ಆನ್‌ಲೈನ್ ಗೇಮ್ ಚಟಕ್ಕೆ ಬಲಿಯಾಗಿ 4 ಲಕ್ಷ ರೂಪಾಯಿ ಸಾಲ; ಹಣಕ್ಕಾಗಿ ಒಂದೇ ಕುಟುಂಬರ ಮೂವರ ಹತ್ಯೆ
Duliajan Triple Murder: ನವೆಂಬರ್ 16ರಂದು ಅಸ್ಸಾಂನಲ್ಲಿ ನಡೆದ ಒಂದೇ ಕುಟುಂಬದ ಮೂವರ ಹತ್ಯೆ ಪ್ರಕರಣದ ನಿಗೂಢತೆ ಬಯಲಾಗಿದೆ. ಸಂಜೆ ದಿಬ್ರುಗಢ ಜಿಲ್ಲೆಯ ದುಲಿಯಾಜನ್‌ನ ಕಮ್ಲಾಬಾರಿ ಪ್ರದೇಶದಲ್ಲಿರುವ ತಮ್ಮ ಮನೆಯೊಳಗೆ ಮೂವರು ಕೊಲೆಯಾಗಿ ಪತ್ತೆಯಾಗಿದ್ದರು. ಆನ್‌ಲೈನ್ ಗೇಮ್ ಚಟಕ್ಕೆ ಬಲಿಯಾದ ರಾಜು ದಾಸ್ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ.
ಸಾಂದರ್ಭಿಕ ಚಿತ್ರ -
ದಿಸ್‌ಪುರ, ನ. 18: ಅಸ್ಸಾಂನಲ್ಲಿ ನಡೆದ ಒಂದೇ ಕುಟುಂಬದ ಮೂವರ ಹತ್ಯೆ ಪ್ರಕರಣದ ನಿಗೂಢತೆ ಬಯಲಾಗಿದೆ. ನವೆಂಬರ್ 16ರಂದು ದಿಬ್ರುಗಢ ಜಿಲ್ಲೆಯ ದುಲಿಯಾಜನ್‌ನ ಕಮ್ಲಾಬಾರಿ ಪ್ರದೇಶದಲ್ಲಿರುವ ತಮ್ಮ ಮನೆಯೊಳಗೆ ಚಂದ್ರಕಾಂತ ಮತ್ತು ಎಲಿಜಾ ಭುಯಾನ್ ದಂಪತಿ ಹಾಗೂ ಅವರ ಮಗಳು ಶವವಾಗಿ ಪತ್ತೆಯಾಗಿದ್ದರು. ಮೇಲ್ನೋಟಕ್ಕೆ ದರೋಡೆ ಉದ್ದೇಶದಿಂದ ಈ ಕೊಲೆ ನಡೆದಿದೆ ಎನ್ನುವುದು ಗೊತ್ತಾಗಿದ್ದರೂ ಕೊಲೆಗಾರನ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಕೊಲೆಗಾರ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೃತರ ಮನೆಯಲ್ಲಿ ಬಾಡಿಗೆಗೆ ಇದ್ದ 30 ವರ್ಷದ ರಾಜು ದಾಸ್ ಮತ್ತು ಆತನ ಸ್ನೇಹಿತ ಪ್ಲಂಬರ್ ಅಮೀರ್ ದಾಸ್ ಎಂದು ಗುರುತಿಸಲಾಗಿದೆ.
ಗುವಾಹಟಿ ಮೂಲಕ ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದ ಮುಖ್ಯ ಆರೋಪಿ ರಾಜು ದಾಸ್ ಮತ್ತು ಆತನ ಸಹಚರನನ್ನು ಅಸ್ಸಾಂನ ಶಿವಸಾಗರದಲ್ಲಿ ರೈಲೊಂದರಿಂದ ಬಂಧಿಸಲಾಗಿದೆ.
ಆನ್‌ಲೈನ್ ಗೇಮ್‌ಗೆ ಬಲಿಯಾಗಿದ್ದ ರಾಜು ದಾಸ್
ʼʼಆನ್‌ಲೈನ್ ಗೇಮ್ ಚಟಕ್ಕೆ ಬಲಿಯಾಗಿದ್ದ ರಾಜು ದಾಸ್ ಸುಮಾರು 4 ಲಕ್ಷ ರೂಪಾಯಿ ಸಾಲ ಹೊಂದಿದ್ದಾನೆ. ಇದಕ್ಕಾಗಿ ಆತ ಚಂದ್ರಕಾಂತ ಮತ್ತು ಮನೆಯವರು ಹತ್ಯೆ ಮಾಡಿದ್ದಾನೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ತಂದೆ ಬಳಿಯಿಂದ ಸಾಲ ಮಾಡಿ ಹಣ ಕಳೆದುಕೊಂಡಿದ್ದಾಗಿ ಬಾಯ್ಬಿಟ್ಟ ರಾಜು, ದರೋಡೆಯ ಉದ್ದೇಶದಿಂದ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನ ಸ್ನೇಹಿತ ಅಮೀರ್ ದಾಸ್ ಕೊಲೆಗೆ ಸಹಾಯ ಮಾಡಿದ್ದಾನೆ. ಇವರಿಬ್ಬರು ಶಿವಸಾಗರ್ ಜಿಲ್ಲೆಯಲ್ಲಿ ರೈಲೊಂದರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಂದೆಯನ್ನು ಕೊಂದ 7 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಪುತ್ರ
ಬೆಂಗಳೂರಿಗೆ ಪರಾರಿಯಾಗಲು ಸಂಚು
ದಿಬ್ರುಗಢದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಅಪರಾಧ ವಿಭಾಗ) ನಿರ್ಮಲ್ ಘೋಷ್ ಮಾಹಿತಿ ನೀಡಿ, ʼʼರಾಜು ಮತ್ತು ಅಮೀರ್ ಗುವಾಹಟಿ ಮೂಲಕ ಬೆಂಗಳೂರಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಮಾಲುಗುರಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆʼʼ ಎಂದಿದ್ದಾರೆ. ರಾಜು ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ.
"ತನಿಖೆಯ ವೇಳೆ ರಾಜು ದಾಸ್ ತನ್ನ ತಂದೆಯಿಂದ ಸಾಲವಾಗಿ ಪಡೆದಿದ್ದ ಸುಮಾರು 4 ಲಕ್ಷ ರೂಪಾಯಿಗಳನ್ನು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಾಲವನ್ನು ತೀರಿಸಲು ಆತ ಅಮೀರ್ ಜತೆ ದರೋಡೆಗೆ ಸಂಚು ರೂಪಿಸಿದ್ದ" ಎಂದು ಘೋಷ್ ಹೇಳಿದ್ದಾರೆ. ಘಟನೆ ನಡೆಯುವ ಸುಮಾರು ಮೂರು ದಿನಗಳ ಮೊದಲು ಇವರಿಬ್ಬರೂ ಫೋನ್ ಮೂಲಕ ಸಂಪರ್ಕದಲ್ಲಿದ್ದು, ದರೋಡೆ ಮತ್ತು ಕೊಲೆಗಳಿಗೆ ಯೋಜನೆ ರೂಪಿಸಿದ್ದರು ಎಂದು ಅವರು ತಿಳಿಸಿದ್ದಾರೆ.
"ಪ್ರಾಥಮಿಕ ತನಿಖೆಯ ಪ್ರಕಾರ ದುಷ್ಕರ್ಮಿಗಳು ನವೆಂಬರ್ 16ರ ಬೆಳಗ್ಗೆ 8.30ರ ಸುಮಾರಿಗೆ ಮನೆಗೆ ನುಗ್ಗಿ, ಸುತ್ತಿಗೆಯಿಂದ ಕುಟುಂಬದ ಮೂವರು ಸದಸ್ಯರ ಮೇಲೆ ದಾಳಿ ನಡೆಸಿ ಅವರನ್ನು ಕೊಲೆ ಮಾಡಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಮಧ್ಯಾಹ್ನ 12.15ರ ಸುಮಾರಿಗೆ ಅಪರಾಧ ನಡೆದ ಸ್ಥಳದಿಂದ ಪರಾರಿಯಾಗಿದ್ದರು" ಎಂದು ವಿವರಿಸಿದ್ದಾರೆ. ಬಂಧಿತರಿಂದ 15,000 ರೂಪಾಯಿ ನಗದು ಮತ್ತು 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ, 3 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ: ವಾಟ್ಸ್‌ಆ್ಯಪ್ ಚಾಟ್ ಮೂಲಕ ಪತ್ನಿಯ ಕೊಲೆ ಸಂಚು ಬಯಲು
ಬೆಳಕಿಗೆ ಬಂದಿದ್ದೇಗೆ?
ಘಟನೆ ನಡೆದ ದಿನ ಸಂಜೆ ಬಾಡಿಗೆದಾರರೊಬ್ಬರು ಛತ್ ಪೂಜೆಯ ಪ್ರಸಾದ ನೀಡಲು ಚಂದ್ರಕಾಂತ ಅವರ ಮನೆಗೆ ತೆರಳಿದಾಗ ಹತ್ಯೆಯ ರಹಸ್ಯ ಬಯಲಾಗಿತ್ತು. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ಕೊಲೆಗಾರರನ್ನು ಪತ್ತೆ ಹಚ್ಚಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.