ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸುತ್ತಿಲ್ಲ; ನಟ ದರ್ಶನ್‌ ಆರೋಪ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಇದೀಗ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಸಿಸಿಎಚ್-57ನೇ ಕೋರ್ಟ್​ನಲ್ಲಿ ನಡೆದ ವಿಚಾರಣೆಗೆ ಹಾಜರಾದ ಅವರು ಕೋರ್ಟ್‌ನ ಯಾವ ಆದೇಶವನ್ನೂ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದರು.

ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸುತ್ತಿಲ್ಲ; ದರ್ಶನ್‌ ಹೀಗೆ ಹೇಳಿದ್ಯಾಕೆ?

-

Ramesh B Ramesh B Sep 25, 2025 8:30 PM

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ (Actor Darshan) ವಾಕಿಂಗ್‌ ಮಾಡುವ ಜಾಗಕ್ಕೆ ಸರಿಯಾಗಿ ಸೂರ್ಯ ಬೆಳಕು ಬರುತ್ತಿಲ್ಲ ಎಂದು ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡರು. ಸದ್ಯ ದರ್ಶನ್‌, ಪವಿತ್ರಾ ಗೌಡ (Pavithra Gowda) ಸೇರಿ ಹಲವು ಪ್ರಮುಖ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಗುರುವಾರ (ಸೆಪ್ಟೆಂಬರ್ 25) ಸಿಸಿಎಚ್-57ನೇ ಕೋರ್ಟ್​ನಲ್ಲಿ ಇವರ ವಿಚಾರಣೆ ನಡೆಯಿತು. ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೊ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾದರು. ಈ ವೇಳೆ ಜಡ್ಜ್ ಎದುರು ದರ್ಶನ್‌ ಪರ ವಕೀಲರು ಕೋರ್ಟ್‌ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ದೂರಿದರು.

ದರ್ಶನ್ ಪರ ವಕೀಲ ಸುನೀಲ್ ವಾದ ಮಂಡಿಸಿ, ‘ʼದರ್ಶನ್ ಅವರನ್ನು ಇನ್ನೂ ಕ್ವಾರಂಟೈನ್​​ನಲ್ಲಿ ಇಟ್ಟಿದ್ದಾರೆ. ಜೈಲಿನ ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಜೈಲಿನಲ್ಲಿರುವ ಆರೋಪಿಗಳಿಗೆ ಕೆಲವು ಸಮಸ್ಯೆಗಳಿವೆʼ’ ಎಂದು ತಿಳಿಸಿದರು. ಕ್ವಾರಂಟೈನ್ ಸೆಲ್​​ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್ ಮಾಡುವಂತೆ ದರ್ಶನ್‌ ಸೇರಿದಂತೆ ಇತರ ಆರೋಪಿಗಳ ಪರವಾಗಿಯೂ ವಕೀಲರು ಮನವಿ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ: Actor Darshan: ಹಾಸಿಗೆ, ದಿಂಬು ನೀಡಿಲ್ಲ; ಕೋರ್ಟ್‌ಗೆ ದರ್ಶನ್‌ ಪರ ವಕೀಲರಿಂದ ಮತ್ತೆ ಅರ್ಜಿ

ಜಡ್ಜ್ ಪ್ರಶ್ನೆಗೆ ಉತ್ತರಿಸಿದ ದರ್ಶನ್‌, ʼʼಕೋರ್ಟ್‌ನ ಯಾವ ಆದೇಶವನ್ನೂ ಪಾಲಿಸುತ್ತಿಲ್ಲ. 25/3 ಅಡಿ ಮಾತ್ರ ಓಡಾಡಲು ಅವಕಾಶ ಕೊಟ್ಟಿದ್ದಾರೆ. ಅಲ್ಲಿ ವಾಕಿಂಗ್ ಮಾಡಲು ಸೂರ್ಯನ ಬೆಳಕು ಕೂಡ ಬರುವುದಿಲ್ಲʼ’ ಎಂದರು.

ಜೈಲು ಅಧಿಕಾರಿಗಳ ವಿರುದ್ದ ದರ್ಶನ್ ಪರ ವಕೀಲರು ಗಂಭೀರ ಆರೋಪ ಮಾಡಿದರು. ‘ʼ20 ಬಾರಿ ಕೋರ್ಟ್ ಆರ್ಡರ್ ಕೇಳುತ್ತಾರೆ. ಗುಂಡಾ ರಾಜ್ಯವೇ ಇದು? ಕೋರ್ಟ್ ಆರ್ಡರ್​ಗೂ ಮಾನ್ಯತೆ ನೀಡುತ್ತಿಲ್ಲ’ʼ ಎಂದು ಸುನೀಲ್ ವಾದಿಸಿದರು. ಜೈಲಿನ ಸೂಪರಿಂಟೆಂಡೆಂಟ್ ಹಾಜರಾಗುವಂತೆ ಸೂಚಿಸಿದ ನ್ಯಾಯಾಲಯ ಅಕ್ಟೋಬರ್ 9ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರಕ್ಕೆ ಕೋರ್ಟ್‌ ನಕಾರ

ಕೆಲವು ದಿನಗಳ ಹಿಂದೆ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಎಚ್‌ ಕೋರ್ಟ್‌ ತಳ್ಳಿ ಹಾಕಿತ್ತು. ಹೀಗಾಗಿ ದರ್ಶನ್‌ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರುವಂತಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇತ್ತೀಚೆಗೆ ನ್ಯಾಯಾಲಯದಲ್ಲಿ ನಡೆದಿತ್ತು.

ವಿಚಾರಣೆ ನಡೆಸಿದಂತ ಕೋರ್ಟ್, ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸಕಾರಣಗಳಿಲ್ಲ ಎಂದು ಹೇಳಿ, ನಟನ ಸ್ಥಳಾಂತರಕ್ಕೆ ನಿರಾಕರಿಸಿತ್ತು. ಇನ್ನು ನಟನಿಗೆ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಕೋರ್ಟ್‌ ಅನುಮತಿ ನೀಡಿತ್ತು. ಕೈದಿಯ ಹಕ್ಕುಗಳನ್ನು ಗೌರವಿಸಲು ಸೂಚಿಸಿರುವ ಕೋರ್ಟ್‌, ಜೈಲಿನಲ್ಲಿ ಓಡಾಡಲು ಕೂಡ ಅವಕಾಶ ಒದಗಿಸಿತ್ತು. ಜೈಲು ಕೈಪಿಡಿಯಂತೆ ವಾಕ್‌ ಮಾಡಲು ದಾಸನಿಗೆ ಪರ್ಮಿಷನ್‌ ಸಿಕ್ಕಿತ್ತು. ಹಾಗೆಯೇ ಜೈಲಿನಲ್ಲಿ ಸ್ವಂತ ಹಣದಲ್ಲಿ ತಿಂಡಿ ಖರೀದಿಸಲು ಕೂಡ ಅನುಮತಿ ನೀಡಲಾಗಿತ್ತು.