2nd PUC Results 2025: ದ್ವಿತೀಯ ಪಿಯುಸಿ ಫಲಿತಾಂಶ: 18ನೇ ಸ್ಥಾನಕ್ಕೆ ಜಿಗಿದ ಕಲ್ಪತರು ನಾಡು
2nd PUC Results 2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಲ್ಪತರು ನಾಡು ತುಮಕೂರು ಜಿಲ್ಲೆ ರಾಜ್ಯದಲ್ಲಿ 18ನೇ ಸ್ಥಾನ ಗಳಿಸಿದೆ. ಕಳೆದ ವರ್ಷ 24ನೇ ಸ್ಥಾನಕ್ಕೆ ಕುಸಿದಿದ್ದ ಪಿಯುಸಿ ಫಲಿತಾಂಶ ಈ ಬಾರಿ ಶೇ.72.02 ಗಳಿಸುವ ಮೂಲಕ 18ನೇ ಸ್ಥಾನಕ್ಕೆ ಏರಿದೆ. ಈ ಕುರಿತ ವಿವರ ಇಲ್ಲಿದೆ.


- ರಂಗನಾಥ ಕೆ. ಹೊನ್ನಮರಡಿ
ತುಮಕೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಲ್ಪತರು ನಾಡು ತುಮಕೂರು ಜಿಲ್ಲೆ ರಾಜ್ಯದಲ್ಲಿ 18ನೇ ಸ್ಥಾನ ಗಳಿಸಿದೆ. ಕಳೆದ ವರ್ಷ 24ನೇ ಸ್ಥಾನಕ್ಕೆ ಕುಸಿದಿದ್ದ ಪಿಯುಸಿ ಫಲಿತಾಂಶ (2nd PUC Results 2025) ಈ ಬಾರಿ ಶೇ.72.02 ಗಳಿಸುವ ಮೂಲಕ 18ನೇ ಸ್ಥಾನಕ್ಕೆ ಏರಿದೆ. ಕಲಾ ವಿಭಾಗದಲ್ಲಿ 4318 ವಿದ್ಯಾರ್ಥಿಗಳಿಗೆ 2476, ವಿಜ್ಞಾನ ವಿಭಾಗದಲ್ಲಿ 10051 ವಿದ್ಯಾರ್ಥಿಗಳಿಗೆ 7784 ಹಾಗೂ ವಾಣಿಜ್ಯ ವಿಭಾಗದಲ್ಲಿ 8587 ವಿದ್ಯಾರ್ಥಿಗಳಿಗೆ 6274 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 22956 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಅದರಲ್ಲಿ 16534 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಜಿಲ್ಲೆಗೆ ಶೇ. 72.02 ಫಲಿತಾಂಶ ಲಭಿಸಿದೆ.
ಜಿಲ್ಲೆಯಲ್ಲಿ ಹೆಚ್ಚು ಫಲಿತಾಂಶ ಪಡೆದವರು
ಕಲಾ ವಿಭಾಗ: ತುಮಕೂರು ಎಂಪ್ರೆಸ್ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿ ಅದಿತಿ ಎಚ್., 584 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ತಿಪಟೂರು ಬಸವೇಶ್ವರ ಕಾಲೇಜಿನ ವಿದ್ಯಾರ್ಥಿ ಗಣೇಶ್ 580 ಹಾಗೂ ವಿದ್ಯಾರ್ಥಿ ಚೇತನ್ ಬಿ.ಆರ್., 579 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗ
ರಾಜ್ಯಕ್ಕೆ 4 ನೇ ಸ್ಥಾನ ಪಡೆದಿರುವ ವಿದ್ಯಾನಿಧಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಆರ್., 596 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೂ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿನಿ ಎಸ್.ಎನ್. ಲಕ್ಷ್ಮಿ 593 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ವಿದ್ಯಾರ್ಥಿ ಎಚ್.ಎನ್. ಭುವನ್, ವಿದ್ಯಾರ್ಥಿನಿ ಜಮುನಾ ಎಸ್. ಜೆ., 592 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದು, ಜಿಲ್ಲೆಯ ಮೂರು ಸ್ಥಾನಗಳನ್ನು ವಿದ್ಯಾನಿಧಿ ಕಾಲೇಜು ಪಡೆದುಕೊಂಡಿದೆ.
ವಿಜ್ಞಾನ ವಿಭಾಗ
ಹುಳಿಯಾರಿನ ವಿದ್ಯಾವಾರಿದಿ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಎಚ್.ಎಸ್. 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದು, ತುಮಕೂರಿನ ಶಾರದಾಂಬ ಕಾಲೇಜಿನ ವಿದ್ಯಾರ್ಥಿನಿ ಕೀರ್ತನಾ ಎಂ.ಎಸ್. ಹಾಗೂ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿನಿ ಶಿವಾನಿ ಎಸ್. ರೈ 593 ಅಂಕಗಳನ್ನು ಪಡೆದ ದ್ವಿತೀಯ ಸ್ಥಾನ ಪಡೆದಿದ್ದಾರೆ. ತಿಪಟೂರಿನ ಎಸ್.ಎಸ್. ಕಾಲೇಜಿನ ಹರ್ ಪ್ರೇತ್ ಏ ಹಾಗೂ ವಿದ್ಯಾನಿಧಿ ಕಾಲೇಜಿನ ನಿತೀಶ್ ಕೆ.ಪಿ., 591 ಅಂಕಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಕಾರ್ಯವೈಖರಿಯಿಂದ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ ತಿಳಿಸಿದ್ದಾರೆ.
ಜಿಲ್ಲಾ ಉಪನಿರ್ದೇಶಕರ ಶಿಸ್ತುಬದ್ಧ ಆಡಳಿತ, ಶೈಕ್ಷಣಿಕ ಚಟುವಟಿಕೆ, ಜಿಲ್ಲೆಯ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಶ್ರಮದಿಂದ ಜಿಲ್ಲೆಗೆ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು ಎಂದು ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್. ಮಹಾಲಿಂಗೇಶ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | 2nd PUC Results 2025: ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ರಾಜ್ಯದ ಟಾಪರ್ಸ್ ಇವರೇ ನೋಡಿ
ವಾಣಿಜ್ಯ ವಿಭಾಗ: ವಿದ್ಯಾನಿಧಿ ಕಾಲೇಜಿನ ಶ್ರೀಲಕ್ಷ್ಮಿ ರಾಜ್ಯಕ್ಕೆ 4ನೇ ಸ್ಥಾನ
ತುಮಕೂರು: ನಗರದ ವಿದ್ಯಾನಿಧಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆರ್. ಶ್ರೀಲಕ್ಷ್ಮಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 596 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ.
ಅಕ್ಕಿ ವ್ಯಾಪಾರಿ ರಾಜು ಹಾಗೂ ಪ್ರಭಾವತಿ ದಂಪತಿಗಳ ಪುತ್ರಿ ಶ್ರೀಲಕ್ಷ್ಮಿ ವಾಣಿಜ್ಯ ವಿಭಾಗದಲ್ಲಿ 596 ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾನಿಧಿ ಹಾಗೂ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್ ವಿದ್ಯಾರ್ಥಿನಿ ಶ್ರೀಲಕ್ಷ್ಮಿಗೆ ಪುಷ್ಪಗುಚ್ಛ ನೀಡಿ ಸಿಹಿ ತಿನಿಸುವ ಮೂಲಕ ಅಭಿನಂದಿಸಿದರು.

ನಂತರ ಮಾತನಾಡಿದ ವಿದ್ಯಾನಿಧಿ ಹಾಗೂ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶ್ರೀಲಕ್ಷ್ಮಿ 596 ಅಂಕ ಪಡೆದು ರಾಜ್ಯಕ್ಕೆ 4 ಸ್ಥಾನ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಒತ್ತು ನೀಡಿ ವ್ಯಾಸಂಗ ಮಾಡಿದ್ದಾರೆ. ಹಾಗೆಯೇ ಉಳಿದ ವಿಭಾಗಗಳ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದಾರೆ ಎಂದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿಗೆ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರಸ್ವಾಮಿ, ಉಪನ್ಯಾಸಕರ ವೃಂದ ಹಾಗೂ ಆಡಳಿತ ಮಂಡಳಿ ಶುಭ ಕೋರಿದರು.
ರ್‍ಯಾಂಕ್ ಪಡೆದ ವಿದ್ಯಾರ್ಥಿನಿಗೆ ಸನ್ಮಾನ
ತಿಪಟೂರು: ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮಿ ಸಿ.ಕೆ. ವಿಜ್ಞಾನ ವಿಭಾಗದಲ್ಲಿ 600/590 ಅಂಕ ಪಡೆದು ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ಪಡೆದಿದ್ದಾರೆ.

ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿನಿ ಲಕ್ಷ್ಮಿ ಅವರನ್ನು ಸನ್ಮಾನಿಸಿ, ಶುಭ ಹಾರೈಸಿದರು. ಬಳಿಕ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಮಾತನಾಡಿದರು.
ವಿಜ್ಞಾನ ವಿಭಾಗ: ಆದಿತ್ಯ ಜಿಲ್ಲೆಗೆ ಪ್ರಥಮ
ಚಿ.ನಾ. ಹಳ್ಳಿ: ತಾಲೂಕಿನ ಹುಳಿಯಾರು ವಿದ್ಯಾವಾರಿದಿ ಪಿಯು ಕಾಲೇಜಿನ ವಿದ್ಯಾರ್ಥಿ ಎಚ್.ಎಸ್. ಆದಿತ್ಯ 594 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಶಾಲೆಗೆ ಹಾಗೂ ಊರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಸಂಸ್ಥೆ ಕಾರ್ಯದರ್ಶಿ ಕವಿತಾ ಕಿರಣ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ರಂಗನಾಥ್, ವಿದ್ಯಾ ಸಂಸ್ಥೆಯ ಅಮಿತ್ ಇದ್ದರು.
ಈ ಸುದ್ದಿಯನ್ನೂ ಓದಿ | 2nd PUC Results 2025: ದ್ವಿತೀಯ ಪಿಯುಸಿ ಫಲಿತಾಂಶ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?