Basavaraj Bommai: 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ: ಬಸವರಾಜ ಬೊಮ್ಮಾಯಿ ಭವಿಷ್ಯ
Basavaraj Bommai: ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಗದಗ: ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಭವಿಷ್ಯ ನುಡಿದಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ಕಲಾ ಭವನದಲ್ಲಿ ಗುರುವಾರ ಭಾರತೀಯ ಜನತಾ ಪಕ್ಷದ ರೋಣ ವಿಧಾನಸಭಾ ಮತ ಕ್ಷೇತ್ರದ ಡಂಬಳ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿಕಟಪೂರ್ವ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಡಂಬಲ ಮಂಡಳದ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ಪಕ್ಷ ನಿಮ್ಮ ಮೇಲೆ ನಂಬಿಕೆ ಇಟ್ಟಿದೆ. ಬೂತ್ ಮಟ್ಟದಲ್ಲಿ ಸಂಘಟಿಸಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತೀರಿ ಎನ್ನುವ ವಿಶ್ವಾಸ ಇದೆ. ರಾಜಕಾರಣ ವೇಗವಾಗಿ ಬದಲಾಗುತ್ತಿದೆ. ಕೇವಲ ಎರಡು ವರ್ಷದಲ್ಲಿ ಕಾಂಗ್ರೆಸ್ ವಿರುದ್ಧ ಜನರ ಬಂಡಾಯ ಎದ್ದಿದೆ. ರಾಜ್ಯದ ಜನತೆಗೆ ಈ ಸರ್ಕಾರದ ಮೇಲೆ ಭ್ರಾಂತಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೆವು ಅದನ್ನು ನಿಲ್ಲಿಸಿದರು. ರೈತರಿಗೆ ಡಿಸೇಲ್ ಸಬ್ಸಿಡಿ ನೀಡುತ್ತಿದ್ದೆವು ಅದನ್ನು ನಿಲ್ಲಿಸಿದರು. ರೈತರಿಗೆ ಸಬ್ಸಿಡಿಯಲ್ಲಿ ಪೈಪು, ಪಂಪುಗಳನ್ನು ನೀಡುತ್ತಿದ್ದೆವು. ರೈತರಿಗೆ ಒಳ್ಳೆಯ ಬೀಜ ಗೊಬ್ಬರ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ. ರಾಜ್ಯದಲ್ಲಿ ಬಡವರ ವಿರೋಧಿ ಸರ್ಕಾರ ಇದೆ. ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿದೆ. ಪ್ರತಿಯೊಂದು ಕಾಗದ ಪಡೆಯಲು, ಮನೆ ಕಟ್ಟಿಸಲು ಭ್ರಷ್ಟಾಚಾರ, ಪಡಿತರ ಚೀಟಿ ಪಡೆಯಲು ಭ್ರಷ್ಟಾಚಾರ ತುಂಬಿದೆ ಎಂದು ಆರೋಪಿಸಿದರು.
ಬೆಲೆ ಏರಿಕೆ ಬರೆ
ರಾಜ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಹೆಚ್ಚಳ, ಪೆಟ್ರೊಲ್ ಬೆಲೆ ಹೆಚ್ಚಳ, ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದರು, ಹಾಲಿನ ದರ ಹೆಚ್ಚಳ, ಸುಮಾರು ಅರವತ್ತು ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಜನರಿಂದ ಪಡೆಯುತ್ತಿದ್ದಾರೆ. ಎರಡು ವರ್ಷದಲ್ಲಿ ಮೂರು ಲಕ್ಷ ಕೋಟಿ ಹೆಚ್ಚು ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಒಂದು ಲಕ್ಷ ಕೋಟಿ ಸಾಲ ಹೊರಿಸಿದ್ದಾರೆ. ಮುಂದೆ ಬರುವ ಸರ್ಕಾರ ಇವರು ಮಾಡಿರುವ ಸಾಲ ತೀರಿಸಬೇಕು. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಇದರ ವಿರುದ್ಧ ನಾವು ಮಂಡಲ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಇನ್ನೊಂದೆಡೆ ನಮ್ಮ ಪ್ರಧಾನಿಗಳು ಎಲ್ಲ ವರ್ಗದವರ ಅಭಿವೃದ್ಧಿ ಮಾಡುತ್ತಿದ್ದಾರೆ. ಸುಮಾರು 27 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಸುಮಾರು 12 ಕೋಟಿ ಮನೆ ಕಟ್ಟಿದ್ದಾರೆ. 60 ಕೋಟಿ ರೈತರ ಖಾತೆಗೆ ನೇರ ಹಣ ಹಾಕುತ್ತಿದ್ದಾರೆ. ರಸ್ತೆ, ಅಭಿವೃದ್ಧಿ, ರೈಲ್ಬೆ ಅಭಿವೃದ್ಧಿಯಾಗಿದೆ. ಇಡೀ ಜಗತ್ತೇ ಮೆಚ್ಚುವಂತ ನೇತೃತ್ವ ನರೇಂದ್ರಮೋದಿಯವರದ್ದಾಗಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Election Commission: ಹೆಸರಿಗೆ ಮಾತ್ರ ಇರುವ 345 ರಾಜಕೀಯ ಪಕ್ಷಗಳನ್ನು ಕೈಬಿಟ್ಟ ಚುನಾವಣಾ ಆಯೋಗ
ಈ ಸಂದರ್ಭದಲ್ಲಿ ರೋಣ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕ ಕಳಕಪ್ಪ ಬಂಡಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಡಂಬಳ ಮಂಡಲದ ಅಧ್ಯಕ್ಷ ಅಂದಪ್ಪ ಹಾರೋಗೇರಿ, ನಿಕಟಪೂರ್ವ ಅಧ್ಯಕ್ಷ ರವಿ ಕರಿಗಾರ, ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪೂರ, ಮುಖಂಡರಾದ ಕರಬಸಪ್ಪ ಹಂಚಿನಾಳ, ವೆಂಕನಗೌಡ ಪಾಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.