Ballari clash: ನನಗೆ Z ಶ್ರೇಣಿ ಭದ್ರತೆ ಕಲ್ಪಿಸಿ; ಸಿಎಂ, ಗೃಹ ಸಚಿವರಿಗೆ ಜನಾರ್ದನ ರೆಡ್ಡಿ ಪತ್ರ
ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಆತನ ಗೂಂಡಾ ಸಹಚರರು ಪೆಟ್ರೋಲ್ ಬಾಂಬ್, ಬಂದೂಕು ಬಳಸಿ ನನ್ನ ಹತ್ಯೆಗೆ ಯತ್ನಿಸಿದ್ದಾರೆ. ಆದ್ದರಿಂದ ಸರ್ಕಾರ ತುರ್ತಾಗಿ ನನಗೆ ಹಾಗೂ ನನ್ನು ಕುಟುಂಬಕ್ಕೆ ಝಡ್ ಶ್ರೇಣಿ ಅಥವಾ ಅದಕ್ಕೆ ಸಮಾನವಾದ ಉನ್ನತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಸರ್ಕಾರಕ್ಕೆ ಶಾಸಕ ಜನಾರ್ದನ ರೆಡ್ಡಿ ಮನವಿ ಮಾಡಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ -
ಬಳ್ಳಾರಿ: ಬಳ್ಳಾರಿಯಲ್ಲಿ ಗಲಭೆ ಹಿನ್ನೆಲೆಯಲ್ಲಿ ನನ್ನ ಜೀವಕ್ಕೆ ಅಪಾಯ ಎದುರಾಗಿದ್ದು, ತುರ್ತಾಗಿ 'ಝಡ್' ಶ್ರೇಣಿ ಭದ್ರತೆ (Z category security) ಒದಗಿಸಬೇಕು ಎಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ (Janardana Reddy) ಪತ್ರ ಬರೆದಿದ್ದಾರೆ.
ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಆತನ ಗೂಂಡಾ ಸಹಚರರು ಪೆಟ್ರೋಲ್ ಬಾಂಬ್, ಬಂದೂಕು ಬಳಸಿ ನನ್ನ ಹತ್ಯೆಗೆ ಯತ್ನಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ. ಅತ್ಯಂತ ಆಕ್ರೋಶ ಹಾಗೂ ಆಘಾತದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದು ಸರ್ಕಾರ ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಅವರು ಕೋರಿದ್ದಾರೆ.
ಬಳ್ಳಾರಿಯ ನನ್ನ ನಿವಾಸದ ಬಳಿ ನಡೆದ ಭೀಕರ ದಾಳಿಯು ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ. ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಾರಾ ಭರತ್ ರೆಡ್ಡಿ ನಡೆಸಿದ ಪೂರ್ವ ನಿಯೋಜಿತ ಹತ್ಯೆಯ ಸಂಚು ಎಂದು ಆರೋಪಿಸಿರುವ ಜನಾರ್ದನ ರೆಡ್ಡಿ, ಒಬ್ಬ ಶಾಸಕನ ಮೇಲೆ ಪೆಟ್ರೋಲ್ ಬಾಂಬ್ ಹಾಗೂ ಬಂದೂಕುಗಳೊಂದಿಗೆ ಬಂದು ಪೊಲೀಸರ ಎದುರೇ ದಾಂಧಲೆ ನಡೆಸಿ ಹತ್ಯೆಗೆ ಯತ್ನಿಸಿರುವುದು ನೋಡಿದರೆ ರಾಜ್ಯದಲ್ಲಿ 'ಜಂಗಲ್ ರಾಜ್' ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿದ್ದಾರೆ.
ಆದ್ದರಿಂದ ಸರ್ಕಾರ ತುರ್ತಾಗಿ ನನಗೆ ಹಾಗೂ ನನ್ನು ಕುಟುಂಬಕ್ಕೆ ಝಡ್ ಶ್ರೇಣಿ ಅಥವಾ ಅದಕ್ಕೆ ಸಮಾನವಾದ ಉನ್ನತ ಪೊಲೀಸ್ ಭದ್ರತೆ ಒದಗಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿ ಒಂದು ವೇಳೆ ಮತ್ತೆ ದಾಳಿ ನಡೆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಪತ್ರ ನನಗೆ ತಲುಪಿಲ್ಲ ಎಂದ ಗೃಹ ಸಚಿವ
ಬೆಂಗಳೂರು: Z ಶ್ರೇಣಿಯ ಭದ್ರತೆ ಕೋರಿ ಜನಾರ್ದನ ರೆಡ್ಡಿ ಬರೆದಿರುವ ಪತ್ರ ನನಗೆ ಬಂದಿಲ್ಲ. ಪತ್ರ ಬಂದರೆ ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, Z ಶ್ರೇಣಿಯ ಭದ್ರತೆ ಕೊಡಲು ಜನಾರ್ದನ ರೆಡ್ಡಿ ಪತ್ರ ನನಗೆ ಇನ್ನೂ ಬಂದಿಲ್ಲ. ಆ ಪತ್ರ ಬಂದರೆ ಏನ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ. ಈಗಾಗಲೇ ಅವರು ದೂರು ಕೊಟ್ಟಿದ್ದಾರೆ. ಶಾಸಕ ಕೂಡ ದೂರು ಕೊಟ್ಡಿದ್ದಾರೆ. ಇಬ್ಬರ ದೂರು ಪಡೆದು, ತನಿಖೆ ಮಾಡಲಾಗುತ್ತಿದೆ ಎಂದರು.
ಘಟನೆ ವೇಳೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆ ಎಂಬ ಜನಾರ್ದನ ರೆಡ್ಡಿ ಆರೋಪದ ವಿಚಾರವಾಗಿ, ಈಗ ತನಿಖೆ ನಡೆಯುತ್ತಿದೆ. ತನಿಖೆ ಆದ ಮೇಲೆ ಇದೆಲ್ಲ ಗೊತ್ತಾಗಲಿದೆ. ತನಿಖೆಯಲ್ಲಿ ಬಂದೂಕು, ಹ್ಯಾಂಡ್ ಗ್ರೆನೇಡ್, ಪೆಟ್ರೋಲ್ ಬಾಂಬ್ ಇತ್ತೋ ಇಲ್ಲವೋ ಗೊತ್ತಾಗುತ್ತದೆ. ಎಲ್ಲಾ ಆಯಾಮದಲ್ಲಿ ತನಿಖೆ ಆಗುತ್ತದೆ ಎಂದು ಹೇಳಿದರು.
ಅಮಾನತದ ಬಳ್ಳಾರಿ ಎಸ್ಪಿ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಬಂದಿದೆ. ಅಮಾನತು ಆಗಿದ್ದಕ್ಕೆ ಬೇಜಾರ್ ಆಗಿ ಬೆಂಗಳೂರಿಗೆ ಬರೋವಾಗ ಅವರ ಸ್ನೇಹಿತರ ಫಾರ್ಮ್ ಹೌಸ್‌ನಲ್ಲಿ ರೆಸ್ಟ್ ತಗೊಂಡು ಬೆಂಗಳೂರಿಗೆ ಬಂದಿದ್ದಾರೆ. ಸ್ವಾಭಾವಿಕವಾಗಿ ಅಮಾನತು ಮಾಡಿದಾಗ ಬೇಜಾರ್ ಇರುತ್ತದೆ.
ಬಳ್ಳಾರಿ ಫೈರಿಂಗ್ ಕೇಸ್ ಸಿಐಡಿ ತನಿಖೆಗೆ? ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಗನ್ ಲೈಸೆನ್ಸ್ ಕೊಡಲು ನಿಯಮ ಬದಲಾವಣೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಗನ್ ಲೈಸೆನ್ಸ್ ಕೊಡೋಕೆ ಕೇಂದ್ರದ ಮಾನದಂಡಗಳು ಇವೆ. ಕೇಂದ್ರ ಸರ್ಕಾರದ ಮಾನದಂಡದಂತೆ ಗನ್ ಲೈಸೆನ್ಸ್ ಕೊಡಲಾಗ್ತಿದೆ. ಅದನ್ನೇ ರಾಜ್ಯ ಸರ್ಕಾರ ಅಳವಡಿಕೆ ಮಾಡಿಕೊಂಡಿದೆ. ಒಂದು ವೇಳೆ ಪಾಲಿಸಿ ಬದಲಾವಣೆ ಮಾಡೋ ಅವಶ್ಯಕತೆ ಇದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.