ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಲ್ಯಾಣ ಕರ್ನಾಟಕ ಶೈಕ್ಷಣಿಕ ಪ್ರಗತಿಗೆ ಛಾಯಾ ದೇಗಾಂವ್ಕರ್ ವರದಿ ಶಿಫಾರಸುಗಳ ಜಾರಿಗೆ ಸರ್ಕಾರ ಬದ್ಧ: ಸಿಎಂ

371 ಜೆ ಜಾರಿ ಮಾಡಲು ಹೋರಾಡಿದ್ದು, ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಯ ವೇಗಕ್ಕೆ 371ಜೆ ಮೂಲಕ ಚಾಲನೆ ನೀಡಿದ್ದು ನಾವು. ನೀವೇನು ಮಾಡಿದ್ದೀರಿ ದಾಖಲೆ ಕೊಡಿ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಛಾಯಾ ದೇಗಾಂವ್ಕರ್ ವರದಿ ಶಿಫಾರಸುಗಳ ಜಾರಿಗೆ ಸರ್ಕಾರ ಬದ್ಧ: ಸಿಎಂ

ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ -

Prabhakara R
Prabhakara R Dec 19, 2025 5:05 PM

ಬೆಳಗಾವಿ, ಡಿ.19: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಪ್ರಗತಿಗೆ ಛಾಯಾ ದೇಗಾಂವ್ಕರ್ ವರದಿಯ ಶಿಫಾರಸುಗಳ ಜಾರಿಗೆ ನಮ್ಮ ಸರ್ಕಾರ ಬದ್ಧ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಘೋಷಿಸಿದರು. ಉತ್ತರ ಕರ್ನಾಟಕದ ಕುರಿತ ಚರ್ಚೆ ವೇಳೆ ಈ ಬಗ್ಗೆ ಮಾತನಾಡಿರುವ ಸಿಎಂ, ಕಲ್ಯಾಣ ಕರ್ನಾಟಕದ ಶಿಕ್ಷಣ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಲು ಶಿಕ್ಷಣ ತಜ್ಞರಾದ ಛಾಯಾ ದೇಗಾಂವ್ಕರ್ (Chaya Degaonkar report) ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದೇವೆ. ಸಮಿತಿಯು ವರದಿ ಸಲ್ಲಿಸಲು ಸಮಯ ಕೇಳಿದೆ. ಕೂಡಲೇ ವರದಿ ಸ್ವೀಕರಿಸಿ ಸಾಧಕ ಬಾಧಕ ಪರಿಶೀಲಿಸಿ ಅನುಷ್ಠಾನ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕುರಿತ ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡೆ ಹಿಂದೆ 1980ರ ಆಸುಪಾಸಿನಲ್ಲಿ ಧರಂಸಿಂಗ್ ಅವರ ಅಧ್ಯಕ್ಷತೆಯಲ್ಲಿ ಹೈಪವರ್ ಸಮಿತಿಯನ್ನು ಪ್ರಾರಂಭಿಸಲಾಯಿತು. ಹೈ ಪವರ್ ಕಮಿಟಿ ವರದಿಯನ್ನು ಆಧರಿಸಿ 1991 ಆ ರಲ್ಲಿ ಎಚ್.ಕೆ.ಡಿ.ಬಿ. ಯನ್ನು ಪ್ರಾರಂಭಿಸಲಾಯಿತು. ಆಗ ಯಾವ ಸರ್ಕಾರ ಇತ್ತು? ಎಂದು ಪ್ರಶ್ನಿಸಿದರು.

2002ರಲ್ಲಿ ಡಾ. ಡಿ.ಎಂ. ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆದಿದ್ದೆವು. ಸದರಿ ವರದಿಯನ್ನು ಆಧರಿಸಿ ಸುಮಾರು 35,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಹಾಗೂ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಖರ್ಚು ಮಾಡಿದ್ದೇವೆ. 2002 ರಲ್ಲಿ ಯಾವ ಸರ್ಕಾರವಿತ್ತು?

ಬೆಳಗಾವಿಯಲ್ಲಿ ಇ-ಖಾತಾ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

ವಾಜಪೇಯಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಆರ್ಟಿಕಲ್ 371 ಜೆ ಕೊಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದಲ್ಲಿ 6-11-2013 ರಂದು ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ವಿಶೇಷ ಸ್ಥಾನಮಾನದ 371 ಜೆ ಅನುಷ್ಠಾನ ಮಾಡಲಾಯಿತು. 371 ಜೆ ಅನುಷ್ಠಾನವಾದ ಮೇಲೆ ಆ ಭಾಗದ ಅಭಿವೃದ್ಧಿಗಾಗಿ 24,778 ಕೋಟಿ ರೂಗಳನ್ನು ಒದಗಿಸಿದ್ದೇವೆ. ಇದುವರೆಗೆ ಸುಮಾರು 14,800 ಕೋಟಿ ರೂ ಗಳಿಗಿಂತ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿದ್ದು ನಮ್ಮ ಸರ್ಕಾರ. 371 ಜೆ ಸ್ಥಾನಮಾನ ದೊರೆತ ನಂತರ ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇನ್ನಿತರ ಪದವಿ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇ.8 ರಷ್ಟು ಸ್ಥಾನಗಳನ್ನು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014-15 ರಿಂದ 2024 ರ ಶೈಕ್ಷಣಿಕ ಸಾಲಿನವರೆಗೆ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, 31,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇದಲ್ಲದೆ 12,000 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ದಂತ ವೈದ್ಯಕೀಯ, ಹೋಮಿಯೋಪತಿ, ಕೃಷಿ ಸಂಬAಧಿತ, ಬಿ-ಫಾರ್ಮಸಿ/ ಡಿ-ಫಾರ್ಮಸಿ ಕೋರ್ಸುಗಳು ಮುಂತಾದವುಗಳಿಗೆ ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಈ ವರ್ಷದ ಅಂಕಿ ಅಂಶಗಳೂ ಸೇರಿದರೆ ಇನ್ನಷ್ಟು ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವುದು ತಿಳಿಯುತ್ತದೆ.

ಈ ಎರಡೂ ವರದಿಗಳನ್ನು ಅನುಷ್ಠಾನ ಮಾಡಿದ ಮೇಲೆ ಪರಿಸ್ಥಿತಿ ಏನಾಗಿದೆಯೆಂದು ಪರಿಶೀಲಿಸುವ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಅರ್ಥಶಾಸ್ತ್ರಜ್ಞರುಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದೇವೆ. ಸದರಿ ಸಮಿತಿಯು ಸದ್ಯದಲ್ಲಿಯೆ ವರದಿ ಸಲ್ಲಿಸಲಿದೆ. ಆ ವರದಿ ಬಂದ ಕೂಡಲೆ ನಾವು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ನಮ್ಮ ಬಿ.ಆರ್ ಪಾಟೀಲರಾದಿಯಾಗಿ ಅನೇಕ ಸದಸ್ಯರು ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ. ನಮಗೂ ಈ ಕುರಿತು ಕಾಳಜಿಯಿದೆ. ಕಲ್ಯಾಣ ಕರ್ನಾಟಕದ ಶಿಕ್ಷಣ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಲು ಶಿಕ್ಷಣ ತಜ್ಞರಾದ ಛಾಯಾ ದೇಗಾಂವ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದೇವೆ. ಸದರಿ ಸಮಿತಿಯು ವರದಿ ಸಲ್ಲಿಸಲು ಸಮಯ ಕೇಳಿದ್ದಾರೆ. ಕೂಡಲೇ ವರದಿ ಸ್ವೀಕರಿಸಿ ಸಾಧಕ ಬಾಧಕ ಪರಿಶೀಲಿಸಿ ಅನುಷ್ಠಾನ ಮಾಡಲಾಗುವುದು.

ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಇಷ್ಟನ್ನೂ ಮಾಡಿದ್ದು ಯಾರು? ಕಾಂಗ್ರೇಸ್ ನೇತೃತ್ವದ ಸರ್ಕಾರಗಳೇ. ಇದೆಲ್ಲ ಸಾಧ್ಯವಾಗಿರುವುದು ನಮ್ಮ ಸರ್ಕಾರಗಳಿಂದಲೇ. ಕಳೆದ 20 ವರ್ಷಗಳಲ್ಲಿ ನೀವು ಸುಮಾರು 11 ವರ್ಷಗಳ ಕಾಲ ಅಧಿಕಾರದಲ್ಲಿ ಇದ್ರಿ. ಉತ್ತರ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಅಧಿಕಾರಕ್ಕೆ ಬರುವುದಕ್ಕೆ ಮೊದಲು ನಿಮಗೆ ಉತ್ತರ ಕರ್ನಾಟಕ ನೆನಪಾಗುತ್ತದೆ. ಅಧಿಕಾರದಲ್ಲಿದ್ದಾಗ ನಿಮಗೆ ಉತ್ತರ ಕರ್ನಾಟಕ ಇದೆ. ಅದರ ಹಿತಾಸಕ್ತಿ ಕಾಪಾಡಬೇಕು ಎಂದು ಅನ್ನಿಸುವುದೇ ಇಲ್ಲ ಎಂದು ಟೀಕಿಸಿದರು.

ಉತ್ತರ ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಏನು?

ಉತ್ತರ ಕರ್ನಾಟಕಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಹೇಳಬೇಕು? ಎಷ್ಟು ಸಂಸ್ಥೆಗಳನ್ನು ಪ್ರಾರಂಭಿಸಲಾಗಿದೆ? ಐಐಎಂಗಳು, ಏಮ್ಸ್ ಆಸ್ಪತ್ರೆಗಳು, ಇಎಸ್‌ಐ ಆಸ್ಪತ್ರೆಗಳು, ಕೇಂದ್ರದ ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು, ನೀರಾವರಿ ಯೋಜನೆಗಳು ಮುಂತಾದಂತೆ ಏನನ್ನು ಸ್ಥಾಪಿಸಲಾಗಿದೆ ಎಂಬುದನ್ನು ಹೇಳಬೇಕು? ಮೋದಿ ಸರ್ಕಾರದಲ್ಲಿ ಪ್ರಲ್ಹಾದ್‌ ಜೋಶಿಯವರು ನಿರಂತರವಾಗಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಕಂದಾಯ ವಿಭಾಗದ ಲೋಕಸಭಾ ಕ್ಷೇತ್ರಗಳಿಂದ ಆಯ್ಕೆಯಾಗುವ ಎಂಪಿಗಳು ಬಹುತೇಕರು ಬಿಜೆಪಿಯವರು. ಬೆಳಗಾವಿ, ಧಾರವಾಡ, ಹಾವೇರಿ-ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಆಯ್ಕೆಯಾಗಿರುವವರು ಯಾರು? ಇಷ್ಟಿದ್ದರೂ ಕೇಂದ್ರ ಸರ್ಕಾರದ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಪ್ರತಿ ಚುನಾವಣೆಯ ಸಂದರ್ಭದಲ್ಲೂ ಜನರಿಗ ಮೋಸ ಮಾಡುತ್ತಲೇ ಇದ್ದಾರೆ. ಡಬಲ್ ಎಂಜಿನ್ ಸರ್ಕಾರ ಇದ್ದರೆ ಅನುಕೂಲ ಎಂದು ಹೇಳುವುದು ಮಾಮೂಲಿ ಮಾತು. ಆದರೆ 2019 ರಿಂದ 2023 ರವರೆಗೆ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವೆ ಇದ್ದದ್ದು. ಆ ಸಂದರ್ಭದಲ್ಲಿಯಾದರೂ ಏನಾದರೂ ಯೋಜನೆಗಳನ್ನು ಈ ಭಾಗಕ್ಕೆ ಕೊಟ್ರಾ? ಈ ಭಾಗ ಅಷ್ಟೆ ಅಲ್ಲ ರಾಜ್ಯಕ್ಕೆ ಏನಾದ್ರೂ ಮಾಡಿದ್ರಾ? ಉತ್ತರ ಕರ್ನಾಟಕದ ಬಗ್ಗೆಯಾಗಲಿ, ಕರ್ನಾಟಕದ ಬಗ್ಗೆಯಾಗಲಿ ಮಾತಾಡುವ ನೈತಿಕತೆ ಎಲ್ಲಿದೆ ನಿಮಗೆ?

ಕೇಂದ್ರ ಸರ್ಕಾರಕ್ಕೆ ಈ ವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿಲ್ಲ. ಮಹದಾಯಿ ಯೋಜನೆಯನ್ನು ಇತ್ಯರ್ಥ ಪಡಿಸಲಾಗಿಲ್ಲ. ನಿಮಗೆ ನೈತಿಕತೆ ಇಲ್ಲವೆಂದು ಹೇಳಿ, ನಾವು ಸುಮ್ಮನಿರುವುದಿಲ್ಲ. ನಮಗೆ ನೈತಿಕತೆಯಿದೆ. ನಾವು ಸಮಗ್ರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಭಾಗದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.

ಆರ್ ಅಶೋಕ್, ವಿಜಯೇಂದ್ರ ಹಾಗೂ ಇನ್ನಿತರೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರುಗಳು ನಮ್ಮ ಸರ್ಕಾರ ಉತ್ತರ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆರ್.ಅಶೋಕ್ ಅವರು ಶ್ವೇತಪತ್ರವನ್ನೂ ಡಿಮ್ಯಾಂಡ್ ಮಾಡಿದ್ದಾರೆ. ನಾವು ತಯಾರಿದ್ದೇವೆ. 2006 ರಿಂದಲೂ ನೀವೇನು ಮಾಡಿದ್ದೀರಿ, ನಾವೇನು ಮಾಡಿದ್ದೇವೆ ಎಂಬುದನ್ನೂ ಹೇಳುತ್ತೇವೆ.

ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ರಾಜ್ಯದ ಭೌಗೋಳಿಕ ವಿಸ್ತೀರ್ಣ 1,91,791 ಚದರ ಕಿಮೀಗಳು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ವಿಸ್ತೀರ್ಣ1,01,708 ಚದರ ಕಿಮೀಗಳು. ವಿಸ್ತೀರ್ಣದಲ್ಲಿ ಶೇ.53 ರಷ್ಟು ಭೂ ಪ್ರದೇಶ ಈ ಭಾಗದಲ್ಲಿದೆ. ಜನಸಂಖ್ಯೆವಾರು ನೋಡಿದರೆ [ ಜನಸಂಖ್ಯಾ ಸಾಂದ್ರತೆ-ಉತ್ತರ ಕರ್ನಾಟಕದಲ್ಲಿ ಒಂದು ಕಿಮೀಗೆ 292 ಜನ ಜೀವಿಸುತ್ತಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ 443 ಜನ ಬದುಕುತ್ತಿದ್ದಾರೆ]

ಹಾಗೆಯೇ ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 97 ವಿಧಾನ ಸಭಾ ಕ್ಷೇತ್ರಗಳಿವೆ. ಇದರಲ್ಲೂ ಶೇ. 43 ರಷ್ಟು ಕ್ಷೇತ್ರಗಳು ಈ ಭಾಗದಲ್ಲಿವೆ. ಹಾಗಾಗಿ ಸರ್ಕಾರಗಳು ಜಾರಿಗೆ ತರುವ ಯೋಜನೆಗಳಲ್ಲೂ ಕನಿಷ್ಟ ಶೇ. 42 ರಿಂದ ಶೇ. 43 ರಷ್ಟಾದರೂ ಈ ಭಾಗಕ್ಕೆ ನೀಡಲೇಬೇಕು ಎಂಬುದು ನಮ್ಮ ಇರಾದೆಯಾಗಿದೆ.

ಗ್ಯಾರಂಟಿ ಯೋಜನೆಗಳು

45.​ನಮ್ಮ ಸರ್ಕಾರದ ಪ್ರಮುಖ ಸ್ಕೀಮ್‌ಗಳಲ್ಲಿ ಗ್ಯಾರಂಟಿ ಯೋಜನೆಗಳೂ ಸೇರಿವೆ. ಮೊದಲಿಗೆ ಈ ಭಾಗದ ಜನರಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಎಷ್ಟು ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಜನರ ಖಾತೆಗಳಿಗೆ ವರ್ಗಾವಣೆ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸದನದ ಮೂಲಕ ಜನರ ಗಮನಕ್ಕೆ ತರಬೇಕಾಗಿರುವುದು ನಮ್ಮ ಜವಾಬ್ಧಾರಿ.

ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದ ದಿನಾಂಕದಿಂದ ಅಕ್ಟೋಬರ್- ನವೆಂಬರ್ ವರೆಗೆ ನಮ್ಮ ಸರ್ಕಾರ 1,06,076 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಇದರಲ್ಲಿ 46,277 ಕೋಟಿ ರೂಪಾಯಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗಾಗಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಲಾಗಿದೆ. ಒಟ್ಟು ವೆಚ್ಚದಲ್ಲಿ ಶೇ. 43.63 ರಷ್ಟು ಅನುದಾನಗಳು ಈ ಭಾಗದ ಜನರಿಗಾಗಿ ವೆಚ್ಚ ಮಾಡಲಾಗಿದೆ.

ಈ ಸದನದಲ್ಲಿ ಅನೇಕರಿಗೆ ಗ್ಯಾರಂಟಿ ಯೋಜನೆಗಳ ಕುರಿತು ನಕಾರಾತ್ಮಕ ಭಾವನೆಗಳಿವೆ. ಆದರೆ ಇಡೀ ದೇಶದ ಆರ್ಥಿಕತೆ ಕುಸಿಯುತ್ತಿರುವಾಗ ಕರ್ನಾಟಕ ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿರುವುದಕ್ಕೆ ಗ್ಯಾರಂಟಿ ಯೋಜನೆಗಳ ಕೊಡುಗೆ ಬಹಳ ದೊಡ್ಡದಿದೆ.

ಮಾಜಿ ಸಚಿವರುಗಳಾಗಿದ್ದ ಶಶಿಕಲಾ ಜೊಲ್ಲೆಯವರು ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳ ಶಾಲೆ, ಕಾಲೇಜು, ಆಸ್ಪತ್ರೆ ಮುಂತಾದವುಗಳ ಕುರಿತಂತೆ ಹಲವು ಅಂಕಿ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅವರು ಹೇಳಿರುವ ಅಂಕಿ ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ.

Milk Incentive: ರಾಜ್ಯ ರೈತರಿಗೆ ಗುಡ್‌ನ್ಯೂಸ್‌; ಹಾಲಿನ ಪ್ರೋತ್ಸಾಹಧನ 7 ರೂ.ಗೆ ಹೆಚ್ಚಳ

ಲೋಕೋಪಯೋಗಿ ಇಲಾಖೆ

ವಿರೋಧ ಪಕ್ಷದ ಅನೇಕ ಸದಸ್ಯರು ಅಭಿವೃದ್ಧಿ ಕಾಮಗಾರಿಗಳ ಕುರಿತೂ ಪ್ರಸ್ತಾಪಿಸಿದ್ದಾರೆ. ನಾವು ಪಿಡಬ್ಲ್ಯುಡಿ ಕಾಮಗಾರಿಗಳಿಗಾಗಿ ಅಗತ್ಯ ಒದಗಿಸಿದ್ದೇವೆ. ಆದರೆ ಹಿಂದಿನ ಸರ್ಕಾರ ಅನುದಾನ ಒದಗಿಸದೆ ಕಾಮಗಾರಿಗಳನ್ನು ತೆಗೆದುಕೊಂಡ ಕಾರಣದಿಂದ ಬಿಜೆಪಿ ಸರ್ಕಾರ ಬಾಕಿ ಉಳಿಸಿದ್ದ ಬಿಲ್ಲುಗಳನ್ನು ತೀರಿಸುವ ಭಾರ ನಮ್ಮ ಮೇಲೆ ಬಿದ್ದಿದೆ. ಆದರೂ ಸಹ ಎರಡೂವರೆ ವರ್ಷಗಳಲ್ಲಿ 10,467 ಕಿ.ಮೀ. ರಸ್ತೆ ನಿರ್ಮಿಸಿದ್ದೇವೆ. ಜೊತೆಗೆ ನಿರ್ವಹಣೆಯನ್ನೂ ಮಾಡುತ್ತಿದ್ದೇವೆ. ನಾವು ಅಭಿವೃದ್ಧಿಯ ಪರವಾಗಿದ್ದೇವೆ ಎಂದು ಸಿಎಂ ತಿಳಿಸಿದರು.