ, ಜಾಗತಿಕವಾಗಿ ೨೬.೩ ಕೋಟಿ ಜನ ಮಲೇರಿಯ ಸೋಂಕಿನಿಂದ ನರಳಿದ್ದರೆ, ಅಂದಾಜು ೬ ಲಕ್ಷ ಮಂದಿ ಇದಕ್ಕೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, “ಮಲೇರಿಯ ನಿರ್ಮೂಲನೆಗೆ ಮತ್ತೆ ಹೂಡೋಣ, ಮತ್ತೆ ಕಲ್ಪಿಸಿಕೊಳ್ಳೋಣ, ಮತ್ತೆ ಜಾಗೃತರಾಗೋಣ” ಎನ್ನುವ ಘೋಷಣೆಯನ್ನು ವಿಶ್ವಸಂಸ್ಥೆ ಹೊರಡಿಸಿದೆ. ಈ ಮೂಲಕ ಸಂಘಟಿತ ಯತ್ನವು ಮಲೇರಿಯ ನಿರ್ಮೂಲನಕ್ಕೆ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದೆ.
ತಡೆಯುವುದು ಹೇಗೆ?: ಈ ಬಾರಿ ಬೇಸಿಗೆಯಲ್ಲಿ ಎಂದಿನಂತೆ ಎಲ್ಲೆಡೆ ಸೊಳ್ಳೆಗಳ ಸಂಖ್ಯೆ ಹೆಚ್ಚಿರುವುದು ಕಾಣುತ್ತದೆ. ಹಾಗಾಗಿ, ವೃದ್ಧಿಯಾಗುವ ಸೊಳ್ಳೆಗಳನ್ನು ನಾಶ ಮಾಡಲೇಬೇಕು. ಎಲ್ಲಾದರೂ ನೀರು ನಿಂತಿದ್ದರೆ ಅಲ್ಲೆಲ್ಲ ಕೀಟ ನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಹೆಚ್ಚಳ ನಿಲ್ಲಿಸಬೇಕು. ಸೊಳ್ಳೆಗಳ ಹೆಚ್ಚಳ ತಡೆಯುವುದು ಈ ರೋಗ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಮಾತ್ರವಲ್ಲ, ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್‌ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ತುಂಬು ಬಟ್ಟೆಗಳನ್ನು ಧರಿಸುವುದು ಸರಿಯಾದ ಕ್ರಮ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಲ್ಲಿರುವ ಹೊತ್ತಿನಲ್ಲಿ ಮನೆಯೊಳಗೇ ಇರಿ. ಮಲೇರಿಯ ನಿರೋಧಕತೆ ಉದ್ದೀಪಿಸುವಂಥ ಲಸಿಕೆಗಳು ಮಕ್ಕಳಿಗಾಗಿ ಲಭ್ಯವಿದೆ. ಈ ಬಗ್ಗೆ ವೈದ್ಯರಲ್ಲಿ ಮಾತಾಡುವುದು ಕ್ಷೇಮ.
ಬರಲು ಕಾರಣವೇನು?: ಪ್ಲಾಸ್ಮೋರಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಈ ಜೀವಿಯ ಪ್ರಸರಣಕ್ಕೆ ಪೂರಕವಾಗಿ ಒದಗುವುದು ಅನಾಫಿಲಿಸ್ ಸೊಳ್ಳೆಗಳು. ಕಚ್ಚುವ ಸೊಳ್ಳೆಗಳ ಮೂಲಕ ಮಾನವದ ದೇಹವನ್ನು ಪ್ರವೇಶಿಸುವ ರೋಗಾಣು, ಯಕೃತ್‌ನಲ್ಲಿ ಸಂತಾನಾಭಿವೃದ್ಧಿ ನಡೆಸುತ್ತದೆ. ರೋಗಾಣುಗಳು ಸಾಕಷ್ಟು ವೃದ್ಧಿಯಾಗಿ, ಸೋಂಕು ಪಸರಿಸುವ ಹೊತ್ತಿನಲ್ಲಿ ರೋಗ ಲಕ್ಷಣಗಳು ಕಾಣಲು ಆರಂಭಿಸುತ್ತವೆ. ಇದಕ್ಕೆ ಸಾಮಾನ್ಯವಾಗಿ ಸೋಂಕು ತಗುಲಿದ ನಂತರ, ೧೦ ದಿನಗಳಿಂದ ನಾಲ್ಕು ವಾರಗಳವರೆಗೂ ಬೇಕಾಗುತ್ತದೆ.
ಇದನ್ನು ಓದಿ: Health Tips: ಕಲ್ಲಂಗಡಿಯೆಂಬ ರಸಭರಿತ ಹಣ್ಣಿನ ಸತ್ವಗಳು ಗೊತ್ತೇ?
ಲಕ್ಷಣಗಳೇನು?: ತೀವ್ರ ಜ್ವರ, ಚಳಿನಡುಕ, ತಲೆನೋವು, ಮೈಕೈ ನೋವು, ವಾಂತಿ, ವಿಪರೀತ ಸುಸ್ತು- ಇವು ಸಾಮಾನ್ಯ ವಾಗಿ ಮಲೇರಿಯ ರೋಗಿಯಲ್ಲಿ ಕಂಡುಬರುವ ಲಕ್ಷಣಗಳು. ಮಕ್ಕಳಲ್ಲಿ ಇವಿಷ್ಟರ ಜೊತೆಗೆ ಕೆಮ್ಮು ಮತ್ತು ಡಯರಿಯ ಸಹ ಬರಬಹುದು. ಮಲೇರಿಯದಿಂದ ಕಾಮಾಲೆ (ಜಾಂಡೀಸ್) ಮತ್ತು ರಕ್ತಹೀನತೆ (ಅನಿಮಿಯ) ಸಹ ಬರಬಹುದು. ಇಂಥ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ರಕ್ತಪರೀಕ್ಷೆ ಮಾಡಿಸಲು ವೈದ್ಯರು ಸೂಚಿಸುತ್ತಾರೆ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ಯಕೃತ್ ಸಮಸ್ಯೆ, ಶ್ವಾಸಕೋಶಗಳಲ್ಲಿ ನೀರು ತುಂಬುವುದು, ನ್ಯುಮೋನಿಯ, ದೃಷ್ಟಿಯ ತೊಂದರೆ, ಕಿಡ್ನಿ ವೈಫಲ್ಯ ಹೀಗೆ ಹಲವು ರೀತಿಯಲ್ಲಿ ಆರೋಗ್ಯ ಕೈಕೊಟ್ಟು ಸಾವು ವಕ್ಕರಿಸಬಹುದು.