ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಂದಿದ್ದ ಚೇತನ್ ಅರೆಸ್ಟ್; ಇಲಿಪಾಷಾಣ ಸೇವಿಸಿದ್ದರಿಂದ ಆಸ್ಪತ್ರೆಗೆ ದಾಖಲು
ಪ್ರೀತಿ ನಿರಾಕರಿಸಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿಯೇ ಯುವತಿಯನ್ನು ಕೊಂದಿದ್ದ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಕಕ್ಕೆಪದವು ನಿವಾಸಿಯಾಗಿದ್ದ ಲಾವಣ್ಯಳನ್ನು ಆಕೆಯ ದೂರದ ಸಂಬಂಧಿ ಆರೋಪಿ ಚೇತನ್ ನಿನ್ನೆ ಕೊಲೆ ಮಾಡಿದ್ದ.
ಸಂಗ್ರಹ ಚಿತ್ರ -
ಮಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿಯೇ ಯುವತಿಯನ್ನು ಕೊಂದಿದ್ದ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ (Bantwal Murder Case) ಕಕ್ಕೆಪದವು ನಿವಾಸಿಯಾಗಿದ್ದ ಲಾವಣ್ಯಳನ್ನು ಆಕೆಯ ದೂರದ ಸಂಬಂಧಿ ಆರೋಪಿ ಚೇತನ್ ನಿನ್ನೆ ಕೊಲೆ ಮಾಡಿದ್ದ. ಕೊಲೆ ಬಳಿಕ ಪರಾರಿಯಾಗಿದ್ದ ಆರೋಪಿಯ ಬಂಧನಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿತ್ತು. ಬರ್ಬರವಾಗಿ ಹತ್ಯೆ ಮಾಡಿ ಬಸ್ ನಿಲ್ದಾಣದಿಂದ ಹೊರಗೆ ಬಂದಿದ್ದ ಆರೋಪಿ ಬ್ಯಾಗ್ ಹಾಗೂ ಮೊಬೈಲ್ ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದ.
ಶೋಧ ನಡೆಸಿದ ಪೊಲೀಸರು ಮಂಗಳೂರಿನ ಪಚ್ಚನಾಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ಚೇತನ್ ತಾನು ಇಲಿಪಾಷಾಣ ಸೇವಿಸಿರುವುದಾಗಿ ಹೇಳಿದ್ದು, ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಲಾವಣ್ಯ ಮೃತದೇಹವನ್ನು ಬಂಟ್ವಾಳ ಶವಗಾರದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಏನಿದು ಘಟನೆ?
ಕಕ್ಯಪದವು ನಿವಾಸಿ ಲಾವಣ್ಯ ಹಾಗೂ ಚೇತನ್ ಇಬ್ಬರು ದೂರದ ಸಂಬಂಧಿಯಾಗಿದ್ದರು. ಪ್ರಾಥಮಿಕ ತನಿಖೆ ಪ್ರಕಾರ, ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಉದ್ಯೋಗಿಯಾಗಿದ್ದ ಲಾವಣ್ಯಳನ್ನು ಚೇತನ್ ಪ್ರೀತಿಸುತ್ತಿದ್ದ. ನಾಲ್ಕು ವರ್ಷಗಳ ಹಿಂದೆ ಇಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿತ್ತು.
Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್ ಸ್ಟೋರಿ
ಲಾವಣ್ಯ ಗುರುವಾರ ಸಂಜೆ ಕಕ್ಯಪದವು ಕಡೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು. ಈ ವೇಳೆ ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, ನನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ ಎಂದು ತಿಳಿಸಿದ್ದರು. ಬಳಿಕ ಕರೆ ಕಡಿತಗೊಂಡಿದೆ. ಬಸ್‌ನಿಂದ ಕೆಳಗಿಳಿದ ಬಳಿಕ ಯುವಕ ಆಕೆಯನ್ನು ಬೆನ್ನಟ್ಟಿದ್ದು, ತನ್ನ ಬ್ಯಾಗ್‌ನಿಂದ ತಲವಾರು ಹೊರತೆಗೆದು ದಾಳಿ ನಡೆಸಿ ಪರಾರಿಯಾಗಿದ್ದಾನೆ.
ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಘಟನೆಯ ವೇಳೆ ಯುವತಿಯ ಮೇಲೆ ತಲವಾರಿನಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.