ಬೆಳಗಾವಿ, ಡಿ. 19: ರಾಜ್ಯದಲ್ಲಿ 82 ಸಕ್ಕರೆ ಕಾರ್ಖಾನೆಗಳಿದ್ದು , ಒಂದೇ ಒಂದು ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಇದೆ. 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದು, 670 ಕ್ವಿಂಟಲ್ ಕಬ್ಬು ಬೆಳೆ ನಿರೀಕ್ಷಿಸಲಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ಹೋರಾಟ ಮಾಡಿದರು. ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕಿಸಬಾರದು. ಕಬ್ಬು ಬೆಳೆಗಾರರ ಸಮಸ್ಯೆಯನ್ನು ನಮ್ಮ ಸರ್ಕಾರ ಬಗೆಹರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸದನದಲ್ಲಿ ಉತ್ತರ ಕರ್ನಾಟಕದ ಕುರಿತು ಚರ್ಚೆ ವೇಳೆ ಮಾತನಾಡಿದ ಸಿಎಂ, 2025 - 26ರಲ್ಲಿ 7.40 ಲಕ್ಷ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದು, 670 ಲಕ್ಷ ಟನ್ ಕಬ್ಬು ಉತ್ಪಾದನೆ ಆಗಬಹುದೆಂದು ಅಂದಾಜಿಸಲಾಗಿದೆ. 2009-2010ರಿಂದ ಎಫ್‌ಆರ್‌ಪಿ ನಿಗದಿ ಮಾಡಲಾಗಿದೆ. ಇದನ್ನು ಕೇಂದ್ರ ಸರ್ಕಾರ ನಿಗದಿಮಾಡುತ್ತದೆ. 9.50 ಯಿಂದ 10.28 ರೂ. ಮಾಡಿದ್ದಾರೆ.
9.50 ಇಳುವರಿ 2022/23 ರಿಂದ 10.25 ಮಾಡಿದ್ದಾರೆ. ಒಂದು ಟನ್ ಕಬ್ಬಿಗೆ 3550 ರೂಪಾಯಿಗಳಿದ್ದು, ಎಚ್‌ಎಂಟಿ ಕಳೆದರೆ (800 ರಿಂದ 900 ರೂ. ಗಳಿವೆ) ಹೀಗಾಗಿ ರೈತರು ಹೋರಾಟ ಮಾಡಿದರು. ರೈತರೊಂದಿಗೆ ಸಭೆ ನಡೆಸಿ 3300 ರೂಪಾಯಿ ಕೊಡಲು ಚಳವಳಿಯನ್ನು ಹಿಂಪಡೆಯಲಾಯಿತು.
ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
ರೈತರಿಗೆ ಅನ್ಯಾಯ ಆಗಲು ಯಾರು ಕಾರಣ?
ಕೇಂದ್ರ ಸರ್ಕಾರ 2019ರಲ್ಲಿ 1 ಕೆ.ಜಿ. ಸಕ್ಕರೆಗೆ 31 ರೂ. ಎಂಎಸ್‌ಪಿ ನಿಗದಿ ಮಾಡಿದೆ. ಆರು ವರ್ಷಗಳಲ್ಲಿ ಏನೂ ಬದಲಾವಣೆ ಮಾಡಿಲ್ಲ. 41 ರೂಗಳಿಗೆ ಹೆಚ್ಚಿಸಲು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಎಥನಾಲ್ ಹಂಚಿಕೆಯನ್ನು ಕೇಂದ್ರ ಸರ್ಕಾರವೇ ಮಾಡುವುದು. ರಫ್ತು ನಿಗದಿ ಮಾಡುವುದು ಕೂಡ ಕೇಂದ್ರ ಸರ್ಕಾರವೇ. ರೈತರಿಗೆ ಅನ್ಯಾಯ ಆಗಲು ಯಾರು ಕಾರಣ? ಎಫ್‌ಆರ್‌ಪಿ, ಎಂಎಸ್‌ಪಿ, ಎಥನಾಲ್, ರಫ್ತು ಹೆಚ್ಚು ಮಾಡಲಿ. ಹೀಗಾದರೆ ಸ್ವಾಭಾವಿಕವಾಗಿ ಸಕ್ಕರೆ ಮತ್ತು ಕಬ್ಬಿನ ಬೆಲೆ ಹೆಚ್ಚಾಗುತ್ತದೆ ಎಂದು ಆಗ್ರಹಿಸಿದರು.
ಸಕ್ಕರೆ ರಫ್ತಿಗೂ ಕೂಡ ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ವಿಧಿಸುತ್ತಿದೆ. ಈ ಬಾರಿ 15 ಲಕ್ಷ ಟನ್ನುಗಳನ್ನು ರಫ್ತು ಮಾಡುವ ಅಂದಾಜಿದೆ. ದೇಶದಲ್ಲಿ 2024-25 ರಲ್ಲಿ 296.10 ಲಕ್ಷ ಮೆಟ್ರಿಕ್ ಟನ್ ಮತ್ತು 2025-26 ರಲ್ಲಿ 343.5 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗುತ್ತಿದ್ದರೂ ಸಹ, 2023-24 ರಲ್ಲಿ 11 ಲಕ್ಷ ಮೆಟ್ರಿಕ್ ಟನ್, 2024-25 ರಲ್ಲಿ 9 ಲಕ್ಷ ಮೆಟ್ರಿಕ್ ಟನ್‌ಗಳನ್ನು ಮಾತ್ರ ರಫ್ತು ಮಾಡಲಾಗಿದೆ. 2025-26 ರಲ್ಲಿ 15 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸಕ್ಕರೆ ರಫ್ತು ಆಗಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಕರ್ನಾಟಕದಿಂದ ಈ ವರ್ಷ 2.47 ಲಕ್ಷ ಮೆಟ್ರಿಕ್ ಟನ್‌ಗಳನ್ನು ಮಾತ್ರ ರಫ್ತು ಮಾಡಲು ಅವಕಾಶ ಕಲ್ಪಿಸಿದ್ದಾರೆ. 2019 ರಲ್ಲಿ ಸಕ್ಕರೆ ಬೆಲೆಯನ್ನು ನಿಗದಿಪಡಿಸಿದ ನಂತರ ಮತ್ತೆ 1 ರೂಪಾಯಿಯೂ ಹೆಚ್ಚು ಮಾಡಲಿಲ್ಲ. ಎರಡು ವರ್ಷಗಳ ಹಿಂದೆ ಎಥೆನಾಲ್ ಬೆಲೆ ಪರಿಷ್ಕರಣೆ ಆಗಿದ್ದು ಬಿಟ್ಟರೆ, ಅದನ್ನೂ ಹೆಚ್ಚು ಮಾಡಲಿಲ್ಲ. 2021-22 ರಲ್ಲಿ 110 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಅವಕಾಶ ನೀಡಲಾಗಿತ್ತು. ವರ್ಷದಿಂದ ವರ್ಷಕ್ಕೆ ಸಕ್ಕರೆ ರಫ್ತನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಪರೋಕ್ಷವಾಗಿ ಕಬ್ಬು ಉತ್ಪಾದಿಸುವ ರೈತರಿಗೆ ಹೊಡೆತ ಬೀಳುತ್ತಿದೆ. ಆದ್ದರಿಂದ ನಮ್ಮ ಸರ್ಕಾರವು ಕೂಡಲೇ ದೇಶಕ್ಕೆ ಅಗತ್ಯವಿರುವಷ್ಟು ಸಕ್ಕರೆಯನ್ನು ಹೊರತುಪಡಿಸಿ ಉಳಿದ ಸಕ್ಕರೆಯನ್ನು ರಫ್ತು ಮಾಡಬೇಕೆಂದು ಒತ್ತಾಯಿಸುತ್ತದೆ.
ಅದಾನಿ, ಅಂಬಾನಿಗೆ ಲಾಭ
ಹಾಗೆಯೇ, ಒಂದು ಲೀಟರ್ ಎಥನಾಲ್‌ಗೆ 65 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಆದರೆ ಪೆಟ್ರೋಲಿಯಂ ಬೆಲೆ ರೂ.100 ರ ಆಸುಪಾಸಿನಲ್ಲಿದೆ. ಹಾಗಾಗಿ, ಪೆಟ್ರೋಲಿಯಂ ಕಂಪನಿಗಳಿಗೆ 65 ರೂಪಾಯಿ ನಿಗದಿಪಡಿಸಿರುವುದರಿಂದ ಅದಾನಿ, ಅಂಬಾನಿಗೆ ಲಾಭವಾಗುತ್ತಿದೆ. ಟನ್ ಕಬ್ಬಿಗೆ ಹೆಚ್ಚುವರಿ 50 ರೂ. ಕೊಡುವುದರಿಂದ 300 ಕೋಟಿ ರೂ. ಹೆಚ್ಚು ಹೊರೆ ಸರ್ಕಾರದ ಮೇಲೆ ಬಿದ್ದಿದೆ. 10.28 ಇಳುವರಿ ಇರುವ ಕಬ್ಬಿಗೆ ಎಚ್&ಟಿ (ಕಟಾವು ಮತ್ತು ಸಾಗಣೆ ವೆಚ್ಚ) ಸೇರಿ 3,550 ರೂ. ನೀಡಲಾಗುತ್ತದೆ. 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ 17.25 ಹೆಕ್ಟೇರ್ ಪ್ರದೇಶದಲ್ಲಿ ಆಗಿದೆ. ರೈತರಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ಚಳವಳಿ ಮಾಡಿದರು. ಉತ್ತರ ಮತ್ತು ಕರ್ನಾಟಕ ಎಂದು ಪ್ರತ್ಯೇಕಿ ಸಬಾರದು. ಕಬ್ಬಿನ ಸಮಸ್ಯೆಯನ್ನು ನಮ್ಮ ಸರ್ಕಾರ ಬಗೆಹರಿಸಿದೆ. ಕಬ್ಬು ಹಾಗೂ ಮೆಕ್ಕೆಜೋಳದ ಸಮಸ್ಯೆಗಳ ಬಗ್ಗೆ ಮಾತನಾಡಲು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಏನೂ ಸಹಾಯವಾಗಲಿಲ್ಲ. ಮಂಗಳೂರಿನಲ್ಲಿ ದಿನೇಶ್ ಗುಂಡೂರಾವ್ ಅವರು ಮನವಿ ಕೊಟ್ಟಿದ್ದಾರೆ ಎಂದರು.
ನನ್ನ-ಸಿಎಂ ನಡುವೆ ಒಪ್ಪಂದವಾಗಿದೆ; ಅಧಿಕಾರ ಹಂಚಿಕೆ ಬಗ್ಗೆ ಡಿ.ಕೆ. ಶಿವಕುಮಾರ್ ಅಚ್ಚರಿ ಹೇಳಿಕೆ!
ಕೇಂದ್ರ ಸರ್ಕಾರದಿಂದ ಅಸಹಕಾರ
ಕೇಂದ್ರ ಸರ್ಕಾರ ಅಸಹಕಾರವನ್ನು ಶುರುಮಾಡಿದೆ. ನಮಗೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಜಲಜೀವನ ಮಿಷನ್‌ನಡಿ 13 ಸಾವಿರ ಕೋಟಿ ಬರಬೇಕು. ಎರಡು ವರ್ಷಗಳಿಂದ ಬಾಕಿ ಇದೆ. ರಾಜ್ಯ ಸರ್ಕಾರ ಏನೂ ಮಾಡಿಲ್ಲ ಎಂದು ದೂರುತ್ತಾರೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಉತ್ತರ ಹಾಗೂ ದಕ್ಷಿಣ ಕನ್ನಡ ವಿಭಾಗ ಮಾಡಬಾರದು. ಕರ್ನಾಟಕ ಒಂದೇ , ಎಲ್ಲಾ ಭಾಗದ ಜನರ ಅಭಿವೃದ್ಧಿ ನಮ್ಮ ಕರ್ತವ್ಯ ಎಂದರು.
56,000 ಕೋಟಿ ರೂಪಾಯಿಗಳನ್ನು ನೀರಾವರಿಗೆ ವೆಚ್ಚ ಮಾಡಲಾಗಿದೆ. ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರು, ಪರಿಸರ ತೀರುವಳಿ ಸಿಕ್ಕಿಲ್ಲ. ಒಮ್ಮೆ ನಿಯೋಗವನ್ನು ಕರೆದುಕೊಂಡು ಹೋಗಲಾಗಿತ್ತು. ಗೋವಾದಲ್ಲಿ ನಿಮ್ಮ ಸರ್ಕಾರವಿದ್ದು, ಗೋವಾದಲ್ಲಿ ಹೇಳಿ ನೀವು ಅವರು ರಾಜಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ಈಗ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಈಗ ರಾಜಿ ಏಕೆ ಮಾಡಿಕೊಳ್ಳಬಾರದು ಎಂದರು.
ನಮ್ಮ ಮೇಲೆ ಗೂಬೆ ಕೂಡಿಸುವ ಪ್ರಯತ್ನ
ಮಹದಾಯಿ ಯೋಜನೆಗೆ ಡಿಪಿಆರ್ ಸಿದ್ಧ ಮಾಡಲಾಗಿದೆ. ಕೇಂದ್ರ ಸರ್ಕಾರ ಇಂದಿನವರೆಗೂ ಇತ್ಯರ್ಥ ಮಾಡಿಲ್ಲ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಪ್ರಕಾರ 173 ಟಿಎಂಸಿ ನೀರು ಹಂಚಿಕೆಯಾಗಿದೆ. 519 ಮೀ.ನಿಂದ 524 ಮೀ ಹೆಚ್ಚಳ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. 12 ವರ್ಷಗಳಾದರೂ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ನಮ್ಮ ಮೇಲೆ ಗೂಬೆ ಕೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. 75 ಸಾವಿರ ಎಕರೆ ಭೂಮಿಯನ್ನು ಒಂದೇ ಹಂತದಲ್ಲಿ ಭೂ ಸ್ವಾಧೀನ ಮಾಡಲು ತೀರ್ಮಾನ ಮಾಡಲಾಗಿದೆ. ಮುಂದಿನ ಬಜೆಟ್ ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದರು.
30 ಲಕ್ಷ ಖುಷ್ಕಿ ಜಮೀನಿಗೆ, 40 ಲಕ್ಷ ನೀರಾವರಿ ಜಮೀನಿಗೆ ಪರಿಹಾರ ಕೊಡುವ ತೀರ್ಮಾನ ಮಾಡಲಾಗಿದೆ. ತೀರ್ಮಾನ ಮಾಡಿದಂತೆ ನಡೆಸಿಕೊಳ್ಳುತ್ತೇವೆ. ಒಪ್ಪಿಗೆ ಒಡಂಬಡಿಕೆ ನೀಡಲು ಕೂಡ ಸರ್ಕಾರ ಒಪ್ಪಿದೆ ಎಂದರು.
ಮೇಕೆದಾಟು ಯೋಜನೆ 67 ಟಿಎಂಸಿ ಸಂಗ್ರಹ ಮಾಡುವ ಬ್ಯಾಲೆನ್ಸಿಂಗ್ ರಿಸರ್ವಾಯರ್ ಗೆ ತಮಿಳುನಾಡು ಹಾಕಿದ್ದ ಪ್ರಕರಣಗಳು ವಜಾ ಆಗುವೆ. CWC ಹಾಗೂ ಕಾವೇರಿ ಜಲ ನಿರ್ವಹಣೆ ಪ್ರಾಧಿಕಾರದ ಅಂಗಳದಲ್ಲಿ ಪ್ರಕರಣವಿದೆ. ಕೇಂದ್ರ ಸರ್ಕಾರ ಅನುಮತಿ ನೀಡಲು ಈಗ ಯಾವುದೇ ತೊಂದರೆಯಿಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ 2023 _ 24 ರ ಬಜೆಟ್ ನಲ್ಲಿ 5300 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದರೂ ಇಂದಿನವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಅಸಹಕಾರ ಮನೋಭಾವವಿದು. ಜೆಜೆಎಂ ಯೋಜನೆಯಡಿ ಕಳೆದ ವರ್ಷ , ಹಾಗೂ ಈ ವರ್ಷ ಸೇರಿ 13 ಸಾವಿರ ಕೋಟಿ ಕೊಡಬೇಕು. 2023_ 24 ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು ಸಚಿವರು ಹೇಳಿದ್ದನ್ನೇ ಇಲ್ಲಿಯೂ ಹೇಳಿದರು. ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿಯೂ ಹೇಳಿದರು ಎಂದರು.
ನರೇಗಾ ಹಣವನ್ನು ಕೊಡದೆ , ಯೋಜನೆಯನ್ನು ಹೆಸರನ್ನು ಕೂಡ ಬದಲಾಯಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ನಾಲ್ಕುವರೆ ಲಕ್ಷ ಕೋಟಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಷ್ಟವಾಗಿದೆ. ನಾಲ್ಕುವರೆ ಲಕ್ಷ ಕೋಟಿ ತೆರಿಗೆಯನ್ನು ಒಂದು ವರ್ಷಕ್ಕೆ ರಾಜ್ಯ ಸರ್ಕಾರ ನೀಡುತ್ತಿದೆ. ಒಂದು ರೂಪಾಯಿ ಕೊಟ್ಟರೆ ರಾಜ್ಯಕ್ಕೆ 14 ರಿಂದ 15 ಪೈಸೆ ವಾಪಸ್ ಬರುತ್ತದೆ. 85 ಪೈಸೆ ಅವರೇ ಇಟ್ಟುಕೊಳ್ಳುತ್ತಾರೆ. ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯಲ್ಲಿ ತಾರತಮ್ಯ ಮಾಡುವುದಿಲ್ಲ. ಉತ್ತರ ಮತ್ತು ದಕ್ಷಿಣ ಜಿಲ್ಲೆಗಳು ನಮಗೆ ಒಂದೇ. ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದರು. ಇದಕ್ಕಾಗಿಯೇ ಪ್ರೊ.ಗೋವಿಂದರಾವ್ ಸಮಿತಿ ರಚನೆಯಾಗಿದೆ.
ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಲ್ಲ
ಉತ್ತರ ಕರ್ನಾಟಕದ ಭಾಗವನ್ನು ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. 2013 ರಿಂದ 18 ರವರೆಗೆ 1 ವರ್ಷಕ್ಕೆ 3 ಲಕ್ಷ ಮನೆ ಕಟ್ಟಿಸುತ್ತೇವೆ ಎಂದು ಹೇಳಿದ್ದೆವು. 14, 54, 663 ಐದು ವರ್ಷಗಳಲ್ಲಿ ಕಟ್ಟಿಸಿದ್ದೇವೆ. ಪ್ರತಿ ವರ್ಷ ಐದು ಲಕ್ಷ ಮನೆಗಳ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ 18 ರಿಂದ 19 ರಲ್ಲಿ 3.74 ಲಕ್ಷ ಮನೆಗಳನ್ನು ಕಟ್ಟಿಸಿದ್ದು, 19ರಿಂದ 23 ರವರೆಗೆ 4 ವರ್ಷಗಳಲ್ಲಿ 5,75,051 ಮನೆಗಳು ನಿರ್ಮಾಣವಾಗಿವೆ. ಎರಡೂವರೆ ವರ್ಷಗಳಲ್ಲಿ 49643 ಮನೆಗಳ ನಿರ್ಮಾಣವಾಗಿದೆ ಎಂದರು.
ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಕಟ್ಟದೆ ಬಿಟ್ಟವರು ಹಿಂದಿನ ಸರ್ಕಾರದವರು. ಫಲಾನುಭವಿಗಳಿಂದ ಹಣ ಪಡೆದು ಕೊಳಗೇರಿಯವರಿಗೆ ಮನೆ ಕಟ್ಟಬೇಕಿತ್ತು. ನಮ್ಮ ಸರ್ಕಾರ 4,09,643 ಮನೆಗಳನ್ನು ಕಟ್ಟಿದೆ.ಉತ್ತರ ಕರ್ನಾಟಕದಲ್ಲಿ 2,09,836 ಮನೆಗಳನ್ನು ಕಟ್ಟಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಶೈಕ್ಷಣಿಕ ಪ್ರಗತಿಗೆ ಛಾಯಾ ದೇಗಾಂವ್ಕರ್ ವರದಿ ಶಿಫಾರಸುಗಳ ಜಾರಿಗೆ ಸರ್ಕಾರ ಬದ್ಧ: ಸಿಎಂ
ಎಸ್.ಎಮ್. ಕೃಷ್ಣ ಅವರ ಕಾಲದಲ್ಲಿ ನಂಜುಂಡಪ್ಪ ಸಮಿತಿ ರಚನೆಯಾಗಿತ್ತು. ನಮ್ಮ ಸರ್ಕಾರ ಪ್ರೊ. ಗೋವಿಂದ್ ರಾವ್ ಸವಿತಿ ರಚನೆ ಮಾಡಿದೆ. ಅವರು ಜನವರಿಯಲ್ಲಿ ವರದಿಯನ್ನು ಸಲ್ಲಿಸುತ್ತಿದ್ದು, ಯಾವ ಜಿಲ್ಲೆ ಹಿಂದುಳಿದಿದೆಯೋ ಆ ಜಿಲ್ಲೆಗಳಿಗೆ ಹೆಚ್ಚು ಒತ್ತು ಕೊಟ್ಟು ಶಕ್ತಿ ತುಂಬ ಕೆಲಸ ಮಾಡಲಾಗುವುದು. ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ, ಮಾನವ ಅಭಿವೃದ್ಧಿ , ಮೂಲಭೂತ ಸೌಕರ್ಯ ಕೆಲಸಗಳನ್ನು ಮಾಡಲಾಗುವುದು. ಉತ್ತರ ಕರ್ನಾಟಕದ ಭಾಗವನ್ನು ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಕರ್ನಾಟಕದ ಎಲ್ಲ ಜನರ ತಲಾ ಆದಾಯ ಹೆಚ್ಚಬೇಕೆನ್ನುವುದು ನಮ್ಮ ಉದ್ದೇಶ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿಯವರೆಗೆ ಸರ್ಕಾರ ಕೆಲಸ ಮಾಡಿದ್ದು ಇನ್ನೂ ಮುಂದೆಯೂ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಾಗುವುದು ಎಂದರು. ಸಾಧ್ಯವಾದ ಮಟ್ಟಿಗೆ ತಲಾದಾಯದ ಅಂತರವನ್ನು ಕಡಿಮೆ ಮಾಡಲಾಗುವುದು ಎಂದರು.