ಸವಾಲು, ಗೊಂದಲ ಮೀರಿ ಬಿಜೆಪಿ ಅಧಿಕಾರ ಹಿಡಿಯಲಿದೆ! ಬಳ್ಳಾರಿ ಚಲೋ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ
B.Y. Vijayendra: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಮಧ್ಯೆ ಅವರು 'ವಿಶ್ವವಾಣಿ ಟಿವಿ'ಯ ವಿಶೇಷ ಸಂದರ್ಶನದಲ್ಲಿ ರಾಘವ ಶರ್ಮ ಅವರೊಂದಿಗೆ ಮಾತುಕತೆ ನಡೆಸಿ ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ವಿವರಿಸಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.
ಬಿ.ವೈ. ವಿಜಯೇಂದ್ರ ಮತ್ತು ರಾಘವ ಶರ್ಮ -
- ವಿಶೇಷ ಸಂದರ್ಶನ: ರಾಘವ ಶರ್ಮ
ತೋರಣಗಲ್(ಬಳ್ಳಾರಿ): ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಆರೋಪಗಳು, ರೈತರ ಸಮಸ್ಯೆ, ಬರ ಪರಿಸ್ಥಿತಿ, ಅಭಿವೃದ್ಧಿ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಈ ಪಾದಯಾತ್ರೆ ನಡೆಸುತ್ತಿದೆ.
ಪಾದಯಾತ್ರೆಗೆ ಸಿಗುತ್ತಿರುವ ಜನಸ್ಪಂದನೆ, ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ, ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳು, ಜೆಡಿಎಸ್ ದೋಸ್ತಿ, ಡಿ.ಕೆ. ಶಿವಕುಮಾರ್ ಅವರ ಅಭಿವೃದ್ಧಿ ಮಾದರಿ ಸೇರಿದಂತೆ ಹಲವು ವಿಚಾರಗಳ ಕುರಿತು ಬಿ.ವೈ. ವಿಜಯೇಂದ್ರ 'ವಿಶ್ವವಾಣಿ ಟಿವಿ' ಜತೆ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಪ್ರಮುಖ ಅಂಶಗಳು ಇಲ್ಲಿವೆ.
ವಿಶ್ವವಾಣಿ ಟಿವಿ: ಏಳು ದಿನಗಳಿಂದ ಪಾದಯಾತ್ರೆ ನಡೆಯುತ್ತಿದೆ. ಉರಿ ಬಿಸಿಲಿನ ಅನುಭವ ಹೇಗಿದೆ?
ಬಿ.ವೈ. ವಿಜಯೇಂದ್ರ: ಪಾದಯಾತ್ರೆ ಆರಂಭಿಸಿ ಎಂಟನೇ ದಿನಕ್ಕೆ ಕಾಲಿಟ್ಟಿದ್ದೇವೆ. ತೀವ್ರ ಬಿಸಿಲಿನ ನಡುವೆಯೂ ಜನರಿಂದ ಮತ್ತು ಕಾರ್ಯಕರ್ತರಿಂದ ಅಪಾರ ಬೆಂಬಲ ಸಿಗುತ್ತಿದೆ. ಜನರ ಉತ್ಸಾಹ ನೋಡಿದಾಗ ಆಯಾಸ ಎನ್ನುವುದು ಕಾಣಿಸುವುದಿಲ್ಲ. ಬದಲಿಗೆ ನಮ್ಮಲ್ಲಿನ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಸಾಮಾನ್ಯ ಜನರಿಂದ ಈ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ರಸ್ತೆಯುದ್ದಕ್ಕೂ ಗ್ರಾಮಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ತಾಯಂದಿರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಪಾದಯಾತ್ರೆ ವೀಕ್ಷಿಸಲು ಬರುತ್ತಿದ್ದಾರೆ. ತಮ್ಮ ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಬಿ.ವೈ. ವಿಜಯೇಂದ್ರ ಜತೆಗಿನ ಸಂದರ್ಶನ:
ವಿಶ್ವವಾಣಿ ಟಿವಿ: ಜನರ, ಕಾರ್ಯಕರ್ತರ ಈ ಸ್ಪಂದನೆಗೆ ಪ್ರಮುಖ ಕಾರಣವೇನು?
ಬಿ.ವೈ. ವಿಜಯೇಂದ್ರ: ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನ ಇದೆ. ಕಾಂಗ್ರೆಸ್ ಸರ್ಕಾರ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ಜನರಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ಮೂಡಿದೆ. ಪಾದಯಾತ್ರೆ ಕೇವಲ ಪ್ರಚಾರಕ್ಕಾಗಿ ನಡೆಯುತ್ತಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನಸ್ಪಂದನೆ ಸಿಗುತ್ತಿರಲಿಲ್ಲ. ಇದೀಗ ಇದು ಜನಾಂದೋಲನವಾಗಿ ಪರಿವರ್ತನೆಯಾಗುತ್ತಿದೆ. ಸಮಾಜದ ವಿವಿಧ ವರ್ಗಗಳ ಜನರು ಸರ್ಕಾರದ ಕಾರ್ಯವೈಖರಿ ಬಗ್ಗೆ ಬೇಸರಗೊಂಡಿರುವುದು ನಮಗೆ ಕಾಣಿಸುತ್ತಿದೆ.
ವಿಶ್ವವಾಣಿ ಟಿವಿ: ಬಿ. ನಾಗೇಂದ್ರ ಅವರ ರಾಜೀನಾಮೆಗೂ ನಿಮ್ಮ ಪಾದಯಾತ್ರೆಗೂ ಸಂಬಂಧವಿದೆಯೇ?
ಬಿ.ವೈ. ವಿಜಯೇಂದ್ರ: ಅಧಿವೇಶನ ಮುಗಿದ ನಂತರ ಬಿಜೆಪಿ ಮನೆ ಸೇರಿಕೊಂಡು ಬಿಡುತ್ತದೆ, ನಾಗೇಂದ್ರ ವಿಚಾರವೂ ಮುಗಿದುಹೋಗುತ್ತದೆ ಎಂದು ಮುಖ್ಯಮಂತ್ರಿ ಹಾಗೂ ಸರ್ಕಾರ ಭಾವಿಸಿತ್ತು. ಆದರೆ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ನಡೆಸಿದವು. ವಿರೋಧ ಪಕ್ಷದ ನಾಯಕರು ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದ ನಂತರ ಸರ್ಕಾರ ಅಧಿವೇಶನವನ್ನು ಮೊಟಕುಗೊಳಿಸುವ ಪರಿಸ್ಥಿತಿ ಎದುರಾಯಿತು. ಅದರ ನಂತರ ಬಿಜೆಪಿ ಪಾದಯಾತ್ರೆ ಘೋಷಣೆ ಮಾಡಿತು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ನಾಗೇಂದ್ರ ಅವರ ರಾಜೀನಾಮೆ ಸ್ವೀಕರಿಸುವ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂಬುದು ನನ್ನ ಅಭಿಪ್ರಾಯ.
ವಿಶ್ವವಾಣಿ ಟಿವಿ: ಪಾದಯಾತ್ರೆಗೆ ಬಿಜೆಪಿ ಹೈಕಮಾಂಡ್‌ನ ಅನುಮತಿ ಪಡೆದಿದ್ದೀರಾ?
ಬಿ.ವೈ. ವಿಜಯೇಂದ್ರ: ಪಾದಯಾತ್ರೆ ಕೈಗೊಳ್ಳುವ ಮುನ್ನ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ರಾಷ್ಟ್ರೀಯ ನಾಯಕರೊಂದಿಗೂ ಚರ್ಚೆ ನಡೆಸಿದ್ದೇನೆ. ರೈತರ ಸಮಸ್ಯೆ, ನಿರುದ್ಯೋಗ, ರಾಜ್ಯದ ಜ್ವಲಂತ ಸಮಸ್ಯೆಗಳು ಮತ್ತು ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವ ಬಗ್ಗೆ ನಾಯಕರಿಗೆ ತಿಳಿಸಿದ್ದೆ. ಈ ಹೋರಾಟ ಅಗತ್ಯವಿದೆ ಎಂದು ರಾಷ್ಟ್ರೀಯ ನಾಯಕರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಹೋರಾಟ ಮುಂದುವರಿಸಲು ಬೆಂಬಲ ನೀಡಿದ್ದಾರೆ.
ವಿಶ್ವವಾಣಿ ಟಿವಿ: ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಹಿಂದಿನ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡಲಿಲ್ಲ. ಈ ಪಾದಯಾತ್ರೆಯಿಂದ ಪಕ್ಷಕ್ಕೆ ರಾಜಕೀಯವಾಗಿ ಲಾಭವಾಗುತ್ತದೆಯೇ?
ಬಿ.ವೈ. ವಿಜಯೇಂದ್ರ: ಖಂಡಿತವಾಗಿಯೂ ರಾಜಕೀಯವಾಗಿ ಲಾಭವಾಗುತ್ತದೆ. ಆದರೆ ಬಿಜೆಪಿ ಯಾವುದೇ ಒಂದು ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಸರ್ವ ಜನಾಂಗದ ವಿಶ್ವಾಸ ಗಳಿಸಬೇಕು. ರೈತರು, ಯುವಕರು, ಬಡವರು, ಕೂಲಿ ಕಾರ್ಮಿಕರು ಮತ್ತು ಶೋಷಿತ ಸಮುದಾಯಗಳು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಬಿಜೆಪಿ ನಮ್ಮ ಪರವಾಗಿ ಹೋರಾಟ ಮಾಡುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಬೇಕು. ಆಗ ಮಾತ್ರ ಜನರು ಪಕ್ಷಕ್ಕೆ ಸ್ಪಂದಿಸುತ್ತಾರೆ.
ವಿಶ್ವವಾಣಿ ಟಿವಿ: ಬಿಜೆಪಿ ವಿರುದ್ಧದ ಪ್ರಮುಖ ಆರೋಪವೆಂದರೆ ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿವೆ. ಪಾದಯಾತ್ರೆ ಮೂಲಕ ಒಗ್ಗಟ್ಟಿನ ಸಂದೇಶ ನೀಡಲು ಸಾಧ್ಯವಾಗಿದೆಯೇ?
ಬಿ.ವೈ. ವಿಜಯೇಂದ್ರ: ಪಕ್ಷದಲ್ಲಿ ಸವಾಲುಗಳು ಮತ್ತು ಗೊಂದಲಗಳು ಇರುವುದು ಹೊಸದೇನಲ್ಲ. ಯುವಕರಿಗೆ ಅವಕಾಶ ಸಿಕ್ಕಾಗ ಇಂತಹ ಸವಾಲುಗಳು ಸಹಜ. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗಲೂ, ಉಪಮುಖ್ಯಮಂತ್ರಿಯಾಗಿದ್ದಾಗಲೂ, ಮುಖ್ಯಮಂತ್ರಿಯಾಗಿದ್ದಾಗಲೂ ಪಕ್ಷ ಹಲವು ಬಿಕ್ಕಟ್ಟುಗಳನ್ನು ಎದುರಿಸಿತ್ತು. ನಾನು ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಹೊಂದಿದ್ದೇನೆ. ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಕೆಲವು ವಿಚಾರಗಳು ಸರಿಯಾಗಲು ಸಮಯ ಬೇಕಾಗಬಹುದು. ಆದರೆ ಎಲ್ಲವೂ ಖಂಡಿತವಾಗಿ ಸರಿಯಾಗಲಿದೆ.
ವಿಶ್ವವಾಣಿ ಟಿವಿ: ಜೆ.ಪಿ. ನಡ್ಡಾ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆದಿತ್ತೇ?
ಬಿ.ವೈ. ವಿಜಯೇಂದ್ರ: ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ರಾಜ್ಯದ ನಾಯಕರ ಸಹಕಾರ ಹೇಗಿದೆ ಎಂದು ಪ್ರಶ್ನಿಸಿದ್ದರು. ನಾನು ಅಧ್ಯಕ್ಷನಾಗಿ ಪ್ರತಿಯೊಂದು ವಿಚಾರವನ್ನೂ ದೆಹಲಿಗೆ ತೆಗೆದುಕೊಂಡು ಹೋಗಿ ನಾಯಕರ ಬಗ್ಗೆ ದೂರು ನೀಡುವುದಕ್ಕಾಗಿ ಅಧ್ಯಕ್ಷನಾಗಿಲ್ಲ. ನಾನು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಹೊಂದಿದ್ದೇನೆ. ಪಕ್ಷದ ಸಂಘಟನೆ ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಸವಾಲುಗಳಿದ್ದರೂ ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂಬ ನಂಬಿಕೆ ನನ್ನದು.

ವಿಶ್ವವಾಣಿ ಟಿವಿ: ಜನಾರ್ದನ ರೆಡ್ಡಿ ಅವರಂತಹ ನಾಯಕರೇ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದು ವ್ಯಂಗ್ಯವಲ್ಲವೇ?
ಬಿ.ವೈ. ವಿಜಯೇಂದ್ರ: ಇದು ಕೇವಲ ಜನಾರ್ದನ ರೆಡ್ಡಿ ಅವರ ವಿಚಾರವಲ್ಲ. ನಮ್ಮ ಹೋರಾಟದಲ್ಲಿ ಪಕ್ಷದ ಹಲವು ಹಿರಿಯ ನಾಯಕರು ಭಾಗವಹಿಸಿದ್ದಾರೆ. ಯಾರೊಬ್ಬರ ವಿರುದ್ಧ ಆರೋಪಗಳಿವೆ ಎಂಬ ಕಾರಣಕ್ಕೆ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬಾರದು ಎನ್ನಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಅವರ ಮೇಲೂ ಹಲವು ಪ್ರಕರಣಗಳು ದಾಖಲಾಗಿದ್ದವು. ರಾಜಕೀಯ ಕಾರಣಗಳಿಂದ ಅವರ ವಿರುದ್ಧ ಆರೋಪಗಳನ್ನು ಮಾಡಲಾಗಿತ್ತು. ಆದರೆ ನ್ಯಾಯಾಲಯದ ವಿಚಾರಣೆಯ ಬಳಿಕ ಹಲವು ಆರೋಪಗಳಿಂದ ಅವರು ನಿರಪರಾಧಿ ಎಂದು ತೀರ್ಪು ಬಂದಿದೆ. ರಾಜಕೀಯದಲ್ಲಿ ಆರೋಪಗಳು ಬರುವುದು ಸಹಜ. ಆದರೆ ಆರೋಪಗಳ ನಡುವೆ ಎಚ್ಚರಿಕೆಯಿಂದ ಮುಂದುವರಿಯುವುದು ಅಗತ್ಯ.
ವಿಶ್ವವಾಣಿ ಟಿವಿ: ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಬಿಜೆಪಿ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸುತ್ತಿದೆ. ನಿಮ್ಮ ಬೇಡಿಕೆ ಏನು?
ಬಿ.ವೈ. ವಿಜಯೇಂದ್ರ: ಸರ್ಕಾರ ಸುಮಾರು 104 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಇನ್ನೂ ಹೆಚ್ಚಿನ ತಾಲೂಕುಗಳಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಯಾದಗಿರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೈತರು ಬೆಳೆ ಬಿತ್ತಿದ್ದರೂ ಬೆಳೆ ಕೈಗೆ ಬಂದಿಲ್ಲ. ಕೆಲವು ಕ್ಷೇತ್ರಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಬರದ ವಿಚಾರದಲ್ಲೂ ರಾಜಕೀಯ ಮಾಡಬಾರದು. ಎಷ್ಟು ತಾಲೂಕುಗಳು ನಿಜವಾಗಿಯೂ ಬರಪೀಡಿತವಾಗಿವೆ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಸೂಕ್ತ ಪರಿಹಾರ ಘೋಷಿಸಬೇಕು.
ವಿಶ್ವವಾಣಿ ಟಿವಿ: ಡಿ.ಕೆ. ಶಿವಕುಮಾರ್ ಅವರ ಅಭಿವೃದ್ಧಿ ಮಾದರಿಯನ್ನು ನೀವು ಹೇಗೆ ನೋಡುತ್ತೀರಿ?
ಬಿ.ವೈ. ವಿಜಯೇಂದ್ರ: ನಾನು ಡಿ.ಕೆ. ಶಿವಕುಮಾರ್ ಅವರ ಅಭಿವೃದ್ಧಿ ಮಾದರಿಯನ್ನು ವಿರೋಧಿಸುತ್ತೇನೆ. ದಕ್ಷಿಣ ಕನ್ನಡದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದಕ್ಕೆ ನನ್ನ ವಿರೋಧವಿಲ್ಲ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ದೊಡ್ಡ ಅವಕಾಶವಿದೆ. ಅದನ್ನು ಅಭಿವೃದ್ಧಿಪಡಿಸಬೇಕು. ಆದರೆ ಅಭಿವೃದ್ಧಿ ಯೋಜನೆಗಳ ಹಿಂದೆ ವೈಯಕ್ತಿಕ ಹಿತಾಸಕ್ತಿ ಇರಬಾರದು ಎಂಬುದು ನನ್ನ ಅಭಿಪ್ರಾಯ. ಅದೇ ರೀತಿ ಕನಕಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರದಲ್ಲೂ ಸೂಕ್ತ ಸ್ಥಳದ ಆಯ್ಕೆ ಮುಖ್ಯ. ತುಮಕೂರು–ಶಿರಾ ಭಾಗದಂತಹ ಪ್ರದೇಶಗಳನ್ನೂ ಪರಿಗಣಿಸಬಹುದು. ಅಭಿವೃದ್ಧಿ ಯೋಜನೆಗಳು ಸಾರ್ವಜನಿಕ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡಿರಬೇಕು.
ವಿಶ್ವವಾಣಿ ಟಿವಿ: ನಿಮ್ಮ ಆರೋಪದ ಪ್ರಕಾರ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಅಭಿವೃದ್ಧಿ ಮಾದರಿ ಅನುಸರಿಸುತ್ತಿದ್ದಾರೆಯೇ?
ಬಿ.ವೈ. ವಿಜಯೇಂದ್ರ: "ರಿಯಲ್ ಎಸ್ಟೇಟ್ ಮುಖ್ಯಮಂತ್ರಿ' ಎಂಬ ಮಾತು ಜನಸಾಮಾನ್ಯರಲ್ಲಿಯೂ ಕೇಳಿಬರುತ್ತಿದೆ ಎಂದು ನಾನು ಹೇಳಿದ್ದೇನೆ. ಮುಖ್ಯಮಂತ್ರಿಗಳು ತಮ್ಮ ಅಥವಾ ಕುಟುಂಬದವರು ಯಾವುದೇ ಭೂಮಿ ಖರೀದಿಸಿಲ್ಲ, ಸಾರ್ವಜನಿಕ ಹಿತಾಸಕ್ತಿಯಿಂದಲೇ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಬೇಕು. ಅಭಿವೃದ್ಧಿ ಯೋಜನೆಗಳು ಯಾವ ಪ್ರದೇಶದಲ್ಲಿ ಜಾರಿಯಾಗುತ್ತವೆ ಎಂಬುದರಿಂದ ಆ ಪ್ರದೇಶದ ಭೂಮಿಯ ಮೌಲ್ಯವೂ ಹೆಚ್ಚಾಗಬಹುದು. ಹೀಗಾಗಿ ಇಂತಹ ಯೋಜನೆಗಳಲ್ಲಿ ಪಾರದರ್ಶಕತೆ ಅತ್ಯಂತ ಮುಖ್ಯ.
ವಿಶ್ವವಾಣಿ ಟಿವಿ: ಬಿಡದಿ ವಿಚಾರದಲ್ಲಿ ಜೆಡಿಎಸ್ ಹೆಚ್ಚು ಆಕ್ರಮಣಕಾರಿಯಾಗಿ ಹೋರಾಡುತ್ತಿದೆ. ಬಿಜೆಪಿ ಅಷ್ಟೊಂದು ಆಕ್ರಮಣಕಾರಿಯಾಗಿಲ್ಲವೇ?
ಬಿ.ವೈ. ವಿಜಯೇಂದ್ರ: ಬಿಜೆಪಿಗೆ ಮತ್ತು ಜೆಡಿಎಸ್‌ಗೆ ಹೋರಾಟದ ವಿಚಾರದಲ್ಲಿ ಯಾವುದೇ ಸಂಘರ್ಷವಿಲ್ಲ. ಕೆಲವು ವಿಚಾರಗಳನ್ನು ಜೆಡಿಎಸ್ ಮೊದಲೇ ಕೈಗೆತ್ತಿಕೊಂಡಿರಬಹುದು. ಉದಾಹರಣೆಗೆ ಬಿಡದಿ ವಿಚಾರದಲ್ಲಿ ಅವರು ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದಾರೆ. ಬಿಜೆಪಿ ನಾಯಕರು ಕೂಡ ಅಲ್ಲಿಗೆ ತೆರಳಿ ಸತ್ಯಾಗ್ರಹ ಮತ್ತು ಧರಣಿಯಲ್ಲಿ ಭಾಗವಹಿಸಿದ್ದಾರೆ. ಸದನದೊಳಗೆ ಬಿಜೆಪಿ ಮತ್ತು ಜೆಡಿಎಸ್ ಹಲವು ವಿಚಾರಗಳಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿವೆ. ಆದರೆ ಕೆಲವು ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.
ವಿಶ್ವವಾಣಿ ಟಿವಿ: ಮಂಗಳೂರು ರೈಲ್ವೆ ವಿಭಾಗಕ್ಕೆ ಸಂಬಂಧಿಸಿದ ನಿರ್ಧಾರವನ್ನು ಬಿಜೆಪಿ ಇನ್ನಷ್ಟು ಆಕ್ರಮಣಕಾರಿಯಾಗಿ ಜನರ ಮುಂದಿಡಬೇಕಿತ್ತು ಎನ್ನುವ ಅಭಿಪ್ರಾಯವಿದೆಯಲ್ಲ...
ಬಿ.ವೈ. ವಿಜಯೇಂದ್ರ: ಮಂಗಳೂರಿಗೆ ಸಂಬಂಧಿಸಿದ ರೈಲ್ವೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಬೇಕು. ಇದು ಕೇವಲ ಮಂಗಳೂರಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ರೈಲ್ವೆ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಗೂ ಇದರಿಂದ ಪ್ರಯೋಜನವಾಗಬಹುದು. ಮಂಗಳೂರಿನ ಜನಪ್ರತಿನಿಧಿಗಳು ಮತ್ತು ಸಂಸದರು ನಡೆಸಿದ ಪ್ರಯತ್ನದಿಂದ ಉತ್ತಮ ನಿರ್ಧಾರ ಬಂದಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.
ವಿಶ್ವವಾಣಿ ಟಿವಿ: ಮೇಕೆದಾಟು, ಕೃಷ್ಣಾ ಮತ್ತು ಮಹದಾಯಿ ಜಲ ವಿವಾದಗಳಲ್ಲಿ ಕೇಂದ್ರದ ಮೇಲೆ ರಾಜ್ಯ ಬಿಜೆಪಿ ಒತ್ತಡ ಹೇರುವ ಅಗತ್ಯವಿಲ್ಲವೇ?
ಬಿ.ವೈ. ವಿಜಯೇಂದ್ರ: ಈ ಸಮಸ್ಯೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಂದ ನಂತರ ಆರಂಭವಾದವುಗಳಲ್ಲ. ಹಲವು ದಶಕಗಳಿಂದ ಇರುವ ಸಮಸ್ಯೆಗಳಿವು. 30–40 ವರ್ಷಗಳಿಂದ ಇರುವ ಎಲ್ಲ ಸಮಸ್ಯೆಗಳನ್ನು ಕೇವಲ ಹತ್ತು ವರ್ಷಗಳಲ್ಲಿ ಪರಿಹರಿಸುವುದು ಸುಲಭವಲ್ಲ. ಆದರೂ ಕೇಂದ್ರ ಸರ್ಕಾರದ ಅವಧಿಯಲ್ಲಿ ಹಲವು ವಿಚಾರಗಳಲ್ಲಿ ಕರ್ನಾಟಕ ಒಂದು ಹೆಜ್ಜೆ ಮುಂದೆ ಹೋಗಿದೆ. ಉಳಿದ ಸಮಸ್ಯೆಗಳಿಗೂ ಶೀಘ್ರ ಪರಿಹಾರ ದೊರೆಯಬೇಕು ಎಂಬುದು ನಮ್ಮ ಆಶಯ.
ವಿಶ್ವವಾಣಿ ಟಿವಿ: ಪಾದಯಾತ್ರೆಯಲ್ಲಿ ಕುರಿಗಾಹಿಗಳು ಸೇರಿದಂತೆ ಹಿಂದುಳಿದ ವರ್ಗದ ಜನರನ್ನು ಭೇಟಿ ಮಾಡಿದ್ದೀರಿ. ಅವರ ಸಮಸ್ಯೆಗಳೇನು?
ಬಿ.ವೈ. ವಿಜಯೇಂದ್ರ: ಅವರ ಪರಿಸ್ಥಿತಿ ನೋಡಿದಾಗ ಬೇಸರವಾಗುತ್ತದೆ. ಕಾಂಗ್ರೆಸ್ ಸರ್ಕಾರ ಅವರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಭಾವನೆ ಇದೆ. ಅನುಗ್ರಹ ಯೋಜನೆಯಡಿ ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿದ್ದ ಪರಿಹಾರವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಮತ್ತೆ ಹಣ ಬಾಕಿ ಉಳಿದಿದೆ. ಕುರಿಗಳು ಮೃತಪಟ್ಟಾಗ ಅಥವಾ ಇತರ ಕಾರಣಗಳಿಂದ ನಷ್ಟವಾದಾಗ ಪರಿಹಾರ ನೀಡುವುದರಲ್ಲಿಯೂ ಸರ್ಕಾರ ವಿಫಲವಾಗಿದೆ ಎಂಬ ಆರೋಪವಿದೆ. ಅವರ ಮಕ್ಕಳ ಶಿಕ್ಷಣ, ಕುಟುಂಬದ ಭದ್ರತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ಸಮುದಾಯದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ.
ವಿಶ್ವವಾಣಿ ಟಿವಿ: ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಹೇಳುತ್ತಿದ್ದೀರಿ. ಅದರ ಆಧಾರವೇನು?
ಬಿ.ವೈ. ವಿಜಯೇಂದ್ರ: ಯಡಿಯೂರಪ್ಪ ಅವರು ಏಕೆ ಯಶಸ್ವಿಯಾದರು ಮತ್ತು ಇಂದಿಗೂ ಜನರು ಅವರನ್ನು ಏಕೆ ನೆನಪಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ಅವರು ದಲಿತರು, ಬಡವರು ಮತ್ತು ರೈತರ ನಡುವೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದರು. ಅಧಿಕಾರಕ್ಕೆ ಬಂದಾಗ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಅದಕ್ಕಾಗಿಯೇ ಜನರು ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ವಿಶ್ವವಾಣಿ ಟಿವಿ: ಈ ಪಾದಯಾತ್ರೆ ಬಿಜೆಪಿಗೆ ಹೊಸ ದಿಶೆ ನೀಡಬಹುದೇ?
ಬಿ.ವೈ. ವಿಜಯೇಂದ್ರ: ಪಾದಯಾತ್ರೆಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ಮಾತ್ರವಲ್ಲ, ಸಾಮಾನ್ಯ ಜನರಲ್ಲೂ ಉತ್ಸಾಹ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪಾದಯಾತ್ರೆಯ ಬಗ್ಗೆ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಕೆಲವು ಸಂದರ್ಭಗಳಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು ನಮಗೆ ತೃಪ್ತಿ ನೀಡಿದೆ. ಆದರೆ ಪಕ್ಷದ ಮುಂದೆ ಇನ್ನೂ ಸಾಕಷ್ಟು ಕೆಲಸವಿದೆ.
ಗಡಿನಾಡು ಬಳ್ಳಾರಿಗೆ ಕಾಲಿಟ್ಟ ವಿಜಯೇಂದ್ರ ದುಂದುಬಿ
ಪಾದಯಾತ್ರೆಯಿಂದ ಬಿಜೆಪಿಗೆ ಏನು ಸಂದೇಶ?
ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ಕೇವಲ ಸರ್ಕಾರದ ವಿರುದ್ಧದ ಪ್ರತಿಭಟನೆಯಾಗಿ ಉಳಿಯುತ್ತದೆಯೇ ಅಥವಾ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ರಾಜಕೀಯ ಹೆಜ್ಜೆಯಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಪಾದಯಾತ್ರೆಯ ಮೂಲಕ ರೈತರು, ಯುವಕರು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತರಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದೇ ವೇಳೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಸಂಘಟನೆ ಕಟ್ಟುವ ಸವಾಲೂ ರಾಜ್ಯ ಬಿಜೆಪಿ ಮುಂದಿದೆ. ಪಾದಯಾತ್ರೆ ಮುಕ್ತಾಯಗೊಂಡ ಬಳಿಕ ಅದು ಬಿಜೆಪಿಗೆ ಎಷ್ಟು ರಾಜಕೀಯ ಲಾಭ ತಂದುಕೊಡಲಿದೆ ಮತ್ತು ಜನರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದಕ್ಕೆ ಮುಂದಿನ ದಿನಗಳೇ ಉತ್ತರ ನೀಡಲಿವೆ.