Kundapur Murder: ಕುಂದಾಪುರದ ನಡುರಸ್ತೆಯಲ್ಲೇ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ!
ಉಡುಪಿ ಜಿಲ್ಲೆಯ ಕುಂದಾಪುರ ನಗರದ ಹೋಲಿ ರೋಸರಿ ಚರ್ಚ್ ಎದುರು ವ್ಯಕ್ತಿಯೊಬ್ಬನ ಕೊಲೆ ನಡೆದಿದೆ. ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರದ ವಿಚಾರದಲ್ಲಿದ್ದ ಮನಸ್ತಾಪ ಕಾರಣವೆಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ಐವನ್ ರಿಚರ್ಡ್ ಮಸ್ಕರೇನಸ್. -
ಕುಂದಾಪುರ: ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ (Kundapur Murder) ಶುಕ್ರವಾರ ಬೆಳಿಗ್ಗೆ 3.30 ರ ಸುಮಾರಿಗೆ ಕುಂದಾಪುರದ ಚರ್ಚ್ ರಸ್ತೆಯಲ್ಲಿನ ಹೋಲಿ ರೋಸರಿ ಚರ್ಚ್ ಎದುರಿಗೆ ನಡೆದಿದೆ. ಬಾರ್ಕೂರು ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್(45) ಕೊಲೆಯಾದವರು. ಡೆರಿಕ್ ಕ್ರಾಸ್ತಾ ಕೃತ್ಯ ಎಸಗಿದ ಆರೋಪಿ ಎಂದು ತಿಳಿದುಬಂದಿದೆ.
ಘಟನೆ ವಿವರ
ಐವನ್ ತಮ್ಮ ಮೊದಲ ಪತ್ನಿಯಾದ ಸೆಲ್ಮಾ ಮಸ್ಕರೇನಸ್ ಅವರನ್ನು ತೊರೆದು ಬಾರ್ಕೂರು ಮೂಲದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು. ಶುಕ್ರವಾರ ಮುಂಜಾನೆ ಮಹಿಳೆಯೊಂದಿಗೆ ಕಾರಿನಲ್ಲಿ ಬಂದಿದ್ದಾಗ ಕುಂದಾಪುರ ಚರ್ಚ್ ಎದುರಿಗೆ ಈ ಘಟನೆ ನಡೆದಿದೆ. ಪಿಸ್ತೂಲ್ ಮೂಲಕ ಆರೋಪಿ ಡೆರಿಕ್ ಕ್ರಾಸ್ತಾ, ಐವನ್ ಅವರಿಗೆ ಗುಂಡು ಹೊಡೆದು ಪರಾರಿಯಾಗಿದ್ದು, ತೀವ್ರ ರಕ್ತಸ್ರಾವಗೊಂಡ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯು ಆರೋಪಿಯನ್ನು ಗುರುತು ಹಚ್ಚಿದ್ದು ಪರಾರಿಯಾದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಣಕಾಸು ಅಥವಾ ಬೇರಾವುದೇ ವ್ಯವಹಾರ ಸಂಬಂಧಪಟ್ಟ ವಿಚಾರಕ್ಕೆ ಕೊಲೆ ನಡೆದಿರಬಹುದೆಂದು ಪ್ರಾಥಮಿಕ ತನಿಖೆ ವೇಳೆ ಅಂದಾಜಿಸಲಾಗಿದೆ.
ಉಡುಪಿ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ಜಯರಾಮ ಗೌಡ, ಪಿಎಸ್ಐಗಳಾದ ನಂಜಾ ನಾಯ್ಕ್, ಪುಷ್ಪಾ, ಅನೂಪ್ ನಾಯಕ್ ಮೊದಲಾದವರು ಭೇಟಿ ನೀಡಿದ್ದಾರೆ. ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಲೆಮರೆಸಿಕೊಂಡ ಆರೋಪಿ ಡೆರಿಕ್‌ಗಾಗಿ ತೀವ್ರ ಶೋಧ
ಕುಂದಾಪುರ: ನಗರದ ಹೋಲಿ ರೋಸರಿ ಚರ್ಚ್ ಎದುರು ಜು.31 ಶುಕ್ರವಾರ ನಸುಕಿನ ವೇಳೆ ನಡೆದ ಶೂಟೌಟ್ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆ ಬಗ್ಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯನ್ನು ಶೀಘ್ರ ಪತ್ತೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಮೂಲತಃ ಹೆಬ್ರಿ, ಪ್ರಸ್ತುತ ಬಾರ್ಕೂರು ನಿವಾಸಿ ಐವನ್ ರಿಚರ್ಡ್ ಮಸ್ಕರೇನಸ್ ಎನ್ನುವರನ್ನು ಹೆಮ್ಮಾಡಿ ಸಮೀಪದ ಕನ್ನಡಕುದ್ರು ನಿವಾಸಿ ಡೆರಿಕ್ ಎಂಬಾತ ಗುಂಡಿಕ್ಕಿ ಹತ್ಯೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದಾನೆ.
'ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ' ಎಂದು ಡೆರಿಕ್‌ನು ಐವನ್‌ಗೆ ಹೇಳಿ ಲೊಕೇಶನ್ ಕಳಿಸಿದ್ದ. ಅದರಂತೆ ಐವನ್ ಲೊಕೇಶನ್ ಆಧರಿಸಿ ತನ್ನ ಜತೆಗೆ ಏಳುವರ್ಷದಿಂದ ಇದ್ದ ಮಹಿಳೆಯೋರ್ವರ ಜೊತೆ ಕಾರಿನಲ್ಲಿ ಬಂದಿದ್ದರು. ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚಿನ ಎದುರಿನ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದರು. ಮುಂಜಾನೆ ಸುಮಾರು 3:15ಕ್ಕೆ ಥಾರ್ ಕಾರಿನಲ್ಲಿ ಬಂದ ಡೆರಿಕ್‌ನು ಐವನ್ ಮೇಲೆ ಶೂಟ್ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಾಯಗೊಂಡು ರಕ್ತಸ್ರಾವವಾಗಿ ಐವನ್ ರಸ್ತೆಯಲ್ಲೆ ಕುಸಿದು ಮೃತಪಟ್ಟಿದ್ದಾರೆ.
ಐವನ್ ಹಾಗೂ ಡೆರಿಕ್ ನಡುವೆ ಗಲಾಟೆಗೆ ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರದ ವಿಚಾರದಲ್ಲಿದ್ದ ಮನಸ್ತಾಪ ಕಾರಣವೆಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.