ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿ ಟನ್ ಕಬ್ಬಿಗೆ 3,600 ದರ ರೂ. ನಿಗದಿ; ಸಚಿವ ಸತೀಶ್‌ ಜಾರಕಿಹೊಳಿ ಘೋಷಣೆ

ಕಳೆದ ಒಂದು ತಿಂಗಳಿನಿಂದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆಯುತ್ತಿದ್ದ ತೀವ್ರ ದರ ಸಂಘರ್ಷಕ್ಕೆ ಕೊನೆಗೂ ತೆರೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸುದೀರ್ಘ ಸಂಧಾನ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ರೂ. 3,600 ದರ ನಿಗದಿಪಡಿಸಲಾಗಿದೆ.

ಸಂಗ್ರಹ ಚಿತ್ರ

ಬೆಳಗಾವಿ: ಕಳೆದ ಒಂದು ತಿಂಗಳಿನಿಂದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆಯುತ್ತಿದ್ದ ತೀವ್ರ ದರ ಸಂಘರ್ಷಕ್ಕೆ ಕೊನೆಗೂ ತೆರೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನೇತೃತ್ವದಲ್ಲಿ ನಡೆದ ಸುದೀರ್ಘ ಸಂಧಾನ ಸಭೆಯಲ್ಲಿ, ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 3,600 ರೂ. ದರ ನಿಗದಿಪಡಿಸಲು ಅಧಿಕೃತ ತೀರ್ಮಾನ ಕೈಗೊಳ್ಳಲಾಗಿದೆ.

ಸುವರ್ಣ ಸೌಧದಲ್ಲಿ ನಡೆದ ತ್ರಿಪಕ್ಷೀಯ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ಹೊರತುಪಡಿಸಿ ಈ ದರವನ್ನು ನಿಗದಿಪಡಿಸಲಾಗಿದೆ ಎಂದು ಪ್ರಕಟಿಸಿದರು. ರೈತರಿಗೆ ಯಾವುದೇ ವಿಳಂಬವಿಲ್ಲದೆ ಈ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಲು ಕಾರ್ಖಾನೆಗಳ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ಹೆಚ್ಚಿಸಿದರೆ, ಅದರಿಂದ ಬರುವ ಹೆಚ್ಚುವರಿ ಲಾಭದಲ್ಲೂ ರೈತರಿಗೆ ಸೂಕ್ತ ಪಾಲು ನೀಡಲು ಕಾರ್ಖಾನೆ ಮಾಲೀಕರು ಸಮ್ಮತಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರತಿ ಟನ್‌ಗೆ 5,500 ರೂ. ವರೆಗೆ ದರ ನಿಗದಿಗೆ ಆಗ್ರಹಿಸಿ ಹಾಗೂ ರಾಜ್ಯ ಸಲಹಾ ಬೆಲೆ (SAP) ಜಾರಿಗೆ ಒತ್ತಾಯಿಸಿ ಚಳವಳಿ ನಡೆಸುತ್ತಿದ್ದ ರೈತ ಮುಖಂಡರು, ಸರ್ಕಾರದ ಈ ತೀರ್ಮಾನವನ್ನು ತಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ಬಣ್ಣಿಸಿದ್ದಾರೆ. ಆದರೆ, ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ನೇತೃತ್ವದ ರೈತ ಸಂಘದ ಕೆಲವು ಬಣಗಳು 3,600 ರೂ. ದರಕ್ಕೆ ಪೂರ್ಣ ಒಮ್ಮತ ಸೂಚಿಸದೆ, ಅಧಿಕೃತ ಸರ್ಕಾರಿ ಆದೇಶ ಹೊರಡಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದಿವೆ.

ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಲಿ, ಆದರೆ ಹೋರಾಟದ ಹೆಸರಿನಲ್ಲಿ ಜನರಿಗೆ ತೊಂದರೆಯಾಗದಿರಲಿ: ಸಣ್ಣಪುಟ್ಟ ವ್ಯಾಪಾರಿಗಳ ಅಳಲು

ಕಾರ್ಖಾನೆಗಳು ತಕ್ಷಣವೇ ಕಾರ್ಯಾರಂಭ ಮಾಡಲಿದ್ದು, ರೈತರು ತಮ್ಮ ಇತರ ಬಾಕಿ ಬೇಡಿಕೆಗಳನ್ನು ಹಂಗಾಮು ಆರಂಭವಾದ ಬಳಿಕ ಸರ್ಕಾರದ ಮುಂದೆ ಪ್ರತ್ಯೇಕವಾಗಿ ಮಂಡಿಸಬಹುದಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

Vishakha Bhat Heggar

View all posts by this author