ಬೆಳಗಾವಿ, ಡಿ.10: ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025 (Hate Speech and Hate Crimes (Prevention) Bill) ಅನ್ನು ವಿಧಾನಸಭೆಯಲ್ಲಿ ಸರ್ಕಾರ ಬುಧವಾರ ಮಂಡಿಸಿದೆ. ಈ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಒಪ್ಪಿಗೆ ನೀಡಲಾಗಿತ್ತು. ಇದೀಗ ಬಿಜೆಪಿ ವಿರೋಧದ ನಡುವೆ ಮಸೂದೆ ಮಂಡಿಸಲಾಗಿದೆ.
ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಇಂತಹ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.
ದ್ವೇಷ ಭಾಷಣ ಮಾಡುವವರಿಗೆ ಈ ಮಸೂದೆ ಅನ್ವಯ 1 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಇದೇ ಅಪರಾಧವನ್ನು ಪುನರಾವರ್ತಿಸಿದರೆ 2 ವರ್ಷದಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಇಂತಹ ಕೃತ್ಯಗಳನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ದ್ವೇಷಾಪರಾಧದಿಂದ ಆಗಿರುವ ಹಾನಿಯ ತೀವ್ರತೆ ಪರಿಗಣಿಸಿರುವ ಸರ್ಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಿದ್ದು, ಈ ಅಪರಾಧಗಳ ವಿಚಾರಣೆಯನ್ನು ಜೆಎಂಎಫ್‌ಸಿ ನ್ಯಾಯಾಲಯ ನಡೆಸಲಿದೆ. ಈಗಿರುವ ಕಾನೂನಿನ ಪ್ರಕಾರ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 153A, ಸೆಕ್ಷನ್ 295A, ಸೆಕ್ಷನ್ 505 ಸೆಕ್ಷನ್‌ಗಳನ್ನು ದ್ವೇಷ ಭಾಷಣದ ವಿರುದ್ಧ ಬಳಸಲಾಗುತ್ತಿದೆ.
ಬಿಜೆಪಿ ಶಾಸಕರ ವಿರೋಧ
ಈ ಕಾಯ್ದೆಯಡಿ ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ. ಈ ಮೂಲಕ ಪರೋಕ್ಷವಾಗಿ ವಿಧೇಯಕದಲ್ಲಿ ಆರ್‌ಎಸ್‌ಎಸ್ ಟಾರ್ಗೆಟ್ ಮಾಡಲಾಗಿದೆ ಎಂಬುದು ಬಿಜೆಪಿ ಆರೋಪವಾಗಿದೆ. ಹೀಗಾಗಿ ಮಸೂದೆಗೆ ಕಮಲ ನಾಯಕರು ವಿರೋಧಿಸಿದ್ದಾರೆ.
ಇನ್ನು ದ್ವೇಷ ಭಾಷಣಗಳ ಕಂಟೆಂಟ್‌ಗಳನ್ನು ಡೊಮೈನ್‌ನಿಂದ ಬ್ಲಾಕ್ ಮಾಡುವ ಅಥವಾ ತೆಗೆದು ಹಾಕುವ ಅಧಿಕಾರವೂ ಗೊತ್ತುಪಡಿಸಿದ ಅಧಿಕಾರಿಗಳಿಗೆ ವಿಧೇಯಕ ನೀಡಿದೆ.
ಯುಕೆಪಿ ಹಂತ-3 ಯೋಜನೆ ಜಾರಿಗೆ ಮಹಾರಾಷ್ಟ್ರ, ಆಂಧ್ರ ಅಡ್ಡಗಾಲು: ಡಿ.ಕೆ. ಶಿವಕುಮಾರ್
ಮಂಡನೆಯಾದ 12 ಪ್ರಮುಖ ವಿಧೇಯಕಗಳು
ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕಾನೂನು ವಿಧೇಯಕ (ತಿದ್ದುಪಡಿ), ಔಷಧ ಮತ್ತು ಪ್ರಸಾಧನಾ ಸಾಮಾಗ್ರಿ ವಿಧೇಯಕ (ಕರ್ನಾಟಕ ತಿದ್ದುಪಡಿ), ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿ ಕಾರ್ಯಕರ್ತರ (ತಿದ್ದುಪಡಿ) ವಿಧೇಯಕ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (2ನೇ ತಿದ್ದುಪಡಿ) ವಿಧೇಯಕ ಮಂಡನೆಯಾಗಿವೆ.