ಬೆಳಗಾವಿ: ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ (karnataka Muzrai temples) ಸಿಸಿಟಿವಿ ಅಳವಡಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM d.k. shivakumar) ಆದೇಶಿಸಿದ್ದಾರೆ. ಬೆಳಗಾವಿ (Belagavi) ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರದಲ್ಲಿ (ayodhya ram mandir) ನಡೆದಿರುವಂತ ದೇಣಿಗೆ ಕಳ್ಳತನ ಪ್ರಕರಣಗಳು ರಾಜ್ಯದಲ್ಲಿ ನಡೆಯದಿರಲಿ ಎಂಬುದಾಗಿ ಈ ಘೋಷಣೆ ಮಾಡುತ್ತಿರುವುದಾಗಿ ತಿಳಿಸಿದರು. ದೇವಾಲಯಗಳಲ್ಲಿ ಅಳವಡಿಸಲಾಗುವ ಸಿಸಿ ಕೆಮರಾಗಳನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಠಾಣೆಗಳಿಗೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಅಯೋಧ್ಯೆ ರಾಮ ಮಂದಿರದಲ್ಲಿ ಇತ್ತೀಚೆಗೆ ನಡೆದ ದೇಣಿಗೆ ಕಳ್ಳತನ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಅವರು ಆದೇಶಿಸಿದ್ದಾರೆ.
ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಅಳವಡಿಸಲಾಗುವ ಎಲ್ಲಾ ಸಿಸಿ ಕೆಮರಾಗಳನ್ನು ನೇರವಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಠಾಣೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ದೇವಾಲಯದ ಹುಂಡಿ ಇರುವ ಸ್ಥಳ, ಎಣಿಕೆ ಸ್ಥಳ ಸೇರಿದಂತೆ ಎಲ್ಲಾ ಭಾಗಗಳಿಗೂ ಸಿಸಿಟಿವಿ ಅಳವಡಿಸಿ ದಿನದ 24 ಗಂಟೆಯು ನಿಗಾ ಇರಿಸಲಾಗುತ್ತದೆ ಎಂದು ತಿಳಿಸಿದರು.
ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಪ್ರಕರಣ ಭಕ್ತರ ಮನಸ್ಸಿಗೆ ಆಘಾತ ಉಂಟು ಮಾಡಿದೆ. ಭಕ್ತರು ಭಕ್ತಿಭಾವದಿಂದ ಸಮರ್ಪಿಸಿರುವ ಕಾಣಿಕೆ, ಹಣ, ಚಿನ್ನಭರಣಗಳು ಕಳವಾಗಿರುವುದು ದುರಂತ. ಇಂತಹ ಘಟನೆ ರಾಜ್ಯದಲ್ಲಿ ನಡೆಯದೇ ಇರಲಿ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಎಲ್ಲಾ ಪ್ರಮುಖ ಮುಜರಾಯಿ ದೇವಾಲಯಗಳ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕೆಮರಾಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ. ಇದನ್ನು ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಸಂಬಂಧಪಟ್ಟ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ವ್ಯವಸ್ಥೆಗೆ ಸಂಪರ್ಕಿಸಲಾಗುವುದು. ಇದು ಟ್ರಾಫಿಕ್ ನಿಯಂತ್ರಣ ಕೊಠಡಿಯ ಮಾದರಿಯಲ್ಲೇ ಕಾರ್ಯ ನಿರ್ವಹಿಸಲಿದೆ. ಈ ಮೂಲಕ ದೇವಾಲಯದಲ್ಲಿ ನಡೆಯುವ ಪ್ರತಿಯೊಂದು ಪ್ರಕ್ರಿಯೆಯ ಮೇಲೂ ದಿನದ 24 ಗಂಟೆ ನಿಗಾ ವಹಿಸಲಾಗುತ್ತದೆ ಎಂದು ತಿಳಿಸಿದರು.
ಬೇಲೂರು ದೇಗುಲದಲ್ಲಿ ಕಳವು ಯತ್ನ
ಬೇಲೂರಿನ ಶ್ರೀ ಚನ್ನಕೇಶವ ದೇವಾಲಯದ ಹುಂಡಿ ಹಣ ಎಣಿಕೆ ವೇಳೆ ಸುಮಾರು 1.98 ಲಕ್ಷ ರೂಪಾಯಿ ಕಳವು ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ನೀಲಕಂಠ ಬಂಧಿತ ಆರೋಪಿ. ಆತನನ್ನು ನಗದು ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಹಿಂದೆ ಯಾರಾದರೂ ಕೈವಾಡವಿದೆಯೇ ಎನ್ನುವ ಕುರಿತು ತನಿಖೆ ಮುಂದುವರಿಸಲಾಗಿದೆ.
ರಾಮ ಮಂದಿರ ದೇಣಿಗೆ ಲೂಟಿ: ಆರು ಮಂದಿಯಿಂದ 40 ದಿನ ಕಳವು; ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ
ಈ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಯಲಿದೆ. ಪ್ರತಿ ಬಾರಿ ಹುಂಡಿ ಎಣಿಕೆ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ನೀಲಕಂಠ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಿದರು.