ಬೆಳಗಾವಿ, ನ.19: ಗೃಹಲಕ್ಷ್ಮಿ ಯೋಜನೆ ಹಣ ಕೊಡಲು ನಿರಾಕರಿಸಿದ ಅಜ್ಜಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದಲ್ಲದೆ, ಆಕೆಯ ಬಳಿಯಿದ್ದ 2,300 ರೂಪಾಯಿ ಕಿತ್ತುಕೊಂಡು ಶವವನ್ನು ನದಿಯಲ್ಲಿ ಎಸೆದ ಹೀನ ಕೃತ್ಯ ಬೆಳಗಾವಿ ಜಿಲ್ಲೆ (Belagavi News) ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಹಮ್ಮವ್ವಾ ಸನದಿ (78) ಕೊಲೆಯಾದ ದುರ್ದೈವಿ.
ನವೆಂಬರ್ 10 ರಂದು ಭೀಮಪ್ಪ ರಾಮಪ್ಪ ಸನದಿ ಎಂಬಾತ ತನ್ನ ಅಜ್ಜಿಯನ್ನು ಸಂತೆಗೆ ಹೋಗುವ ನೆಪವಾಗಿ ಕರೆದೊಯ್ದಿದ್ದನು. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಬೆನ್ನಟ್ಟಿದ್ದ ಪೊಲೀಸರಿಗೆ ಮೊಮ್ಮಗನಿಂದ ಅಜ್ಜಿ ಕೊಲೆಯಾದ ಸಂಗತಿ ಬೆಳಕಿಗೆ ಬಂದಿದೆ.
ಆನ್‌ಲೈನ್ ಗೇಮ್ ಚಟಕ್ಕೆ ಬಲಿಯಾಗಿ 4 ಲಕ್ಷ ರೂಪಾಯಿ ಸಾಲ; ಹಣಕ್ಕಾಗಿ ಒಂದೇ ಕುಟುಂಬರ ಮೂವರ ಹತ್ಯೆ
ಕೊಲೆ ಆರೋಪಿ ಭೀಮಪ್ಪ ಸನದಿ ತನ್ನ ಅಜ್ಜಿಗೆ ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣ ನೀಡುವಂತೆ ಆಗ್ರಹಿಸುತ್ತಿದ್ದ. ಆದರೆ ಹಮ್ಮವ್ವಾ ಸನದಿ ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಭೀಮಪ್ಪ ತನ್ನ ಅಜ್ಜಿಗೆ ಸಂತೆಗೆ ಹೋಗೋಣ ಎಂದು ದ್ವಿಚಕ್ರ ವಾಹನದ ಮೇಲೆ ಅರಳಿಕಟ್ಟಿ ಗ್ರಾಮದ ಹೊರವಲಯದ ಗವಿ ಸಿದ್ದೇಶ್ವರ ಗುಡ್ಡಕ್ಕೆ ಕರೆದೊಯ್ದು ಮತ್ತೆ ಗೃಹಲಕ್ಷ್ಮಿ ಹಣ ಕೇಳಿದ್ದಾನೆ. ಆಗಲೂ ಅಜ್ಜಿ ಹಣ ಕೊಡಲು ಒಪ್ಪದಿದ್ದಾಗ ಸಿಟ್ಟಿನಿಂದ ಆಕೆಯ ಕೂದಲು ಹಿಡಿದು ಎಳೆದು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಬಳಿಕ ಮೃತ ಹಮ್ಮವ್ವಾ ಬಳಿ ಇದ್ದ ಗೃಹಲಕ್ಷ್ಮಿ ಯೋಜನೆಯ 2,300 ರೂಪಾಯಿ ಕಿತ್ತುಕೊಂಡಿದ್ದಾನೆ. ನಂತರ ಗೋಣಿ ಚೀಲದಲ್ಲಿ ಶವ ಕಟ್ಟಿಕೊಂಡು ಜಿನರಾಳ ಹತ್ತಿರದ ಘಟಪ್ರಭಾ ನದಿ ಡ್ಯಾಂ ಹಿನ್ನೀರಿಗೆ ಎಸೆದು ಪರಾರಿಯಾಗಿದ್ದಾನೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಭೀಮಪ್ಪಾ ಸನದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.