ಬೆಳಗಾವಿ: ಡಿ.2ರಿಂದ ಒಂಬತ್ತು ದಿನಗಳವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧ(Suvarna Vidhana soudha)ದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನ(Winter Session) ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ. ಅಧಿವೇಶನಕ್ಕೆ ಆಗಮಿಸುವ ಗಣ್ಯರು ಹಾಗೂ ಸಾರ್ವಜನಿಕರಿಗೆ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಬಾರಿ 7 ಸಾವಿರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಬಾರಿ ಚಳಿಗಾಲ ಅಧಿವೇಶನ ಡಿಸೆಂಬರ್ 02 ರಿಂದ 11 ರ ವರೆಗೆ ಒಂಬತ್ತು ದಿನಗಳ ಕಾಲ ನಡೆಸಲು ನಿರ್ಧರಿಸ ಲಾಗಿದೆ. ಭದ್ರತೆ ದೃಷ್ಟಿಯಿಂದ ನಾಲ್ವರು ಐಪಿಎಸ್ ಅಧಿಕಾರಿಗಳು 11 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 35 ಡಿಎಸ್ ಪಿ / ಎಸಿಪಿ, 90 ಸಿಪಿಐ, 200 ಪಿಎಸ್ಐ, 35 ಕೆಎಸ್ಆರ್ ಪಿ ತುಕಡಿ ಸೇರಿದಂತೆ ಒಟ್ಟು 7 ಸಾವಿರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸ ಲಾಗುತ್ತಿದೆ.
ಇದನ್ನೂ ಓದಿ: Karnataka Winter Session: ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
ಭದ್ರತೆ ಹಿತದೃಷ್ಟಿಯಿಂದ ಈಗಿರುವ ಸಿಸಿಟಿವ್ಹಿ ಕ್ಯಾಮರಾ ಜೊತೆಗೆ ಅಧಿವೇಶನ ಸಂದರ್ಭದಲ್ಲಿ ಸೂಕ್ಷ್ಮ ಹಾಗೂ ಗಣ್ಯವ್ಯಕ್ತಿಗಳು ಸಂಚರಿಸುವ ಸ್ಥಳಗಳಲ್ಲಿ ನಿಗಾ ಇಡಲು ಒಟ್ಟು 06 ಸಿಸಿಟಿವ್ಹಿ ಕ್ಯಾಮರಾಗಳು, ಅತೀ ಸೂಕ್ಷ್ಮ ಸ್ಥಳಗಳಲ್ಲಿ ನಿಗಾ ಇಡಲು 600 ಸಿಸಿಟಿವ್ಹಿ ಕ್ಯಾಮರಾಗಳನ್ನು ಹಾಗೂ ಸುವರ್ಣಸೌಧದ ಪ್ರತಿಭಟನೆ ಸ್ಥಳ ಮತ್ತು ನಗರದಲ್ಲಿ ಜರುಗುವ ಪ್ರತಿಭಟನೆ ಹಾಗೂ ಸುಗಮ ಸಂಚಾರದ ಮೇಲೆ ನಿಗಾ ಇಡಲು 10 ಡ್ರೋಣ್ ಕ್ಯಾಮರಾ ಕಣ್ಗಾವಲು ಇಡಲಾಗಿದೆ.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬರುವ ಪೊಲೀಸ್ ಸಿಬ್ಬಂದಿಗೆ ವಾಸ್ತವ್ಯಕ್ಕಾಗಿ ಸುವರ್ಣ ಸೌಧದ ಹೊರವಲಯದಲ್ಲಿರು ಶಿಂದೋಳ್ಳಿ ಬಳಿ ಬೃಹತ್ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತಿದೆ. ಸುಸಜ್ಜಿತ ವ್ಯವಸ್ಥೆ ಹೊಂದಿರುವ ಇಲ್ಲಿ 5 ಸಾವಿರ ಸಿಬ್ಬಂದಿ ವಿಶ್ರಾಂತಿ ಪಡೆಯಬಹುದಾಗಿದೆ. ಇನ್ನುಳಿದ ಸಿಬ್ಬಂದಿಗೆ ಹೊಟೇಲ್ ಸೇರಿದಂತೆ ವಿವಿಧೆಡೆ ವಾಸ್ತವ್ಯಕ್ಕೆ ಸೌಲಭ್ಯ ಕಲ್ಪಿಸಲಾಗಿದೆ.
ಮುಖ್ಯಾಂಶಗಳು
ಡಿ.2 ರಿಂದ 11ರ ವರೆಗೆ ಒಂಬತ್ತು ದಿನ ನಡೆಯಲಿರುವ ಚಳಿಗಾಲ ಅಧಿವೇಶನ
ಭದ್ರತೆ ದೃಷ್ಟಿಯಿಂದ 7 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ
ನಗರದಾದ್ಯಂತ 606 ಸಿಸಿಟಿವಿ ಹಾಗೂ 10 ಡ್ರೋಣ್ ಕಣ್ಗಾವಲು
ಪೊಲೀಸ್ ಸಿಬ್ಬಂದಿ ವಾಸ್ತವ್ಯಕ್ಕೆ ಶಿಂದೊಳ್ಳಿಯಲ್ಲಿ ಟೌನ್ ಶಿಪ್ ನಿರ್ಮಾಣ
![]()
ಅಧಿವೇಶನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು. ಪ್ರಮುಖ ಸ್ಥಳಗಳು, ಅಧಿವೇಶನ ನಡೆಯುವ ಪ್ರದೇಶ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಅಧಿವೇಶನಕ್ಕೆ ಬರುವ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು.
ಪ್ರಕಾಶ ನಿಕಮ್, ನಗರ ಪೊಲೀಸ್ ಆಯುಕ್ತ