ಬೆಂಗಳೂರು: ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ (ED Raid) ಅವರ ಮನೆಯ ಮೇಲೆ ಸೆ.6ರಂದು ನಡೆಸಿದ್ದ ದಾಳಿ ವೇಳೆ ಬರೋಬ್ಬರಿ 21.43 ಕೆಜಿ ಚಿನ್ನದ ಬಿಸ್ಕೆಟ್‌ಗಳು, 10.98 ಕೆಜಿ ಚಿನ್ನಲೇಪಿತ ಬೆಳ್ಳಿ ಗಟ್ಟಿಗಳು, 24 ಕೋಟಿ ಮೌಲ್ಯದ 1 ಕೆಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಡಿ ಮಾಹಿತಿ ಹಂಚಿಕೊಂಡಿದೆ. ಕೆ.ಸಿ. ವೀರೇಂದ್ರ ಮತ್ತು ಇತರರ ವಿರುದ್ಧ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಪಿಎಂಎಲ್‌ಎ ಕಾಯ್ದೆ 2002ರಡಿ ಬೆಂಗಳೂರಿನ ಇಡಿಯಿಂದ, ಚಳ್ಳಕೆರೆಯಲ್ಲಿ ಸೆ.6ರಂದು ದಾಳಿ ನಡೆಸಲಾಗಿತ್ತು. ಈ ವೇಳೆ ವಶಕ್ಕೆ ಪಡೆದ ವಸ್ತುಗಳು ಸೇರಿ ಈವರೆಗೆ ಜಪ್ತಿ ಮಾಡಿರುವ ಒಟ್ಟಾರೆ ಸ್ವತ್ತುಗಳ ಮೌಲ್ಯ 100 ಕೋಟಿ ರೂ.ಗಳನ್ನು ಮೀರಿದೆ ಎಂದು ಇಡಿ ಹೇಳಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಡಿಯಿಂದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಬಂಧನ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ (MLA Satish Sail) ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆಗೆ ಹಾಜರಾದ ವೇಳೆ ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಲಾಗಿದೆ. ಆಗಸ್ಟ್ 13, 14ರಂದು ಇಡಿ ಅಧಿಕಾರಿಗಳಿಂದ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ದಾಳಿ ನಡೆದಿತ್ತು. ಈ ವೇಳೆ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ವಿಚಾರಣೆ ಬಳಿಕ ಶಾಸಕನನ್ನು ಬಂಧಿಸಲಾಗಿದೆ.
ಇಡಿ ಅಧಿಕಾರಿಗಳು ಆ.13 ಮತ್ತು 14ರಂದು ಶಾಸಕ ಸತೀಶ್ ಸೈಲ್ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ದಾಳಿಯಲ್ಲಿ ವೇಳೆ 1.68 ಕೋಟಿ ರೂಪಾಯಿ ನಗದು, 6.75 ಕೆಜಿ ಚಿನ್ನ (ಆಭರಣ ಮತ್ತು ಚಿನ್ನದ ಬಿಸ್ಕೆಟ್‌ಗಳು ಸೇರಿದಂತೆ) ಪತ್ತೆಯಾಗಿತ್ತು. 14.13 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು. ಹಣಕಾಸು ದಾಖಲೆಗಳು, ಇ-ಮೇಲ್‌ಗಳು, ಆಸ್ತಿ-ಸ್ಥಿರಾಸ್ತಿ ದಾಖಲೆಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇಡಿ ಬೆಂಗಳೂರು ಘಟಕದ ಅಧಿಕಾರಿಗಳು, ಶಾಸಕನಿಗೆ ಸಂಬಂಧಿಸಿದ ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯ ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಸಿದ್ದರು.
ಈ ಹಿಂದೆ ಬೇಲೆಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಾಸಕ ಬಂಧನವಾಗಿ, ಜಾಮೀನು ಪಡೆದು ಬಿಡುಗಡೆಯಾಗಿದ್ದರು. 2009-10ರ ಸಮಯದಲ್ಲಿ ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಆರೋಪದ ಮೇಲೆ 2010ರಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನಂತರ ಸಿಬಿಐಗೆ ವರ್ಗಾಯಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ | K.C.Veerendra Puppy: ಅಕ್ರಮ ಬೆಟ್ಟಿಂಗ್ ಪ್ರಕರಣ: ಶಾಸಕ ವೀರೇಂದ್ರ ಪಪ್ಪಿಗೆ 14 ದಿನ ನ್ಯಾಯಾಂಗ ಬಂಧನ
2024ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸತೀಶ್ ಸೈಲ್ ಸೇರಿದಂತೆ ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 9.6 ಕೋಟಿ ರೂ. ದಂಡ ವಿಧಿಸಿತ್ತು. ಆದರೆ, ಹೈಕೋರ್ಟ್ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದ್ದರಿಂದ ಬಿಡುಗಡೆಯಾಗಿದ್ದರು. ಈಗ, ಅಕ್ರಮ ಹಣ ವರ್ಗಾವಣೆ (PMLA) ಕಾಯ್ದೆಯಡಿ ಬಂಧನವಾಗಿದ್ದಾರೆ.