ಬೆಳಗಾವಿ, ನ.4: ರಾಜ್ಯ ಸರ್ಕಾರವು (State Congress Government) ರೈತರನ್ನು ಕಡೆಗಣಿಸಿ ಉಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಎಚ್ಚರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ಆಹೋರಾತ್ರಿ ಹೋರಾಟದಲ್ಲಿ ಮಂಗಳವಾರ ಪಾಲ್ಗೊಂಡಿದ್ದ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನೆಯ ಕಿಚ್ಚು ಹೆಚ್ಚಾಗುತ್ತಿದೆ. ಇವತ್ತು ಗೋಕಾಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ಚಿಕ್ಕೋಡಿ, ಬೈಲಹೊಂಗಲದಲ್ಲೂ ಹೋರಾಟ ಶುರುವಾಗಿದೆ. ಇನ್ನೂ ಕೂಡ ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಆ ಭಗವಂತ ಬಂದರೂ ನಿಮ್ಮ ಸರ್ಕಾರವನ್ನು ರಕ್ಷಿಸಲು ಸಾಧ್ಯವಾಗದು ಎಂದು ಹೇಳಿದರು.
ಕಬ್ಬು ಬೆಳೆಗಾರರ ನಿರ್ಲಕ್ಷ್ಯ ಮಾಡದಿರಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸುವುದಾಗಿ ತಿಳಿಸಿದರು. ಇನ್ನೂ ಬೆಂಗಳೂರಿನಲ್ಲಿ ಕಣ್ಮುಚ್ಚಿ ಕೂತಿದ್ದರೆ, ಈ ಜ್ವಾಲೆ ಬೆಂಗಳೂರು ವಿಧಾನಸೌಧವನ್ನೂ ಸುಡಬಹುದು. ರಾಜ್ಯ ಸರ್ಕಾರವು ಇವತ್ತು ಅಥವಾ ನಾಳೆಯೇ ರೈತ ಮುಖಂಡರನ್ನು ಕೂರಿಸಿ, ಒಂದು ವೇದಿಕೆ ನಿರ್ಮಿಸಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ವಿಷ ತೆಗೆದುಕೊಂಡ ವಿಚಾರ ತಿಳಿದು ಮನಸ್ಸು ತಡೆಯಲಿಲ್ಲ. ಮುಗ್ಧ ರೈತರ ಸಂಕಷ್ಟ ತಿಳಿದು ಮನಸ್ಸು ಕರಗಿಹೋಗಿದೆ. ಸಚಿವರ ಜತೆಗೆ ಮಾತನಾಡಿದ್ದೇನೆ ಎಂದ ಅವರು, ನಾಡಿಗೆ ಅನ್ನ ನೀಡುವ ರೈತರಿಗೆ ನ್ಯಾಯ ಕೊಡಲಾಗದ ಸರ್ಕಾರ ಬದುಕಿದ್ದೂ ಸತ್ತಂತೆ ಎಂದು ಅವರು ತಿಳಿಸಿದರು.
ನಾನು ರಾಜಕಾರಣ ಮಾಡುತ್ತಿಲ್ಲ. ರೈತರು ಇವತ್ತು ಕಂಗಾಲಾಗಿದ್ದಾರೆ. ಕಬ್ಬು ಬೆಳೆಗಾರರು ಕೇಳುತ್ತಿರುವುದು ಭಿಕ್ಷೆಯಲ್ಲ, ನ್ಯಾಯಸಮ್ಮತ ಬೇಡಿಕೆಯನ್ನು ಅವರು ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದಲ್ಲಿ, ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ, ತಕ್ಷಣ ಸಭೆ ಕರೆದು ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | RSS row: ಆರೆಸ್ಸೆಸ್ ಪಥಸಂಚಲನ: ಸರಕಾರದ ಮೇಲ್ಮನವಿ ವಿಚಾರಣೆ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್
BY Vijayendra: ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡಿ: ಬಿ.ವೈ. ವಿಜಯೇಂದ್ರ ಆಗ್ರಹ
ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra), ಬೆಳಗಾವಿಯಲ್ಲಿ ಮಂಗಳವಾರ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇಂದು ಸಂಜೆ 5 ಗಂಟೆಯ ಒಳಗಾಗಿ ರಾಜ್ಯ ಸರ್ಕಾರ (State Congress Government) ಸ್ಥಳಕ್ಕೆ ಉಸ್ತುವಾರಿ ಸಚಿವರನ್ನಾಗಲಿ, ಸಕ್ಕರೆ ಸಚಿವರನ್ನಾಗಲಿ ಅಥವಾ ಮುಖ್ಯಮಂತ್ರಿಗಳೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಕಬ್ಬು ಬೆಳೆಗಾರರ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ನಾಳೆಯೂ ರೈತರ ಜತೆಯಾಗಿ ಹೋರಾಟದಲ್ಲಿ ಧುಮುಕುತ್ತೇನೆ. ನಾಳೆ ನನ್ನ ಜನ್ಮದಿನವಿದ್ದರೂ ಕಣ್ಣೀರು ಸುರಿಸುತ್ತಿರುವ ರೈತರಿಗೆ ನಾಳೆ ಮೀಸಲಿಡುತ್ತೇನೆ. ಒಂದು ವೇಳೆ ನಾಳೆಯು ಬಗೆಹರಿಯದಿದ್ದರೆ ರಾಜ್ಯಾದ್ಯಂತ ರೈತರ ಕಿಡಿ ಹರಡುತ್ತದೆ ಎಂದು ಅವರು ಎಚ್ಚರಿಸಿದರು.
ಈ ಸುದ್ದಿಯನ್ನೂ ಓದಿ | RRB Recruitment 2025: ರೈಲ್ವೆ ನೇಮಕಾತಿ ಮಂಡಳಿಯಿಂದ 5,810 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಪದವಿ ಪೂರೈಸಿದವರು ಅಪ್ಲೈ ಮಾಡಿ
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ದುರ್ಯೋಧನ ಐಹೊಳೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬೆಳಗಾವಿ ನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ದುಂಡಪ್ಪ ಪಾಟೀಲ್, ವಿಜಯಪುರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಲ್ಲಾ ಉಪಾಧ್ಯಕ್ಷ ದಾದಾಗೌಡ ಬಿರಾದಾರ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಮತ್ತು ಪ್ರಮುಖ ನಾಯಕರು ಉಪಸ್ಥಿತರಿದ್ದರು.