ಸವದತ್ತಿ: ಸವದತ್ತಿ ಜನತೆಯ ಬಹಳ ದಿನಗಳ ಬೇಡಿಕೆಯಾದ ಒಳಚರಂಡಿ ಅಭಿವೃದ್ಧಿ ಯೋಜನೆ ಕಾಮಗಾರಿ ಪ್ರಾರಂಭಗೊಂಡಿದ್ದು, ಪಟ್ಟಣದ ಸ್ವಚ್ಛತೆಗೆ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ(MLA Vishwas Vaidya) ಗುತ್ತಿಗೆದಾರರಿಗೆ ಸೂಚಿಸಿದರು.
ಇಲ್ಲಿನ ಗಾಂಧಿ ಚೌಕ್ ದಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹಾಗೂ ಯಲ್ಲಮ್ಮ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಒಳಚರಂಡಿ ಯೋಜನೆಯ ಅಭಿವೃದ್ಧಿ ಹಾಗೂ ಉನ್ನತೀಕರಣ ಕಾಮಗಾರಿಯ ಭೂಮಿ ಪೂಜೆ ನೆರವೇ ರಿಸಿ ಮಾತನಾಡಿ, 123 ಕೋಟಿಯ ಯೋಜನೆಯಲ್ಲಿ ಮೊದಲ ಹಂತವಾಗಿ 41 ಕೋಟಿ ಮಂಜೂರಾಗಿದೆ. ಇದರಲ್ಲಿ ಮಳೆ ನೀರು ಪ್ರತ್ಯೇಕವಾಗಿ ಸಾರಾಗವಾಗಿ ಸಾಗಲು ಕ್ರಮ ವಿರಿಸಲಾಗಿದೆ.
ಇದನ್ನೂ ಓದಿ: Belagavi News: ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು
5 ಕೋಟಿ ವೆಚ್ಚದ ಲಂಡೇನ ಹಳ್ಳ ಹೂಳೆತ್ತುವ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಕೂಡ ಸೇರಿದೆ. ಈ ಬೃಹತ್ ಕಾಮಗಾರಿಯು ಐದು ವರ್ಷಗಳ ಕಾಲ ಗುತ್ತಿಗೆದಾರರ ನಿರ್ವಹಣೆಯಲ್ಲಿರಲಿದೆ. ಇದು ಪಟ್ಟಣದ ನೈರ್ಮಲ್ಯ, ಆರೋಗ್ಯ ಮತ್ತು ಮೂಲಸೌಕರ್ಯ ಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. 44 ವರ್ಷದ ನಂತರ ಮೇ 4 ರಂದು ಜರುಗುವ ಗ್ರಾಮದೇವಿ ಜಾತ್ರೆಗೆ ಅನುಕೂಲವಾಗುವಂತೆ ಕಾರ್ಯಗಳನ್ನು ರೂಪಿಸಿ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ. ಪಟ್ಟಣದ ಮದ್ಯಭಾಗವಾದ ಆನಿ ಅಗಸಿ ಬಜಾರ, ಅಲಾರಕಿ ಓಣಿ, ಕಟ್ಟಿ ಓಣಿ, ಪದಕಿ ಓಣಿ, ಅಕ್ಕಿ ಓಣಿ, ಬೇವಿನಕಟ್ಟಿ ಓಣಿ ಸೇರಿ ಗ್ರಾಮದೇವಿ ಸಂಚರಿಸುವ ಕಡೆಗಳಲ್ಲಿ ಮೊದಲು ಕಾಮಗಾರಿ ಪೂರ್ಣಗೊಳ್ಳಲಿ ಎಂದರು.
ಮುಖ್ಯಧಿಕಾರಿ ಸಂಗನಬಸಯ್ಯ ಗದಗಿಮಠ ಮಾತನಾಡಿ, ಒಳಚರಂಡಿ ಕಾಮಗಾರಿಗೆ ಮೊದಲ ಹಂತವಾಗಿ 41 ಕೋಟಿ ಟೆಂಡರ ಆಗಿದ್ದು 34.37 ಲಕ್ಷ ಹಣ ಬಿಡುಗಡೆಯಾಗಿದೆ. ಇದರಲ್ಲಿ 5 ಕೋಟಿ ವೆಚ್ಚದ ಲಂಡೇನ ಹಳ್ಳ ಹೂಳೆತ್ತುವ ಹಾಗೂ ತಡೆ ಗೋಡೆ ನಿರ್ಮಾಣ, 11 ಕೋಟಿ ವೆಚ್ಚದಲ್ಲಿ 46 ಲಕ್ಷ ಲೀ. ನೀರನ್ನು ಶೇಖರಿಸಿ ಶುದ್ದಿಕರಿಸುವ ಘಟಕಗಳ ಕಾಮಗಾರಿಯೂ ಸೇರಿದೆ. ಗ್ರಾಮದೇವಿ ಸಂಚರಿಸುವ ಗಲ್ಲಿಯಲ್ಲಿ ಮೊದಲು ಕಾಮಗಾರಿ ಪೂರ್ಣಗೊಳಿಸಲಾಗುವದು. ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ವೇಳೆ ಅಶ್ವಥ್ ವೈದ್ಯ, ಚಿನ್ನವ್ವ ಹುಚ್ಚಣ್ಣವರ, ಪ್ರಭು ಪ್ರಭುನವರ, ಮಂಜುನಾಥ್ ಪಾಚಂಗಿ, ಮಲ್ಲಿಕಾರ್ಜುನ ಬೇವೂರ, ಬಸವರಾಜ್ ಗುರಣ್ಣವರ, ಪ್ರವೀಣ್ ರಾಮಪ್ಪನವರ, ದಿಲಾವರ ಸನದಿ, ಅರ್ಜುನ ಆಮೋಜಿ, ಬಸವರಾಜ ಅತ್ತಿಗೇರಿ ಸೇರಿ ಪ್ರಮುಖರು ಇದ್ದರು.