ಬೆಳಗಾವಿ, ನ. 3: ಜುಲೈಯಲ್ಲಿ ಚಾಮರಾಜನಗರದ ಹನೂರು ತಾಲೂಕಿನ ಮೀಣ್ಯಂ ಸಮೀಪದ ಅರಣ್ಯದಲ್ಲಿ ಒಂದೇ ದಿನ 5 ಹುಲಿಗಳು ಮೃತಪಟ್ಟ ಘಟನೆ ಭಾರಿ ಸುದ್ದಿಯಾಗಿತ್ತು. ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಆ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆಗಳು ಸಾವನ್ನಪ್ಪಿವೆ. ಜಮೀನಿನ ಬಳಿ ತಂತಿ ಬೇಲಿಗೆ ವಿದ್ಯುತ್ ಕನೆಕ್ಷನ್ ನೀಡಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ (Belagavi News). ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಆನೆ ಸಾವನ್ನಪ್ಪಿವೆ.
ಜಮೀನಿನ ಬೇಲಿಗೆ ಅಕ್ರಮವಾಗಿ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದ ಆರೋಪದಲ್ಲಿ ರೈತ ಗಣಪತಿ ಸಾತೇರಿ ಗುರವ್ ಅವರನ್ನು ಅರಣ್ಯ ಇಲಾಖೆ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ಪ್ರಕರಣದಲ್ಲಿ ಗಣಪತಿಯ ಮಗ ಶಿವಾಜಿ ಗುರವ್ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ತನಿಖೆಗೆ ಆದೇಶಿಸಿದ್ದಾರೆ. ಆನೆಗಳ ಮರಣೋತ್ತರ ಪರೀಕ್ಷೆ ನೆರವೇರಿಸಿ ಅರಣ್ಯ ಇಲಾಖೆಯ ವತಿಯಿಂದ ಅಂತ್ಯಕ್ರಿಯೆ ನಡೆಸಲಾಯಿತು.
ಈ ಸುದ್ದಿಯನ್ನೂ ಓದಿ: Tiger Kill: ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ, ತನಿಖೆಗೆ ಆದೇಶ
ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳ ಸಾವು
ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ 2 ಹುಲಿ ಮರಿಗಳು ಮೃತಪಟ್ಟಿರುವ ಘಟನೆ ನಡೆದಿತ್ತು. ಹಸಿವಿನಿಂದ ನಿತ್ರಾಣಗೊಂಡು ಹುಲಿ ಮರಿಗಳು ಸಾವನ್ನಪ್ಪಿದ್ದವು. ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಶಾಖೆಯ ಹೊಳೆಮೂರ್ದಟ್ಟಿ ಗಸ್ತಿನ ಕಿರಬನಕಲ್ಲುಗುಡ್ಡ ಬಳಿ ಈ ಘಟನೆ ವರದಿಯಾಗಿತ್ತು. ತಾಯಿಯಿಂದ ಬೇರ್ಪಟ್ಟ 1 ಹೆಣ್ಣು, 1 ಗಂಡು ಹುಲಿ ಮರಿಗಳು ಕೊನೆಯುಸಿರೆಳೆದಿದ್ದವು.
ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನ ವೇಳೆ ಹುಲಿ ಮರಿಗಳ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. 2-3 ದಿನಗಳ ವ್ಯತ್ಯಾಸದಲ್ಲಿ ಹುಲಿ ಮರಿಗಳು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು.