ಯರಗಟ್ಟಿ (ಬೆಳಗಾವಿ): ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸಹೋದರರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ (Belagavi News) ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ. ಲಗಮಪ್ಪ ರಾಮಣ್ಣವರ (32), ಬಸಪ್ಪ ರಾಮಣ್ಣವರ (38) ಕೊಲೆಯಾದ ದುರ್ದೈವಿಗಳು. ಕ್ಷುಲ್ಲಕ ಕಾರಣಕ್ಕೆ ಸಹೋದರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದುಬಂದಿದೆ.
ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಸಹೋದರ ಸಂಬಂಧಿಕರ ನಡುವೆ ನಡೆದ ಜಗಳವು ತೀವ್ರ ಸ್ವರೂಪ ಪಡೆದು, ಸುಮಾರು 6 ಜನರು ಸೇರಿ ಹಲ್ಲೆ ನಡೆಸಿ ಇಬ್ಬರನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆಯ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಘಟನೆಯ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್.ಪಿ ಕೆ. ರಾಮರಾಜನ್, ಹೆಚ್ಚುವರಿ ಎಸ್.ಪಿ. ಬಸರಗಿ, ಮುರಗೋಡ ಸಿಪಿಐ ಐ. ಎಂ. ಮಠಪತಿ, ಮುರಗೋಡ ಪಿಎಸ್ಐ ಎಲ್. ಬಿ. ಮಾಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಂದಿದ್ದ ಚೇತನ್ ಅರೆಸ್ಟ್; ಇಲಿಪಾಷಾಣ ಸೇವಿಸಿದ್ದರಿಂದ ಆಸ್ಪತ್ರೆಗೆ ದಾಖಲು
ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕನ ಬರ್ಬರ ಹತ್ಯೆ
ಬಳ್ಳಾರಿ: ವಾರದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ನಡೆದಿದೆ. ನಬಿ ರಸೂಲ್ ಕೊಲೆಯಾದ ಯುವಕ. ರಸೂಲ್ ವಿಚ್ಛೇದನ ಪಡೆದಿದ್ದ ಮಹಿಳೆಯನ್ನು 15 ದಿನಗಳ ಹಿಂದೆ ಪ್ರೀತಿಸಿ ಮನೆ ಬಿಟ್ಟು ಕರೆದುಕೊಂಡು ಹೋಗಿದ್ದ. ಬಳಿಕ ಇಬ್ಬರೂ ಮನೆಗೆ ಮರಳಿದ್ದರು. ಮದುವೆಗೆ ಯುವತಿ ಪೋಷಕರ ವಿರೋಧ ಇತ್ತು ಎನ್ನಲಾಗಿದೆ.
ಯುವಕನ ಮನೆಯವರು ಒಪ್ಪಿ ನಬಿ ರಸೂಲ್‌ಗೆ ಮದುವೆ ಮಾಡಿಸಿ ಗುರುವಾರ ರಿಸೆಪ್ಷನ್ ಇಟ್ಟುಕೊಳ್ಳಲಾಗಿತ್ತು. ಸಂಭ್ರಮದಿಂದ ಮದುವೆ ಮತ್ತು ರಿಸೆಪ್ಷನ್ ಕಾರ್ಯಕ್ರಮ ನಡೆದಿತ್ತು. ರಾತ್ರಿ 11:30ರ ಸುಮಾರಿಗೆ ಸ್ನೇಹಿತ ಕರೆದ ಅಂತ ರಸೂಲ್ ಮನೆಯಿಂದ ಹೊರ ಹೋಗಿದ್ದಾನೆ.
ರಾತ್ರಿ ಎರಡು ಗಂಟೆಯಾದರೂ ನಬಿ ರಸೂಲ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಪೋಷಕರು ಮತ್ತು ಸಂಬಂಧಿಕರು ಮನೆ ಸುತ್ತ ಹುಡುಕಾಡಿದ್ದಾರೆ. ಈ ವೇಳೆ ಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿ ನಬಿ ರಸೂಲ್ ಹೆಣವಾಗಿ ಸಿಕ್ಕಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದೇ ಯುವಕನ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಸುಮನ್ ಡಿ ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.