ಬಾಗಲಕೋಟೆ, ಏ.16: ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆಗೆ (Self harming) ಮಾಡಿಕೊಂಡಿರುವ ಘಟನೆ ಬಾಗಲಕೋಟೆ ನಗರದ (Bagalakote) ಸೆಕ್ಟರ್ ನಂಬರ್ 48ರ ಮನೆಯಲ್ಲಿ ನಡೆದಿದೆ. ಟೈರ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ತಿಪ್ಪಣ್ಣವರ್ (19) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನದಾಫ್ ಎಂಬಾತನ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಯುವತಿ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಇನ್ನೊಂದಡೆ ಇದೊಂದು ಪಕ್ಕಾ ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಟಯರ್ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ಮತ್ತು ಟಾಂಟಾಂ ಚಾಲಕ ಡೊಂಗ್ರಿಸಾಬ್ ನದಾಫ್ ಮಧ್ಯೆ ಕಳೆದ 2 ವರ್ಷಗಳಿಂದ ಪ್ರೀತಿಯಿತ್ತು. ಆದರೆ ಏಪ್ರಿಲ್ 15ರಂದು ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಶರಣಾಗಿರುವ ಭೂಮಿಕಾ ಹಿಜಾಬ್‌ನಲ್ಲಿ ಕಾಣಿಸಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಎಸ್‌ಪಿ ಸಿದ್ಧಾರ್ಥ್ ಗೋಯಲ್ ಭೇಟಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬಾಗಲಕೋಟೆ ನವನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನದಾಫ್‌ನಿಂದ ಕಿರುಕುಳ ದೂರು
ಆತ್ಮಹತ್ಯೆಗೆ ಶರಣಾಗಿರುವ ಭೂಮಿಕಾ ಅತ್ತೆ ಲಕ್ಷ್ಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಆತ ನಿತ್ಯ ಟಂಟಂ ತಂದು ನಮ್ಮ ಮನೆ ಮುಂದೆ ನಿಲ್ಲಿಸುತ್ತಿದ್ದ. ಆಕೆಗೆ ಕರೆ ಮಾಡಿ, ಮೆಸ್ಸೇಜ್ ಮಾಡಿ ಮಾತನಾಡುವಂತೆ ಪೀಡಿಸುತ್ತಿದ್ದ. ತನ್ನೊಂದಿಗೆ ಓಡಾಡಲು ಬರುವಂತೆ ಹೇಳುತ್ತಿದ್ದ. ರಾತ್ರಿ 12 ರಿಂದ 1 ಗಂಟೆಯವರೆಗೂ ಫೋನಿನಲ್ಲೇ ಮಾತನಾಡುತ್ತಿದ್ದರು. ಮದುವೆ ಬೇಡ ಆದರೆ ತನ್ನೊಂದಿಗೆ ಇರು ಅಂತ ಕಿರುಕುಳ ಕೊಡುತ್ತಿದ್ದ. ಅವನ ಕಿರುಕುಳದಿಂದಲೇ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣ ಸಂಬಂಧ ಹಿಂದೂ ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ. ನವನಗರದಲ್ಲಿ ಮುಸ್ಲಿಂ ಕಿಡಿಗೇಡಿಗಳು ಇದನ್ನೇ ದಂಧೆ ಮಾಡಿಕೊಂಡಿದ್ದಾರೆ. 46 ಗ್ಯಾಂಗ್ ಅಂತ ಮಾಡಿಕೊಂಡು ಗದ್ದಲ ಗಲಾಟೆ ಮಾಡುತ್ತಾರೆ. ಕಳೆದ ನಾಲ್ಕೈದು ವರ್ಷದಿಂದ ಯುವತಿ ಜೊತೆ ಡೋಂಗ್ರಿಸಾಬ್ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ರಸ್ತೆಯ ಮಧ್ಯೆ ಅಡ್ಡ ಹಾಕಿ ಕಾಡಿಸುತ್ತಿದ್ದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಎಂದು ಪ್ರಚೋದನೆ ಮಾಡುತ್ತಿದ್ದನಂತೆ. ಅಲ್ಲದೇ ರಂಜಾನ್ ವೇಳೆ ಹಿಜಾಬ್ ಬುರ್ಖಾ ಹಾಕಿಸಿ ಕರೆದುಕೊಂಡು ಓಡಾಡುತ್ತಿದ್ದ. ಇದನ್ನೆಲ್ಲಾ ನೋಡಿದ್ರೆ ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ ಎನಿಸುತ್ತೆ. ಯುವತಿ ಡೆತ್ ನೋಟು ಬರೆದಿದ್ದಳು ಅನ್ನೋ ಮಾಹಿತಿ ಇದೆ. ಪೊಲೀಸರು ಅದನ್ನು ತೆಗೆದಿರಿಸಿದ್ದಾರೆ ಎನ್ನುವ ಸಂಶಯ ಇದೆ. ಘಟನೆ ಬಗ್ಗೆ ಏಪ್ರಿಲ್ 16ರಂದು ಹಿಂದೂ ಸಂಘಟನೆಗಳೆಲ್ಲಾ ಸೇರಿ ಮುಂದಿನ ಹೋರಾಟ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.