ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಭೂಮಿ ಹಕ್ಕಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿದ ಅರಣ್ಯವಾಸಿಗಳು; ಶಿರಸಿಯಲ್ಲಿ ಬೃಹತ್ ಮೇಲ್ಮನವಿ ಅಭಿಯಾನ

Sirsi News: ಶಿರಸಿಯಲ್ಲಿ ಬೃಹತ್ ಅರಣ್ಯವಾಸಿಗಳ ಐತಿಹಾಸಿಕ ಮಹಾಸಂಗ್ರಾಮ ಮೇಲ್ಮನವಿ ಅಭಿಯಾನವು, ರಾಜ್ಯ ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶನಿವಾರ ಜರುಗಿತು. ಇಪ್ಪತ್ತು ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.

ಭೂಮಿ ಹಕ್ಕಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿದ ಅರಣ್ಯವಾಸಿಗಳು

-

Profile Siddalinga Swamy Oct 4, 2025 5:42 PM

ಶಿರಸಿ: ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಮಂಜೂರು ಮಾಡಲು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳಿಂದ ಐತಿಹಾಸಿಕ ಮಹಾಸಂಗ್ರಾಮ ಬೃಹತ್ ಮೇಲ್ಮನವಿ ಅಭಿಯಾನವು ಶಿರಸಿಯಲ್ಲಿ (Sirsi News) ಶನಿವಾರ ನಡೆಯಿತು. ರಾಜ್ಯ ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ತೆರಳಿ, 20 ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಮೇಲ್ಮನವಿಗಳನ್ನು ಸಲ್ಲಿಸಲಾಯಿತು.

ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿದ್ದ ಅರ್ಜಿಗಳು ತಿರಸ್ಕೃತಗೊಂಡಿರುವುದನ್ನು ವಿರೋಧಿಸಿ ಮೇಲ್ಮನವಿ ಅಭಿಯಾನ ಕೈಗೊಳ್ಳಲಾಗಿತ್ತು. ಅರಣ್ಯವಾಸಿಗಳ ಬೃಹತ್ ಹೋರಾಟದಲ್ಲಿ ಜಿಲ್ಲೆಯ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗಿಯಾಗಿದ್ದರು.

ಸರ್ಕಾರವು ಪುನರ್ ಪರಿಶೀಲಿಸದೇ ಅರ್ಜಿಗಳನ್ನು ಕೇಂದ್ರಕ್ಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಿರಸ್ಕರಿಸಿದ ಆದೇಶವನ್ನು ಪ್ರದರ್ಶಿಸುತ್ತಾ, ಗಟ್ಟಿ ಹೋರಾಟದ ಧ್ವನಿ ಅರಣ್ಯವಾಸಿಗಳಿಂದ ಅಭಿಯಾನದಲ್ಲಿ ಕೇಳಿಬಂದವು.

ಕಾನೂನು ಬಾಹಿರವಾಗಿ ಸುಪ್ರಿಂ ಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ನಿಯಮ ಉಲ್ಲಂಘಿಸಲಾಗಿದೆ.ಈ ಬಗ್ಗೆ ಫೆ.28ರಂದು ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಲೋಕಸಭೆಯಲ್ಲಿ ಕೇಂದ್ರ ಸಚಿವರು ಉತ್ತರ ನೀಡಿದ್ದಾರೆ. ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ, ಕರ್ನಾಟಕದಲ್ಲಿ 2,94,489 ಒಟ್ಟು ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ 16,326 ಸಾಗುವಳಿ ಹಕ್ಕು ನೀಡಲಾಗಿದೆ. ಬಂದಿರುವಂತಹ ಅರ್ಜಿಗಳಲ್ಲಿ 2,53,269 (ಶೇ.87.77) ಅರಣ್ಯವಾಸಿಗಳ ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ ಎಂಬ ಅಂಶ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನೂ ಓದಿ | CM Siddaramaiah: ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರನ್ನು ಆತಂಕಗೊಳಿಸಿದೆ: ಸಿಎಂ ಸಿದ್ದರಾಮಯ್ಯ

ಅದರಂತೆ ರಾಜ್ಯ ಬುಡಕಟ್ಟು ಇಲಾಖೆಯ ವರದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಕಾಯಿದೆ ಮಂಜೂರಿಗೆ ಸಂಭಂದಪಟ್ಟಂತೆ 88,453 ಅರ್ಜಿ ಸ್ವೀಕರಿಸಲ್ಪಟ್ಟಿದ್ದು, ಅವುಗಳಲ್ಲಿ 2,867 (ಶೇ. 3.2) ಅರ್ಜಿ ಸಾಗುವಳಿ ಹಕ್ಕು ದೊರಕಿದೆ. ಬಂದಿರುವಂತಹ ಒಟ್ಟು ಅರ್ಜಿಗಳಲ್ಲಿ 73,859 (ಶೇ.82.76) ಅರ್ಜಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸದೇ ಅರ್ಜಿ ತಿರಸ್ಕರಿಸಿದ ವರದಿಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಆಕ್ಷೇಪಣಾ ಪತ್ರದ ಮೇಲ್ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.