ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಅಪೋಲೋ ಕ್ಯಾನ್ಸರ್ ಸೆಂಟರ್ ನ ವೈದ್ಯರು ಅತ್ಯಂತ ಅಪರೂಪದ ವೈದ್ಯಕೀಯ ಸಾಧನೆಯೊಂದನ್ನು ಮಾಡಿದ್ದಾರೆ. ಕಳೆದ ಎರಡೂ ವರೆ ದಶಕಗಳಿಂದ ನಿಯಂತ್ರಿಸಲಾಗದ 'ಜೆಲ್ಯಾಸ್ಟಿಕ್ ಸೀಜರ್ಸ್' (ನಗುವಿನ ಫಿಟ್ಸ್) ಸಮಸ್ಯೆಯಿಂದ ಬಳಲುತ್ತಿದ್ದ 30 ವರ್ಷದ ಮಹಿಳೆಗೆ 'ಸೈಬರ್ ನೈಫ್' ಎಂಬ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.
ಬಾಲ್ಯದಿಂದಲೇ ಈ ಸಮಸ್ಯೆಗೆ ತುತ್ತಾಗಿದ್ದ ಈ ಮಹಿಳೆ, ಕಳೆದ 25 ವರ್ಷಗಳಿಂದ ಪ್ರತಿದಿನ 30 ರಿಂದ 40 ಬಾರಿ ನಿಯಂತ್ರಣವಿಲ್ಲದ ನಗುವಿನ ಫಿಟ್ಸ್ ಅನುಭವಿಸುತ್ತಿದ್ದರು. ಮೆದುಳಿನ ಅಸಹಜ ಚಟುವಟಿಕೆಯಿಂದ ಉಂಟಾಗುವ ಈ ಸ್ಥಿತಿಯಿಂದಾಗಿ ಅವರ ದೈನಂದಿನ ಜೀವನ ದುಸ್ತರವಾಗಿತ್ತು. ಹಲವಾರು ಫಿಟ್ಸ್ ವಿರೋಧಿ ಮಾತ್ರೆಗಳು ಮತ್ತು ನರರೋಗ ತಪಾಸಣೆ ಗಳನ್ನು ಮಾಡಿಸಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಅಪೋಲೋದ ವೈದ್ಯರು ನೀಡಿದ ಸೈಬರ್ ನೈಫ್ ಚಿಕಿತ್ಸೆಯ ನಂತರ, ದಶಕಗಳ ಕಾಲ ಅನುಭವಿಸಿದ ಈ ಸಮಸ್ಯೆಯಿಂದ ಅವರಿಗೆ ದೊಡ್ಡ ಮಟ್ಟದ ಸುಧಾರಣೆ ಸಿಕ್ಕಿದ್ದು, ಫಿಟ್ಸ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಸಾಮಾನ್ಯವಾಗಿ ಇದನ್ನು "ನಗುವಿನ ಫಿಟ್ಸ್" ಎಂದು ಕರೆಯಲಾಗುತ್ತದೆ. ಇದು ಅಪಸ್ಮಾರದ ಅತ್ಯಂತ ಅಪರೂಪದ ರೂಪವಾಗಿದೆ. ರೋಗಿಗಳು ಯಾವುದೇ ಕಾರಣವಿಲ್ಲದೆ ಹಠಾತ್ ಆಗಿ ತಡೆರಹಿತವಾಗಿ ನಗಲಾರಂಭಿಸುತ್ತಾರೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಮತ್ತು ಬಾಲ್ಯ ದಲ್ಲೇ ಕಾಣಿಸಿಕೊಳ್ಳುತ್ತದೆ. ಜಗತ್ತಿನಾದ್ಯಂತ ದಾಖಲಾಗುವ ಅಪಸ್ಮಾರದ ಪ್ರಕರಣಗಳಲ್ಲಿ ಇಂತಹ ಘಟನೆಗಳು ಅತ್ಯಂತ ವಿರಳವಾಗಿದ್ದು, ಇದು ಸಾಮಾನ್ಯವಾಗಿ ಮೆದುಳಿನಲ್ಲಿರುವ 'ಹೈಪೋಥಾಲಾಮಿಕ್ ಹ್ಯಾಮರ್ಟೋಮಾ' ಎಂಬ ಸಣ್ಣ ಗಡ್ಡೆಯಿಂದ ಉಂಟಾಗುತ್ತದೆ.
ಇದನ್ನೂ ಓದಿ: Health Tips: ಈ ಆಹಾರ ಅರಿವಿಲ್ಲದೆಯೇ ನಿಮ್ಮ ರಕ್ತದೊತ್ತಡ ಹೆಚ್ಚಿಸಬಹುದು; ಎಚ್ಚರ!
ಸಾಂಪ್ರದಾಯಿಕ ಔಷಧಿಗಳಿಂದ ಇದನ್ನು ಗುಣಪಡಿಸುವುದು ಕಷ್ಟಕರವಾದ್ದರಿಂದ, ಇದನ್ನು ಸರಿಯಾಗಿ ಪತ್ತೆಹಚ್ಚುವುದು ಕೂಡ ವೈದ್ಯಕೀಯ ಲೋಕಕ್ಕೆ ಸವಾಲಾಗಿತ್ತು. ಈ ಚಿಕಿತ್ಸೆಯಲ್ಲಿ ಬಳಸಲಾದ 'ಸೈಬರ್ ನೈಫ್' ತಂತ್ರಜ್ಞಾನವು ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ರೋಬೊಟಿಕ್ ರೇಡಿಯೋ ಸರ್ಜರಿ ಮೂಲಕ ಮೆದುಳಿನ ಆಳದಲ್ಲಿರುವ ಸಮಸ್ಯೆಯನ್ನು ನಿಖರವಾಗಿ ಸರಿಪಡಿಸುತ್ತದೆ. ಮಹಿಳೆಯ ಆರೋಗ್ಯದಲ್ಲಿ ಕಂಡುಬಂದಿರುವ ಈ ಚೇತರಿಕೆ ಯು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಸೈಬರ್ ನೈಫ್ ತಂತ್ರಜ್ಞಾನವು ಮೆದುಳಿನ ಗಡ್ಡೆಯ ಚಲನೆಯನ್ನು ನಿರಂತರವಾಗಿ ಪತ್ತೆ ಹಚ್ಚುತ್ತದೆ ಮತ್ತು ಯಾವುದೇ ಸಣ್ಣ ಚಲನೆ ಕಂಡುಬಂದರೂ ಚಿಕಿತ್ಸಕ ಕಿರಣವನ್ನು ಸ್ವಯಂಚಾಲಿತವಾಗಿ ಸರಿಪಡಿಸಿಕೊಳ್ಳುತ್ತದೆ. ಇದು ನಿರಂತರ ಇಮೇಜ್ ಗೈಡೆನ್ಸ್ ತಂತ್ರಜ್ಞಾನ ಮತ್ತು ರೋಬೊಟಿಕ್ ಹಸ್ತದ ಸಹಾಯದಿಂದ ಮಿಲಿಮೀಟರ್ ಗಿಂತಲೂ ಕಡಿಮೆ ನಿಖರತೆಯೊಂದಿಗೆ ವಿಕಿರಣವನ್ನು ಹಾಯಿಸುತ್ತದೆ.
ಇದರ ಪರಿಣಾಮವಾಗಿ, ವಿಕಿರಣವು ಸಂಪೂರ್ಣವಾಗಿ ಗುರಿಗೆ ತಾಕುತ್ತದೆ ಮತ್ತು ಸುತ್ತ ಮುತ್ತಲಿನ ಸಾಮಾನ್ಯ ಅಂಗಾಂಶಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳ ಲಾಗುತ್ತದೆ. ಇದನ್ನು ವಿವಿಧ ರೀತಿಯ ಕ್ಯಾನ್ಸರ್, ಕ್ಯಾನ್ಸರ್ ಅಲ್ಲದ ಗಡ್ಡೆಗಳು ಮತ್ತು ಕಾರ್ಯಚಟುವಟಿಕೆಯ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಬಳಸಬಹುದಾಗಿದೆ.
ಈ ಚಿಕಿತ್ಸೆಯ ಯಶಸ್ಸು ಜೆಲ್ಯಾಸ್ಟಿಕ್ ಸೀಜರ್ಸ್ (ನಗುವಿನ ಫಿಟ್ಸ್) ಮಾತ್ರವಲ್ಲದೆ, ಪಾರ್ಕಿನ್ಸನ್ ಕಾಯಿಲೆ, ಎಸೆನ್ಷಿಯಲ್ ಟ್ರೆಮರ್ (ಕೈ ನಡುಕ), ಟ್ರೈಜಿಮಿನಲ್ ನ್ಯೂರಾಲ್ಜಿ ಯಾ ಮತ್ತು ಸರ್ವಿಕಲ್ ಡಿಸ್ಟೋನಿಯಾದಂತಹ ಸಂಕೀರ್ಣ ನರರೋಗ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆಯನ್ನು ನೀಡಿದೆ. ವಿಶೇಷವಾಗಿ ಸಾಂಪ್ರದಾ ಯಿಕ ಔಷಧಿಗಳಿಗೆ ಸ್ಪಂದಿಸದ ರೋಗಿಗಳಿಗೆ ಇದು ವರದಾನವಾಗಿದೆ. ಅಲ್ಲದೆ, ಇದು 'ಡೀಪ್ ಬ್ರೈನ್ ಸ್ಟಿಮ್ಯುಲೇಶನ್' ನಂತಹ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಅತ್ಯುತ್ತಮ ವಾದ ಶಸ್ತ್ರಚಿಕಿತ್ಸೆ ರಹಿತ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ.
ಈ ಕುರಿತು ಮಾತನಾಡಿದ ಬೆಂಗಳೂರಿನ ಅಪೋಲೋ ಕ್ಯಾನ್ಸರ್ ಸೆಂಟರ್ ನ ಸೈಬರ್ ನೈಫ್ ವಿಭಾಗದ ಮುಖ್ಯಸ್ಥರು ಹಾಗೂ ಸೀನಿಯರ್ ಕನ್ಸಲ್ಟೆಂಟ್ ಡಾ. ಶ್ರೀಧರ್ ಪಿ.ಎಸ್. ಅವರು, "ಬೆಂಗಳೂರಿನ ಅಪೋಲೋ ಕ್ಯಾನ್ಸರ್ ಸೆಂಟರ್ ನಲ್ಲಿ ನಾವು ಸುಧಾರಿತ ಮತ್ತು ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸೆಯ ಸಾಧ್ಯತೆಗಳನ್ನು ಸದಾ ಹುಡುಕುತ್ತಿರುತ್ತೇವೆ. ಅಪರೂಪದ ಮತ್ತು ಸಂಕೀರ್ಣವಾದ ಅಪಸ್ಮಾರ ಸಮಸ್ಯೆ ಇರುವ ರೋಗಿಗಳಿಗೆ, ತಲೆಬುರುಡೆಯನ್ನು ತೆರೆಯದೆ ಅಥವಾ ಅರಿವಳಿಕೆ ನೀಡದೆ, ಫಿಟ್ಸ್ ಪ್ರಚೋದಿಸುವ ಮೆದುಳಿನ ಭಾಗವನ್ನು ನಿಖರವಾಗಿ ಗುರಿಯಾಗಿಸಿಕೊಂಡು ಚಿಕಿತ್ಸೆ ಒದಗಿಸಲು ಸೈಬರ್ ನೈಫ್ ತಂತ್ರಜ್ಞಾನ ನಮಗೆ ಅನುವು ಮಾಡಿಕೊಡುತ್ತದೆ.
ಇದರ ನಿಖರತೆಯು ಮೆದುಳಿನ ಆರೋಗ್ಯಕರ ಅಂಗಾಂಶಗಳನ್ನು ರಕ್ಷಿಸುತ್ತದೆ ಮತ್ತು ಸಂಪೂರ್ಣ ಚಿಕಿತ್ಸೆಯು ನೋವುರಹಿತ, ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ಯಾಗಿರುತ್ತದೆ. ಇದು ಈ ಹಿಂದೆ ಬಹಳ ಸೀಮಿತ ಆಯ್ಕೆಗಳನ್ನು ಹೊಂದಿದ್ದ ರೋಗಿಗಳಿಗೆ ನಾವು ನೀಡಬಹುದಾದ ಅತ್ಯಂತ ಮಹತ್ವದ ನೆರವಾಗಿದೆ. ಈ ವಿಧಾನವು ರೋಗಿಯ ಜೀವನದ ಗುಣಮಟ್ಟವನ್ನು ಹೇಗೆ ಸಂಪೂರ್ಣವಾಗಿ ಬದಲಾಯಿಸಬಹುದು ಎಂಬುದಕ್ಕೆ ನಾವೇ ಸಾಕ್ಷಿಯಾಗಿದ್ದೇವೆ.
ನಮ್ಮ ರೋಗಿಯು ತನ್ನ ಜೀವನದ ಮೇಲೆ ನಿಯಂತ್ರಣ ಸಾಧಿಸಿ, ದೈನಂದಿನ ಚಟುವಟಿಕೆ ಗಳಿಗೆ ಮರಳಿರುವುದು ಮತ್ತು ಅವರು ಬಯಸಿದ್ದ ಉತ್ತಮ ಬದುಕನ್ನು ಹೊಂದಿರುವುದು ನಮಗೆ ತುಂಬು ಪ್ರೋತ್ಸಾಹ ನೀಡಿದೆ. ಯಾವುದೇ ದಾರಿಯಿಲ್ಲ ಅಂದುಕೊಂಡು ನಿರಾಶರಾದವರಿಗೆ ಇದು ನಿಜಕ್ಕೂ ಮರುಜೀವ ನೀಡುವಂತಹ ಚಿಕಿತ್ಸೆಯಾಗಿದೆ," ಎಂದು ತಿಳಿಸಿದರು.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ನರರೋಗ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಗುರುಚರಣ್ ಆಡೂರ್ ಮಾತನಾಡಿ, "ಜೆಲ್ಯಾಸ್ಟಿಕ್ ಸೀಜರ್ಸ್ (ನಗುವಿನ ಫಿಟ್ಸ್) ಎಂಬುದು ಅಪಸ್ಮಾರದ ಅತ್ಯಂತ ಸಂಕೀರ್ಣ ರೂಪಗಳಲ್ಲಿ ಒಂದಾಗಿದೆ. ಇದು ಬಹಳ ಅಪರೂಪವಾಗಿರುವುದರಿಂದ ಇದನ್ನು ಪತ್ತೆಹಚ್ಚುವುದು ಮತ್ತು ನಿರ್ವಹಿಸು ವುದು ಕಷ್ಟಕರ. ಇಂತಹ ದೀರ್ಘಕಾಲದ ಪ್ರಕರಣಗಳಲ್ಲಿ, ರೋಗಿಗಳು ವರ್ಷಗಟ್ಟಲೆ ಫಿಟ್ಸ್ ವಿರೋಧಿ ಚಿಕಿತ್ಸೆಗಳಿಗೆ ಸ್ಪಂದಿಸದೆ ಸಂಕಷ್ಟ ಅನುಭವಿಸುತ್ತಾರೆ. ಈ ಪ್ರಕರಣದಲ್ಲಿ ಚಿಕಿತ್ಸೆಯ ನಂತರ ಫಿಟ್ಸ್ ಆವರ್ತನದಲ್ಲಿ ನಿರಂತರ ಇಳಿಕೆ ಕಂಡು ಬಂದಿರುವುದು ವಿಶೇಷ.
ಇದು ಕೇವಲ ನರರೋಗದ ಸ್ಥಿರತೆಯನ್ನು ಸುಧಾರಿಸುವುದಲ್ಲದೆ, ರೋಗಿಯ ಜ್ಞಾನಗ್ರಹಣ, ಭಾವನಾತ್ಮಕ ಮತ್ತು ಸಾಮಾಜಿಕ ಯೋಗಕ್ಷೇಮದ ಮೇಲೆ ಆಳವಾದ ಪರಿಣಾಮ ಬೀರು ತ್ತದೆ. ಇಂತಹ ಸಂಕೀರ್ಣ ಪ್ರಕರಣಗಳಲ್ಲಿ ಆರಂಭಿಕ ಹಂತದ ಗುರುತಿಸುವಿಕೆ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳ ಲಭ್ಯತೆಯು ಫಲಿತಾಂಶವನ್ನು ಗಮನಾರ್ಹವಾಗಿ ಬದಲಾಯಿಸಬಹುದು," ಎಂದು ಹೇಳಿದರು.
ಅತ್ಯಾಧುನಿಕ ಚಿಕಿತ್ಸೆಯನ್ನು ಪಡೆದ ನಂತರ, ಕಳೆದ 25 ವರ್ಷಗಳಿಂದ ಪ್ರತಿದಿನ 30 ಬಾರಿ ಫಿಟ್ಸ್ ಅನುಭವಿಸುತ್ತಿದ್ದ ಈ ರೋಗಿಯು, ಚಿಕಿತ್ಸೆಯ ನಂತರದ ಇಡೀ ವರ್ಷದಲ್ಲಿ ಕೇವಲ 3 ಬಾರಿ ಮಾತ್ರ ಇಂತಹ ಸಮಸ್ಯೆಯನ್ನು ಎದುರಿಸಿದ್ದಾರೆ. ಈ ಪ್ರಕರಣದ ಯಶಸ್ಸು, ಅತ್ಯಾಧುನಿಕ ತಂತ್ರಜ್ಞಾನವು ಅಪರೂಪದ ಮತ್ತು ಸಂಕೀರ್ಣವಾದ ನರರೋಗ ಸಮಸ್ಯೆಗಳ ಚಿಕಿತ್ಸಾ ವಿಧಾನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇದು ಈ ಹಿಂದೆ ಅತ್ಯಂತ ಸೀಮಿತ ವೈದ್ಯಕೀಯ ಆಯ್ಕೆಗಳನ್ನು ಹೊಂದಿದ್ದ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಹೊಸ ಆಶಾಕಿರಣವನ್ನು ನೀಡಿದೆ.