ಅಮೆರಿಕದ ವಿರುದ್ಧ ಸಿಡಿದೆದ್ದ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ; ಪ್ರತೀಕಾರದ ಎಚ್ಚರಿಕೆ: ಇನ್ನೊಂದು ಮಜಲಿಗೆ ಹೊರಳುತ್ತಾ ಸಂಘರ್ಷ?
Mojtaba Khamenei: ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿ ಮೊಜ್ತಬಾ ಖಮೇನಿ ಪ್ರತೀಕಾರದ ಎಚ್ಚರಿಕೆ ನೀಡಿದರು. ಜತೆಗೆ ಹೊರ್ಮುಜ್ ಜಲಸಂಧಿ ಮುಚ್ಚುವುದಾಗಿಯೂ ಗುಡುಗಿದರು. ಆ ಮೂಲಕ ಸಂಘರ್ಷ ಇನ್ನಷ್ಟು ತೀವ್ರವಾಗುವ ಸೂಚನೆ ನೀಡಿದರು.
ಮೊಜ್ತಬಾ ಖಮೇನಿ (ಸಂಗ್ರಹ ಚಿತ್ರ) -
ಟೆಹರಾನ್, ಮಾ. 12: ''ಕೊಲ್ಲಿ ಪ್ರದೇಶಗಳಲ್ಲಿನ ಸೇನಾ ನೆಲೆಗಳನ್ನು ಕೂಡಲೇ ಅಮೆರಿಕ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಶಕ್ತವಾಗಿ ದಾಳಿ ನಡೆಸುತ್ತೇವೆʼʼ-ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಪ್ರತೀಕಾರದ ಎಚ್ಚರಿಕೆ ನೀಡಿದ ಪರಿ ಇದು. ಸರ್ವೋಚ್ಚ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಅವರು ಅಮೆರಿಕ ಮತ್ತು ಇಸ್ರೇಲ್‌ಗೆ ಬಲವಾಗಿ ತಿರುಗೇಟು ನೀಡುವುದಾಗಿ ಹೇಳಿದರು. ಆ ಮೂಲಕ ಪಶ್ಚಿಮ ಏಷ್ಯಾದಲ್ಲಿನ ಯುದ್ಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸೂಚನೆ ನೀಡಿದರು.
ಇರಾನ್‌ನಲ್ಲಿ ಹರಿದ ನೆತ್ತರಿಗೆ ಪ್ರತೀಕಾರ ತೀರಿಸುವುದಾಗಿಯೂ ಹೊರ್ಮುಜ್ ಜಲಸಂಧಿ ಮುಚ್ಚುವುದಾಗಿಯೂ ಗುಡುಗಿದರು. ಖಮೇನಿ ಅವರ ಸಂದೇಶವನ್ನು ಸರ್ಕಾರಿ ವಾಹಿನಿಯ ವಾರ್ತಾ ವಾಚಕರು ಓದಿದರು. ದೇಶದ ಅತ್ಯುನ್ನತ ಅಧಿಕಾರಿಯಾಗಿ ನೇಮಕಗೊಂಡ ನಂತರ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಎನ್ನುವುದು ಗಮನಾರ್ಹ.
"ನಮ್ಮ ಮೇಲೆ ಸಾರಿದ ಯುದ್ಧಕ್ಕೆ ಶತ್ರುಗಳಿಂದ ಪರಿಹಾರ ಪಡೆದೇ ಪಡೆಯುತ್ತೇವೆ. ನೀಡಲು ನಿರಾಕರಿಸಿದರೆ, ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತೇವೆ ಮತ್ತು ಅದೂ ಸಾಧ್ಯವಾಗದಿದ್ದರೆ ನಾವು ಅವರ ಆಸ್ತಿಯನ್ನು ನಾಶಪಡಿಸುತ್ತೇವೆ" ಎಂದು ಅವರು ಎಚ್ಚರಿಸಿದರು.
ಮೊಜ್ತಬಾ ಖಮೇನಿ ಹೇಳಿಕೆ:
Iran’s new Supreme Leader Mojtaba Khamenei says the leverage of blocking the Strait of Hormuz “must continue to be used” in his first public statement, read by a state TV presenter. pic.twitter.com/aRoe30SO8t
— Al Arabiya English (@AlArabiya_Eng) March 12, 2026
ಹೊರ್ಮುಜ್ ಜಲಸಂಧಿಯ ಬಗ್ಗೆ ಹೇಳಿದ್ದೇನು?
ಪರ್ಷಿಯನ್ ಕೊಲ್ಲಿಯನ್ನು ಒಮನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ವಿಶ್ವದ ಪ್ರಮುಖ ಇಂಧನ ಮಾರ್ಗಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯ ಕುರಿತು ಇರಾನ್‌ನ ನಿಲುವನ್ನು ಅವರು ಉಲ್ಲೇಖಿಸಿದರು. ಈ ಜಲಮಾರ್ಗವು ಜಾಗತಿಕ ತೈಲ ಸಾಗಣೆಯಲ್ಲಿ ಗಮನಾರ್ಹ ಪಾಲನ್ನು ಹೊಂದಿದ್ದು, ಬಿಕ್ಕಟ್ಟಿನಲ್ಲಿ ಕೇಂದ್ರಬಿಂದು ಎನಿಸಿಕೊಂಡಿದೆ. ಹೊರ್ಮುಜ್ ಜಲಸಂಧಿಯನ್ನು ಒತ್ತಡ ಹೇರಲು ಬಳಸಬೇಕು ಎಂದೂ ಖಮೇನಿ ಕರೆ ನೀಡಿದರು. "ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಅಧಿಕಾರವನ್ನು ಇರಾನ್ ಇನ್ನೂ ಬಳಸಬೇಕುʼʼ ಎಂದು ಅವರು ಹೇಳಿದರು. "ನಾವು ನೆರೆಹೊರೆಯ ದೇಶಗಳೊಂದಿಗೆ ಸ್ನೇಹ ಸಂಬಂಧ ಮುಂದುವರಿಸುತ್ತೇವೆ. ಅದಾಗ್ಯೂ ಅಲ್ಲಿನ ಅಮೆರಿಕನ್ ನೆಲೆಗಳ ಮೇಲೆ ದಾಳಿ ಮುಂದುವರಿಸುತ್ತೇವೆ. ನಮ್ಮ ಗುರಿ ಏನಿದ್ದರೂ ಶತ್ರುಗಳ ನೆಲೆʼʼ ಎಂದು ಪುನರುಚ್ಚರಿಸಿದರು.
ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿದ ಭಾರತ; ಇರಾನ್ ಬಗ್ಗೆ ಕೇಂದ್ರದ ನಿಲುವು ಬದಲಾಗಿದ್ದೇಕೆ?
ವಿದ್ಯಾರ್ಥಿನಿಯರ ಸಾವಿಗೆ ಕಿಡಿ
ಇರಾನಿನ ನಾಗರಿಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳದೆ ದೇಶ ವಿಶ್ರಮಿಸುವುದಿಲ್ಲ ಎಂದು ಎಚ್ಚರಿಸಿದರು. ದಕ್ಷಿಣ ಇರಾನಿನ ಮಿನಾಬ್ ನಗರದ ಬಾಲಕಿಯರ ಶಾಲೆಯ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ 168ಕ್ಕಿಂತ ಅಧಿಕ ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಅದಕ್ಕೂ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದರು.
ಮೊಜ್ತಬಾ ಖಮೇನಿ ಸುರಕ್ಷಿತವಾಗಿದ್ದಾರೆ, ಯಾವುದೇ ಗಾಯವಾಗಿಲ್ಲ ಎಂದ ಇರಾನ್
ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿ ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು. ನಂತರ ಇರಾನ್‌ನ ಮಾಜಿ ಸರ್ವೋಚ್ಚ ನಾಯಕನಾಗಿ ಅವರ ಪುತ್ರ ಮಗ ಮೊಜ್ತಬಾ ಖಮೇನಿ ಅಧಿಕಾರ ಸ್ವೀಕರಿಸಿದರು. ʼʼತಂದೆ ಯಾವಾಗಲೂ ಸತ್ಯವನ್ನೇ ಪ್ರತಿಪಾದಿಸುತ್ತಿದ್ದರು. ಅವರ ಹಾದಿಯಲ್ಲೇ ಸಾಗುತ್ತೇನೆʼʼ ಎಂದು ಮೊಜ್ತಬಾ ತಿಳಿಸಿದರು. ಖಮೇನಿ ಹೇಳಿಕೆಯಿಂದ ಸಂಘರ್ಷ ಇನ್ನಷ್ಟು ಮುಂದುವರಿಯುವ ಸೂಚನೆ ಸಿಕ್ಕಿದೆ.