ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

KAS Mains Exam: ಕೆಎಎಸ್‌ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ; ಮಾರ್ಚ್‌ 3 ಕೊನೆಯ ದಿನಾಂಕ

KAS Mains Exam: ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ - ಎ ಮತ್ತು ಗ್ರೂಪ್ - ಬಿ ವೃಂದದ 384 ಹುದ್ದೆಗಳಿಗೆ ಡಿ.29ರಂದು ಪೂರ್ವಭಾವಿ ಮರುಪರೀಕ್ಷೆ ನಡೆಸಲಾಗಿತ್ತು. ಆಯೋಗವು ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಫೆ.10 ರಂದು ಪ್ರಕಟಿಸಿತ್ತು. ಇದೀಗ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಕೆಎಎಸ್‌ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ; ಮಾರ್ಚ್‌ 3 ಕೊನೆಯ ದಿನಾಂಕ

Profile Prabhakara R Feb 14, 2025 2:01 PM

ಬೆಂಗಳೂರು: 2023-24 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ (KAS Mains Examination) ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. 2024ರ ಫೆ. 26ರಂದು ಅಧಿಸೂಚನೆ ಹೊರಡಿಸಿದ್ದ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ - ಎ ಮತ್ತು ಗ್ರೂಪ್ - ಬಿ ವೃಂದದ 384 ಹುದ್ದೆಗಳಿಗೆ ಡಿ.29ರಂದು ಪೂರ್ವಭಾವಿ ಮರುಪರೀಕ್ಷೆ ನಡೆಸಲಾಗಿತ್ತು. ಆಯೋಗವು ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಫೆ.10 ರಂದು ಪ್ರಕಟಿಸಿತ್ತು. ಇದೀಗ ಮುಖ್ಯ ಪರೀಕ್ಷೆಗೆ (KAS Mains Exam) ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕಾಲಮಿತಿ:

  • ಅರ್ಜಿ ಸಲ್ಲಿಕೆ ಆರಂಭ: ಫೆಬ್ರವರಿ 17
  • ಕೊನೆಯ ದಿನಾಂಕ: ಮಾರ್ಚ್ 03

ಮುಖ್ಯ ಪರೀಕ್ಷೆ ದಿನಾಂಕ: ಮಾರ್ಚ್‌ 28, 29, ಏಪ್ರಿಲ್ 1 ಮತ್ತು 2 ರಂದು ಮುಖ್ಯ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಉದ್ದೇಶಿಸಿದ್ದು, ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ತೊಂದರೆಗಳು ಎದುರಾದಲ್ಲಿ ಅಭ್ಯರ್ಥಿಗಳು HELP LINE NO:080-30574957/30574901 ಸಂಪರ್ಕಿಸಬಹುದು. ಮುಖ್ಯ ಪರೀಕ್ಷೆಯನ್ನು ಬೆಂಗಳೂರು ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.

ಪರೀಕ್ಷಾ ಶುಲ್ಕ:

  • ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ & ಅಂಗವಿಕಲ ಅಭ್ಯರ್ಥಿಗಳಿಗೆ-300 ರೂ.
  • ಇತರೆ ಅಭ್ಯರ್ಥಿಗಳಿಗೆ-500 ರೂ.

ಈ ಸುದ್ದಿಯನ್ನೂ ಓದಿ | Jobs Alert: ಅಂಚೆ ಇಲಾಖೆಯಲ್ಲಿ 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ

KAS

ನೇಮಕಾತಿ ವಿಧಾನ

ಪೂರ್ವಭಾವಿ ಪರೀಕ್ಷೆಯ ಅಧಿಸೂಚನೆಯಲ್ಲಿ ಅಧಿಸೂಚಿಸಲಾದ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:15ರ ಅನುಪಾತದಲ್ಲಿ ಗಳಿಸಿದ ಅಂಕಗಳ ಜ್ಯೇಷ್ಠತೆ ಮತ್ತು ಕೋರಿರುವ ಮೀಸಲಾತಿಯನ್ವಯ ಅರ್ಹ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಪ್ರವೇಶ ನೀಡಲಾಗುತ್ತದೆ. ನಂತರ ಅರ್ಹ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಜ್ಯೇಷ್ಠತೆ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ 1:3ರ ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಕರೆಯಲಾಗುವುದು.

ವ್ಯಕ್ತಿತ್ವ ಪರೀಕ್ಷೆ: ಕರ್ನಾಟಕ ಗಜೆಟೆಡ್ ಪ್ರೋಬೆಷನರ್ಸ್ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ) (ತಿದ್ದುಪಡಿ) ನಿಯಮಗಳನ್ವಯ ಗ್ರೂಪ್-'ಎ' ಮತ್ತು 'ಬಿ' ಸೇವೆಗಳ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:3ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಕರೆಯಲಾಗುವುದು. ಆಯೋಗವು, ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ
ಜ್ಯೇಷ್ಠತೆ (Merit) ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿಯನ್ವಯ ಲಭ್ಯವಿರುವ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿದ ರಿಕ್ತ ಸ್ಥಾನಗಳಿಗನುಗುಣವಾಗಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಹ್ವಾನಿಸಲಾಗುವುದು. ವ್ಯಕ್ತಿತ್ವ ಪರೀಕ್ಷೆಯು ಗರಿಷ್ಠ 25 ಅಂಕಗಳನ್ನು ಒಳಗೊಂಡಿರುತ್ತದೆ.

ಅಭ್ಯರ್ಥಿಗಳು ಮುಖ್ಯಪರೀಕ್ಷೆಯಲ್ಲಿ ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಜ್ಯೇಷ್ಠತೆ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳು ಮತ್ತು ಅರ್ಜಿಯಲ್ಲಿ ನೀಡಿರುವ ಆದ್ಯತೆಯನ್ವಯ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಕೆಪಿಎಸ್‌ಸಿ ಮಾಹಿತಿ ನೀಡಿದೆ.

ಕೆಎಎಸ್‌ ಮುಖ್ಯ ಪರೀಕ್ಷೆ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ GP-2023-24main-Notification