Sugarcane Farmers Protest: ಬೆಳಗಾವಿಯಲ್ಲಿ 3 ಕಿ.ಮೀ.ವರೆಗೆ ಪೊಲೀಸರನ್ನು ಬೆನ್ನಟ್ಟಿ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು
Police lathi charge in Belagavi: ಬೆಳಗಾವಿ ಮಾತ್ರವಲ್ಲದೆ ಬಾಗಲಕೋಟೆ, ವಿಜಯಪುರದಲ್ಲಿ ರೈತರು ರಸ್ತೆಗೆ ಇಳಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ಪೊಲೀಸರನ್ನು ಬೆನ್ನಟ್ಟಿ ಕಲ್ಲು ತೂರಿದ ಪ್ರತಿಭಟನಾಕಾರರು. -
ಬೆಳಗಾವಿ, ನ.7: ಪ್ರತಿ ಟನ್ ಕಬ್ಬಿಗೆ 3,500 ರೂ. ನೀಡಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಹೋರಾಟ (Sugarcane Farmers Protest) 9ನೇ ದಿನವಾದ ಶುಕ್ರವಾರವೂ ಮುಂದುವರಿದಿದೆ. ಬೆಳಗಾವಿ ಮಾತ್ರವಲ್ಲದೆ ಬಾಗಲಕೋಟೆ, ವಿಜಯಪುರದಲ್ಲಿ ರೈತರು ರಸ್ತೆಗೆ ಇಳಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಜಾರ್ಜ್ ನಡೆಸಿದ್ದಾರೆ. ಆದರೆ, ರೊಚ್ಚಿಗೆದ್ದ ಕೆಲವರು, ಪ್ರತಿಭಟನಾ ಸ್ಥಳ ಬಿಟ್ಟು ಸುಮಾರು ಮೂರು ಕಿಲೋಮೀಟರ್‌ವರೆಗೆ ಪೊಲೀಸರನ್ನು ಬೆನ್ನಟ್ಟಿ ಕಲ್ಲು ತೂರಾಟ ನಡೆಸಿರುವುದು ಕಂಡುಬಂದಿದೆ.
ಹುಕ್ಕೇರಿ ತಾಲೂಕಿನ ಸಾವಿರಾರು ರೈತರು ಟ್ರ್ಯಾಕ್ಟರ್ಗಳ ಸಮೇತ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದರು. ಈ ವೇಳೆ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ರೈತರು ಆಕ್ರೋಶ ಹೊರಹಾಕಿದ್ದಾರೆ.
ಕೆಲ ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್‌ವರೆಗೆ ಪೊಲೀಸರನ್ನು ಬೆನ್ನಟ್ಟಿ ಕಲ್ಲು ತೂರಾಟ ಮಾಡಿರುದ್ದಾರೆ.
ಪ್ರಸ್ತುತ ಎಫ್ಆರ್‌ಪಿ ದರದಂತೆ ರೈತರಿಂದ ಕಬ್ಬು ಖರೀದಿಸುತ್ತೇವೆ ಎಂದ ಸಕ್ಕರೆ ಕಾರ್ಖಾನೆ ಮಾಲೀಕರು
ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಶುಕ್ರವಾರ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರೈತರ ಬೇಡಿಕೆ ಈಡೇರಿಸುವುದರಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಪ್ರಮುಖವಾಗಿವೆ ಮತ್ತು ಕಾರ್ಖಾನೆಗಳ ಜವಾಬ್ದಾರಿಯೂ ಇದೆ. ನಾವು ರೈತರ ಪರವಾಗಿ ನಿಲ್ಲುತ್ತೇವೆ. ರೈತರ ಸಮಸ್ಯೆ ಬಗೆಹರಿಸಲು ನೀವೂ ಸಿದ್ಧರಿರಬೇಕು ಎಂದು ಹೇಳಿದ್ದಾರೆ.
ಕಬ್ಬು ಬೆಳೆಗಾರರಿಗೆ ನೆರವಾಗುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್ಆರ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕಾರ್ಯ. ಕೇಂದ್ರ ಸರ್ಕಾರ ದಿನಾಂಕ 6-05-2025ರಲ್ಲಿ ಎಫ್ಆರ್‌ಪಿ ನಿಗದಿಪಡಿಸಿದೆ. ಅದರಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್‌ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಇದೀಗ ಕೇಂದ್ರ ಸರ್ಕಾರ ಸಮಸ್ಯೆ ಹುಟ್ಟು ಹಾಕಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್‌ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Sugarcane Farmers Protest: ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ಸಮಯ ಕೋರಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಸಕ್ಕರೆ ಕಾರ್ಖಾನೆ ಮಾಲೀಕರ ಪರವಾಗಿ ಮುರುಗೇಶ್ ನಿರಾಣಿ ಮಾತನಾಡಿ, ಎಲ್ಲಾ ಸರ್ಕಾರಗಳಲ್ಲೂ ಕಬ್ಬು ಬೆಳೆಗಾರರ ಸಮಸ್ಯೆ ಮುಂದುವರಿಯುತ್ತಾ ಬಂದಿದೆ. ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದವನ್ನು ರಾಜ್ಯ ಸರ್ಕಾರ ನವೀಕರಣ ಮಾಡಿರುವುದಿಲ್ಲ. ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಯವರಿಂದ ಖರೀದಿಸುವ ವಿದ್ಯುತ್ ಪ್ರತಿ ಯುನಿಟ್‌ಗೆ ರೂ. 6 ಪಾವತಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಒಪ್ಪಂದ ಮಾಡಬೇಕಿದೆ. ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್‌ಗೆ 60 ಪೈಸೆ ತೆರಿಗೆ ನಿಗದಿಪಡಿಸಿರುವುದನ್ನು ಕೈಬಿಡಬೇಕು. ಸಕ್ಕರೆ ಕಾರ್ಖಾನೆಗಳ ನಡುವಿನ ಅಂತರ ಕನಿಷ್ಠ 25 ಕಿ.ಮೀ. ನಿಗದಿಪಡಿಸಬೇಕು. ಏವಿಯೇಷನ್ ಇಂಧನಕ್ಕೆ ಎಥನಾಲ್ ಮಿಶ್ರಣ ಅನುಮತಿಯನ್ನು ಆದಷ್ಟು ಬೇಗನೆ ನೀಡುವಂತೆ ಪ್ರಧಾನಿ ಅವರಿಗೆ ಮನವಿ ಮಾಡಬೇಕು. ಪ್ರತಿ ಟನ್‌ಗೆ ಎಫ್‌ಆರ್‌ಪಿ 3,500 ರೂ. ನೀಡಲು ಸಾಧ್ಯವಿಲ್ಲ, ಪ್ರಸ್ತುತ ರೈತರಿಗೆ ಎಫ್ಆರ್‌ಪಿ ಪ್ರಕಾರ ದರ ನೀಡಲಾಗುವುದು. ಹೆಚ್ಚುವರಿ ಆದಾಯ ಸಾಧ್ಯವಾದರೆ ಸೀಸನ್ ಮುಗಿದ ಬಳಿಕ ಅದನ್ನು ರೈತರಿಗೆ ಹಂಚಿಕೆ ಮಾಡಲು ಸಿದ್ಧರಿದ್ದೇವೆ ಎಂದರು.