ಬಳ್ಳಾರಿ, ಆ. 1: ಮಗು ತನ್ನದಲ್ಲ ಎಂಬ ಅನುಮಾನದ ಮೇಲೆ ಪದೇ ಪದೆ ವ್ಯಕ್ತಿಯೊಬ್ಬ ಪತ್ನಿ ಜತೆ ಜಗಳವಾಡುತ್ತಿದ್ದ. ಆದರೆ ನಂತರ ನಡೆದದ್ದು ಭೀಕರ ಕೃತ್ಯ. ಪತ್ನಿ ಮತ್ತು ಏಳು ತಿಂಗಳ ಮಗುವನ್ನು ಸುತ್ತಿಗೆಯಿಂದ ಹೊಡೆದು ಕೊಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 30ರ ರಾತ್ರಿ 8.30ರಿಂದ 9.30ರ ನಡುವೆ ಈ ಕೃತ್ಯ ಎಸೆಯಲಾಗಿದೆ (Crime News). ಬಳ್ಳಾರಿಯ ಆಂದ್ರಲ್ ಗ್ರಾಮದಲ್ಲಿರುವ ಕುಟುಂಬದ ಮನೆಯಲ್ಲಿ ಈ ಹತ್ಯೆ ನಡೆದಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ತಿಳಿಸಿದ್ದಾರೆ.
ಆರೋಪಿಯನ್ನು 28 ವರ್ಷದ ಹೊನ್ನೂರಪ್ಪ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಪತ್ನಿ ರಾಜೇಶ್ವರಿ (24) ಮತ್ತು ಹೆಣ್ಣು ಮಗು ಅಶ್ವಿನಿಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಪಿಎಂಸಿ ಯಾರ್ಡ್ ಪೊಲೀಸರು ಹೊನ್ನೂರಪ್ಪ ಅವರನ್ನು ಬಂಧಿಸಿದ್ದಾರೆ. ದಾಳಿಗೆ ಬಳಸಲಾಗಿದೆ ಎನ್ನಲಾದ ಸುತ್ತಿಗೆಯನ್ನು ಇತರ ಸಾಕ್ಷ್ಯಗಳೊಂದಿಗೆ ವಶಪಡಿಸಿಕೊಂಡಿದ್ದಾರೆ.
ʼʼಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿ ಹೊನ್ನೂರಪ್ಪ ತನ್ನ ಪತ್ನಿ ರಾಜೇಶ್ವರಿ ಮತ್ತು ಏಳು ತಿಂಗಳ ಮಗಳು ಅಶ್ವಿನಿಯನ್ನು ಮನೆಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಇಬ್ಬರು ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆʼʼ ಎಂದು ಪೆನ್ನೇಕರ್ ಹೇಳಿದ್ದಾರೆ.
ಪತಿ, ಅತ್ತೆ-ಮಾವನ ಕಿರುಕುಳಕ್ಕೆ ನೊಂದು ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
ರಾಜೇಶ್ವರಿ ಅವರ ಸಹೋದರ ಸುರೇಶ್ ನೀಡಿದ ದೂರಿನ ಮೇರೆಗೆ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಹಲವು ದಿನಗಳಿಂದ ಕುಟುಂಬದಲ್ಲಿ ಉದ್ವಿಗ್ನತೆ ಇತ್ತು ಎಂದು ಸುರೇಶ್ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಸಮಯದಲ್ಲಿ, ಹೊನ್ನೂರಪ್ಪ ತನ್ನ ಪತ್ನಿಯ ನಿಷ್ಠೆಯನ್ನು ಪದೇ ಪದೆ ಪ್ರಶ್ನಿಸುತ್ತಿದ್ದ ಮತ್ತು ಅವರ ಏಳು ತಿಂಗಳ ಪುತ್ರಿಯು ತನ್ನ ಮಗುವಲ್ಲ ಎಂದು ಅನುಮಾನಿಸುತ್ತಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಆ ಅನುಮಾನ ದಂಪತಿಯ ನಡುವೆ ಪದೇ ಪದೆ ಜಗಳಕ್ಕೆ ಕಾರಣವಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ದಂಪತಿಗೆ ಸುಮಾರು ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂವರು ಮಕ್ಕಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಿರಿಯ ಮಗಳು, ಏಳು ತಿಂಗಳ ಅಶ್ವಿನಿ ತನ್ನ ತಂದೆಯ ಕ್ರೂರ ಕೃತ್ಯಕ್ಕೆ ಬಲಿಯಾಗಿದ್ದಾಳೆ. ರಾಜೇಶ್ವರಿ ಮತ್ತು ಮಗು ಮನೆಯಲ್ಲಿದ್ದಾಗ ಹೊನ್ನೂರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹತ್ಯೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮನೆಗೆ ತಲುಪಿ, ಸ್ಥಳ ಪರಿಶೀಲನೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ, ಮೃತಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ʼʼಈ ಬಗ್ಗೆ ತನಿಖೆ ಚುರುಕುಗೊಂಡಿದ್ದು, ಪೊಲೀಸರು ಶೀಘ್ರದಲ್ಲೇ ಆರೋಪಪಟ್ಟಿ ಸಲ್ಲಿಸಲಿದ್ದಾರೆʼʼ ಎಂದು ಪೆನ್ನೇಕರ್ ತಿಳಿಸಿದ್ದಾರೆ. ʼʼಹತ್ಯೆ ನಡೆದ ಸಂದರ್ಭದಲ್ಲಿ ಹೊನ್ನೂರಪ್ಪ ತಾಯಿಯೂ ಮನೆಯಲ್ಲಿದ್ದರು. ಕೊಲೆಗೆ ಅವರೂ ಸಹಕಾರ ನೀಡಿದ್ದು ತಿಳಿದುಬಂದರೆ ಅವರನ್ನು ಬಂಧಿಸಲಾಗುವುದುʼʼ ಎಂದು ಹೇಳಿದ್ದಾರೆ.