ಬೆಂಗಳೂರು: ಗರ್ಲ್ ಫ್ರೆಂಡ್ ಮಾತನಾಡ್ತಿಲ್ಲ ಎಂದು 41 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ನಡೆದಿದೆ. ಡಾರ್ಜಿಲಿಂಗ್ ಮೂಲದ ಸುದೀಪ್ (41) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಜನನಿಬಿಡ ಪ್ರದೇಶದಲ್ಲಿ ದೇವಸ್ಥಾನದ ಎದುರಿನ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೂಟ್‌ಕೇಸಲ್ಲಿ ನಗದು ಹಣ ಇಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೈಯಾಲಿಕಾವಲ್ ಪೊಲೀಸರು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲ್ನೋಟಕ್ಕೆ ಸುದೀಪ್ ತನ್ನ ಗರ್ಲ್‌ಫ್ರೆಂಡ್ ಮಾತನಾಡ್ತಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.
ವಿದ್ಯುತ್ ಸಂಪರ್ಕಕ್ಕಾಗಿ ಲಂಚ; ಸೆಸ್ಕಾಂ ಸಹಾಯಕ ಎಂಜಿನಿಯರ್ ಲೋಕಾಯುಕ್ತ ವಶಕ್ಕೆ
ಮಂಡ್ಯ: ಹೊಸ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲಂಚ ಪಡೆಯುತ್ತಿದ್ದ ಸೆಸ್ಕಾಂ ಸಹಾಯಕ ಎಂಜಿನಿಯರ್ (ಎಇ) ಸೋಮವಾರ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಮಂಡ್ಯ ನಗರ ಉಪ ವಿಭಾಗದ ಸೆಸ್ಕಾಂ ಎಇ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಹೊಸದಾಗಿ ವಿದ್ಯುತ್ ಸಂಪರ್ಕಕ್ಕಾಗಿ ಸರ್ಕಾರಕ್ಕೆ ಪಾವತಿಸಬೇಕಾದ ಅಧಿಕೃತ ಅಭಿವೃದ್ಧಿ ಶುಲ್ಕವನ್ನು ವಿನಾಯಿತಿ ಕೊಡಿಸುವ ಆಮಿಷವೊಡ್ಡಿ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಅವರು ವ್ಯಕ್ತಿಯೊಬ್ಬರಿಂದ ಬರೋಬ್ಬರಿ 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ನೊಂದ ವ್ಯಕ್ತಿಯು ಮಂಡ್ಯ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ದೂರುದಾರರು ನೀಡಿದ ಮಾಹಿತಿಯ ಮೇರೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಅವರ ನೇತೃತ್ವದ ವಿಶೇಷ ತಂಡವು ಕಾರ್ಯಾಚರಣೆಯ ಯೋಜನೆ ರೂಪಿಸಿತ್ತು. ಅದರಂತೆ, ಮೊದಲ ಕಂತಿನ ರೂಪದಲ್ಲಿ 30 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ಹೊಂಚು ಹಾಕಿದ್ದ ಅಧಿಕಾರಿಗಳು ದಾಳಿ ನಡೆಸಿ, ಆರೋಪಿ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದಿದ್ದಾರೆ.