ಬೆಂಗಳೂರು: ರಥ ಸಪ್ತಮಿ ಅಂಗವಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಬೆಂಗಳೂರಿನ ವಿದ್ಯಾರಣ್ಯಪುರದ ಎನ್ಟಿಐ ಆಟದ ಮೈದಾನದಲ್ಲಿ ಭಾನುವಾರ ಬೆಳಗ್ಗೆ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಕುಸುಮ ಮಂಜುನಾಥ್, ಚಿದಾನಂದ, SPYSS ಬೆಂಗಳೂರು ಮಹಾನಗರ ಘಟಕದ ಸಹ ಸಂಚಾಲಕ ಲೋಹಿತ್, ಲಕ್ಷ್ಮಣ ಹಾಗೂ 600ಕ್ಕೂ ಹೆಚ್ಚು ಯೋಗ ಪಟುಗಳು ಭಾಗವಹಿಸಿದ್ದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಬಗ್ಗೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಯೋಗ ವಿದ್ಯೆಯ ಮೂಲಕ ಸಮಾಜವನ್ನು ಸದೃಢಗೊಳಿಸುತ್ತಾ ಸನ್ಮಾರ್ಗದಲ್ಲಿ ಮುನ್ನೆಡೆಸುತ್ತಿರುವ ಸಂಘಟನೆಯಾಗಿದೆ. ಸಮಿತಿಯು ಮಲ್ಲಾಡಿಹಳ್ಳಿಯ ಪರಮಪೂಜ್ಯರಾದ ಶ್ರೀ ರಾಘವೇಂದ್ರಸ್ವಾಮಿಗಳ ಆಶೀರ್ವಾದದೊಂದಿಗೆ ಹಾಗೂ ಅಜಿತ ಕುಮಾರ್ ರವರ ಮಾರ್ಗದರ್ಶನದಲ್ಲಿ ಹಾಗೂ ವಿಶ್ವ ವಿಖ್ಯಾತ ಯೋಗಾಚಾರ್ಯ ಪದ್ಮ ವಿಭೂಷಣ ಡಾ. ಬಿ.ಕೆ.ಎಸ್. ಅಯ್ಯಂಗಾರ್ ರವರ ಸಾಧನಾ ಕ್ರಮದೊಂದಿಗೆ 1980ರಲ್ಲಿ ತುಮಕೂರಿನಲ್ಲಿ ಆ.ರ.ರಾಮಸ್ವಾಮಿ ಅಣ್ಣನವರ ನೇತೃತ್ವದಲ್ಲಿ ಪ್ರಾರಂಭವಾಯಿತು.
'ಸಂಸ್ಕಾರ' 'ಸಂಘಟನೆ' 'ಸೇವೆ' ಎಂಬ ಧ್ಯೇಯೋದ್ದೇಶಗಳೊಂದಿಗೆ ಪುಟ್ಟ ಸಸಿಯಾಗಿ ಜನ್ಮ ತಳೆದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಾಲವಾದ ಬೃಹತ್ ವೃಕ್ಷವಾಗಿ ಹರಡಿ ಇಂದು 700ಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಲಕ್ಷಾಂತರ ಯೋಗ ಬಂಧುಗಳ ಮಹಾನ್ ಪರಿವಾರವಾಗಿದೆ. ಶುಲ್ಕ ರಹಿತವಾಗಿ ಸಾವಿರಾರು ಶಿಬಿರಗಳನ್ನು ಆಯೋಜಿಸುತ್ತಾ ಜನರಿಗೆ ಆರೋಗ್ಯ, ಧನಾತ್ಮಕ ಚಿಂತನೆ. ಕ್ರಿಯಾಶೀಲ ವ್ಯಕ್ತಿತ್ವ ಹಾಗೂ ಆದರ್ಶ ಕುಟುಂಬದ ತರಬೇತಿಯನ್ನು ನೀಡುತ್ತಾ, ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣೀಭೂತವಾಗಿದೆ.
ಸಮಿತಿಯು ಯೋಗ ವಿದ್ಯೆ ಮುಖಾಂತರ ಸಮಾಜದ ಅವಶ್ಯಕತೆಗಳಾದಂಥ ಆರೋಗ್ಯ, ಮಕ್ಕಳಿಗೆ ದೈಹಿಕ ಶಿಕ್ಷಣ, ಯುವಕರಿಗೆ ಮಾರ್ಗದರ್ಶನ, ಗೃಹಸ್ಥಾಶ್ರಮ ಧರ್ಮ, ಸ್ವಚ್ಚತೆ ಹಾಗೂ ಸೌಂದರ್ಯ, ಒತ್ತಡರಹಿತ ವ್ಯವಸ್ಥಿತ ಜೀವನ, ವೃತ್ತಿಯಲ್ಲಿ ನಾವೀನ್ಯತೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಮಾಡುತ್ತಿದೆ. ಈ ಎಲ್ಲಾ ಉದ್ದೇಶ ಸಾಧನೆಗೆ ನಮ್ಮ ಋಷಿ ಪರಂಪರೆಯಿಂದ ಬಂದಂತಹ ಯೋಗ ಶಿಕ್ಷಣವು ಸಾರ್ವತ್ರಿಕವಾಗಿ ಎಲ್ಲರಿಗೂ ಒಗ್ಗುವಂತಹ ಮಾಧ್ಯಮವಾಗಿದೆ.
ಇದನ್ನೂ ಓದಿ : ಆಚರಣೆಯಿಂದ ಅರಿವಿಗೆ: ಎಳ್ಳಿನ ಸಂಕ್ರಾಂತಿಯ ಸಂದೇಶ
ಸಮಿತಿಯು ಉಚಿತವಾಗಿ ಯೋಗಾಸನ, ಪ್ರಾಣಾಯಾಮ, ಧ್ಯಾನ, ಭಜನೆ, ಸತ್ಸಂಗದ ಜೊತೆಗೆ ಮಾತೃಭೋಜನ, ಭಾರತ ಮಾತಾ ಪೂಜಾ, ಯೋಗ ಚಿಕಿತ್ಸೆ, ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರಗಳು, ಸ್ನೇಹ ಮಿಲನ, ಯೋಗ ಪ್ರವಾಸ, ರಥಸಪ್ತಮಿಯಂದು 108 ಸೂರ್ಯನಮಸ್ಕಾರಗಳು, ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ರಕ್ಷಾಬಂಧನ ಕಾರ್ಯಕ್ರಮಗಳ ಆಚರಣೆಯನ್ನು ಒಗ್ಗೂಡಿ ಮಾಡುತ್ತಾ ಸಾಂಸ್ಕೃತಿಕವಾಗಿ ಒಂದುಗೂಡಿಸುತ್ತಿದೆ.