Santosh Lad: ಅಪಘಾತದ ಗಾಯಾಳುವನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದ ಸಚಿವ ಸಂತೋಷ್ ಲಾಡ್
Santosh Lad: ಟ್ರ್ಯಾಕ್ಟರ್ ಹಿಂಬದಿ ಹೋಗುತ್ತಿದ್ದ ಬೈಕ್ ಸವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಜಮಖಂಡಿಯಿಂದ ಅದೇ ಮಾರ್ಗವಾಗಿ ತೆರಳುತ್ತಿದ್ದ ಸಚಿವ ಸಂತೋಷ ಲಾಡ್ ಅವರು, ಬೈಕ್ ಸವಾರ ಬಿದ್ದಿರುವುದನ್ನು ಕಂಡು ತಮ್ಮ ಕಾರಲ್ಲೇ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.


ಬಾಗಲಕೋಟೆ, ಫೆಬ್ರವರಿ 07: ಬೈಕ್ ಅಪಘಾತದಲ್ಲಿ ಗಾಯಗೊಂಡ ಸವಾರನನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ನಡೆದ ಅಪಘಾತದ ಗಾಯಾಳುವನ್ನು ಸಚಿವರು, ಕಾರಿನಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಟ್ರ್ಯಾಕ್ಟರ್ ಹಿಂಬದಿ ಹೊರಟಿದ್ದ ಬೈಕ್ ಸವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಜಮಖಂಡಿಯಿಂದ ಅದೇ ಮಾರ್ಗವಾಗಿ ಬರುತ್ತಿದ್ದ ಸಚಿವ ಸಂತೋಷ ಲಾಡ್ ಅವರು, ಬೈಕ್ ಸವಾರ ಬಿದ್ದಿರೋದನ್ನು ಕಂಡು ತಮ್ಮ ಕಾರಲ್ಲೇ ಗಾಯಾಳು ಬೈಕ್ ಸವಾರನನ್ನು ಲೋಕಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದರು.
ಗಾಯಾಳು ಬೈಕ್ ಸವಾರ ಸತೀಶ್ ವೆಂಕಪ್ಪ ಮಾದರ ಅವರಿಗೆ ಮೊಳಕಾಲಿಗೆ ತೀವ್ರ ಗಾಯವಾಗಿ ನರಳಾಡುತ್ತಿದ್ದರು. ಹೀಗಾಗಿ ಸಚಿವರು ಲೋಕಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕಳುಹಿಸಲು ಕ್ರಮ ಕೈಗೊಂಡರು.
ಲೋಕಾಪುರ ಆಸ್ಪತ್ರೆ ಸಿಬ್ಬಂದಿ ಗಾಯಾಳುವಿಗೆ ತುರ್ತು ಚಿಕಿತ್ಸೆಗೆ ಕೊಡಿಸುವಲ್ಲಿ ಮುತುವರ್ಜಿ ವಹಿಸಿದ್ದನ್ನು ಗಮನಿಸಿದ ಸಚಿವ ಲಾಡ್ ಅವರು, ʼನಿಮ್ಮ ಸೇವೆಗೆ ಸೆಲ್ಯೂಟ್ʼ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಗಾಯಾಳುವಿಗೆ ಅಗತ್ಯ ಚಿಕಿತ್ಸೆ ಕೊಡಿಸಿದ್ದಲ್ಲದೇ ಧೈರ್ಯ ಹೇಳಿದ ಸಚಿವ ಲಾಡ್ ಅವರು, ಇನ್ನು ಮುಂದೆ ಎಚ್ಚರಿಕೆ ವಹಿಸಬೇಕು ಎಂದು ಬುದ್ಧಿ ಹೇಳಿದರು. ಸಚಿವರ ಈ ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಜನರು ಹಾಗೂ ಗಾಯಾಳುವಿನ ಸಂಬಂಧಿಕರು ಮೆಚ್ಚಗೆ ವ್ಯಕ್ತಪಡಿಸಿ, ಕೃತಜ್ಞತೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Microfinance Torture: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಸಮ್ಮತಿ!
ಉಜ್ಜಯಿನಿಯಿಂದ ಬರುವಾಗ ಭೀಕರ ಅಪಘಾತ; ಬೆಳಗಾವಿಯ ನಾಲ್ವರು ಸೇರಿ 6 ಮಂದಿ ಸಾವು

ಬೆಳಗಾವಿ: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಿಂದ ಹಿಂದಿರುಗುವಾಗ ಭೀಕರ ಅಪಘಾತ (Road Accident) ಸಂಭವಿಸಿ, ಬೆಳಗಾವಿ ಮೂಲದ ನಾಲ್ವರು ಸೇರಿ 6 ಮಂದಿ ಮೃತಪಟ್ಟು, 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಬೆಳಗಾವಿ ಮೂಲದ ನಾಲ್ವರು ಸೇರಿ ಒಟ್ಟು 6 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಟಿಟಿ ವಾಹನ ಮೊದಲಿಗೆ ಬೈಕ್‌ಗೆ ಡಿಕ್ಕಿ ಹೊಡೆದು, ನಂತರ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮನ್ಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಬಳಿ ಅಪಘಾತ ನಡೆದಿದೆ. ಉಜ್ಜಯಿನಿಯಿಂದ ಟಿಟಿ ವಾಹನದಲ್ಲಿ 19 ಮಂದಿ ವಾಪಸಾಗುತ್ತಿದ್ದರು. ಶುಕ್ರವಾರ ಬೆಳಗಿನ ಜಾವ ಅಪಘಾತ ನಡೆದಿದ್ದು, ಮೊದಲಿಗೆ ಬೈಕ್‌ಗೆ ಟಿಟಿ ಡಿಕ್ಕಿಯಾಗಿ ನಂತರ ಲಾರಿಗೆ ಗುದ್ದಿದೆ. ಈ ವೇಳೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಪೈಕಿ ಟಿಟಿಯಲ್ಲಿದ್ದ ಇಬ್ಬರನ್ನು ಬೆಳಗಾವಿಯ ಶಹಾಪುರ ನಿವಾಸಿ ಡ್ರೈವರ್ ಸಾಗರ್(55), ಗಣೇಶಪುರ ನಿವಾಸಿ ನಿತಿ ಪಾಟೀಲ್(50) ಎಂದು ಗುರುತಿಸಲಾಗಿದೆ. ಸವಿತಾ (40), ಸುಭಾಷ್ ರೆನ್ (35), ಶೀತಲ್ ರಾಮಚಂದ್ರ (27), ತೀರತ್ (48), ಶ್ರುತಿ (32), ಭಾವ್ ಸಿಂಗ್ (36), ಶಿವ ಸಿಂಗ್ (31), ಬಬಿತಾ (56), ರಾಜು (63), ಮಾಲ್ವಾ (60), ಸುನೀತಾ (50), ಪ್ರಶಾಂತ್ (52), ಶಂಕರ್ (60), ಲತಾ (62), ಬಂಗಲ್ ವಾಡಿಯಪ್ಪ (55) ಗಾಯಾಳುಗಳಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Illegal Immigrants: ದಟ್ಟ ಅರಣ್ಯದಲ್ಲಿ ಅಡಗಿ ಕುಳಿತು ಅಮೆರಿಕಗೆ ಎಂಟ್ರಿ ಕೊಟ್ಟಿದ್ದ ಅಕ್ರಮ ವಲಸಿಗರು! ಹಳೆಯ ವಿಡಿಯೊ ವೈರಲ್
ಗಾಯಾಳುಗಳಿಗೆ ಇಂದೋರ್‌ನ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನ್ಪುರ ಪ್ರದೇಶದ ಭೇರುಘಾಟ್‌ನಲ್ಲಿರುವ ದೇವಾಲಯದ ಬಳಿ ಅಪಘಾತ ಸಂಭವಿಸಿದೆ. ತಡರಾತ್ರಿ ಟ್ರಾವೆಲರ್ ಅತಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆಗ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿ ಮುಂದೆ ನಿಂತಿದ್ದ ಟ್ಯಾಂಕರ್‌ಗೆ ಗುದ್ದಿದೆ. ಟ್ರಾವೆಲರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಳಗಾವಿ ಮೂಲದವರು. ಎಲ್ಲರೂ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.